• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಅಂಕಣ | ಬೌದ್ಧಿಕ ಸವಾಲುಗಳ ನಡುವೆ ಶಿಕ್ಷಕರ ದಿನಾಚರಣೆ

ನಾ ದಿವಾಕರ by ನಾ ದಿವಾಕರ
September 5, 2023
in ಅಂಕಣ, ಅಭಿಮತ
0
ಸಮರ್ಪಕ ಸಾರಿಗೆ ಇಲ್ಲದಿದ್ದರೂ, ಶಿಕ್ಷಕರಿಗೆ ಶಾಲೆಗೆ ಹಾಜರಾಗುವಂತೆ ಇಲಾಖೆ ಸೂಚನೆ
Share on WhatsAppShare on FacebookShare on Telegram

ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳು ಶಿಥಿಲವಾಗುತ್ತಿರುವ ಹೊತ್ತಿನಲ್ಲಿ ಬೋಧನೆಯ ಮಾರ್ಗಗಳು

ADVERTISEMENT

ನಾ ದಿವಾಕರ

ಬದಲಾಗುತ್ತಿರುವ ಭಾರತದಲ್ಲಿ ಸಂಭವಿಸುತ್ತಿರುವ ಸಾಂಸ್ಕೃತಿಕ ಪಲ್ಲಟಗಳು ಮತ್ತು ಸಾಮಾಜಿಕ ತಲ್ಲಣಗಳ ನಡುವೆ ಇಡೀ ಸಮಾಜವೇ ಪ್ರಕ್ಷುಬ್ಧ ವಾತಾವರಣಕ್ಕೊಳಗಾಗಿದೆ. ಒಂದೆಡೆ ಆಡಳಿತ ವ್ಯವಸ್ಥೆಯನ್ನು ನಿರೂಪಿಸಬೇಕಾದ ಸಂವಿಧಾನದ ಮೌಲ್ಯಗಳನ್ನು ವ್ಯವಸ್ಥಿತವಾಗಿ, ಸಾಂಸ್ಥಿಕವಾಗಿ ವಿರೂಪಗೊಳಿಸುತ್ತಿರುವ ಹೊತ್ತಿನಲ್ಲೇ ಸಂವಿಧಾನ ಬದ್ಧತೆಯನ್ನು ಜನಸಾಮಾನ್ಯರಲ್ಲಿ ಆಳವಾಗಿ ಬೇರೂರುವಂತೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ಭಾರತದ ಸಂವಿಧಾನ ಆಶಿಸುವ ಬಹುತ್ವ, ಭ್ರಾತೃತ್ವ ಹಾಗೂ ಜಾತ್ಯತೀತತೆಯ ಮೌಲ್ಯಗಳನ್ನು ಶಿಥಿಲಗೊಳಿಸುವ ಬಲಪಂಥೀಯ ರಾಜಕಾರಣದ ಪ್ರಯತ್ನಗಳ ನಡುವೆಯೇ ತಳಮಟ್ಟದ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವವನ್ನು ಶತಾಯಗತಾಯ ಉಳಿಸಿಕೊಳ್ಳುವ ಹಂಬಲವೂ ಹೆಚ್ಚಾಗುತ್ತಿರುವುದು ಈ ಕಾಲಮಾನದ ದ್ವಂದ್ವಗಳಲ್ಲೊಂದು. ಈ ದ್ವಂದ್ವ ಮತ್ತು ಜಿಜ್ಞಾಸೆಗಳನ್ನು ಹೊತ್ತ ಒಂದು ಸಮಾಜ ಶೋಷಣೆಗಳಿಂದ ಮುಕ್ತವಾಗಿ, ಸಮಾನತೆಯನ್ನು ಸಾಧಿಸುವ ಕನಸುಗಳನ್ನು ಕಟ್ಟಿಕೊಳ್ಳುತ್ತಿದೆ.

ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವ ಹಾದಿಯಲ್ಲಿ ಎದುರಾಗುತ್ತಿರುವ ಹಲವು ಸವಾಲುಗಳಲ್ಲಿ ಬಹುಮುಖ್ಯವಾಗಿ ಮತೀಯವಾದ, ಜಾತೀಯತೆ, ಮತಾಂಧತೆ ಮತ್ತು ಸ್ತ್ರೀದ್ವೇಷದ ನೆಲೆಗಳನ್ನು ಗುರುತಿಸಬಹುದು. ಅಸಹಾಯಕ/ಅಮಾಯಕ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ಮಣಿಪುರದ ಘಟನೆಗಳ ಛಾಯೆಯಲ್ಲಿ ನೋಡಿದಾಗ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಒಂದೆಡೆ ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ಪಾರಮ್ಯಕ್ಕೆ ಬಲಿಯಾಗುತ್ತಿರುವ ಮಹಿಳಾ ಸಂಕುಲ ಮತ್ತೊಂದೆಡೆ ಪಿತೃಪ್ರಧಾನತೆಯ ಊಳಿಗಮಾನ್ಯ ಧೋರಣೆಗಳಿಗೆ ತುತ್ತಾಗುತ್ತಿದೆ. ಜಾತಿ ಶ್ರೇಷ್ಠತೆಯನ್ನು ಕಾಪಾಡುವ ಮನಸ್ಥಿತಿಯು ಹೆತ್ತವರಿಂದಲೇ ಹೆಣ್ಣುಮಕ್ಕಳ ಹತ್ಯೆಯಾಗುವ ಪರಂಪರೆಯನ್ನೇ ಸೃಷ್ಟಿಸುತ್ತಿದೆ. ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಹಾಗೂ ಮರ್ಯಾದೆಗೇಡು ಹತ್ಯೆಯ ಪ್ರಕರಣಗಳಿಗೆ ಸ್ಪಂದಿಸುವ ಅಲ್ಪಸಂಖ್ಯೆಯ ಒಂದು ಸಮಾಜ ಸದಾ ಜಾಗೃತವಾಗಿದ್ದರೂ, ವಿಶಾಲ ಸಮಾಜದ ತಣ್ಣನೆಯ ಮೌನ ನಮ್ಮ ಸಮಾಜದೊಳಗೆ ಬೇರೂರಿರುವ ಪಿತೃಪ್ರಧಾನತೆ ಹಾಗೂ ಜಾತಿಪೀಡಿತ ಮನಸುಗಳಿಗೆ ಸಾಕ್ಷಿಯಾಗಿದೆ.

ಶೈಕ್ಷಣಿಕ ವಲಯದ ದ್ವಂದ್ವಗಳು

ಈ ಸಾಮಾಜಿಕ ಸಮಸ್ಯೆಗಳ ಹೊರತಾಗಿ ಶೈಕ್ಷಣಿಕ ವಲಯದಲ್ಲಿ ಹೆಣ್ಣು ಗಂಡು ಭೇದವಿಲ್ಲದೆ ಸಂಭವಿಸುತ್ತಿರುವ ಶಿಕ್ಷಣಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಪ್ರಜ್ಞಾವಂತ ಸಮಾಜದ ಅಂತರ್‌ಪ್ರಜ್ಞೆಯನ್ನು ಪ್ರಕ್ಷುಬ್ಧಗೊಳಿಸುವಂತಿವೆ. ರಾಜಸ್ಥಾನದ ಕೋಟಾದಲ್ಲಿ, ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳು ಸಂಭವಿಸುತ್ತಿರುವುದನ್ನು ವ್ಯಕ್ತಿಗತ ನೆಲೆಯಲ್ಲಿ ನೋಡುವುದಕ್ಕಿಂತಲೂ ಸಾಮಾಜಿಕ-ಶೈಕ್ಷಣಿಕ ಚೌಕಟ್ಟಿನೊಳಗಿಟ್ಟು ನೋಡಿದಾಗ, ನವ ಉದಾರವಾದಿ ಬಂಡವಾಳಶಾಹಿಯು ಹೇಗೆ ಶಿಕ್ಷಣ ಮತ್ತು ಕಲಿಕೆಯ ಮಾರ್ಗಗಳನ್ನು ನಿಯಂತ್ರಿಸುತ್ತಿದೆ ಎನ್ನುವುದನ್ನು ಗ್ರಹಿಸಬಹುದು. ಇಡೀ ಸಮಾಜವನ್ನು ಭ್ರಮಾಧೀನಗೊಳಿಸುವ ಒಂದು ಉನ್ನತ ಶಿಕ್ಷಣದ ಪರಿಕಲ್ಪನೆ ಹಾಗೂ ಅದರಿಂದ ಸೃಷ್ಟಿಯಾಗುವ ಮಾರುಕಟ್ಟೆಯ ಹಿತವಲಯದ ಕಲ್ಪನೆಗಳು ಸಮಾಜದ ಒಂದು ವರ್ಗವನ್ನು ಅಂಧಕಾರದ ಕೂಪಕ್ಕೆ ತಳ್ಳುತ್ತಿರುವುದನ್ನು ಕೋಟಾದ ಆತ್ಮಹತ್ಯೆಗಳಲ್ಲಿ ಗುರುತಿಸಬಹುದಾಗಿದೆ.

ಸೆಪ್ಟಂಬರ್‌ 5ರಂದು ದೇಶಾದ್ಯಂತ ಆಚರಿಸಲಾಗುವ “ ಶಿಕ್ಷಕರ ದಿನಾಚರಣೆ ”ಯ ಸಂದರ್ಭಲ್ಲಿ ಶೈಕ್ಷಣಿಕ ವಲಯ, ಬೋಧಕ ಸಿಬ್ಬಂದಿ ಹಾಗೂ ಶಿಕ್ಷಣ ತಜ್ಞರನ್ನು ಮೇಲೆ ಉಲ್ಲೇಖಿಸಿದ ಜಟಿಲ ಸಿಕ್ಕುಗಳು ಕಾಡದೆ ಹೋದರೆ ಬಹುಶಃ ನಾವು ಆತ್ಮರತಿಯಲ್ಲಿ ಬೀಗುತ್ತಿದ್ದೇವೆ ಎಂದೇ ಅರ್ಥೈಸಬೇಕಾಗುತ್ತದೆ. ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ವಾತಾವರಣದಲ್ಲಿ ಡಿಜಿಟಲ್‌ ಯುಗದತ್ತ ಧಾವಿಸುತ್ತಿರುವ ನವ ಭಾರತವು, ಶೈಕ್ಷಣಿಕ ವಲಯದಲ್ಲೂ ಸಹ ಹಲವು ರೀತಿಯ ಸಾಂಸ್ಕೃತಿಕ ಸಮಸ್ಯೆಗಳನ್ನು, ಸಾಮಾಜಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗೆ ವಿಸ್ತರಿಸುವ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಕಲಿಕೆ ಹಾಗೂ ವಿದ್ಯಾರ್ಜನೆಯ ಮಾರ್ಗಗಳು ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ಬೌದ್ಧಿಕ ಸರಕುಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿ ಮಾರ್ಪಡುತ್ತಿವೆ. ರಾಜಸ್ಥಾನದ ಕೋಟಾದಲ್ಲಿ  ಈ ಮಾರುಕಟ್ಟೆಯ ಬೌದ್ಧಿಕ ಕಚ್ಚಾ ಸರಕುಗಳ ಜೀವಬಲಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಸಮ ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ಶಿಕ್ಷಕ ವೃಂದದ ಜವಾಬ್ದಾರಿಗಳು ಜಟಿಲವಾದಷ್ಟೇ ಗಂಭೀರ ಸ್ವರೂಪದ್ದೂ ಆಗಿರುತ್ತವೆ. ಶಿಕ್ಷಕರ ದಿನಾಚರಣೆಯನ್ನು ಪ್ರಶಸ್ತಿ-ಸಮಾರಂಭ-ಸ್ಮರಣೆಗಳಿಂದಾಚೆಗೂ ನೋಡಬಹುದಾದರೆ, ಇಂದು ಇಡೀ ಬೋಧಕ ವೃಂದವೇ ತಾನು ನಿಂತ ನೆಲದ ತಲ್ಲಣಗಳನ್ನು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣ-ಕಾರ್ಪೋರೇಟೀಕರಣ ಪ್ರಕ್ರಿಯೆಯಿಂದ ಬೋಧಕ ವೃಂದದ ಒಂದು ಹಿತವಲಯವು ತನ್ನ ಭದ್ರಕೋಟೆಗಳನ್ನು ಮತ್ತಷ್ಟು ಸಂರಕ್ಷಿಸುವ ಧಾವಂತದಲ್ಲಿದ್ದರೆ ಮತ್ತೊಂದು ಬೃಹತ್‌ ಬೋಧಕ ವಲಯ ನಾಳಿನ ದಿನಗಳನ್ನು ಎಣಿಸುತ್ತಾ ಸುಸ್ಥಿರ ಬದುಕಿಗಾಗಿ ಹಂಬಲಿಸುವ ಸ್ಥಿತಿಯಲ್ಲಿರುವುದನ್ನು ಸಹ ಗಮನಿಸಬೇಕಿದೆ. ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಸೃಷ್ಟಿಯಾಗಿರುವ “ ಅತಿಥಿ ಉಪನ್ಯಾಸಕ/ಶಿಕ್ಷಕ/ಬೋಧಕರ ” ಒಂದು ಬೃಹತ್‌ ಸಮುದಾಯದ ಪಾಲಿಗೆ ಶಿಕ್ಷಕ ವೃತ್ತಿ ಬದುಕುವ ಹಾದಿಯಾಗಿ ಮಾತ್ರವೇ ಉಳಿದಿದೆ.

ಶಿಕ್ಷಕರ ಸಾಮಾಜಿಕ ಹೊಣೆ

ಮತ್ತೊಂದೆಡೆ ಸಮಾಜವನ್ನು ತಿದ್ದಬೇಕಾದ, ಸಾಮಾಜಿಕ ಸಿಕ್ಕುಗಳನ್ನು ಬಿಡಿಸಬೇಕಾದ ಹಾಗೂ ತಳಮಟ್ಟದ ಜನತೆಯಲ್ಲಿ ಜೀವನ ಮತ್ತು ಜೀವನೋಪಾಯದ ನಿರ್ವಹಣೆಗೆ ಅಗತ್ಯವಾದ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವವನ್ನು ಮೂಡಿಸಬೇಕಾದ ದೊಡ್ಡ ಜವಾಬ್ದಾರಿ ಶಿಕ್ಷಕ ವೃಂದದ ಮೇಲಿರುತ್ತದೆ. ನಮ್ಮ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆಯಂತಹ ಪ್ರಾಚೀನ ನಡವಳಿಕೆಗಳನ್ನು , ಸ್ತ್ರೀಕುಲವನ್ನು ಪರಾಧೀನವಾಗಿ ನೋಡುವ ಧಾರ್ಮಿಕ-ಸಾಂಸ್ಕೃತಿಕ ಚಿಂತನೆಗಳನ್ನು ಹಾಗೂ ಗ್ರಾಂಥಿಕ ಧರ್ಮಸೂಕ್ಷ್ಮಗಳು ಸಮಾಜದ ಗರ್ಭದಲ್ಲೇ ಸೃಷ್ಟಿಸುವಂತಹ ಅಸೂಕ್ಷ್ಮತೆಗಳನ್ನು,  ಅಸಮಾನತೆಯ ನೆಲೆಗಳನ್ನು ಭೇದಿಸಿ ಭವಿಷ್ಯದ ತಲೆಮಾರನ್ನು ಮಾನವೀಯಗೊಳಿಸುವ ನೈತಿಕ ಜವಾಬ್ದಾರಿ ಶಿಕ್ಷಕ ವೃಂದದ ಮೇಲಿದೆ. ವಿಶಿಷ್ಟವಾಗಿ ಭಾರತದ ಸಂದರ್ಭಲ್ಲಿ ಈ ಅಸೂಕ್ಷ್ಮತೆಗಳು ಮಕ್ಕಳ ನಿತ್ಯ ಬದುಕಿನ ನಡೆನುಡಿಗಳಲ್ಲೇ ಅಂತರ್ಗತವಾಗಿರುವುದರಿಂದ ಶಾಲಾ ಮಟ್ಟದಿಂದಲೇ ಮಕ್ಕಳಲ್ಲಿ ಲಿಂಗ ಸೂಕ್ಷ್ಮತೆ-ಮನುಜ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನು ಪೋಷಿಸುವ ಜವಾಬ್ದಾರಿಯೂ ಶಿಕ್ಷಕರದ್ದೇ ಆಗಿರುತ್ತದೆ.  ಶಿಕ್ಷಕ ವಲಯವೇ ಮತಭೇದದ ಅಸ್ಮಿತೆಯ ರಾಜಕಾರಣವನ್ನು ಪೋಷಿಸುವಂತಹ ಕೆಲವು ಅಹಿತಕರ ಪ್ರಸಂಗಗಳಿಗೂ ಸಾಕ್ಷಿಯಾಗಿರುವ ಕರ್ನಾಟಕ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರಬೇಕಾಗುತ್ತದೆ.

ಪಠ್ಯಕ್ರಮ ಬೋಧನೆ ಮತ್ತು ಕಲಿಕೆಯಿಂದಾಚೆಗೂ ಶಿಕ್ಷಕ ವಲಯಕ್ಕೆ ಒಂದು ಸಾಮಾಜಿಕ ಬಾಧ್ಯತೆ ಮತ್ತು ಸಾಂಸ್ಕೃತಿಕ ನೈತಿಕತೆಯ ಹೊಣೆಗಾರಿಕೆ ಇರುವುದನ್ನು ಮನಗಂಡು ಕಲಿಕೆಯ ನಡುವೆಯೇ ಶಾಲಾ ಮಕ್ಕಳಲ್ಲಿ ಸಹಬಾಳ್ವೆಯ ಮೌಲ್ಯಗಳನ್ನು, ಸೋದರತ್ವದ ಭಾವನೆಗಳನ್ನು, ಮಾನವೀಯ ಸೂಕ್ಷ್ಮತೆಗಳನ್ನು ಹಾಗೂ ಲಿಂಗ ಸಂವೇದನೆಯನ್ನು ಬೆಳೆಸುವುದು ನಮ್ಮ ಪ್ರಥಮ ಆದ್ಯತೆಯಾಗಬೇಕಿದೆ. ಹೆಣ್ಣುಮಕ್ಕಳನ್ನು ಬೆತ್ತಲೆಯಾಗಿಸಿ ಅತ್ಯಾಚಾರವೆಸಗುವ ಕೃತ್ಯಗಳಿಗೆ , ಮನುಷ್ಯನನ್ನು ಪ್ರಾಣಿಗಿಂತಲೂ ಕೀಳಾಗಿ ಕಾಣುವ ಅಸ್ಪೃಶ್ಯತೆಯಂತ ಆಚರಣೆಗಳಿಗೆ ಮೌನ ವೀಕ್ಷಕರಾಗುವ ಒಂದು ಬೃಹತ್‌ ಸಾಮಾಜಿಕ ವಲಯ ನಮ್ಮ ನಡುವೆ ಇರುವುದನ್ನು ಶಿಕ್ಷಕ ವೃಂದ ಗಮನಿಸಲೇಬೇಕಿದೆ. ವಿದ್ಯಾರ್ಜನೆಗೆಂದು ಬರುವ ಮಕ್ಕಳು ಈ ಸಮಾಜದ ಒಳಗಿನಿಂದಲೇ ಬಂದವರಾಗಿರುತ್ತಾರೆ ಅಲ್ಲದೆ ತಮ್ಮ ನಿತ್ಯಬದುಕಿನ ಸಾಂಸ್ಕೃತಿಕ ಚಿಂತನೆಗಳಿಂದ ಪ್ರಭಾವಿತರೂ ಆಗಿರುತ್ತಾರೆ. ಈ ಮಕ್ಕಳನ್ನು ಅಂತಹ ವಿಷ ವರ್ತುಲಗಳಿಂದ ಹೊರತಂದು, ಮಾನವೀಯ ಮೌಲ್ಯಗಳೆಡೆಗೆ ಕರೆದೊಯ್ಯುವ ಜವಾಬ್ದಾರಿ ಒಬ್ಬ ಶಿಕ್ಷಕನ ಮೇಲಿರುತ್ತದೆ. ಕಲಿಕೆ-ಬೋಧನಾ ಪ್ರಕ್ರಿಯೆಯಿಂದಾಚೆಗಿನ ಈ ಕೈಂಕರ್ಯದಲ್ಲಿ ಸದ್ಭಾವನೆಯಿಂದ ತೊಡಗುವುದು ಶಿಕ್ಷಕರ ಆದ್ಯತೆಯೂ ಆಗಬೇಕಿದೆ.

ಶಾಲಾ ಕಾಲೇಜುಗಳ ಆವರಣದೊಳಗಿನ ಬೋಧಕರು ಬಾಹ್ಯ ಸಮಾಜದ ತಮ್ಮ ವ್ಯಕ್ತಿಗತ ನಿಲುಮೆಗಳಿಂದಲೇ ಪ್ರಭಾವಿತರಾಗಿರುವುದು ಸಹಜವಾದರೂ, ಸಾಮಾಜಿಕ ಔನ್ನತ್ಯದ ದೃಷ್ಟಿಯಿಂದ ಶಿಕ್ಷಕರು ತಮ್ಮ ಬಾಹ್ಯ ಸಮಾಜದ ವ್ಯಕ್ತಿಗತ ಪೊರೆಯನ್ನು ಕಳಚಿಕೊಂಡು, ಮಕ್ಕಳ ನಡುವೆ ಸಮನ್ವಯದ ಸಂಸ್ಕೃತಿಯ ಬೀಜಗಳನ್ನು ಬಿತ್ತುವ ವ್ಯವಸಾಯಿಗಳಾಗಿ ಬೋಧನೆಯಲ್ಲಿ ತೊಡಗಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಬೋಧಕರಿಂದಲೇ ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳು ನಮ್ಮ ನಡುವೆ ಆಗಾಗ್ಗೆ ಗೋಚರಿಸುತ್ತಲೇ ಇದ್ದಾರೆ. ಹಾಗೆಯೇ ಸಮವಸ್ತ್ರದ ನೆಪದಲ್ಲಿ ಮತದ್ವೇಷದ ಗೋಡೆಗಳನ್ನು ಎದುರಿಸಬೇಕಾದ ಸನ್ನಿವೇಶಗಳನ್ನೂ ಶಾಲಾ ಹೆಣ್ಣುಮಕ್ಕಳು ಎದುರಿಸುತ್ತಿದ್ದಾರೆ. ಜಾತಿ ಶ್ರೇಷ್ಠತೆಯನ್ನು ಪೋಷಿಸುವ ಅಸ್ಪೃಶ್ಯತೆಯ ಪ್ರಕರಣಗಳೂ ಸಂಭವಿಸಿವೆ. ಈ ಪ್ರಸಂಗಗಳಲ್ಲಿ ಶಿಕ್ಷಕರಾದವರ ಪಾತ್ರವೇನು ? ಈ ಜಟಿಲ ಪ್ರಶ್ನೆಗೆ ಪ್ರತಿಯೊಬ್ಬ ಶಿಕ್ಷಕರೂ ಉತ್ತರ ಶೋಧಿಸಬೇಕಿದೆ.

ಈ ಘಟನೆಗಳು ಎಲ್ಲೋ ದೂರದಲ್ಲಿ ನಡೆದಿರಬಹುದಾದರೂ, ಇದರ ಹಿಂದಿನ ಮನಸ್ಥಿತಿ, ತಾತ್ವಿಕ ನಿಲುವುಗಳು ಹಾಗೂ ಸೈದ್ಧಾಂತಿಕ ಧೋರಣೆಗಳು ನಮ್ಮ ನಡುವೆಯೇ ಜೀವಂತವಾಗಿರುವುದನ್ನು, ಸರ್ವವ್ಯಾಪಿಯಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಶಾಲಾ ಕಾಲೇಜು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಪ್ರಕ್ರಿಯೆಯಲ್ಲಿ ನಾವು ಹಿಂದುಳಿದಿರುವುದರಿಂದಲೇ ಇಂತಹ ಪ್ರಾಚೀನ ನಡವಳಿಕೆಗಳು ಮತ್ತೆ ಮತ್ತೆ ನಮ್ಮ ನಡುವಿನ ಬದುಕನ್ನು ಪ್ರಕ್ಷುಬ್ಧಗೊಳಿಸುತ್ತಿವೆ. ಈ ಪರಿವೆ ಶಿಕ್ಷಕರಲ್ಲಿ ಇರಬೇಕಾಗುತ್ತದೆ. ತಮ್ಮ ಜ್ಞಾನಾರ್ಜನೆಯ ಹಾದಿಯ ಕಲಿಕೆಯ ಹಂತದಲ್ಲಿ ಮಕ್ಕಳಿಗೆ ಕಣ್ತೆರೆದು ನೋಡುವ ವ್ಯವಧಾನವನ್ನೂ, ಓದಿ ತಿಳಿಯುವ ಆಸಕ್ತಿಯನ್ನೂ, ಒಳಸೂಕ್ಷ್ಮಗಳನ್ನು ಗ್ರಹಿಸುವ ಸಂವೇದನಾಶೀಲ ಗುಣಗಳನ್ನೂ ಕಲಿಸಿಕೊಡಬೇಕಾದ್ದು ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಬೇಕು. ಆದರೆ ಮಾರುಕಟ್ಟೆಯ ಅವಶ್ಯಕತೆಗಳು, ಆಳುವವರ ಆದ್ಯತೆಗಳು ಮತ್ತು ರಾಜಕೀಯ ಸೈದ್ದಾಂತಿಕ ಅನಿವಾರ್ಯತೆಗಳು ಈ ಪ್ರಕ್ರಿಯೆಗೆ ತೊಡಕಾಗಿಯೇ ಇರುತ್ತವೆ.

ಶಿಕ್ಷಕ ದಿನಾಚರಣೆಯ ಸಾರ್ಥಕತೆ

ಹಾಗಾಗಿಯೇ ಶಾಲಾ ಆವರಣದಲ್ಲಾದರೂ ಶಿಕ್ಷಕರು ತಮ್ಮ ಬಾಹ್ಯ ಸಮಾಜದ ವ್ಯಕ್ತಿಗತ-ವೈಯುಕ್ತಿಕ ತಾತ್ವಿಕ/ಸೈದ್ಧಾಂತಿಕ/ಧಾರ್ಮಿಕ ಪೊರೆಗಳನ್ನು ಕಳಚಿಟ್ಟು ಕಾರ್ಯನಿರ್ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಕಲಿಕೆ ಮತ್ತು ಜ್ಞಾನಾರ್ಜನೆಯ ಪರಿಚಾರಕರಾಗಬೇಕಾದ ಶಿಕ್ಷಕ ವೃಂದ ಬಾಹ್ಯ ಸಮಾಜದ ಆಳುವ ವರ್ಗಗಳ-ಪ್ರಭಾವಿ ವಲಯದ  ಬಾಲಂಗೋಚಿಗಳಾಗಿ ಕಾಣತೊಡಗುತ್ತದೆ. ಶಿಕ್ಷಣ ಎನ್ನುವುದು ಕೇವಲ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸಬಹುದಾದ ಬೌದ್ಧಿಕ ಸರಕುಗಳ ಉತ್ಪಾದನೆಯ ವಲಯ ಅಲ್ಲ. ಅದು ಭವಿಷ್ಯದಲ್ಲಿ ಶತಮಾನಗಳ ಕಾಲ ಮನುಷ್ಯ ಕುಲವನ್ನು ಸಹಬಾಳ್ವೆಯೊಂದಿಗೆ ಬದುಕಲು ಪೂರಕವಾದಂತಹ  ಮನುಷ್ಯ ಜೀವಿಗಳನ್ನು ರೂಪಿಸುವ ಒಂದು ಸಾಂಸ್ಕೃತಿಕ ಕ್ಷೇತ್ರ. ಶಾಲಾ ಕಾಲೇಜುಗಳಲ್ಲಿ ಬೆಳೆಯಬಹುದಾದ ಮಾನವೀಯ ಮೌಲ್ಯಗಳ ಹುಲುಸಾದ ಬೆಳೆಯೇ ಭವಿಷ್ಯದ ಸಮಾಜವನ್ನು ಕಟ್ಟುವ ಸುಭದ್ರ ಫಲವತ್ತಾದ ಭೂಮಿಕೆಯೂ ಆಗುತ್ತದೆ. ಕೋಟ್ಯಂತರ ಮಕ್ಕಳು ಈ ಫಲವತ್ತಾದ ಭೂಮಿಯಲ್ಲಿ ಬೆಳೆದ ವೃಕ್ಷಗಳಾಗಿ ಮುಂದಿನ ಹಲವು ತಲೆಮಾರುಗಳಿಗೆ ನೆರಳಾಗುತ್ತಾರೆ.

ಇಂತಹ ಒಂದು ಸುಂದರ ಸಮಾಜವನ್ನು ರೂಪಿಸಲು ಶಿಕ್ಷಕರಾದವರು ಸಾಮಾಜಿಕ ಶಿಲ್ಪಿಯಾಗಿಯೂ, ಸಾಂಸ್ಕೃತಿಕ ರಾಯಭಾರಿಯಾಗಿಯೂ, ಮಾನವೀಯತೆಯ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ರೂಪಿಸಲಾಗುವ ವ್ಯಕ್ತಿತ್ವಗಳೇ ಬಾಹ್ಯ ಸಮಾಜದಲ್ಲಿ ಪ್ರಭಾವ ಬೀರುವ ಪ್ರತಿಮೆಗಳಾಗಿ ಮುಂದಿನ ದಿನಗಳಲ್ಲಿ ಸಮಾಜ ನಿರ್ಮಾಣದ ಹಾದಿಯಲ್ಲಿ ಸಾಗುತ್ತವೆ. ಶಿಕ್ಷಕ ಎಂಬ ಶಿಲ್ಪಿ ಕಡೆದು ನಿಲ್ಲಿಸುವ ಶಿಲ್ಪಗಳೇ ಭವಿಷ್ಯ ಭಾರತದ ಸಮನ್ವಯತೆ, ಸೌಹಾರ್ದತೆ, ಸೋದರತ್ವ ಹಾಗೂ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಕಾವಲುಪಡೆಗಳಾಗಿ ಸಮ ಸಮಾಜದ ಶಿಲ್ಪಿಗಳಾಗುತ್ತಾರೆ. ಇಂತಹ ಉದಾತ್ತ ಚಿಂತನೆಯ ಶಿಲ್ಪಗಳನ್ನು ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಈ ನೈತಿಕ ಹೊಣೆಗಾರಿಕೆಯನ್ನು ಅರಿತು ಮುನ್ನಡೆಯುವ ದೃಢ ಸಂಕಲ್ಪ ಇದ್ದರೆ ನಾವು ಆಚರಿಸುವ “ ಶಿಕ್ಷಕರ ದಿನಾಚರಣೆ ” ಸಾರ್ಥಕವಾಗುತ್ತದೆ. ಇಲ್ಲವಾದಲ್ಲಿ ಮತ್ತೊಂದು ದಿನಾಚರಣೆಯಾಗಿ ವಿಸ್ಮೃತಿಗೆ ಜಾರಿಬಿಡುತ್ತದೆ.

-/-/-/-/-/-

Tags: BJPdr sarvepalli radhakrishnanEducation MinisterIndian educationteachers day
Previous Post

ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ: ಕೆಜೆ ಜಾರ್ಜ್‌ಗೆ ಅವಕಾಶ

Next Post

ಅಂಕಣ | ಗೌರಿ ಲಂಕೇಶ್ ಕೊಲೆಯಾದಾಗ ವಿಕೃತಿ ಮೆರೆದಿದ್ದ ಜಾತಿವ್ಯಾಧಿ ಮಾಧ್ಯಮಗಳು

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 18, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ  ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್.‌ ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

April 15, 2026
ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

April 15, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಅಂಕಣ | ಗೌರಿ ಲಂಕೇಶ್ ಕೊಲೆಯಾದಾಗ ವಿಕೃತಿ ಮೆರೆದಿದ್ದ ಜಾತಿವ್ಯಾಧಿ ಮಾಧ್ಯಮಗಳು

ಅಂಕಣ | ಗೌರಿ ಲಂಕೇಶ್ ಕೊಲೆಯಾದಾಗ ವಿಕೃತಿ ಮೆರೆದಿದ್ದ ಜಾತಿವ್ಯಾಧಿ ಮಾಧ್ಯಮಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada