ಅಮೇರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ತೊರೆದಿದೆ. ಈ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್ ಹಿರಿಯ ನಾಯಕರು ಹಲವಾರು ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ಅಫ್ಘಾನ್ನಲ್ಲಿ ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿ ಮಾಡುವ ಉದ್ದೇಶ ಹೊಂದಿರುವ ಇವರು, ದೇಶದ ರಾಜಕೀಯ ಮತ್ತು ಧಾರ್ಮಿಕ ನಿರ್ಧಾರಗಳಿಗೆ ಅಧ್ಯಕ್ಷರೇ ಸಾರ್ವಭೌಮರು ಎಂದು ಘೋಷಿಸಲಿದ್ದಾರೆ. ಅಫ್ಘಾನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವವರು ಕಂದಹಾರ್ನಿಂದಲೇ ಕಾಬೂಲ್ ಆಡಳಿತ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ತಾಲಿಬಾನ್ ಸಂಘಟನೆಯ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡಜಾದ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಸರ್ವೋಚ್ಚ ನಾಯಕ ಎಂದು ಪರಿಗಣಿಸಲಾಗುವ ವ್ಯಕ್ತಿಗೆ ಸರ್ವಶಕ್ತಿ ಇರಲಿದೆ. ಹೈಬತ್ ಉಲ್ಲಾ ಅಖುಂದ್ಜಾದ ಬಳಿಯೇ ಸರ್ವೋಚ್ಛ ಅಧಿಕಾರ ಇರಲಿದೆ.
ಅಖುಂದ್ ಜಾದ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದ ಅತ್ಯುನ್ನತ ನಾಯಕ ಎಂದು ಕರೆಯಲಾಗುತ್ತದೆ. ದೇಶದ ಅಧ್ಯಕ್ಷರಿಗಿಂತಲೂ ಸರ್ವೋಚ್ಚ ನಾಯಕನಿಗೆ ಉನ್ನತ ಸ್ಥಾನ.
ಸೇನೆ, ಸರ್ಕಾರ, ನ್ಯಾಯಾಂಗ ಎಲ್ಲದರ ಮುಖ್ಯಸ್ಥರ ನೇಮಕ ಅಧಿಕಾರ ಇರಲಿದೆ. ರಾಜಕೀಯ, ಧಾರ್ಮಿಕ ವಿಚಾರದಲ್ಲಿ ಅಖುಂದ್ ಜಾದ ಮಾತೇ ಅಂತಿಮಬಾಗಿರಲಿದೆ. ಸೇನೆಗೆ ಸಂಬಂಧಿಸಿದ ವ್ಯವಹಾರಗಳಲ್ಲೂ ಇವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಅಫ್ಘಾನಿಸ್ತಾನದ ಎಲ್ಲಾ ಭಾಗಗಳನ್ನ ಪ್ರಾಂತ್ಯಗಳ ಆಧಾರದಲ್ಲಿ ಆಡಳಿತ ನಡೆಸಲಾಗುವುದು. ಪ್ರಾಂತ್ಯಗಳ ಆಳ್ವಿಕೆಯನ್ನು ನೋಡಿಕೊಳ್ಳಲು ಗವರ್ನರ್ಗಳ ನೇಮಕ ಮಾಡಲಾಗುವುದು. ಜಿಲ್ಲೆಗಳಿಗೆ ಗವರ್ನರ್ಗಳೇ ಆಡಳಿತ ಅಧಿಕಾರಿಗಳಾಗಿ ಇರಲಿದ್ದಾರೆ. ಬಹುತೇಕ ಪ್ರಾಂತ್ಯಗಳ ಗವರ್ನರ್ ನೇಮಕ ಈಗಾಗಲೇ ಪೂರ್ಣವಾಗಿದೆ.
ಹೊಸ ಆಡಳಿತದಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬದಲು ಮಾಡುವ ಸಾಧ್ಯತೆ ಇದೆ. ಇಸ್ಲಾಮಿಕ್ ಎಮಿರೇಟ್ಸ್ ಹೆಸರಿನಲ್ಲಿ ಹೊಸ ಆಡಳಿತ ವ್ಯವಸ್ಥೆ ಜಾರಿ ಮಾಡಲಾಗುವುದು. ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರಿಗೆ ಅವಕಾಶ ಸಾಧ್ಯತೆ ಕಡಿಮೆ ಇದೆ.
ಹೊಸ ಸರ್ಕಾರದಲ್ಲಿ ನ್ಯಾಯಾಂಗ, ಆಂತರಿಕ ಭದ್ರತೆ, ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಹಣಕಾಸು, ಮಾಹಿತಿ ಪ್ರಸಾರ ಸೇರಿ 26 ಇಲಾಖೆಯ ಕ್ಯಾಬಿನೆಟ್ ಇರಲಿದೆ. ಇದನ್ನು ನಿಭಾಯಿಸಲು ಪ್ರಧಾನ ಮಂತ್ರಿ ರೂಪದ ಹುದ್ದೆಯೊಂದು ಸೃಷ್ಟಿಸಲು ತಾಲಿಬಾನಿಗಳು ಚಿಂತಿಸಿದ್ದಾರೆ ಎನ್ನಲಾಗುತ್ತಿದೆ.
ಆಪ್ತ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಥವಾ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್ ಪ್ರಧಾನಿಯಾಗುವ ಸಾಧ್ಯತೆ ಇದೆ. ಕ್ಯಾಬಿನೆಟ್ ನಲ್ಲಿ ಶೇ.42 ರಷ್ಟಿರುವ ಪಶ್ತೂನ್ಗಳು ಸೇರಿ ಇತರೆ ಜಾತಿಗೂ ಅವಕಾಶ ಸಿಗಬಹುದು.
ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸಲು ವಿದೇಶಾಂಗ ವ್ಯವಹಾರಗಳಿಗೆ ತಾಲಿಬಾನ್ ವಿಶೇಷ ಆದ್ಯತೆ ನೀಡಲಿದೆ. ಈಗಾಗಲೇ ತಾಲಿಬಾನ್ ಮುಖಂಡರು ಭಾರತ, ಇರಾನ್, ಕತಾರ್, ಪಾಕಿಸ್ತಾನ, ಚೀನಾ ಸೇರಿದಂತೆ ಹಲವು ದೇಶಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಮುಹಮ್ಮದ್ ಜಹೀದ್ ಅಹ್ಮದ್ಜಾಯಿ ವಿದೇಶಾಂಗ ಸಚಿವರಾಗುವ ಸಾಧ್ಯತೆ ಇದೆ. 72 ದೇಶಗಳಲ್ಲಿ ರಾಯಭಾರಿ ಕಚೇರಿ ತೆರೆಯಲು ತಾಲಿಬಾನ್ ಚಿಂತಿಸಿದೆ. ಅಬ್ದುಲ್ ಹಕೀಂ ಹಕ್ಕಾನಿ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ