
ಭಾರತೀಯರ ವಿಚಾರದಲ್ಲಿ ಅಮೆರಿಕ ನಡೆದುಕೊಂಡ ರೀತಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ಮಾಡಿದ್ದಾರೆ. ಮೋದಿ ಜೀ ಮತ್ತು ಟ್ರಂಪ್ ಒಳ್ಳೆಯ ಸ್ನೇಹಿತರು, ಹಾಗಾದ್ರೆ ಮೋದಿ ಜೀ ಇದಕ್ಕೆ ಯಾಕೆ ಅವಕಾಶ ನೀಡಿದರು..? ಎಂದು ಪ್ರಶ್ನಿಸಿದ್ದಾರೆ. ಕೈಕೋಳ ಹಾಕಿ, ಕಾಲಿಗೆ ಸಂಕೋಲೆ ಹಾಕಿ ಕಳುಹಿಸುವ ರೀತಿಯಲ್ಲಿ ಮನುಷ್ಯರನ್ನು ನಡೆಸಿಕೊಳ್ಳಲಾಗುತ್ತಿದೆಯೇ..? ಇದು ಸರಿಯೇ..? ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೈ ಕೋಳ ಹಾಕಿಕೊಂಡು ಬಂದಿದ್ದು ಅಮಾನವೀಯ ವರ್ತನೆಯಾಗಿದೆ. ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದ್ದು, ಭಾರತ ಸರ್ಕಾರದ ಮೃದು ಧೋರಣೆಯೇ ಇಷ್ಟಕ್ಕೆಲ್ಲ ಕಾರಣ, ವಿಮಾನದಲ್ಲಿ ಶೌಚಾಲಯಕ್ಕೂ ಬಿಟ್ಟಿಲ್ಲ, ಕ್ರಿಮಿನಲ್ಗಳಂತೆ ನಡೆಸಿಕೊಂಡಿದ್ದಾರೆ. 40 ಗಂಟೆಗಳ ಕಾಲ ವಿಮಾನದಲ್ಲಿ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಮೋದಿ ಅಮೆರಿಕಗೆ ಹೋದಾಗ ಇದನ್ನು ಪ್ರಶ್ನಿಸುವರೆ..? ಭಾರತೀಯರನ್ನು ನಡೆಸಿಕೊಂಡ ಬಗ್ಗೆ ಪ್ರಧಾನಿ ಮೌನವೇಕೆ..? ಇದ್ರಿಂದ ಭಾರತದ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗದ್ದಕ್ಕೆ ಈ ದುಸ್ಥಿತಿ ಬಂದಿದೆ ಅಂತ ಕಿಡಿಕಾರಿದ್ದಾರೆ.
ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವ ಜೈಶಂಕರ್, ತಮ್ಮ ಪ್ರಜೆಗಳು ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಅವರನ್ನು ವಾಪಸ್ ಕರೆಸಿಕೊಳ್ಳುವ ಅಗತ್ಯ ಇದೆ. ಅಮೆರಿಕದಲ್ಲಿ ನಮ್ಮ ಪ್ರಜೆಗಳ ಮೇಲೆ ದೌರ್ಜನ್ಯ ಎಸಗ್ತಿರೋ ಬಗ್ಗೆ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಆದ್ರೆ ಗಡಿಪಾರು ವೇಳೆ ದೌರ್ಜನ್ಯವಾಗಬಾರದು. ಭಾರತೀಯರನ್ನು ವಾಪಸ್ ಕಳಿಸಿದ ಬಗ್ಗೆ ವಿವರಣೆ ಕೇಳಿದ್ದೀವಿ. ವಲಸಿಗರ ಹಸ್ತಾಂತರ ಪ್ರಕ್ರಿಯೆಯ ನೀತಿ ಅನುಸರಿಸಲಾಗಿದೆ. ವಿಮಾನದಲ್ಲಿರುವಾಗ ಯಾವುದೇ ನಿರ್ಬಂಧ ಹಾಕಿಲ್ಲ. ಶೌಚಾಲಯ, ಔಷಧಗಳ ವ್ಯವಸ್ಥೆ ಮಾಡಿ ಮಾಡಲಾಗಿತ್ತು. 2009ರ ನೀತಿ ಅನ್ವಯವೇ ವಲಸಿಗರನ್ನ ಕರೆತರಲಾಗಿದೆ ಎಂದಿದ್ದಾರೆ.

ಗಡಿಪಾರು ಪ್ರಕ್ರಿಯೆ 2009 ರಿಂದಲೂ ನಡೆಯುತ್ತಿದೆ. ವಿವಿಧ ದೇಶಗಳಿಂದ 17500ಕ್ಕೂ ಹೆಚ್ಚು ಮಂದಿ ಭಾರತೀಯರವನ್ನ ಗಡಿಪಾರು ಮಾಡಲಾಗಿದೆ. 2009 ರಿಂದ 2013ರ ವರೆಗೆ 3210 ಮಂದಿ ಭಾರತೀಯರನ್ನ ಗಡಿಪಾರು ಮಾಡಲಾಗಿದೆ. 2014 ರಿಂದ 2019ರ ವರೆಗೆ 6848 ಮಂದಿ ಹಾಗೂ 2019 ರಿಂದ ಈವರೆಗೆ ಅಂದ್ರೆ ಅಮೆರಿಕದಿಂದ 104 ಮಂದಿ ಸೇರಿ ಒಟ್ಟು 17,798 ಮಂದಿಯನ್ನ ಗಡಿಪಾರು ಮಾಡಲಾಗಿದ್ದು, ಇದು ಸಹಜ ಪ್ರಕ್ರಿಯೆ ಎಂದಿದ್ದಾರೆ. ಆದರೂ ಮಾನವ ಹಕ್ಕುಗಳ ಉಲ್ಲಂಘನೆ ಅನ್ನೋದು ದೇಶದ ಜನರ ಅಭಿಪ್ರಾಯ ಆಗಿದೆ.