ಕಾವೇರಿ ನದಿ ನೀರು ಹಂಚಿಕೆ ವಿವಾದ ಮುಗಿದ ಅಧ್ಯಾಯ ಎನ್ನಲಾಗಿತ್ತು. ಅದೇ ಕಾರಣಕ್ಕೆ ಕಾವೇರಿ CAUVERY WATER MANAGEMENT AUTHORITY ನಿಗದಿಯಂತೆ ನೀರನ್ನು ಬಿಡುಗಡೆ ಮಾಡಿಕೊಂಡೇ ಹೋಗುತ್ತಿತ್ತು. ಇದಕ್ಕೂ ಮೊದಲೇ ಕರ್ನಾಟಕ ಕೂಡ ನೀರಿನ ಸಮಸ್ಯೆ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲು ಏರುವುದಕ್ಕೆ ಅವಕಾಶ ಇದ್ದರೂ ಅವಕಾಶ ಬಳಸಿಕೊಳ್ಳದೆ ಕೆಆರ್ಎಸ್ ಡ್ಯಾಂನಲ್ಲಿ ಸಂಗ್ರಹ ಆಗಿದ್ದ ನೀರನ್ನೇ ಬಿಡುಗಡೆ ಮಾಡಿಕೊಂಡು ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ವಿರೋಧ ಪಕ್ಷಗಳೂ ಕೂಡ ಸರ್ಕಾರದ ನಿಲುವನ್ನು ವಿರೋಧಿಸಿದ್ದವು. ಜೊತೆಗೆ ತಮಿಳುನಾಡಿನಲ್ಲಿ ಡಿಎಂಕೆ ಹಾಗು ಕಾಂಗ್ರೆಸ್ ಮೈತ್ರಿ ಪಕ್ಷಗಳು ಆಗಿರುವ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗ್ತಿದೆ ಎಂದು ಆರೋಪ ಮಾಡಿದ್ದರು.
ತಮಿಳುನಾಡು ಅರ್ಜಿ ಮಾನ್ಯ ಮಾಡಿದ ಸುಪ್ರೀಂಕೋರ್ಟ್..!
ಈಗಾಗಲೇ ಒಮ್ಮೆ ಸುಪ್ರೀಂಕೋರ್ಟ್ ಅಂಗಳದಿಂದ ಕೇಂದ್ರ ಸರ್ಕಾರದ ಅಂಗಳಕ್ಕೆ ಬಿದ್ದಿದ್ದ ಕಾವೇರಿ ವಿವಾದದ ಚೆಂಡು, ಮತ್ತೆ ಸುಪ್ರೀಂಕೋರ್ಟ್ ಅಂಗಳ ತಲುಪಿದೆ. ಕೇಂದ್ರ ಜಲಶಕ್ತಿ ಇಲಾಖೆ ನೇತೃತ್ವದಲ್ಲಿ ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ಸ್ಥಾಪನೆ ಮಾಡಲಾಗಿತ್ತು. ಆದರೆ ಇದೀಗ ಕಾವೇರಿ ನೀರಿಗಾಗಿ ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಅರ್ಜಿ ಸಲ್ಲಿಕೆ ಮಾಡಿ. ನ್ಯಾಯಾಧಿಕಾರಣದ ಐ ತೀರ್ಪಿನಂತೆ ಕರ್ನಾಟಕ ನೀರು ಹರಿಸುತ್ತಿಲ್ಲ. ನೀರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದೆ. ಸಾಮಾನ್ಯ ವರ್ಷಗಳಂತೆಯೇ ಕರ್ನಾಟಕ ನೀರು ಹರಿಸಬೇಕು ಅನ್ನೋದು ತಮಿಳುನಾಡಿನ ಮನವಿ. ಇದೀಗ ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿರುವ ಸುಪ್ರೀಂಕೋರ್ಟ್, ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ಅರ್ಜಿ ವರ್ಗಾವಣೆ ಮಾಡಲಾಗಿದೆ.
ಕಾವೇರಿ ಕ್ಯಾತೆ ಜೊತೆಗೆ ಮೇಕೆದಾಟುಗೆ ಅಡ್ಡಗಾಲು..!
ಕಾವೇರಿ ನೀರನ್ನು ಕೇಳುತ್ತಿರುವ ತಮಿಳುನಾಡು, ಮೇಕೆದಾಟು ಅಣೆಕಟ್ಟೆಯನ್ನೂ ಕಟ್ಟಬಾರದು ಎಂದು ತಮಿಳುನಾಡು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ. ಕರ್ನಾಟಕದ ಮೇಕೆದಾಟು ವಾರವನ್ನೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪರಿಗಣನೆಗೆ ತೆಗೆದುಕೊಂಡಿದ್ದು, ಎರಡೂ ಅರ್ಜಿಗಳನ್ನು ಶುಕ್ರವಾರ ಅಥವಾ ಸೋಮವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಕರ್ನಾಟಕ ಎಷ್ಟು ನೀರು ಬಿಡುಗಡೆ ಮಾಡಿದೆ. ಇನ್ನೂ ಎಷ್ಟು ಬಾಕಿ ಉಳಿಸಿಕೊಂಡಿದೆ ಅನ್ನೋದ್ರ ಮೇಲೆ ವಿಚಾರಣೆ ನಡೆಯಲಿದೆ. ಇದರ ನಡುವೆ 2018ರ ನ್ಯಾಯಾಧಿಕರಣದ ಆದೇಶದ ಪ್ರಕಾರ ನೀರು ಬಿಡುವುದು ಅಸಾಧ್ಯ ಎಂದು ಕರ್ನಾಟಕ ಸುಪ್ರೀಂಕೋರ್ಟ್ ಮುಂದೆ ಹೋಗಿದೆ. ಇದಕ್ಕೂ ಮೊದಲು ಬುಧವಾರ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕಡೆದಿದ್ದು, ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸಿಕೊಂಡೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ.
ಸುಪ್ರೀಂನಲ್ಲಿ ಹಿನ್ನಡೆ ಅನುಭವಿಸುತ್ತಾ, ಕರ್ನಾಟಕ..?
ಪ್ರತಿದಿನ ಕರ್ನಾಟಕ 24 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಅನ್ನೋದು ತಮಿಳುನಾಡಿನ ಬೇಡಿಕೆ. ಕೆಆರ್ಎಸ್ ಅಣೆಕಟ್ಟೆಯಲ್ಲಿ ಅಷ್ಟು ಪ್ರಮಾಣದ ನೀರು ಇಲ್ಲ. KRS ಡ್ಯಾಂನಲ್ಲಿ ಕೇವರ 69 TMC ಇದೆ, ನಮಗೇ 132 TMC ಬೇಕು, ಹೀಗಿರುವಾಗ ತಮಿಳುನಾಡಿಗೆ ನೀರು ಬಿಡೋಕೆ ಹೇಗೆ ಸಾಧ್ಯ ಅನ್ನೋದು ಕರ್ನಾಟಕದ ವಾದ. ಕಾವೇರಿ ನಿಯಂತ್ರಣಾ ಪ್ರಾಧಿಕಾರದ ಪ್ರಕಾರ ಈ ವರ್ಷ ಶೇಕಡ 42ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನು ಮೇಕೆದಾಟು ಅಣೆಗಟ್ಟೆಗೆ ಅನುಮತಿ ಕೊಟ್ಟರೆ ಹೆಚ್ಚುವರಿ ನೀರು ಹಿಡಿದಿಟ್ಟುಕೊಳ್ಳಬಹುದು. ಈ ರೀತಿಯ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡಬಹುದು ಎನ್ನುವುದು ಕರ್ನಾಟಕದ ವಾದ ಆಗಿದೆ. ಸುಪ್ರೀಂಕೋರ್ಟ್ನಲ್ಲಿ ಮೋಹನ್ ಕಾತರಕಿ ವಾದ ಮಂಡಿಸಲಿದ್ದು, ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕಕ್ಕೆ ಹಿನ್ನಡೆಯೋ ಮುನ್ನಡೆಯೋ ಕಾದು ನೋಡಬೇಕಿದೆ.
ಕೃಷ್ಣಮಣಿ