ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಡೊನಾಲ್ಡ್ ಟ್ರಂಪ್ ಸಮರ ಸಾರಿದ್ದಾರೆ. ನಿನ್ನೆಯಷ್ಟೇ 104 ಮಂದಿ ಭಾರತೀಯರನ್ನ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಈ ವಿಚಾರವಾಗಿ ಸಂಸತ್ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ.. ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳಿಂದಲೇ ಅಮೆರಿಕದಲ್ಲಿರುವ ಭಾರತೀಯರಿಗೆ ಸಂಕಷ್ಟ ಶುರುವಾಗಿದೆ ಎಂದು ವಿಪಕ್ಷಗಳು ವಾಗ್ದಾಳಿ ಮಾಡಿವೆ..
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮಾತ್ರವಲ್ಲ, ಇಡೀ ವಿಶ್ವದಾದ್ಯಂತ ಹಲವು ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಹೊರ ಹಾಕುವ ಕೆಲಸ ಮಾಡ್ತಿದ್ದಾರೆ. 2ನೇ ಬಾರಿ ಅಮೆರಿಕದ ಚುಕ್ಕಾಣಿ ಹಿಡಿದ ಬಳಿಕ ಸಾಕಷ್ಟು ಸದ್ದು ಮಾಡ್ತಿರೋ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರ ವಿರುದ್ಧ ಸಾರಿರೋ ಸಮರದ ಬಗ್ಗೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಂಚಲನ ಸೃಷ್ಟಿಸಿದೆ. ಅದ್ರಲ್ಲೂ ನರೇಂದ್ರ ಮೋದಿ ಆಪ್ತ ಮಿತ್ರನಂತಿದ್ದ ಡೊನಾಲ್ಡ್ ಟ್ರಂಪ್ ನಿರ್ಧಾರ ಭಾರತದ ಪಾಲಿಗೆ ಕರಾಳ ಎನ್ನುವಂತಾಗಿದೆ.
ನಿನ್ನೆ ವಲಸಿಗರನ್ನ ಹೊತ್ತು ಬಂದ ಸಿ-17 ಯುದ್ಧ ವಿಮಾನ ಅಮೆರಿಕ ನೇರವಾಗಿ ಪಂಜಾಬ್ನ ಅಮೃತಸರ ವಿಮಾನ ನಿಲ್ದಾಣಕ್ಕೆ ತಂದಿಳಿಸಿತ್ತು. ವಿಮಾನಕ್ಕೆ ಜನರನ್ನು ಹತ್ತಿಸೋ ವೇಳೆ ಜನರ ಕೈಗೆ, ಕಾಲಿಗೆ ಸರಪಳಿ ಹಾಕಿ ಅಪರಾಧಿಗಳಂತೆ ಕರೆದುಕೊಂಡು ಬರಲಾಗಿದೆ ಅನ್ನೋ ವಿಚಾರದಲ್ಲಿ ವಿಪಕ್ಷ ಸದಸ್ಯರು, ಕೇಂದ್ರ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ರಾಜ್ಯಸಭೆ ಕಲಾಪ ಆರಂಭವಾಗ್ತಿದ್ದಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. ಗಡಿಪಾರು ವಿಷಯವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಕರ್ನಾಟಕದ ಸಂಸದ ನಾಸಿರ್ ಹುಸೇನ್, ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ್ರು.
ಅಮೇರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಮಿತ್ರ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡಿದ್ದರು. ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಬರಲು ಕಾರಣವಾಗಿದ್ದರು. ಈಗ ಮೋದಿ ಅವರ ಮಿತ್ರ ಭಾರತೀಯರಿಗೆ ಕೋಳ ಹಾಕಿ ಕಳಿಸಿದ್ದಾರೆ. ಇದ್ರಿಂದ ಭಾರತೀಯರಿಗೆ ಅವಮಾನವಾಗಿದೆ ಎಂದಿದ್ದಾರೆ. ನಾಸಿರ್ ಹುಸೇನ್ ಹೇಳಿಕೆಗೆ ಸದನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿದೇಶಾಂಗ ಸಚಿವ ಜೈಶಂಕರ್, ಯಾರಿಗೂ ಮೋದಿ ಪ್ರಚಾರ ಮಾಡಿಲ್ಲ. ಕಾಂಗ್ರೆಸ್ ಸದಸ್ಯರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಅಲ್ಲದೆ ಗಡಿಪಾರು ಇಂದು ನಿನ್ನೆಯದಲ್ಲ, ಈ ಹಿಂದೆಯೂ ಈ ಪ್ರಕ್ರಿಯೆ ನಡೆದಿದೆ ಅಂತ ಅಂಕಿ ಅಂಶಗಳನ್ನ ಹೇಳಿ ಸಮರ್ಥನೆ ಮಾಡಿಕೊಂಡರು.