ಅಮೆರಿಕಾ ತನ್ನ ಸೇನೆಯನ್ನು ಸಂಪೂರ್ಣ ವಾಪಸ್ಸು ಕರೆಸಿಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ರಾಜ್ಯಭಾರ ನಡೆಸಲು ತುದಿಗಾಲಲ್ಲಿ ನಿಂತಿದ್ದಾರೆ. ತಾಲಿಬಾನ್ ಸಂಘಟನೆಯ ಸರ್ವೋಚ್ಛ ನಾಯಕ ಹೈಬತ್ ಉಲ್ಲಾ ಅಖುಂದ್ ಜಾದಾ ಆಪ್ತ ಅಧ್ಯಕ್ಷಗಿರಿ ಪಟ್ಟವೇರಲು ಮುಂದಾಗಿದ್ದಾರೆ. ಹೀಗಿರುವಾಗಲೇ ತಮ್ಮನ್ನು ಸರ್ಕಾರದಿಂದ ಹೊರಗಿಟ್ಟ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದ ಅಫ್ಘಾನ್ ಮಹಿಳೆಯರ ಮೇಲೆ ತಾಲಿಬಾನ್ ಪಡೆಗಳು ಗುಂಡು ಹಾರಿಸಿ ದರ್ಪ ತೋರುತ್ತಿದ್ದಾರೆ.
ಅಪ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವದ ಅಧ್ಯಾಯ ಕೊನೆಯಾಗಲಿದೆ. ಸದ್ಯದಲ್ಲೇ ತಾಲಿಬಾನಿಗಳು ಸರ್ವಾಧಿಕಾರಿ ಸರ್ಕಾರ ಸ್ಥಾಪನೆ ಮಾಡಲಿದೆ. ಪಂಜಶೀರ್ ಪ್ರಾಂತ್ಯದಲ್ಲಿ ಎದುರಾದ ಪ್ರತಿರೋಧವನ್ನು ಮಟ್ಟಹಾಕಿರುವ ತಾಲಿಬಾನ್ ಸರ್ಕಾರ ರಚನೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದೆ. ಬರೋಬ್ಬರಿ 20 ವರ್ಷಗಳ ಬಳಿಕ ಅಫ್ಘಾನ್ನಲ್ಲಿ ಮತ್ತೆ ತಾಲಿಬಾನ್ ದರ್ಬಾರ್ ಆರಂಭವಾಗಲಿದೆ. ಷರಿಯಾ ಕಾನೂನು ಜಾರಿಯಾಗಲಿದೆ. ತಾಲಿಬಾನಿಗಳ ಉಸಿರು ಕಟ್ಟಿಸುವ ಆಡಳಿತಕ್ಕೆ ಅಪ್ಘಾನಿಸ್ತಾನ ಸಾಕ್ಷಿಯಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಂಜ್ಶೀರ್ ಪ್ರಾಂತ್ಯ ವಶಪಡಿಸಿಕೊಂಡಿರುವ ತಾಲಿಬಾನಿಗಳು ಮುಂದಿನ ವಾರದಲ್ಲಿ ಸರ್ಕಾರ ರಚನೆಗೆ ತಯಾರಿ ನಡೆಸಿಕೊಂಡಿದ್ದಾರೆ. ಸೆಪ್ಟೆಂಬರ್ 11ನೇ ತಾರೀಕಿನಂದು ಸರ್ಕಾರ ರಚನೆಗೆ ಮುಂದಾಗಿದ್ದು, ಕಾರ್ಯಕ್ರಮಕ್ಕೆ ತನ್ನ ಮಿತ್ರ ದೇಶಗಳಿಗೆ ಆಹ್ವಾನ ನೀಡಿದೆ. ಪಾಕಿಸ್ತಾನ, ಚೀನಾ, ಟರ್ಕಿ ಹಾಗೂ ರಷ್ಯಾ ಸೇರಿದಂತೆ ಹಲವು ದೇಶಗಳಿಗೆ ಆಹ್ವಾನ ಕೊಟ್ಟಿದೆ.
ಸರ್ಕಾರ ರಚನೆ ಬೆನ್ನಲ್ಲೇ ತಾಲಿಬಾನ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ತಾಲಿಬಾನ್ ಸರ್ವೋಚ್ಛ ನಾಯಕ ಹೈಬತ್-ಉಲ್ಲಾ ಅಖುಂದ್ಜಾದ ಆಪ್ತ ಮುಲ್ಲಾ ಹಸನ್ ಅಧ್ಯಕ್ಷಗಿರಿಯ ಪಟ್ಟ ಅಲಂಕರಿಸಲಿದ್ದಾರೆ.
ಮುಲ್ಲಾ ಹಸನ್ ಅಖುಂದ್ಗೆ ಅಪ್ಘನ್ ಅಧ್ಯಕ್ಷಗಿರಿ ಪಕ್ಕಾ ಆಗಿದೆ. ತಾಲಿಬಾನ್ ನಾಯಕ ಹೈಬತ್ ಉಲ್ಲಾ ಅಖುಂದ್ ಜಾದ ಅವರೇ ಮುಲ್ಲಾ ಹಸನ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಮುಲ್ಲಾ ಹಸನ್, ಅಂಖುದ್ಜಾದ ಆಪ್ತವಲಯದಲ್ಲಿರುವ ಪ್ರಮುಖ ನಾಯಕ. ಹಿಂದಿನ ತಾಲಿಬಾನ್ ಆಡಳಿತದಲ್ಲೂ ಹಸನ್ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ. ವಿದೇಶಾಂಗ ಸಚಿವನಾಗಿ, ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಅನುಭವ ಮುಲ್ಲಾ ಹಸನ್ಗೆ ಇದೆ.
ಇನ್ನು ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿರುವ ತಾಲಿಬಾನ್ ನಾಯಕರು ಸಂಪುಟ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ತಾಲಿಬಾನ್ ಸಂಪುಟದಲ್ಲಿ ಎರಡು ಉಪಾಧ್ಯಕ್ಷ ಸ್ಥಾನಗಳಿರಲಿವೆ. ಮುಲ್ಲಾ ಬರದಾರ್ ಅಖುಂದ್ ಹಾಗೂ ಮುಲ್ಲಾ ಅಬ್ದುಸ್ ಸಾಲಮ್ಗೆ ಉಪಾಧ್ಯಕ್ಷ ಸ್ಥಾನ ಸಿಗಲಿದೆ. ಮುಲ್ಲಾ ಯಾಕೂಬ್ ರಕ್ಷಣಾ ಸಚಿವರಾಗಲಿದ್ದಾರೆ. ಮುಲ್ಲಾ ಅಮೀರ್ ಖಾನ್ ಮುಟ್ಟಾಕಿಗೆ ವಿದೇಶಾಂಗ ಖಾತೆಯ ಜವಾಬ್ದಾರಿ ನೀಡಲಿದ್ದಾರೆ. ಜಬೀವುಲ್ಲಾ ಮುಜಾಹೀದ್ ತಾಲಿಬಾನ್ ಸರ್ಕಾರದ ವಕ್ತಾರನಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ತಾಲಿಬಾನಿಗಳಿಗೆ ಪಾಕಿಸ್ತಾನ ಹಾಗೂ ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್ಐ ನೀಡುತ್ತಿರುವ ಬೆಂಬಲ ವಿರೋಧಿಸಿ ನೂರಾರು ಅಪ್ಘನ್ ಮಹಿಳೆಯರು ಕಾಬೂಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಬೂಲ್ನ ಪ್ರೆಸಿಡೆಂಟಲ್ ಪ್ಯಾಲೆಸ್ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು, ಪಾಕಿಸ್ತಾನ ಹಾಗೂ ತಾಲಿಬಾನ್ ವಿರುದ್ಧ ಘೋಷಣೆ ಕೂಗಿದ್ದಾರೆ. ಇನ್ನು ಪ್ರತಿಭಟನೆ ಹತ್ತಿಕ್ಕಲು ಮುಂದಾದ ತಾಲಿಬಾನ್ ಪಡೆಗಳು ಮಹಿಳೆಯರ ಮೇಲೆ ನಿರತರ ಮೇಲೆ ಗುಂಡಿನ ದಾಳಿ ನಡೆಸುತ್ತಲೇ ಇವೆ.
ಇನ್ನೊಂದು ವಾರದಲ್ಲಿ ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಉದಯವಾಗಲಿದೆ. ಬಂದೂಕು ಹಿಡಿದುಕೊಂಡೇ ಅಧಿಕಾರದ ಗದ್ದುಗೆಯ ದಾರಿ ಪಯಣಿಸಲಿರುವ ತಾಲಿಬಾನಿಗಳ ರಾಜ್ಯಭಾರ ಅಪ್ಫನ್ ಜನರ ಪಾಲಿಗೆ ಭಾಗ್ಯ ತರಲಿದೆಯೋ ಇಲ್ಲ ಹೊರಲಾಗದ ಭಾರವಾಗಿ ಪರಿಣಮಿಸಲಿದೆಯೋ ಎಂಬುದು ಕಾದು ನೋಡಬೇಕಿದೆ.