ಅಫ್ಘಾನಿಸ್ತಾನದಿಂದ ವಿದೇಶಿಯರನ್ನು ಹಾಗೂ ಕಳೆದ ಎರಡು ದಶಕಗಳಿಂದ ಅಲ್ಲಿ ಬೀಡುಬಿಟ್ಟಿದ್ದ ಅಮೇರಿಕಾದ ಸೇನಾಪಡೆಗಳನ್ನು ವಾಪಾಸ್ ಕರೆಸಿಕೊಳ್ಳಲು ತಾಲಿಬಾನ್ ನೀಡಿರುವ ಗಡುವು ಮುಗಿಯುತ್ತಾ ಬಂದಿದೆ. ಭಾನುವಾರದಂದು ಅಮೇರಿಕಾವು 1,200 ಜನರನ್ನು ಕಾಬುಲ್ ಏರ್ಪೋರ್ಟ್’ನಿಂದ ರಕ್ಷಿಸಿದೆ. ಇದರ ನಡುವೆಯೇ ಏರ್ಪೋರ್ಟ್ ಮೇಲೆ ಐಸಿಸ್-ಕೆ ಉಗ್ರರ ರಾಕೆಟ್ ದಾಳಿಯನ್ನು ಅಮೇರಿಕಾ ಪಡೆಗಳು ನಿಷ್ಕ್ರೀಯವಾಗಿಸಿವೆ. ತಾಲಿಬಾನಿಗಳು ನೀಡಿರುವ ಗಡುವು ಮಂಗಳವಾರದಂದು ಅಂತ್ಯವಾಗಲಿದೆ.
ಆಗಸ್ಟ್ 14ರ ನಂತರ ಅಮೇರಿಕಾ ಸುಮಾರು 1,16,700 ಜನರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಿದೆ. ಜುಲೈ ಅಂತ್ಯದಿಂದ ಲೆಕ್ಕ ಹಾಕಿದಲ್ಲಿ ಈ ಸಂಖ್ಯೆಯು 1,22,300ಕ್ಕೆ ಏರುತ್ತದೆ ಎಂದು ವೈಟ್ ಹೌಸ್ ಅಧಿಕೃತ ಪ್ರಕಟಣೆ ತಿಳಿಸಿದೆ.
ಸ್ಥಳಾಂತರ ಪ್ರಕ್ರಿಯೆ ಕುರಿತು ಹೇಳಿಕೆ ನೀಡಿರುವ ಕಾಬುಲ್’ನ ರಷ್ಯಾ ರಾಯಭಾರಿ ಕಚೇರಿ, ರಷ್ಯಾವು ಮತ್ತಷ್ಟು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಿದೆ ಎಂದು ಹೇಳಿದೆ. ಈ ರಕ್ಷಣಾ ಕಾರ್ಯಾಚರಣೆಗಳು ಮಂಗಳವಾರದ ನಂತರವೂ ಮುಂದುವರೆಯಲಿವೆಯೇ ಇಲ್ಲವೇ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ರಷ್ಯಾದ ಸೇನಾಪಡೆಗಳು ಅಫ್ಘಾನ್ ಗಡಿ ಪ್ರದೇಶದಲ್ಲಿ ಜಮಾವಣೆಯಾಗಲು ಆರಂಭಿಸಿದೆ. ತಾಲಿಬಾನ್’ನಿಂದ ಆಗಬಹುದಾದ ಅನಾಹುತಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಈ ಜಮಾವಣೆ ಆರಂಭವಾಗಿದೆ, ಎಂದು ಸೇನಾ ಪಡೆಗಳ ಮುಖ್ಯ ಕಚೇರಿ ಪ್ರಕಟಣೆ ತಿಳಿಸಿದೆ.
ರಕ್ಷಣಾ ಕಾರ್ಯಾಚಾರಣೆಯಲ್ಲಿ ಭಾಗವಹಿಸಿದ್ದ ಭಾರತದ ಏರ್ ಫೋರ್ಸ್ ವಿಮಾನಗಳಾದ C-17, C-130J ಸುರಕ್ಷಿತವಾಗಿ ಭಾರತಕ್ಕೆ ಮರಳಿವೆ. ಅಫ್ಘಾನಿಸ್ತಾನದಿಂದ ಸುಮಾರು 500 ಭಾರತೀಯರನ್ನು ಈ ವಿಮಾನಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ.
ರಾಕೆಟ್ ದಾಳಿ ನಿಷ್ಕ್ರೀಯಗೊಳಿಸಿದ ಅಮೇರಿಕಾ ಪಡೆಗಳು
ಏರ್ಪೋರ್ಟ್ ಮೇಲೆ ಐಸಿಸ್-ಕೆ ಉಗ್ರರು ನಡೆಸಿದ್ದ ರಾಕೆಟ್ ದಾಳಿಯನ್ನು ಅಮೇರಿಕಾ ಪಡೆಗಳು ನಿಷ್ಕ್ರೀಯವಾಗಿಸಿವೆ. ಕಾಬುಲ್ ಏರ್ಪೋರ್ಟ್ ಅನ್ನು ಗುರಿಯಾಗಿಸಿ ಐದು ರಾಕೆಟ್’ಗಳನ್ನು ಉಗ್ರರು ಲಾಂಚ್ ಮಾಡಿದ್ದರು. ಅಮೇರಿಕಾದ ರಕ್ಷಣಾ ವ್ಯವಸ್ಥೆಯು ಇದನ್ನು ಮುಂಚೆಯೇ ಪ್ರತಿಬಂಧಿಸುವಲ್ಲ ಯಶಸ್ವಿಯಾಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಸಾವು ನೋವುಗಳು ಉಂಟಾಗುವುದು ತಪ್ಪಿದೆ.