ಕಳೆದ ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದ ಅಮೇರಿಕಾ ಸೇನಾಪಡೆಯು ಸಂಪೂರ್ಣವಾಗಿ ವಾಪಾಸಾಗಿದೆ. ಈ ಬಾರಿ ತಾಲಿಬಾನ್ ಉಗ್ರರು ಮತ್ತಷ್ಟು ಬಲಿಷ್ಟವಾಗಿ ಹೊರಹೊಮ್ಮಿದ್ದಾರೆ. ಅಮೇರಿಕಾ ಪಡೆಗಳು ದೇಶವನ್ನು ಬಿಡುವ ಮುನ್ನವೇ, ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಮುಂಜಾನೆ ಕಾಬೂಲ್ ಏರ್ಪೋರ್ಟ್ ಅನ್ನು ವಶಪಡಿಸಿಕೊಂಡ ತಾಲಿಬಾನಿಗಳು ‘ಸಂಪೂರ್ಣ ಸ್ವಾತಂತ್ರ್ಯ’ವನ್ನು ಘೋಷಿಸಿದ್ದಾರೆ. ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕೆಲವೇ ನಿಮಿಷಗಳ ಮೊದಲು ಅಮೇರಿಕಾದ ಕೊನೆಯ ಸ್ಥಳಾಂತರ ಕಾರ್ಯಾಚರಣೆಯ ವಿಮಾನ ಟೇಕ್ ಆಫ್ ಆಗಿತ್ತು. ಇದಾದ ಕೆಲವೇ ನಿಮಿಷಗಳ ಬಳಿಕ ತಾಲಿಬಾನ್ ಉಗ್ರರು ಏರ್ಪೋರ್ಟ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. “ಅಮೇರಿಕಾದ ಕಟ್ಟ ಕಡೇಯ ಸೈನಿಕ ಕುಡಾ ಕಾಬೂಲ್ ಏರ್ಪೋರ್ಟ್ ಬಿಟ್ಟು ಹೋಗಿದ್ದಾರೆ. ಇದು ನಮ್ಮ ದೇಶಕ್ಕೆ ಲಭಿಸಿರುವ ಸಂಪೂರ್ಣ ಸ್ವಾತಂತ್ರ್ಯ,” ಎಂದು ತಾಲಿಬಾನ್ ವಕ್ತಾರ ಕಾರಿ ಯೂಸುಫ್ ಅವರು ಅಲ್-ಜಝೀರಾ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಅಮೇರಿಕಾ ಇತಿಹಾಸದಲ್ಲಿಯೇ ಅತ್ಯಂತ ದಿರ್ಘ ಕಾಲದ ಯುದ್ದ ಇದಾಗಿತ್ತು. ಇದರಲ್ಲಿ ಸುಮಾರು 2,500 ಅಮೇರಿಕಾ ಸೈನಿಕರು ಸಾವನ್ನಪ್ಪಿದ್ದರೆ, 2,40,000 ಅಫ್ಘಾನಿಗಳು ಸಾವನ್ನಪ್ಪಿದ್ದರು. ಈ ಯುದ್ದದಿಂದಾಗಿ ಅಮೇರಿಕಾದ ಮೇಲೆ ಎರಡು ಟ್ರಿಲಿಯನ್ ಡಾಲರ್ ಹೆಚ್ಚುವರಿ ಹೊರೆ ಬೀಳುತ್ತಿತ್ತು. ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ತನ್ನ ನೆಲೆ ವಿಸ್ತರಿಸಿಕೊಳ್ಳುವುದನ್ನು ಯಶಸ್ವಿಯಾಗಿ ಅಮೇರಿಕಾ ತಡೆದಿತ್ತು. ಮಾತ್ರವಲ್ಲದೇ, ಅಲ್-ಖೈದಾ ಮುಖ್ಯಸ್ಥ ಬಿನ್ ಲಾಡೆನ್ ಹತ್ಯೆಗೈಯುವಲ್ಲಿಯೂ ಸಫಲವಾಗಿತ್ತು. ತಾಲಿಬಾನ್ ಆಡಳಿತದಿಂದ ಹೆದರಿ ಲಕ್ಷಾಂತಹ ಅಫ್ಘಾನಿಗಳು ಈಗಾಗಲೇ ದೇಶವನ್ನು ತೊರೆದಿದ್ದಾರೆ. ಕಾಬೂಲ್’ನಿಂದ ಲಕ್ಷಕ್ಕು ಹೆಚ್ಚು ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಆದರೆ, ಕಳೆದ ಇಪ್ಪತ್ತು ವರ್ಷಗಳ ಯುದ್ದದ ಸಂದರ್ಭದಲ್ಲಿ ಅಮೇರಿಕಾ ಸೇನೆಗೆ ನೆರವಾಗಿದ್ದ ಸಾವಿರಾರು ಜನರು ಇನ್ನೂ ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿದ್ದಾರೆ. “ಯಾರನ್ನೆಲ್ಲಾ ಅಫ್ಘಾನಿಸ್ತಾನದಿಂದ ಹೊರತೆಬೇಕು ಎಂದು ಆಶಿಸಿದ್ದೇವೋ, ಅವರೆಲ್ಲರನ್ನೂ ಕರೆತರಲು ಸಾಧ್ಯವಾಗಿಲ್ಲ. ಅಲ್ಲಿನ ಇನ್ನೂ ಹತ್ತು ದಿನ ಉಳಿದಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲ,” ಎಂದು ಅಮೇರಿಕಾದ ಸೆಂಟ್ರಲ್ ಕಮಾಂಡ್ ಜನರಲ್ ಫ್ರ್ಯಾಂಕ್ ಮೆಕೆಂಜಿ ಹೇಳಿದ್ದಾರೆ.
Read moreDetails