ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸದ ನಡುವೆಯೇ, ಇರಾನ್ ತನ್ನ ಸೇನಾ ಶಕ್ತಿಯನ್ನು ನಿರೀಕ್ಷೆಗಿಂತಲೂ ವೇಗವಾಗಿ ಮರುನಿರ್ಮಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ವಿಶೇಷವಾಗಿ ಡ್ರೋನ್ ಉತ್ಪಾದನೆಯನ್ನು ಇರಾನ್ ಈಗಾಗಲೇ ಮರುಾರಂಭಿಸಿದ್ದು, ಇದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಹೊಸ ತಲೆನೋವಾಗುತ್ತಿದೆ.

ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸಿದ್ದ ದಾಳಿಗಳಿಂದ ಇರಾನ್ನ ಕ್ಷಿಪಣಿ ಮತ್ತು ಡ್ರೋನ್ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಮೊದಲಿಗೆ ಅಂದಾಜಿಸಲಾಗಿತ್ತು. ಆದರೆ ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ, ಕೇವಲ ಆರು ವಾರಗಳ ಯುದ್ಧ ವಿರಾಮದ ಅವಧಿಯಲ್ಲೇ ಇರಾನ್ ತನ್ನ ಸೇನಾ ಉತ್ಪಾದನಾ ವ್ಯವಸ್ಥೆಯ ಕೆಲವು ಭಾಗಗಳನ್ನು ಮರುಚೇತನಗೊಳಿಸಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಗುಪ್ತಚರ ಸಂಸ್ಥೆಗಳ ಅಂದಾಜಿಗಿಂತ “ಬಹಳ ವೇಗವಾಗಿ” ಇರಾನ್ ಚೇತರಿಸಿಕೊಳ್ಳುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಕೆಲವು ಮೂಲಗಳ ಪ್ರಕಾರ, ಇರಾನ್ ತನ್ನ ಯುದ್ಧಪೂರ್ವ ಡ್ರೋನ್ ಸಾಮರ್ಥ್ಯವನ್ನು ಮುಂದಿನ ಕೆಲ ತಿಂಗಳಲ್ಲಿ ಮತ್ತೆ ಸಂಪೂರ್ಣವಾಗಿ ಮರುಸ್ಥಾಪಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಈ ಬೆಳವಣಿಗೆ ಅಮೆರಿಕದ “Operation Epic Fury” ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಪ್ರಶ್ನೆ ಎಬ್ಬಿಸಿದೆ. ಅಮೆರಿಕದ ಸೆಂಟ್ಕಾಂ (CENTCOM) ಅಧಿಕಾರಿಗಳು ಇರಾನ್ನ ಸೇನಾ ಕೈಗಾರಿಕೆಗೆ 85ರಿಂದ 90 ಶೇಕಡಾ ಹಾನಿಯಾಗಿದೆ ಎಂದು ಹೇಳಿದ್ದರೂ, ಗುಪ್ತಚರ ವರದಿಗಳು ಬೇರೆ ಚಿತ್ರಣ ನೀಡುತ್ತಿವೆ. ಕೆಲವು ಪ್ರಮುಖ ಉತ್ಪಾದನಾ ಘಟಕಗಳು ಇನ್ನೂ ಕಾರ್ಯಕ್ಷಮವಾಗಿರುವ ಸಾಧ್ಯತೆಯೂ ಉಲ್ಲೇಖಿಸಲಾಗಿದೆ.
ಇದರ ನಡುವೆ ಚೀನಾ ಮತ್ತು ರಷ್ಯಾದಿಂದ ಇರಾನ್ಗೆ ತಾಂತ್ರಿಕ ಮತ್ತು ಉತ್ಪಾದನಾ ಸಹಾಯ ಸಿಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ವಿಶೇಷವಾಗಿ ಕ್ಷಿಪಣಿ ಹಾಗೂ ಡ್ರೋನ್ ಉತ್ಪಾದನೆಗೆ ಅಗತ್ಯವಾದ ಭಾಗಗಳನ್ನು ಪೂರೈಸಲಾಗುತ್ತಿದೆ ಎಂದು ಕೆಲವು ವರದಿಗಳು ಸೂಚಿಸಿವೆ. ಆದರೆ ಚೀನಾ ಈ ಆರೋಪಗಳನ್ನು ತಳ್ಳಿಹಾಕಿದೆ.
ಪ್ರಸ್ತುತ ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ತಾತ್ಕಾಲಿಕ ಯುದ್ಧ ವಿರಾಮ ಬಹಳ ಸೂಕ್ಷ್ಮ ಹಂತದಲ್ಲಿದೆ. ಪರಿಸ್ಥಿತಿ ಹದಗೆಟ್ಟರೆ ಮತ್ತೆ ದಾಳಿಗೆ ಮುಂದಾಗಲು ಅಮೆರಿಕ ಸಿದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಮತ್ತೆ ದಾಳಿ ನಡೆದರೆ “ಹೊಸ ಯುದ್ಧ ರಂಗಗಳು ತೆರೆಯಲಿವೆ” ಎಂದು ಇರಾನ್ ಕೂಡ ಎಚ್ಚರಿಸಿದೆ.






