ತಾಲಿಬಾನ್ ಉಗ್ರಗಾಮಿ ಸಂಘಟನೆ ಅಧಿಕಾರ ಹಿಡಿದ ಬಳಿಕ ಆಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ, ತಾಲಿಬಾನ್ ಆಡಳಿತಕ್ಕೆ ನಾಗರಿಕ ಪ್ರತಿರೋಧ ಭುಗಿಲೇಳತೊಡಗಿದೆ.
ಬುಧವಾರ, ಗುರುವಾರ ತಮ್ಮ ದೇಶದ ರಾಷ್ಟ್ರಧ್ವಜ ಹಿಡಿದು ಪುರುಷರು, ಮಹಿಳೆಯರು, ಮಕ್ಕಳು ಬೀದಿಗಿಳಿದು ತಾಲಿಬಾನ್ ವಿರುದ್ಧ ಪ್ರತಿರೋಧದ ಘೋಷಣೆ ಕೂಗಿ ತಮ್ಮ ವಿರೋಧ ವ್ಯಕ್ತಪಡಿಸತೊಡಗಿದ್ದಾರೆ. ಈ ವೇಳೆ ಶಾಂತಿಯುತ ಪ್ರತಿಭಟನಾನಿರತ ನಾಗರಿಕರ ಮೇಲೆ ತಾಲಿಬಾನ್ ಬಂಡುಕೋರರು ಗುಂಡಿನ ದಾಳಿ ಮಾಡಿ ಹಲವರ ಜೀವಬಲಿ ತೆಗೆದುಕೊಂಡ ಘಟನೆಗಳೂ ಜರುಗಿವೆ.
ಈ ನಡುವೆ, ಭಾರತದಲ್ಲಿ ತಾಲಿಬಾನಿಗಳು ಬದಲಾಗಬಹುದು. ಎರಡು ದಶಕದ ಹಿಂದಿನ ಅವರ ಕ್ರೌರ್ಯ ಮತ್ತು ಅಮಾನುಷ ಹಿಂಸಾತ್ಮಕ ಆಡಳಿತಕ್ಕೆ ಬದಲಾಗಿ ಈ ಬಾರಿ ಅವರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಶಾಂತಿ ಮತ್ತು ಸಮಾನತೆಯ ಆಶಯದ ಮೇಲೆ ಅಧಿಕಾರ ನಡೆಸಬಹುದು. ಅದರಲ್ಲೂ ಮುಖ್ಯವಾಗಿ ಮಹಿಳಾ ಹಕ್ಕು ಮತ್ತು ಮಕ್ಕಳ ಶಿಕ್ಷಣದಂತಹ ವಿಷಯದಲ್ಲಿ ಪೈಶಾಚಿಕ ಮನಸ್ಥಿತಿಯ ತಾಲಿಬಾನಿಗಳು ಬದಲಾಗಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಮತ್ತೊಂದು ಕಡೆ ತಾಲಿಬಾನಿಗಳ ಧರ್ಮಾಂಧತೆ ಮತ್ತು ಮತಾಂಧತೆಯ ಕ್ರೌರ್ಯವನ್ನು ನೆನಪಿಸಿಕೊಳ್ಳುತ್ತಾ ಭಾರತದಲ್ಲೂ ಧರ್ಮಾಂಧತೆ ಮತ್ತು ಕೋಮುವಾದದ ಮೇಲೆ ನಡೆಯುತ್ತಿರುವ ರಾಜಕಾರಣ ಮುಂದೊಂದು ದಿನ ತಾಲಿಬಾನಿ ಹಾದಿಯಲ್ಲೇ ಸಾಗಬಹುದು ಎಂಬ ಆತಂಕ ಕೂಡ ವ್ಯಕ್ತವಾಗುತ್ತಿದೆ.

ಬಹುಶಃ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಯಾವ ಬಗೆಯ ಆಡಳಿತ ನಡೆಸಬಹುದು? ಅದರಿಂದಾಗಿ ಅಲ್ಲಿನ ನಾಗರಿಕರು ಎದುರಿಸಬೇಕಾಗಬಹುದಾದ ಸವಾಲುಗಳೇನು? ಎಂಬ ಕುತೂಹಲ ಜಗತ್ತಿನ ಇತರೆ ದೇಶಗಳಿಗಿಂತ ಭಾರತೀಯರಲ್ಲಿ ಹೆಚ್ಚಿದೆ. ಏಕೆಂದರೆ; ಭಾರತ ಮತ್ತು ಆಫ್ಘಾನಿಸ್ತಾನದ ಕಳೆದ ಎರಡು ದಶಕದ ನಂಟು ಅಂತಹದ್ದು. ಅಲ್ಲಿನ ಸಂಸತ್ ಭವನ ನಿರ್ಮಾಣದಿಂದ ಆರಂಭವಾಗಿ ಪ್ರತಿ ಹಂತದಲ್ಲೂ ಆ ದೇಶದ ಮೂಲಸೌಕರ್ಯ ಮತ್ತು ಆಡಳಿತ ವ್ಯವಸ್ಥೆಯ ಪುನರ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಭಾರತ. ಜೊತೆಗೆ ಆ ದೇಶದಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆಯನ್ನೂ ಭಾರತ ಮಾಡಿದೆ. ಜೊತೆಗೆ ಅಲ್ಲಿನ ಗಡಿಯಂಚಿನ ಭಯೋತ್ಪಾದನಾ ಚಟುವಟಿಕೆಗಳಿಗೂ ಮತ್ತು ಭಾರತದ ಗಡಿಯಂಚಿನಲ್ಲಿ ಪಾಕಿಸ್ತಾನ ಪ್ರೇರಿತ ಚಟುವಟಿಕೆಗಳಿಗೂ ನೇರ ಸಂಬಂಧವಿದೆ.
ಹಾಗಾಗಿ, ಇಂತಹ ಹಲವು ಕಾರಣಗಳಿಂದಾಗಿ ಆಫ್ಘಾನಿಸ್ತಾನದ ಆಡಳಿತದ ಕುರಿತು ಭಾರತೀಯರಲ್ಲಿ ಹೆಚ್ಚು ಕುತೂಹಲ ಸಹಜ. ಆದರೆ, ನಿಜಕ್ಕೂ ತಾಲಿಬಾನಿಗಳು ಹಲವರು ಊಹಿಸಿದಂತೆ ಬದಲಾಗಿದ್ದಾರೆಯೇ? ಎರಡು ದಶಕದ ಹಿಂದಿನ ಕರಾಳ ವರ್ತನೆಗಳನ್ನು ಬದಲಾಯಿಸಿಕೊಂಡಿದ್ದಾರೆಯೆ? ಅಲ್ಲಿನ ಹೇಯ ಆಡಳಿತಕ್ಕೆ ಬದಲಾಗಿ ನಾಗರಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಒಂದು ನಾಗರಿಕ ವ್ಯವಸ್ಥೆ ಜಾರಿಗೆ ಬರಲಿದೆಯೇ ಎಂಬ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ.
ಆದರೆ, ಈಗಾಗಲೇ ತಾಲಿಬಾನ್ ತನ್ನ ಭವಿಷ್ಯದ ಆಡಳಿತದ ವೈಖರಿಯ ಬಗ್ಗೆ ಸೂಚನೆಗಳನ್ನು ನೀಡತೊಡಗಿದೆ. ಶಾಂತಿಯುತ ಪ್ರತಿಭಟನೆನಿರತ ನಾಗರಿಕರ ಮೇಲೆ ಗುಂಡಿನ ದಾಳಿ ಮಾಡಿರುವ ಘಟನೆ ಮಾತ್ರವಲ್ಲದೆ, ತಾಲಿಬಾನ್ ಪ್ರಮುಖ ನಾಯಕರು, ವಕ್ತಾರರುಗಳೇ ಅಧಿಕೃತವಾಗಿ ತಮ್ಮ ಮುಂದಿನ ಆಡಳಿತದ ಕುರಿತು ಹೇಳಿಕೆ ನೀಡುವ ಮೂಲಕ ಭವಿಷ್ಯದ ಆಫ್ಘಾನಿಸ್ತಾನದ ಕುರಿತು ಒಂದು ಸ್ಪಷ್ಟ ಚಿತ್ರಣ ನೀಡಿದ್ದಾರೆ.
ಕತಾರ್ ನಲ್ಲಿರುವ ತಾಲಿಬಾನ್ ವಕ್ತಾರ ಸುಹೇಲ್ ಶಹೀನ್, ತಮ್ಮ ಆಡಳಿತದಲ್ಲಿ ಮಹಿಳೆಯರು ಬುರ್ಕಾ ಧರಿಸದೆ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ವೃತ್ತಿನಿರತರು ವೃತ್ತಿ ಮುಂದುವರಿಸಬಹುದು. ಆದರೆ, ಬುರ್ಕಾ ಧರಿಸದೆ ಹೊರಗೆ ಓಡಾಡುವಂತಿಲ್ಲ. ಹಾಗೇ ಮಾಧ್ಯಮಗಳು ಖುರಾನ್ ಧರ್ಮಕ್ಕೆ ಬದ್ಧರಾಗಿ, ದೇಶದ ಪರ ಧೋರಣೆಯೊಂದಿಗೆ ಕೆಲಸ ಮಾಡಬಹುದು. ಇಲ್ಲವಾದಲ್ಲಿ ಅವುಗಳನ್ನು ನಿರ್ಬಂಧಿಸಲಾಗುವುದು. ಜನ ಕೂಡ ಸರ್ಕಾರದ ನೀತಿ-ನಡೆಗಳನ್ನು ಪ್ರಶ್ನಿಸುವುದು ಧರ್ಮ ವಿರೋಧಿಯಾಗಿರಕೂಡದು ಮತ್ತು ದೇಶ ವಿರೋಧಿಯಾಗಿರಕೂಡದು ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಮಹಿಳೆಯರು, ಮಾಧ್ಯಮ ಮತ್ತು ಜನಸಾಮಾನ್ಯರ ಮುಕ್ತ ಸ್ವಾತಂತ್ರ್ಯವೆಂಬುದು ಇನ್ನು ಸಾಧ್ಯವಿಲ್ಲ ಎಂದಿದ್ದಾರೆ. ಅಂದರೆ, ನಾಗರಿಕ ಹಕ್ಕುಗಳ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ತಮ್ಮ ಆಯ್ಕೆಯಲ್ಲ, ಬದಲಾಗಿ ಧರ್ಮಾಧಾರಿತ ಶರಿಯತ್ ಕಾನೂನು ಪಾಲನೆ ತಮ್ಮ ಉದ್ದೇಶ ಎಂಬುದನ್ನು ಖಚಿತಪಡಿಸಿದ್ದಾರೆ.
ಮತ್ತೊಂದು ಕಡೆ ತಾಲಿಬಾನ್ ಸಂಘಟನೆಯ ಹಿರಿಯ ನಾಯಕರಲ್ಲಿ ಒಬ್ಬರಾದ ವಹೀದುಲ್ಲಾ ಹಶಿಮಿ ರಾಯಿಟರ್ಸ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯದಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ನೀಡಿದ್ದು, ಯಾವುದೇ ಕಾರಣಕ್ಕೂ ತಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಿಲ್ಲ. ತಮ್ಮ ಆಯ್ಕೆ ಏನಿದ್ದರೂ ಶರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಆಡಳಿತ. ತಾಲಿಬಾನ್ ಅಧಿನಾಯಕ ಹೇಬತುಲ್ಲಾ ಅಖುಂದ್ಜಾದಾ ನೇತೃತ್ವದ ಆಡಳಿತ ಸಮಿತಿ ದೇಶದ ಅಧಿಕಾರ ಚಲಾಯಿಸಲಿದೆ. ಸಚಿವರನ್ನೂ ಇದೇ ಸಮಿತಿಯೇ ನೇಮಕ ಮಾಡಲಿದೆ ಎಂದು ಹೇಳಿದ್ದಾರೆ.
ಮತ್ತೊಂದು ಕಡೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಸೂಚನೆ ಎಂಬಂತೆ ಈಗಾಗಲೇ ತಾಲಿಬಾನ್, ಭಾರತದೊಂದಿಗಿನ ಆಮದು ಮತ್ತು ರಫ್ತು ವಹಿವಾಟನ್ನು ರದ್ದುಪಡಿಸಿದೆ. ಇನ್ನು ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಅಮೆರಿಕದೊಂದಿಗಂತೂ ಅದು 20 ವರ್ಷಗಳ ಕಾಲ ಸಮರವನ್ನೇ ಸಾರಿತ್ತು ಮತ್ತು ಭವಿಷ್ಯದಲ್ಲಿ ಕೂಡ ಅಮೆರಿಕ ಅದರ ಪರಮಶತ್ರುವಾಗಿಯೇ ಇರಲಿದೆ. ಹಾಗಾಗಿ ಪ್ರಜಾಪ್ರಭುತ್ವ ಎಂಬುದು ತಾಲಿಬಾನ್ ಪಾಲಿಗೆ ಎಂದೆಂದೂ ಒಪ್ಪಿಕೊಳ್ಳಲಾಗದ ವ್ಯವಸ್ಥೆಯಾಗಿಯೇ ಮುಂದುವರಿದಿದೆ.
ಈ ನಡುವೆ, ತಾಲಿಬಾನ್ ನುಗ್ಗುತ್ತಲೇ ಆಫ್ಘಾನಿಸ್ತಾನದ ಬೀದಿಗಳ ಚಿತ್ರಣವೇ ಬದಲಾಗತೊಡಗಿದೆ. ಬ್ಯೂಟಿ ಪಾರ್ಲರುಗಳು ಮುಚ್ಚತೊಡಗಿವೆ. ಪಾರ್ಲರುಗಳ ಬೋರ್ಡುಗಳು, ಆಧುನಿಕ ಮಹಿಳೆಯರ ಚಿತ್ರಗಳು ತೆರವುಗೊಳ್ಳುತ್ತಿವೆ. ಕಾಲೇಜು ಹುಡುಗರ ಜೀನ್ಸ್ ಪ್ಯಾಂಟು, ಟೀ ಶರ್ಟುಗಳು ಕೋಣೆಯ ಮೂಲೆಗೆ ಸರಿದು, ಜುಬ್ಬಾ-ಪೈಜಾಮದ ಇಸ್ಲಾಮಿಕ್ ರೂಢಿಗತ ಉಡುಪುಗಳು ಮೈ ಏರಿವೆ.
ದಶಕಗಳ ಹಿಂದಿನ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರಿಗೆ ಮನೆಯಿಂದ ಹೊರಬಂದು ವೃತ್ತಿ ನಡೆಸಲು, ಶಿಕ್ಷಣ ಪಡೆಯಲು ನಿಷೇಧ ಹೇರಲಾಗಿತ್ತು. ಯಾವುದೇ ಮಹಿಳೆ, ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೆ ಮನೆಯಿಂದ ಹೊರಬರಬೇಕಾದರೆ ಸಂಪೂರ್ಣ ದೇಹ ಮುಚ್ಚುವ, ಮುಖವನ್ನು ಕೂಡ ಪೂರ್ಣ ಮುಚ್ಚುವ ಬುರ್ಕಾ ಧರಿಸುವುದು ಕಡ್ಡಾಯವಾಗಿತ್ತು ಮತ್ತು ಕುಟುಂಬದ ಪುರುಷರ ಜೊತೆಯಲ್ಲಿ ಮಾತ್ರ ಅವರು ಹೊರಬರಲು ಅವಕಾಶವಿತ್ತು. ಇಲ್ಲವಾದಲ್ಲಿ ಅಂತಹ ಮಹಿಳೆಯರನ್ನು ನಡುಬೀದಿಯಲ್ಲಿ ನಿಲ್ಲಿಸಿ ಅಮಾನುಷವಾಗಿ ಥಳಿಸಿ ಸಾಯಿಸಲಾಗುತ್ತಿತ್ತು. ಮಕ್ಕಳು ಶಾಲೆಯಲ್ಲಿ ಆಧುನಿಕ ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ, ಕೇವಲ ಶರಿಯತ್ ಶಿಕ್ಷಣಕ್ಕೆ ಮಾತ್ರ ಅವಕಾಶವಿತ್ತು. ಒಂದು ವೇಳೆ ಎಲ್ಲಿಯಾದರೂ ಆಧುನಿಕ ಶಿಕ್ಷಣ ಕಲಿಸುತ್ತಿದ್ದರೆ, ಅಂತಹ ಶಾಲೆಗಳ ಮೇಲೆ ಬಾಂಬ್ ದಾಳಿ ಮಾಡಿ ಮಕ್ಕಳಸಹಿತ ಸರ್ವನಾಶ ಮಾಡಲಾಗುತ್ತಿತ್ತು.
ಅಂತಹ ಕರಾಳ ನೆನಪುಗಳ ಹಿನ್ನೆಲೆಯಲ್ಲಿ ಆಘ್ಫಾನಿನ ಜನ ಈಗಲೂ ತಾಲಿಬಾನಿಗಳು ಮೇಲುಗೈ ಸಾಧಿಸುತ್ತಿದ್ದಂತೆ ಮನೆಯಿಂದ ಹೊರಬರಲು ಭಯಪಟ್ಟು ಮನೆಯೊಳಗೇ ಕಾಲಕಳೆಯುತ್ತಿದ್ದಾರೆ. ಮತ್ತೆ ಕೆಲವರು ಹೇಗಾದರೂ ಮಾಡಿ ದೇಶದಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಅವರಿಗೆ ಭಯ ಇರುವುದು ಆಫ್ಘಾನಿಸ್ತಾನದ ಬದುಕಿನ ಬಗ್ಗೆಯಲ್ಲ; ತಾಲಿಬಾನಿ ಆಡಳಿತ ಮತ್ತು ಶರಿಯತ್ ಕಾನೂನಿನ ಹೇರಿಕೆಯ ಬಗ್ಗೆ ಎಂಬುದು ಗಮನಾರ್ಹ. ಇದೀಗ ದೇಶದ ಜನ ಸಾವಿರಾರು ಸಂಖ್ಯೆಯಲ್ಲಿ ದೇಶ ತೊರೆಯುತ್ತಿರುವ ಹಿನ್ನೆಲೆಯಲ್ಲಿ ಜನರೇ ಇಲ್ಲದೇ ಯಾರನ್ನು ಆಳುವುದು ಎಂಬ ಆತಂಕದಲ್ಲಿ ತಾಲಿಬಾನಿಗಳು ತಮ್ಮ ಮುಂದಿನ ಆಡಳಿತ ಹಿಂದಿನಂತೆ ಇರುವುದಿಲ್ಲ. ಮಹಿಳೆಯರಿಗೆ ವೃತ್ತಿ ನಡೆಸಲು, ಶಿಕ್ಷಣ ಪಡೆಯಲು ಮುಕ್ತ ಅವಕಾಶ ನೀಡಲಾಗುವುದು, ಯಾವುದೇ ವ್ಯಕ್ತಿಯ ಆಸ್ತಿಪಾಸ್ತಿ ರಕ್ಷಣೆ ತಮ್ಮ ಹೊಣೆ ಎಂಬಂತಹ ಅಭಯದ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ವಾಸ್ತವವಾಗಿ ಕಳೆದ ಹದಿನೈದು ದಿನಗಳಲ್ಲಿ ಆಫ್ಘಾನಿಸ್ತಾನದ ಹೇರತ್, ಮಲಿಸ್ತಾನ್, ಕಂದಾಹಾರ್ ಮತ್ತಿತರ ಕಡೆ ತಮ್ಮ ವಶಕ್ಕೆ ಪಡೆದ ಬಳಿಕ ತಾಲಿಬಾನಿಗಳು ಮನೆಮನೆಗೆ ನುಗ್ಗಿ ಹಿಂದಿನ ಸರ್ಕಾರದಲ್ಲಿದ್ದ ನೌಕರರು, ಅಧಿಕಾರಿಗಳನ್ನು ಬೀದಿಗೆಳೆದು ಕೊಂದು, ಥಳಿಸಿ ಹಿಂಸಾಚಾರ ನಡೆಸಿದ್ದಾರೆ. ರೇಡಿಯೋ ಸ್ಟೇಷನ್ ಬಂದ್ ಮಾಡಿಸಿದ್ದಾರೆ. ಪತ್ರಕರ್ತರ ಮೇಲೆ ದಾಳಿ ಮಾಡಲಾಗಿದೆ. ಹಾಗೇ ಕಳ್ಳತನದ ಆರೋಪ ಹೊತ್ತಿದ್ದ ಇಬ್ಬರ ಮುಖಕ್ಕೆ ಮಸಿ ಬಳಿದು ನಡುಬೀದಿಯಲ್ಲಿ ಅವರ ಮೆರವಣಿಗೆ ಮಾಡಲಾಗಿದೆ.
ಅಂದರೆ, ಇಪ್ಪತ್ತು ವರ್ಷದ ಹಿಂದಿನ ಕರಾಳ ತಾಲಿಬಾನ್ ಆಡಳಿತದ ಕೆಲವು ಸ್ಯಾಂಪಲ್ಲುಗಳನ್ನು ಈಗಾಗಲೇ ತೋರಿಸಿದ್ದಾರೆ. ಜೊತೆಗೆ ಅಧಿಕೃತವಾಗಿಯೇ ತಮ್ಮದು ಶರಿಯಾ ಕಾನೂನು ಆಡಳಿತ ಮತ್ತು ತಮ್ಮ ಸಂಘಟನೆಯ ಅಧಿನಾಯಕರೇ ಸರ್ಕಾರದ ಸೂತ್ರಧಾರರು. ಅವರು ಹೇಳಿದವರೇ ಸಚಿವರು ಎಂದೂ ಹೇಳಲಾಗಿದೆ. ತಾಲಿಬಾನಿ ಆಡಳಿತದ ಭವಿಷ್ಯದ ಸ್ವರೂಪದ ಬಗ್ಗೆ ಇಷ್ಟೆಲ್ಲಾ ಸ್ಪಷ್ಟತೆಯ ನಡುವೆಯೂ ತಾಲಿಬಾನಿಗಳು ಬದಲಾಗಿದ್ದಾರೆ. ಅವರ ಹಿಂದಿನ ಆಡಳಿತದಂತೆ ಈಗಿನದ್ದು ಇರಲಾರದು. ಪ್ರಜಾಪ್ರಭುತ್ವ ಮಾದರಿಯ ನಾಗರಿಕ ಸರ್ಕಾರ ಅಲ್ಲಿ ಬರಲಿದೆ ಎಂಬಂತಹ ಮಾತುಗಳನ್ನು ಆಡುವ ಜನರೂ ಇದ್ದಾರೆ!
ಆದರೆ, ತಾಲಿಬಾನಿ ವಕ್ತಾರ ಸುಹೇಲ್ ತನ್ನ ಸಂದರ್ಶನದಲ್ಲಿ ಹೇಳಿದಂತೆ, ಈ ಇಪ್ಪತ್ತು ವರ್ಷಗಳಲ್ಲಿ ತಾಲಿಬಾನ್ ಕುರಿತ ಸಾಮಾನ್ಯ ಗ್ರಹಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದಕ್ಕೆ ಕಾರಣ ಧಾರ್ಮಿಕ ಮೂಲಭೂತವಾದದ ಪರ ನಿಲುವಿನ ಮಾಧ್ಯಮಗಳ ತಾಲಿಬಾನ್ ಕುರಿತ ಧೋರಣೆಯಲ್ಲಿ ಆಗಿರುವ ಬದಲಾವಣೆಯೇ? ಅಥವಾ ಪಾಶ್ಚಿಮಾತ್ಯ ರಾಷ್ಟ್ರಗಳೂ ಸೇರಿದಂತೆ ಎಲ್ಲೆಡೆ ಕಳೆದೊಂದು ದಶಕದಲ್ಲಿ ಬಲಪಂಥೀಯ ಮೂಲಭೂತವಾದಿ ರಾಜಕಾರಣ ಮುನ್ನೆಲೆಗೆ ಬಂದಿರುವುದೆ? ಅಥವಾ ನಿಜವಾಗಿಯೂ ತಾಲಿಬಾನ್ ತನ್ನ ಒರಟುತನದ ಉಗ್ರಮನಸ್ಥಿತಿಯ ಬದಲಾಗಿ, ಚೂರು ನಾಜೂಕಾದ ರಾಜಕೀಯ ಕಟ್ಟರ್ ಧೋರಣೆಯನ್ನು ಅಳವಡಿಸಿಕೊಂಡಿದೆಯೇ?.. ಈ ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನೂ ಕೆಲವು ದಿನ ಕಾಯಬೇಕಾಗಬಹುದು.









