2024ರ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಗೆಲ್ಲಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್, ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ, ಬಿಜೆಪಿ ಸೇರಿದಂತೆ ಟಿಡಿಪಿ ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿವೆ. 2019 ಆಂಧ್ರದ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಗೆಯಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದ ವೈಎಸ್ಆರ್ ಕಾಂಗ್ರೆಸ್ಸನ್ನು ಸೋಲಿಸಲು ಚಂದ್ರಬಾಬು ನಾಯ್ಡು ಭಾರೀ ಪ್ಲಾನ್ ಮಾಡಿದ್ದಾರಂತೆ.
ಕಳೆದ ಚುನಾವಣೆಯಲ್ಲಿ ಎಷ್ಟೇ ಪರಿಶ್ರಮ ಪಟ್ಟರೂ ಟಿಡಿಪಿ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪ್ರಶಾಂತ್ ಕಿಶೋರ್ ನೇತೃತ್ವದ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ತಂತ್ರಗಾರಿಕೆಯ ಪರಿಣಾಮ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮುಂದೆ ಸೋಲಬೇಕಾಗಿತ್ತು. ಆದರೀಗ, ಮುಂದಿನ ಚುನಾವಣೆ ಹೇಗಾದರೂ ಗೆಲ್ಲಲೇಬೇಕೆಂದು ಚಂದ್ರಬಾಬು ನಾಯ್ಡು ಭಾರೀ ತಂತ್ರಗಳನ್ನು ಹೆಣೆದಿದ್ದಾರೆ.
ಇದರ ಭಾಗವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸೋಲಿಗೆ ಕಾರಣವೇನು? ಎಂಬುದರ ಬಗ್ಗೆ ಚಂದ್ರಬಾಬು ನಾಯ್ಡು ಸಮೀಕ್ಷೆ ನಡೆಸಿದ್ದಾರಂತೆ. ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರ ರೂಪಿಸುವಲ್ಲಿ ಯಾಕೇ ವಿಫಲವಾದೆವು? ಎಂದು ಅವಲೋಕನ ನಡೆಸಿದ್ದಾರೆ. ಟಿಡಿಪಿ ನಾಯಕ ನಾಯ್ಡು ನಡೆಸಿದ ಬಹುತೇಕ ಸಭೆಗಳಲ್ಲಿ ತಮ್ಮ ಸೋಲಿಗೆ ಮತ್ತು ಸಿಎಂ ಜಗನ್ ಯಶಸ್ಸಿಗೆ ಐ-ಪ್ಯಾಕ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸದ್ಯ ಟಿಡಿಪಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿರುವ ನಾಯ್ಡು, ಮುಂದಿನ ಚುನಾವಣೆಗಾಗಿ ಮಾಸ್ಟರ್ ಪ್ಲಾನ್ ಮಾಡೋಣ ಎಂದಿದ್ದಾರಂತೆ. ಇದಕ್ಕಾಗಿ ಪ್ರಶಾಂತ್ ಕಿಶೋರ್ ರೀತಿಯಲ್ಲೇ ಚುನಾವಣಾ ತಂತ್ರಗಾರಿಕೆ ಹೆಣೆಯುವ ಚಾಣಾಕ್ಯರೊಬ್ಬರನ್ನು ಪಕ್ಷದ ವಿಶೇಷ ಸಲಹೆಗಾರನ್ನಾಗಿ ನೇಮಕ ಮಾಡಿಕೊಳ್ಳೋಣ ಎಂದು ಭರವಸೆ ನೀಡಿದ್ದಾರಂತೆ.
ಸಾಧ್ಯವಾದರೆ ಮುಂದಿನ ಚುನಾವಣೆ ದೃಷ್ಟಿಯಲ್ಲಿ ಪ್ರಶಾಂತ್ ಕಿಶೋರ್ ಟೀಮಿನ ಯಾರನ್ನಾದರೂ ಒಬ್ಬರನ್ನು ನೇಮಕ ಮಾಡಿಕೊಂಡರೆ, ಗೆಲವು ನಮ್ಮದೇ. ನಗೂ ಒಬ್ಬರು ವಿಶೇಷ ರಾಜಕೀಯ ಸಲಹೆಗಾರರು ಬೇಕಾಗಿದ್ದಾರೆ. ಇವರ ಮೂಲಕ ಜಗನ್ ಮೋಹನ್ ರೆಡ್ಡಿ ವಿರುದ್ಧ ರಣತಂತ್ರ ರೂಪಿಸಬಹುದು. ವೈಎಸ್ಆರ್ ಕಾಂಗ್ರೆಸ್ ಅನ್ನು ಸೋಲಿಸಲು ಹಲವು ತಂತ್ರಗಳನ್ನು ಹೆಣೆಯಬಹುದು ಎಂಬುದು ನಾಯ್ಡು ಲೆಕ್ಕಚಾರ.
ಇನ್ನು, ಜಗನ್ ಮೋಹನ್ ರೆಡ್ಡಿ ನಡೆಸಿದ ರೀತಿಯಲ್ಲೇ ಪ್ರಜಾ ಸಂಕಲ್ಪ ಯಾತ್ರೆಯನ್ನು ಆಯೋಜಿಸಬೇಕು. ಇದರೊಂದಿಗೆ ಅಗತ್ಯ ತಯಾರಿ ಮಾಡಿಕೊಂಡು 2024ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಪ್ರತೀ ಹಳ್ಳಿಗೂ ಭೇಟಿ ನೀಡಿ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಆಲಿಸಬೇಕು. ಒಂದು ವರ್ಷ ಸುದೀರ್ಘ ಪಾದಯಾತ್ರೆಯಲ್ಲಿ ಕನಿಷ್ಠ 2 ಕೋಟಿ ಜನರನ್ನು ತಲುಪೋಣ ಎಂದಿದ್ದಾರಂತೆ ನಾಯ್ಡು.
ಮತ್ತೆ ಟಿಡಿಪಿಯನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಬೇಕು. ಅಷ್ಟೇ ಅಲ್ಲದೆ ಲಕ್ಷಾಂತರ ಜನರು ಟಿಡಿಪಿಗೆ ಸೇರ್ಪಡೆಯಾಗಬೇಕು. ಈ ಮೂಲಕ ನನ್ನ ಜನಪ್ರಿಯತೆಯನ್ನು ಹೆಚ್ಚಿಸಬೇಕು. ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಬ್ಬರದ ಪ್ರಚಾರ ಮಾಡಬೇಕು. ಈ ಮೂಲಕ ಯುವಕರ ಗಮನವನ್ನು ಸೆಳೆದು ಭರ್ಜರಿ ಗೆಲುವು ಸಾಧಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ.