“ನಮ್ಮನ್ನು ಮನೆಯಲ್ಲಿಯೇ ಬಂಧಿಯಾಗಿ ಇರಿಸಲಾಗಿದೆ. ಕೆಲಸ ಮಾಡಲು ಅಥವಾ ನಮ್ಮ ಧ್ವನಿ ಎತ್ತಲು ಇಲ್ಲಿ ಅವಕಾಶವಿಲ್ಲ. ನಾನು ದೈಹಿಕವಾಗಿ ಸತ್ತಿಲ್ಲವಾದರೂ, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಸತ್ತಂತೆಯೇ ಭಾಸವಾಗುತ್ತಿದೆ.” ಇಂದು ಅಫ್ಘಾನಿಸ್ತಾನದಲ್ಲಿರುವ ಬಹುತೇಕ ಮಹಿಳೆಯರು, ತಮ್ಮ ವ್ಯಾಸಂಗ ಪ್ರಮಾಣಪತ್ರಗಳನ್ನು ಸುಟ್ಟು ಹಾಕುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು, ಬಹಿರಂಗವಾಗಿ ತೆಗೆದಂತಹ ಫೋಟೋಗಳನ್ನು ಅಳಿಸಿ ಹಾಕುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರ ನಡೆಸಿ ಆರ್ಥಿಕ ಸ್ವಾವಲಂಬನೆಯತ್ತ ದೃಷ್ಟಿ ನೆಟ್ಟಿದ್ದ ಮಹಿಳೆಯರು, ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಯಲ್ಲಿಟ್ಟಿದ್ದ ಬುರ್ಖಾ ಹುಡುಕುವತ್ತ ಗಮನ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ಆ ದೇಶವನ್ನು ಎರಡು ದಶಕಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗಿದೆ. ಮುಖ್ಯವಾಗಿ, ಅಲ್ಲಿನ ಮಹಿಳೆಯರು ತಮಗಿದ್ದ ಸ್ವಾತಂತ್ರ್ಯವನ್ನು ಕಳೆದುಕೊಂಡು, ತಮ್ಮ ಹೆಣ್ಣು ಮಕ್ಕಳ ಭವಿಷ್ಯ ಎಲ್ಲಿ ಕಮರಿ ಹೋಗುವುದೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ. 1996ರಿಂದ 2001ರ ನಡುವಿನ ತಾಲಿಬಾನ್ ಆಡಳಿತವನ್ನು ಮತ್ತೆ ನೆನಪಿಸಿಕೊಂಡರೆ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಇರಲಿಲ್ಲ. ಮಹಿಳೆಯರಿಗೆ ಕೆಲಸಕ್ಕೆ ಹೋಗುವ ಸ್ವಾತಂತ್ರ್ಯ ಇರಲಿಲ್ಲ. ಮನೆಯಿಂದ ಹೊರಗೆ ಬರುವಾಗ ತಮ್ಮ ಮುಖವನ್ನು ಇಸ್ಲಾಮಿಕ್ ಬುರ್ಖಾ ಧರಿಸಿ ಮುಚ್ಚಬೇಕಿತ್ತು. ಮನೆಯ ಗಂಡು ಸದಸ್ಯರ ಸಹಾಯದೊಂದಿಗೆ ಮಾತ್ರ ಮನೆಯಿಂದ ಹೊರ ಬರಬೇಕಿತ್ತು. ಇಂತಹ ಕರಾಳ ದಿನಗಳನ್ನು ನೋಡಿರುವ ಅಲ್ಲಿನ ಮಹಿಳೆಯರು, ಮತ್ತೆ ಸ್ವಾತಂತ್ರ್ಯದ ಹರಣಕ್ಕೆ ಸಾಕ್ಷಿಯಾಗಿದ್ದಾರೆ. ಇಂದಿಗೂ 90ರ ದಶಕದ ಅತ್ಯಂತ ಕ್ರೂರ ಶಿಕ್ಷೆಗಳಾದ ಛಡಿಯೇಟು ಹಾಗೂ ಕಲ್ಲುಗಳನ್ನು ಎಸೆಯುವುದನ್ನು ಮಹಿಳೆಯರು ಇನ್ನೂ ಮರೆತಿಲ್ಲ. ಇಂತಹ ಕಠೋರವಾದ ಇಸ್ಲಾಮಿಕ್ ನಿಯಮಗಳನ್ನು ಜಾರಿಗೆ ತರಲಾಗಿತ್ತು. ತಮ್ಮ ಮೊತ್ತ ಮೊದಲ ಸುದ್ದಿಗೋಷ್ಟಿಯಲ್ಲಿ ಮಹಿಳೆಯರಿಗೆ ‘ಇಸ್ಲಾಮಿಕ್ ನಿಯಮಗಳ’ ಅಡಿಯಲ್ಲಿ ಶಿಕ್ಷಣ ಹಾಗೂ ಕೆಲಸಕ್ಕೆ ಹೋಗಲು ಅವಕಾಶ ನೀಡಲಾಗುವುದು, ಎಂದು ತಾಲಿಬಾನ್ ಹೇಳಿದೆ. ಆದರೆ, ತಾಲಿಬಾನ್ ಈ ಹಿಂದೆ ದೇಶದ ಜನರೊಂದಿಗೆ ನಡೆದುಕೊಂಡಿರುವ ಕ್ರೂರ ರೀತಿಯಿಂದ ಯಾರೂ ಈ ಮಾತುಗಳನ್ನು ನಂಬಲು ಸಿದ್ದರಿಲ್ಲ. ಮಿಗಿಲಾಗಿ, ಕೆಲಸಕ್ಕೆಂದು ಹೋದ ಮಹಿಳೆಯರನ್ನು ವಾಪಾಸ್ ಮನೆಗೆ ಕಳುಹಿಸಿರುವ ತಾಜಾ ಉದಾಹರಣೆಗಳು ಕಣ್ಣ ಮುಂದಿರುವಾಗ, ಬಂದೂಕಿನಿಂದ ಶಾಂತಿ ಸ್ಥಾಪನೆಗೆ ಹೊರಟವರ ಮಾತುಗಳನ್ನು ನಂಬುವುದಾದರೂ ಹೇಗೆ? ಅಫ್ಘಾನಿಸ್ತಾನದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿದ್ದ ಪತ್ರಕರ್ತೆಯೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ತಾಲಿಬಾನ್ ಪಡೆಗಳು ಕಾಬೂಲನ್ನು ವಶಪಡಿಸಿಕೊಂಡ ಕೇವಲ ಮೂರು ದಿನಗಳ ನಂತರ ಸಂಪೂರ್ಣ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಮಹಿಳೆಯರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ, ಎಂದು ಅವರು ಹೇಳಿದ್ದಾರೆ. “ನಾನು ತಾಲಿಬಾನಿಗಳ ವಿರುದ್ದ, ಅವರ ಕಾರ್ಯಾಚರಣೆಗಳ ಕುರಿತು ನೂರಾರು ವರದಿಗಳನ್ನು ಮಾಡಿದ್ದೆ. ಈಗ ಅವರು ನನ್ನ ಗುರುತು ಪತ್ತೆ ಹಚ್ಚಿದರೆ ಏನು ಮಾಡುತ್ತಾರೆ ಎಂದೂ ತಿಳಿದಿಲ್ಲ. ನನ್ನ ಅಸ್ಮಿತೆಯನ್ನೇ ಬಚ್ಚಿಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ,” ಎಂದು ಅವರು ರಾಯಿಟರ್ಸ್’ಗೆ ಹೇಳಿಕೆ ನೀಡಿದ್ದಾರೆ. “ನಮ್ಮನ್ನು ಮನೆಯಲ್ಲಿಯೇ ಬಂಧಿಯಾಗಿ ಇರಿಸಲಾಗಿದೆ. ಕೆಲಸ ಮಾಡಲು ಅಥವಾ ನಮ್ಮ ಧ್ವನಿ ಎತ್ತಲು ಇಲ್ಲಿ ಅವಕಾಶವಿಲ್ಲ. ನಾನು ದೈಹಿಕವಾಗಿ ಸತ್ತಿಲ್ಲವಾದರೂ, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಸತ್ತಂತೆಯೇ ಭಾಸವಾಗುತ್ತಿದೆ,” ಎಂದು ಅವರು ಕಣ್ಣೀರಿಟ್ಟಿದ್ದಾರೆ. ಕಾಬೂಲ್’ನಲ್ಲಿ ಸಲೂನ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಮ್ಮ ವ್ಯಾಪಾರವನ್ನು ಮುಚ್ಚಿ ಈಗ ಮನೆಯಲ್ಲಿ ಅವಿತು ಕುಳಿತಿದ್ದಾರೆ. “ನನ್ನ ಅಂಗಡಿಯಿಂದ ಕನಿಷ್ಟ 24 ಜನರ ಕುಟುಂಬಗಳು ಬದುಕುತ್ತಿದ್ದವು. ಅದು ಕೂಡಾ ಎಲ್ಲಾ ಕೆಲಸಗಾರರು ಮಹಿಳೆಯರಾಗಿದ್ದರು. ಈಗ ಅದು ಇತಿಹಾಸವಾಗಿದೆ. ತಾಲಿಬಾನ್ ಭಯದಿಂದ ಮಹಿಳೆಯರು ಮನೆಯಿಂದ ಹೊರಹೋಗಲೂ ಅಂಜುತ್ತಿದ್ದಾರೆ,” ಎಂದು ಆ ಮಹಿಳೆ ಹೇಳಿದ್ದಾರೆ. ಪ್ರತಿರೋಧದ ಆರಂಭ ತಾಲಿಬಾನ್ ವಿರುದ್ದ ಈಗಾಗಲೇ ಮಹಿಳೆಯರ ಪ್ರತಿರೋಧ ಆರಂಭವಾಗಿದೆ. ಮಹಿಳೆಯರ ಒಂದು ಸಣ್ಣ ಗುಂಪು ಕಾಬೂಲ್’ನ ಬೀದಿಗಳಲ್ಲಿ ತಾಲಿಬಾನ್ ವಿರುದ್ದ ಪ್ರತಿಭಟನೆಯನ್ನು ನಡೆಸುತ್ತಿದೆ. “ಅಫ್ಘಾನಿಸ್ತಾನದ ಮಹಿಳೆಯರಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಇಲ್ಲಿನ ಮಹಿಳೆಯರ ಹೃದಯದಲ್ಲಿ ಅಡಗಿರುವ ಭಯವನ್ನು ಹೋಗಲಾಡಿಸಲು ನಾವು ಪ್ರತಿಭಟಸುತ್ತಿದ್ದೇವೆ. ಭಯದಿಂದ ಮನೆಯಲ್ಲಿ ಕುಳಿತಿರುವ ಪ್ರತಿಯೊಬ್ಬ ಮಹಿಳೆಯೂ ನಮ್ಮೊಂದಿಗೆ ಕೈಜೋಡಿಸಬೇಕು. ದೇವರಿಚ್ಚೆ ಇದ್ದರೆ ನಾವು ನಮ್ಮ ಪ್ರತಿರೋಧವನ್ನು ಮುಂದುವರೆಸುತ್ತೇವೆ. ಇನ್ನು ಹೆಚ್ಚಿನ ಮಹಿಳೆಯರು ನಮ್ಮೊಂದಿಗೆ ಸೇರುತ್ತಾರೆ,” ಎಂದು ಪ್ರತಿಭನಾನಿರತ ಮಹಿಳೆ ಸೂದಾವರ್ ಕಬೀರಿ ಹೇಳಿದ್ದಾರೆ. https://twitter.com/missnzl/status/1427914119370264580 ಕಳೆದ ಇಪ್ಪತ್ತು ವರ್ಷಗಳಲ್ಲಿ ಅಫ್ಘಾನ್ ಮಹಿಳೆಯರು ಪಡೆದಿರುವ ಧ್ವನಿಯನ್ನು ಈಗ ಮೌನವಾಗಿಸಲು ನಾವು ಬಿಡುವುದಿಲ್ಲ ಎಂದು ತಾಲಿಬಾನಿಗಳ ಕ್ರೌರತೆಯ ವಿರುದ್ದ ತೊಡೆ ತಟ್ಟಿ ನಿಂತಿದ್ದಾರೆ. 90ರ ದಶಕದ ಕರಾಳ ನೆನಪುಗಳನ್ನು ಮೀರಿ ನಿಲ್ಲುವಂತಹ ಪ್ರಗತಿಯನ್ನು ಅಫ್ಘಾನ್ ಮಹಿಳೆಯರು ಸಾಧಿಸಿದ್ದರು. ಶಿಕ್ಷಣ, ವಿಜ್ಞಾನ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸುವ ಅವಕಾಶ ಒದಗಿ ಬಂದಿತ್ತು. ಆದರೆ, ಈಗ ಆ ಪ್ರಗತಿ ಮತ್ತೆ ಅಧಃಪತನದತ್ತ ಸಾಗುತ್ತಿದೆ. ಮಹಿಳಾ ಸ್ವಾತಂತ್ರ್ಯವೆಂಬುದು ಕೇವಲ ಕನಸಾಗಿ ಉಳಿಯುವ ದಿನಗಳು ಮುಂದೆ ಕಾಣುತ್ತಿವೆ ಎಂಬ ಭಯ ಅಲ್ಲಿನ ಮಹಿಳೆಯರಲ್ಲಿ ಕಾಡುತ್ತಿದೆ. ಈಗ ಬೀದಿಗಿಳಿದು ಪ್ರತಿಭಟಿಸುತ್ತಿರುವ ಮಹಿಳೆಯ ವಿರುದ್ದ ತಾಲಿಬಾನಿನ ಕ್ರೂರ ದೃಷ್ಟಿ ಬೀರುವ ಸಾಧ್ಯತೆಯಿದ್ದರೂ, ತಮ್ಮ ಹಕ್ಕುಗಳಿಗಾಗಿ ಮಹಿಳೆಯರ ಹೊರಾಟ ನಿರಂತರವಾಗಿ ಸಾಗಿದೆ. “ಅಫ್ಘಾನಿಸ್ತಾನದಲ್ಲಿ 18 ಮಿಲಿಯನ್ ಮಹಿಳೆಯರಿದ್ದಾರೆ. ಅವರೆಲ್ಲರನ್ನು ಮನೆಯ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿಸುವುದು ಕಷ್ಟ. ...
Read moreDetails