ರಾಜ್ಯದಲ್ಲಿ ಶಾಸಕರ ಗುಳೇ ವಿಷಯ ಮತ್ತೊಮ್ಮೆ ರಾಜಕೀಯ ಚರ್ಚೆಯ ವಸ್ತುವಾಗಿದೆ. ವಿಪರ್ಯಾಸವೆಂದರೆ ಈ ವಿಷಯವನ್ನು ಚರ್ಚೆಯ ಮುನ್ನೆಲೆಗೆ ತಂದವರೇ ಆಡಳಿತ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್!
ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆಯಂತಹ ವಿಷಯಗಳಲ್ಲಿ ಯತ್ನಾಳ್ ಈ ಹಿಂದೆ ಆಡಿರುವ ಮಾತುಗಳು ತಡವಾಗಿಯಾದರೂ ನಿಜವಾದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ. ಸಚಿವ ಸಂಪುಟ ಪುನರ್ ರಚನೆಯಾಗಿ ಅಂಥವರಿಗೆ ಅವಕಾಶ ಸಿಗದೇ ಹೋದರೆ, ಅವರೆಲ್ಲಾ ಪಕ್ಷ ತೊರೆಯುವುದು ಖಚಿತ ಎಂಬ ಹೇಳಿಕೆ ನೀಡಿರುವುದು ಸಹಜವಾಗೇ ದೊಡ್ಡ ಸಂಚಲನ ಮೂಡಿಸಿದೆ.
ಬಸನಗೌಡ ಪಾಟೀಲರ ಆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿರುವುದು ನಿಜ. ಆದರೆ, ಅಂತಹ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಚರ್ಚಿಸಲಾಗದು ಎಂದು ಪ್ರತಿಕ್ರಿಯಿಸಿರುವುದು ಸಹಜವಾಗೇ ಅನುಮಾನಗಳನ್ನು ಗಟ್ಟಿಗೊಳಿಸಿದೆ. ಸಿದ್ದರಾಮಯ್ಯ ಕೂಡ ಬಿಜೆಪಿಯ ಕೆಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಎಂದು ಹೇಳಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ; ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವರಾಗಿರುವ ಅವರ ಆಪ್ತ ಎಂ ಟಿ ಬಿ ನಾಗರಾಜ್ ತಮ್ಮ ಮಾಜಿ ಗಾಡ್ ಫಾದರ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಸಂಗತಿ ಭಾರೀ ಸಂಚಲನ ಸೃಷ್ಟಿಸಿತ್ತು.
ಆದರೆ, ಕಾಂಗ್ರೆಸ್ ನಾಯಕರ ಈ ಹೇಳಿಕೆಗಳಿಗೆ ತಿರುಗೇಟು ನೀಡಿದ ಆಪರೇಷನ್ ಕಮಲದ ಸೂತ್ರಧಾರ ಮತ್ತು ಬಾಂಬೆ ಮಿತ್ರಮಂಡಳಿಯ ನಾಯಕ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ 19 ಮಂದಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಯಾವುದೇ ಕ್ಷಣದಲ್ಲಿ ಅವರು ಪಕ್ಷ ತೊರೆದು ಬಿಜೆಪಿಗೆ ಸೇರಲಿದ್ದಾರೆ ಎಂದಿದ್ದಾರೆ. ವರಿಷ್ಠರು ಗ್ರೀನ್ ಸಿಗ್ನಲ್ ಕೊಟ್ಟರೆ ನಾನು ಅವರನ್ನೆಲ್ಲಾ ಬಿಜೆಪಿಗೆ ಕರೆತರಲು ಸಿದ್ಧ ಎಂದು ಹೇಳಿದ್ದಾರೆ. ಆ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಹೀಗೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಮತ್ತು ನಾಯಕರ ನಡುವೆ ಶಾಸಕರ ಗುಳೇ ಕುರಿತ ವಾಗ್ವಾದ ಭುಗಿಲೆದ್ದಿರುವಾಗಲೇ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದು, ರಮೇಶ್ ಜಾರಕಿಹೊಳಿ ಅವರು ನಮ್ಮ ಸಂಪರ್ಕದಲ್ಲಿ ಇಲ್ಲ. ಆದರೆ, ಪಕ್ಷದ ಯಾವೆಲ್ಲಾ ಶಾಸಕರು ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ಗೊತ್ತು ಎಂದಿದ್ದಾರೆ.
ಒಟ್ಟಾರೆ ಮೂರೂ ಪಕ್ಷಗಳಲ್ಲಿ ಶಾಸಕರ ಪಕ್ಷಾಂತರದ ಚರ್ಚೆ ಆರಂಭವಾಗಿದೆ. ಆದರೆ, ಪ್ರಮುಖವಾಗಿ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಖುದ್ದು ತಮ್ಮ ಪಕ್ಷದ ಹಲವು ಶಾಸಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದು, ಅವರು ಯಾವುದೇ ಕ್ಷಣದಲ್ಲಿ ಪಕ್ಷ ತೊರೆಯಬಹುದು. ಆಗ ಖಂಡಿತವಾಗಿಯೂ ಸರ್ಕಾರಕ್ಕೆ ಕುತ್ತು ಬರಲಿದೆ ಎಂದು ಸಾರ್ವಜನಿಕವಾಗಿ ಅಭಿಪ್ರಾಯವ್ಯಕ್ತಪಡಿಸಿರುವುದು ಮತ್ತು ಅವರ ಆ ಹೇಳಿಕೆಯ ಬಳಿಕ ಘಟಾನುಘಟಿ ನಾಯಕರೇ ಆ ಕುರಿತು ಬಹಿರಂಗ ಚರ್ಚೆಗೆ ಚಾಲನೆ ನೀಡಿರುವುದು ಕುತೂಹಲಕಾರಿ. ಮುಖ್ಯವಾಗಿ ಯತ್ನಾಳ್ ಆ ಹೇಳಿಕೆಯ ಬೆನ್ನಲ್ಲೇ ಯಡಿಯೂರಪ್ಪ ಪರಮಾಪ್ತ ಎಂ ಪಿ ರೇಣುಕಾಚಾರ್ಯ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ಮತ್ತು ಅದಾದ ಮಾರನೇ ದಿನವೆ ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿರುವುದು ಭವಿಷ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಹತ್ವದ ಸಂದೇಶ ರವಾನಿಸಿದೆ.
ಈ ನಡುವೆ, ಚುನಾವಣಾ ಕಣದಲ್ಲಿರುವ ಬಿಜೆಪಿ ಆಡಳಿತದ ಉತ್ತರಪ್ರದೇಶ, ಗೋವಾ ರಾಜ್ಯಗಳಲ್ಲಿ ಆಡಳಿತ ಪಕ್ಷ ಬಿಜೆಪಿಯಿಂದ ಹಲವು ಘಟಾನುಘಟಿ ನಾಯಕರು ಪ್ರತಿಪಕ್ಷಗಳಿಗೆ ವಲಸೆ ಹೋಗುತ್ತಿರುವುದು ಗಮನಾರ್ಹ. ಬಿಜೆಪಿಯ ಭಾರೀ ಪ್ರಭಾವದ ಆ ಎರಡೂ ರಾಜ್ಯಗಳಲ್ಲೇ ಆಡಳಿತ ಪಕ್ಷದ ಅನುಕೂಲತೆಗಳನ್ನೆಲ್ಲಾ ತೊರೆದು, ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳ ನಡುವೆಯೂ ಪಕ್ಷದ ನಾಯಕರು ಸಾಮೂಹಿತ ಗುಳೇ ಹೋಗುತ್ತಿರುವುದು ಕರ್ನಾಟಕದ ರಾಜಕೀಯದ ಮೇಲೆಯೂ ಪರಿಣಾಮ ಬೀರುತ್ತಿದೆಯೇ? ಇನ್ನೇನು 15 ತಿಂಗಳು ಇರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಭವಿಷ್ಯವನ್ನು ಈ ನಾಯಕರು ಈಗಲೇ ಊಹಿಸಿಯೇ ಪ್ರತಿಪಕ್ಷಗಳತ್ತ ಮುಖ ಮಾಡಿದ್ದಾರೆಯೇ? ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಮುಖ್ಯವಾಗಿ ಮೇಕೆದಾಟು ಪಾದಯಾತ್ರೆಯ ಮೂಲಕ ಹಳೇಮೈಸೂರಿನ ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸು ವೃದ್ಧಿಸಿಕೊಂಡಿದೆ. ಜೊತೆಗೆ ಬೆಂಗಳೂರಿನಲ್ಲಿಯೂ ಕಾಂಗ್ರೆಸ್ ಪರವಾದ ಅಲೆ ನಿರ್ಮಾಣವಾಗಿದ್ದು, ಬಿಬಿಎಂಪಿ ಚುನಾವಣೆಗೆ ಮುನ್ನ ಆ ಪಕ್ಷದ ವರ್ಚಸ್ಸು ಬದಲಾಗಲಿದೆ ಎಂಬ ಲೆಕ್ಕಾಚಾರಗಳು ಬಿಜೆಪಿ ಅತೃಪ್ತ ಶಾಸಕರದ್ದು. ಜೊತೆಗೆ ಮುಖ್ಯವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಹದಿನೇಳು ಮಂದಿ ಕಾಂಗ್ರೆಸ್ ಮತ್ತು ಶಾಸಕರ ಭರವಸೆಯಾಗಿದ್ದ ಯಡಿಯೂರಪ್ಪ ಅವರನ್ನೇ ಪದಚ್ಯುತಗೊಳಿಸಿ ಮೂಲೆಗುಂಪು ಮಾಡಿರುವುದು ಆ ಶಾಸಕರಲ್ಲಿ ಅಭದ್ರತೆಯ ಭಾವನೆ ಮೂಡಿಸಿದೆ. ಜೊತೆಗೆ ಬಿಜೆಪಿಯ ಬೆನ್ನಲುಬಾದ ರಾಜ್ಯದ ಲಿಂಗಾಯತ ಸಮುದಾಯದ ಪ್ರಬಲ ನಾಯಕರನ್ನು ಹಾಗೆ ಮೂಲೆಗುಂಪು ಮಾಡಿರುವುದರ ಪರಿಣಾಮ ಮುಂದಿನ ಚುನಾವಣೆಯ ಮೇಲೆ ಆಗಲಿದೆ ಎಂಬ ಮುಂದಾಲೋಚನೆ ಕೂಡ ಬಿಜೆಪಿ ಶಾಸಕರಲ್ಲಿ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.
ಆಡಳಿತದ ವೈಫಲ್ಯದಿಂದಾಗಿ ಕರೋನಾ, ಲಾಕ್ ಡೌನ್ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕಲಾಗದೆ ರಾಜ್ಯದ ಜನತೆ ಸಂಕಷ್ಟಕ್ಕೆ ಈಡಾಗಿರುವ ಸಂಗತಿ ಕೂಡ ಚುನಾವಣೆಯಲ್ಲಿ ದೊಡ್ಡ ಮಟ್ಟದ ಪೆಟ್ಟು ಕೊಡುವ ನಿರೀಕ್ಷೆ ಇದೆ. ಜೊತೆಗೆ ಭಾಷೆ ಮತ್ತು ನಾಡುನುಡಿಯ ವಿಷಯದಲ್ಲಿ ಕೂಡ ಬಿಜೆಪಿಯ ಕೇಂದ್ರ ಸರ್ಕಾರದ ನಡೆಗಳು ರಾಜ್ಯಾದ್ಯಂತ ಕನ್ನಡ ನಾಡುನುಡಿ ಪರ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಇದು ರಾಜ್ಯದಲ್ಲಿ ಒಂದು ಮಟ್ಟದ ಬಿಜೆಪಿ ವಿರೋಧಿ ಪ್ರಾದೇಶಿಕ ಭಾವನೆಗಳಿಗೆ ಇಂಬು ನೀಡಿದೆ. ಬಿಜೆಪಿ ಕನ್ನಡ ವಿರೋಧಿ ಎಂಬ ಭಾವನೆ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನದೋಪಾದಿಯಲ್ಲಿ ಬೆಳೆಯುತ್ತಿದೆ.
ಹಾಗಾಗಿಯೇ ಉತ್ತರಪ್ರದೇಶ ಮತ್ತು ಗೋವಾದ ಮಾದರಿಯನ್ನೇ ಮುಂದಿಟ್ಟುಕೊಂಡು ಬಿಜೆಪಿ ಶಾಸಕರು ಕಾಂಗ್ರೆಸ್ ಕಡೆ ಮುಖಮಾಡಿದ್ದಾರೆ. ತಮ್ಮ ಭವಿಷ್ಯದ ರಾಜಕಾರಣದ ಭದ್ರತೆಯ ದಾರಿ ಕಂಡುಕೊಳ್ಳಲು ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಯತ್ನಾಳ್ ಮಾತುಗಳನ್ನು ಅರ್ಥೈಸಬೇಕಿದೆ!