ರಾಜ್ಯದಲ್ಲಿ ಸಾಕಷ್ಟು ಹಿಂದುತ್ವವಾದಿಗಲ ಒಂದು ಪ್ರಮುಕ ಏನಾಗಿತ್ತು ಎಂದರೆ ಕಾಂಗ್ರೆಸ್ ಸರ್ಕಾರ ಬಂದಾಗ ಹಜ್ ಯಾತ್ರೆಗೆ ಸಾಕಷ್ಟು ಹಣವನ್ನು ನಿಡಲಾಗುತ್ತದೆ. ಅದು ಮುಜರಾಯಿ ಇಲಾಖೆಯ ಹಣವನ್ನು ಬಳಸಿಕೊಂಡು ಮುಸ್ಲಿಂ ಸಮುದಾಯದ ಜನರ ಯಾತ್ರೆಗೆ ಸಹಾಯಧನ ಕೊಡುತ್ತೆ ಎಂದು ದೂರಲಾಗ್ತಿತ್ತು. ಆದರೆ ಬಿಜೆಪಿ ಅಥವಾ ಇತರೆ ಪಕ್ಷಗಳು ಊಹೆ ಮಾಡಿಕೊಳ್ಳಲು ಸಾಧ್ಯವಾಗದಂತ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದು, ಇನ್ಮುಂದೆ ಸುಖಾಸುಮ್ಮನೆ ಆರೋಪ ಮಾಡದಂತೆ ಮಾಡಲಾಗಿದೆ.
ಇನ್ಮುಂದೆ ಹುಂಡಿ ಹಣ ದೇವಸ್ಥಾನದ ಅಭಿವೃದ್ಧಿಗೆ ಬಳಕೆ..!

ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಮುಜರಾಯಿ ಇಲಾಖೆ ತೆಗೆದುಕೊಂಡು ಖರ್ಚು ವೆಚ್ಚ ಮಾಡುವ ನಿಯಮ ಬದಲಾವಣೆ ಮಾಡಿದ್ದು, ಇನ್ಮುಂದೆ ದೇಗುಲದ ಹುಂಡಿ ಹಣ ಅದೇ ದೇವಾಲಯದ ಅಭಿವೃದ್ಧಿಗಾಗಿ ಬಳಕೆ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ. ಮುಜರಾಯಿ ಇಲಾಖೆ ವ್ಯಾಪ್ತಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಹೊರ ಬಿದ್ದಿದೆ. ಜೊತೆಗೆ ಎಲ್ಲರಿಗೂ ಕಾಣುವಂತೆ ಹುಂಡಿ ಇಡುವುದು ಕಡ್ಡಾಯ, ಹುಂಡಿಗೆ ಬಂದ ಹಣದಲ್ಲಿ ದೇವಾಲಯದ ಅಭಿವೃದ್ಧಿಗೆ ವ್ಯಯ ಮಾಡಲಾಗುವುದು ಎಂದಿದ್ದಾರೆ.
ತಟ್ಟೆ ಕಾಸು ನೇರವಾಗಿ ಅರ್ಚಕರಿಗೆ ಸಿಗಲಿ ಎಂದ ಸರ್ಕಾರ..!
ಸಾಕಷ್ಟು ದೇಗುಲಗಳಲ್ಲಿ ದೇವಸ್ಥಾನ ಹುಂಡಿ ಕಾಸು ಸರ್ಕಾರಕ್ಕೆ ಹೋಗುತ್ತದೆ. ತಟ್ಟೆಗೆ ಹಾಕುವ ಮಂಗಳಾರತಿ ಹಣ ದೇವರ ಸೇವೆ ಮಾಡುವ ನಮಗೆ ಬರುತ್ತದೆ. ನಾವು ದೇವರ ಸೇವೆ ಮಾಡಿಕೊಂಡು ಹೋಗುತ್ತೇವೆ ಎಂದು ಅರ್ಚಕರು ಹೇಳುತ್ತಿದ್ದರು. ಕೆಲವು ಕಡೆ ಹುಂಡಿಯನ್ನೇ ಎತ್ತಿ ಆಚೆಗೆ ಹಾಕುವ ಕೆಲಸವೂ ನಡೆದಿತ್ತು. ಇದೀಗ ಸರ್ಕಾರ ತಸ್ತಿಕ್ ಹಣ (ತಟ್ಟೆಗೆ ಬೀಳುವ ಹಣ)ವನ್ನು ನೇರವಾಗಿ ಅರ್ಚಕರಿಗೆ ತಲುಪುವ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯದ ಎಲ್ಲ ದೇವಾಲಯಗಳಲ್ಲಿ ಭಕ್ತರು ಮೊಬೈಲ್ ಬಳಕೆ ನಿಷೇಧ ಮಾಡಲು ನಿರ್ಧಾರ ಮಾಡಲಾಗಿದ್ದು, ಪ್ರಮುಖ ದೇಗುಲಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ.

ಗ್ರೇಡ್ ಮೇಲೆ ದೇವಸ್ಥಾನಗಳ ಅಭಿವೃದ್ಧಿಗೆ ಸಚಿವರ ಆದೇಶ
ರಾಜ್ಯದಲ್ಲಿ ಇರುವ ದೇವಾಲಯಗಳನ್ನು A,B,C & D ಎಂದು ವಿಂಗಡಣೆ ಮಾಡಲಾಗಿದ್ದು, ಮೊದಲಿಗೆ A ಮತ್ತು B ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸುವಂತೆ ಸಚಿವರು ತಿಳಿಸಿದ್ದಾರೆ. ಇನ್ನು ಪ್ರಮುಖ ದೇಗುಲಗಳಲ್ಲಿ ಆನ್ಲೈನ್ ಸೇವೆಗಾಗಿ ಶೀಘ್ರದಲ್ಲಿ ಆ್ಯಪ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ದೇವಸ್ಥಾನಗಳಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ದೇವಾಲಯದ ಆವರಣ ಸ್ವಚ್ಚವಾಗಿ ಇಡುವುದು ಕಡ್ಡಾಯ. ಶೌಚಾಲಯಕ್ಕೆ ಹೋಗುವ ಭಕ್ತರಿಂದ ಹಣ ತೆಗೆದುಕೊಳ್ಳುವಂತಿಲ್ಲ. ದೇವಾಲಯದ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಅಂಗಡಿ ತೆರೆಯುವಂತಿಲ್ಲ ಎಂದು ಸರ್ಕಾರ ತಿಳಿಸಿದೆ. ಒಟ್ಟಾರೆ, ದೇವಸ್ಥಾನದಲ್ಲಿ ಬೀಳುವ ಕಾಣಿಕೆ ಹಣ ಅದೇ ದೇವಸ್ಥಾನದ ಅಬಿವೃದ್ಧಿಗೆ ಬಳಕೆ ಎಂದಿರುವುದು ಬಹುದೊಡ್ಡ ನಿರ್ಧಾರ ಅಂತಾನೇ ಹೇಳಬಹುದು.
ಕೃಷ್ಣಮಣಿ





