ಚಿಕ್ಕಮಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ತೆಗೆದುಕೊಂಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಕಿಡಿಕಿಡಿಯಾಗಿದ್ದು, ಮತಾಂತರಕ್ಕೆ ಸಿದ್ದರಾಮಯ್ಯವರೇ ರಾಯಭಾರಿಯಾಗಿರುವಂತೆ ಕಾಣುತ್ತಿದೆ ಎಂದು ಟೀಕೆ ಮಾಡಿದ್ದಾರೆ.
ಇಂದು ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಆರ್.ಅಶೋಕ್ ಮಾತನಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, ಮತಾಂತರಕ್ಕೆ ಸಿದ್ದರಾಮಯ್ಯ ಅವರೇ ರಾಯಭಾರಿ ಎಂದಿರುವ ಅಶೋಕ್, ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದೂ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದ ನಂತರ ಮತ್ತೆ ಟಿಪ್ಪು ಯುಗಕ್ಕಾಗಿ ಶಂಕುಸ್ಥಾಪನೆ ಮಾಡಲು ಮುಂದಾಗಿದೆ. ಇಡೀ ಮತಾಂತರ ಪ್ರಕ್ರಿಯೆಗೆ ಕಾಂಗ್ರೆಸ್ ಪಕ್ಷವೇ ರಾಯಭಾರಿಯಾಗಿರುವಂತೆ ಕಂಡಿದೆ. ಕಾಂಗ್ರೆಸ್ ಮತಾಂತರದ ಬ್ರ್ಯಾಂಡ್ ಅಂಬಾಸಿಡರ್. ದುಡ್ಡಿನ ಆಸೆಗೆ, ಮತ್ಯಾವುದೋ ಆಸೆಗೆ ಮತಾಂತರ ಆಗುತ್ತಿದ್ದವವರು ಇದ್ದರು. ಯಾರಿಗೋಸ್ಕರವಾಗಿ ಈ ಮಸೂದೆಯನ್ನು ನಿಷೇಧ ಮಾಡಿದ್ದೀರಿ. ನಾವು ಈ ಮತಾಂತರ ನಿಷೇಧ ಕಾಯ್ದೆ ತಂದಾಗ ಒತ್ತಾಯದ ಮತಾಂತರ ಮಾಡಬಾರದು ಅಂತ ಮಾಡಿದ್ದೆವು. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರ್.ಅಶೋಕ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪ್ರರ್ಶನೆ ಮಾಡಿದ್ದಾರೆ.

ಸಿದ್ದರಾಮಯ್ಯನವರಿಗೆ ಹಿಂದೂಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹೀಗಾಗಿ ಮತಾಂತರಕ್ಕೆ ಅವರು ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾದರೆ ಪಕ್ಕದ ಮನೆಯ ಅಮರನಾಥ್ ಅಬ್ದುಲ್ ಘನಿ ಆಗಬೇಕಾ? ಎಂದು ಪ್ರಶ್ನಿಸಿದ ಅಶೋಕ್, ಮತಾಂತರವಾದರೆ ಮಾತ್ರ ಕಾಂಗ್ರೆಸ್ಗೆ ಮತ ಬೀಳುತ್ತದೆ ಎಂದರು.

ಈ ದೇಶ ನಮ್ಮ ಕೈಯಲ್ಲಿ ಉಳಿಯಬೇಕು ಎಂದರೆ ಮತಾಂತರ ಆಗಬೇಕು ಅಂತ ಬ್ರಿಟಿಷರು ಹೇಳಿದ್ದು, ಈ ದೇಶ ನಮ್ಮ ಕೈಗೆ ಬರಬೇಕಾದರೆ ಎಲ್ಲರೂ ಮುಸ್ಲಿಂ ಆಗಬೇಕು ಎಂದು ಬಾಬರ್-ಔರಂಗಜೇಬ್ ಹೇಳಿದ್ದರು. ಟಿಪ್ಪು ಲಕ್ಷಾಂತರ ಜನರನ್ನ ಕನ್ವರ್ಟ್ ಮಾಡಿದ್ದು, ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಅಶೋಕ್ ಕಿಡಿಕಾರಿದ್ದಾರೆ.