ಗುಂಡ್ಲುಪೇಟೆ (Gundlupete): ಸಾರ್ವಜನಿಕರು ಹಾಗೂ ಭಕ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ (gopalswami hill) ಬಸ್ ಸಂಚಾರವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ತಹಸೀಲ್ದಾರ್ ಒಂದೇ ದಿನಕ್ಕೆ ಹಿಂಪಡೆದಿದ್ದಾರೆ. ಇದರಿಂದ ಭಕ್ತಾಧಿಗಳಿಗೆ ಗೋಪಾಲನ ದರ್ಶನ ಎಂದಿನಂತೆ ಸಿಗಲಿದೆ.
ಮಧ್ಯಾಹ್ನ ೩ ಗಂಟೆಯೊಳಗೆ ಬಸ್ ಸಂಚಾರ ನಿಷೇಧಿಸಿ ತಹಸೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು.
ಕನ್ನೇಗಾಲ ಗ್ರಾಮಸ್ಥರು ಸ್ವತಃ ತಹಸೀಲ್ದಾರ್ ಬಳಿ ಆದೇಶ ಹಿಂಪಡೆಯುವಂತೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಕುರಿತು ತಹಸೀಲ್ದಾರ್ ಟಿ.ರಮೇಶ್ ಬಾಬು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಅವರ ಸೂಚನೆಯ ಮೇರೆಗೆ ಈ ಹಿಂದೆ ಇದ್ದ ನಿಯಮದಂತೆ 4 ಗಂಟೆಯವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು ಹೊಸ ಆದೇಶವನ್ನು ಹಿಂಪಡೆದಿದ್ದಾರೆ.
ಜೊತೆಗೆ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿ ನೇಮಿಸಿ ದೇವಾಲಯಕ್ಕೆ ಪ್ರಸಾದ ತಿನ್ನಲು ಬರುವ ಕಾಡಾನೆಯ ಮೇಲೆ ನಿಗಾವಹಿಸುವಂತೆ ಸೂಚಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ಟಿ.ರಮೇಶ್ ಬಾಬು ಪ್ರತಿಕ್ರಿಯೆ ನೀಡಿದ್ದು, ದೂರದ ಊರುಗಳಿಂದ ಬರುವ ಪ್ರವಾಸಿಗರು, ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ 3 ಗಂಟೆಯೊಳಗೆ ಬಸ್ ಸಂಚಾರ ನಿಷೇಧದ ಆದೇಶದಿಂದ ಸಮಸ್ಯೆಯಾಗುತ್ತದೆ ಎಂದು ದೂರುಗಳು ಕೇಳಿ ಬಂದ ಹಿನ್ನೆಲೆ ಜೊತೆಗೆ ಪ್ರವಾಸಿಗರ ಅನುಕೂಲತೆಯ ಉದ್ದೇಶದಿಂದ ಹೊಸ ಆದೇಶವನ್ನು ಹಿಂಪಡೆಯಲಾಗಿದೆ ಎಂದಿದ್ದಾರೆ.
#karnataka #chamarajanagara #gundlupete #Gopalswamihill #busfacility