• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಭ್ರಮೆ ವಾಸ್ತವಗಳ ನಡುವೆ ಸಾಂಕೇತಿಕ ಹೋರಾಟಗಳು

ಪ್ರತಿರೋಧವನ್ನು ದಮನಿಸುವ ನಿರಂಕುಶಾಧಿಕಾರಕ್ಕೆ ಸಾಮೂಹಿಕ ಜನದನಿಯೇ ಪರ್ಯಾಯಶಕ್ತಿ

ಪ್ರತಿಧ್ವನಿ by ಪ್ರತಿಧ್ವನಿ
May 29, 2026
in ಅಂಕಣ
0
ಭ್ರಮೆ ವಾಸ್ತವಗಳ ನಡುವೆ ಸಾಂಕೇತಿಕ ಹೋರಾಟಗಳು
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಭಾರತವನ್ನೂ ಒಳಗೊಂಡಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸಮಾನಾಂತರವಾಗಿ ಎರಡು ಬೆಳವಣಿಗೆಗಳನ್ನು ಗಮನಿಸಬಹುದು. ಒಂದು ಕಡೆ ಮತೀಯವಾದಿಗಳ, ಧಾರ್ಮಿಕ ಶಕ್ತಿಗಳ ಹಿಡಿತದಲ್ಲಿರುವ ಬಲಪಂಥೀಯ ರಾಜಕಾರಣ ಕಾರ್ಪೋರೇಟ್‌ ಮಾರುಕಟ್ಟೆಯ ಬೆಂಬಲದಿಂದ ಆಳ್ವಿಕೆಯ ಕೇಂದ್ರಗಳನ್ನು ವಶಪಡಿಸಿಕೊಳ್ಳುತ್ತಿವೆ. ಇದೇ ವೇಳೆ ಹಿಂದೂ, ಇಸ್ಲಾಂ, ಕ್ರೈಸ್ತ ಧರ್ಮಗಳನ್ನು ನಿಯಂತ್ರಿಸುವ ಧಾರ್ಮಿಕ ಶಕ್ತಿಗಳು ಸಮಾಜಗಳನ್ನು ಮೇಲಿನಿಂದ ಕೆಳಗಿನವರೆಗೆ ವಿಭಜಿಸಿ, ಒಡೆದ ಸಮಾಜಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲೆತ್ನಿಸುತ್ತಿವೆ. ಭಾರತದಲ್ಲಿ ಇದನ್ನು ಹಿಂದುತ್ವ ರಾಜಕಾರಣ ಅಥವಾ ಆರೆಸ್ಸೆಸ್‌ನ ಬ್ರಾಹ್ಮಣಶಾಹಿ ನಿರ್ದೇಶನದ ರೂಪದಲ್ಲಿ ಕಾಣುತ್ತಿದ್ದೇವೆ. ಭಾರತದಲ್ಲಿ ಸೆಕ್ಯುಲರ್‌ ರಾಜಕೀಯ ಪರ್ಯಾಯ ಇಲ್ಲದಿರುವುದರಿಂದ ಹಿಂದುತ್ವ ರಾಜಕಾರಣ ದಿನ ಕಳೆದಂತೆ ಬಲಗೊಳ್ಳುತ್ತಿದೆ.

ಮತ್ತೊಂದು ಬದಿಯಲ್ಲಿ ಆಳ್ವಿಕೆಗಳ ಕುತಂತ್ರಗಳಿಂದ ವಿಘಟನೆಗೊಳಗಾದ ಸಮಾಜಗಳು ಜಾತಿ, ಮತ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಅಸ್ಮಿತೆಗಳ ನೆಲೆಗಳಲ್ಲಿ ತಮ್ಮ ನಡುವಿನ ಗೋಡೆಗಳನ್ನು ಎತ್ತರಿಸಿಕೊಳ್ಳುತ್ತಲೇ ಬಂದಿವೆ. ಸಮಾನಾಂತರ ಬೆಳವಣಿಗೆಯಾಗಿ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಒಡೆದ ಸಮಾಜದ ಆಂತರ್ಯದಲ್ಲೇ ತಳಮಟ್ಟದ ಸಮುದಾಯಗಳು ಅಸಮಾಧಾನದಿಂದ ಹೈರಾಣಾಗಿರುವುದನ್ನೂ ಕಾಣಬಹುದು. ನವ ಉದಾರವಾದಿ ಆರ್ಥಿಕ ನೀತಿಗಳು ಸೃಷ್ಟಿಸಿರುವ ಅನಿಶ್ಚಿತ ಬದುಕಿನ ಆವರಣದಲ್ಲಿ ಈ ತಳಸಮಾಜದ/ತಳಸಮುದಾಯಗಳ ಯುವ ಜನಾಂಗ ಢಾಳಾಗಿ ಕಾಣುತ್ತಿರುವ ಅಸಮಾನತೆ ಮತ್ತು ತಾರತಮ್ಯಗಳಿಂದ ಬೇಸತ್ತು ಹೋಗಿವೆ. ಸಂಘಟಿತ ಹೋರಾಟಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವ ಆಳುವ ವರ್ಗಗಳ ಶಕ್ತಿ ಮತ್ತು ತಂತ್ರಗಾರಿಕೆ ಈ ಅಸಮಾಧಾನಗಳನ್ನು ಹೊರಜಗತ್ತಿಗೆ ಕಾಣದಂತೆ ಎಚ್ಚರ ವಹಿಸುತ್ತಿವೆ.

ಭ್ರಮಾಧೀನ ಯುವ ಮನಸ್ಸುಗಳು

ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುವ ಅನಿಶ್ಚಿತತೆ ಒಂದು ಹಂತದವರೆಗೆ ಯುವ ಜನಾಂಗದಲ್ಲಿ ಮಾನ್ಯತೆ ಪಡೆಯುತ್ತದೆ. ಏಕೆಂದರೆ ತಮ್ಮ ಭವಿಷ್ಯದ ಹಾದಿ ಸುಗಮವಾಗುತ್ತದೆ ಎಂಬ ನಂಬಿಕೆ ಈ ಜನಾಂಗದಲ್ಲಿ ದೃಢವಾಗಿರುತ್ತದೆ. ಈ ನಂಬಿಕೆ ಗಾಢವಾದಂತೆಲ್ಲಾ ಸಮಾಜದ ಅವಕಾಶವಂಚಿತ ಜನತೆ ಭ್ರಮಾಧೀನವಾಗತೊಡಗುತ್ತದೆ. 2014ರಲ್ಲಿ ಸಮರ ಘೋಷಣೆಯಾಗಿ (War Cry) ಯುವ ಜನಾಂಗವನ್ನು ಸಮ್ಮೋಹನಗೊಳಿಸಿದ ʼ ಅಚ್ಚೇದಿನ್‌ ʼ ಇಂತಹ ಭ್ರಮಾಲೋಕಕ್ಕೆ ಒಂದು ನಿದರ್ಶನ. ಈಗ ʼ ವಿಕಸಿತ ಭಾರತʼ ಭ್ರಮಾಲೋಕವನ್ನು ನಿರ್ದೇಶಿಸುತ್ತಿದೆ. ಮತ್ತೊಂದೆಡೆ ಅಚ್ಛೇದಿನ್‌, ಸ್ಮಾರ್ಟ್‌ಸಿಟಿ, ಕಪ್ಪುಹಣ, ಸ್ವಿಸ್‌ ಹಣ ಇದಾವುದೂ ಸಾರ್ವಜನಿಕ ಚರ್ಚೆಗೊಳಗಾಗುತ್ತಿಲ್ಲ. ಆದಾಗ್ಯೂ ಎಂತಹ ಶಕ್ತಿಯುತ ಆಳ್ವಿಕೆಯಾದರೂ ಪ್ರತಿರೋಧ-ಪ್ರತಿಭಟನೆಗಳನ್ನು ಹತ್ತಿಕ್ಕುವಷ್ಟು ಸುಲಭವಾಗಿ, ತಳಸಮಾಜದಲ್ಲಿ ಅಂತರ್ಗತವಾಗಿರುವ ಅಸಮಾಧಾನ ಮತ್ತು ಹತಾಶೆಯನ್ನು ದಮನಿಸಲಾಗುವುದಿಲ್ಲ.

ಈ ಮಡುಗಟ್ಟಿದ ಹತಾಶೆ ಸದಾ ಕಾಲವೂ ಜಾಗೃತಾವಸ್ಥೆಯಲ್ಲಿರುತ್ತದೆ. ಮಂದಿರ-ಮಸೀದಿ, ಗೋಮಾಂಸ-ಗೋಹತ್ಯೆ, ರಾಮಮಂದಿರ-ಗ್ಯಾನವ್ಯಾಪಿ ಮಸೀದಿ ಈ ವಿವಾದಗಳು ಧಾರ್ಮಿಕ ಶ್ರದ್ಧಾನಂಬಿಕೆಗಳನ್ನು ಬಳಸಿ ತಳಸಮಾಜದಲ್ಲಿನ ಹತಾಶೆಗಳಿಗೆ ಮುಲಾಮು ಹಚ್ಚುತ್ತವೆ. ಧರ್ಮರಕ್ಷಣೆಗಾಗಿ ಜೀವ ತ್ಯಾಗ ಮಾಡಲೂ ಸಜ್ಜಾಗುವ ಯುವ ಜನಾಂಗವೇ ದೇಶದ ಹಿತರಕ್ಷಣೆಗಾಗಿ ತಮ್ಮ ವೈಯುಕ್ತಿಕ ಬದುಕನ್ನೂ ಪಣಕ್ಕಿಡಲು ಸಿದ್ಧವಾಗುತ್ತದೆ. ಈ ಭಾವನೆಗಳು ದಟ್ಟವಾದಂತೆಲ್ಲಾ ʼ ಧಾರ್ಮಿಕ ಭಾವನೆಗಳು ʼ ಮತ್ತು ʼದೇಶದ ಹಿತಾಸಕ್ತಿ ʼ ಎರಡೂ ಒಂದೇ ಆವರಣದಲ್ಲಿ ಕಾಣಲಾರಂಭಿಸುತ್ತದೆ. ಹಿಂದೂ ಧರ್ಮ ರಕ್ಷಣೆ ಹಿಂದೂ ರಾಷ್ಟ್ರದ ರಕ್ಷಣೆಯಾಗಿ ಭಾವಿಸಲಾಗುತ್ತದೆ. ಇಸ್ಲಾಂ ಧರ್ಮದ ರಕ್ಷಣೆ ಇಡೀ ಮುಸ್ಲಿಂ ಜಗತ್ತಿನ ರಕ್ಷಣೆಯಾಗಿ ಗೋಚರಿಸುತ್ತದೆ.

ಸ್ಫೋಟಿಸುವ ಒಳಬೇಗುದಿ

ಈ ಭಾವನಾತ್ಮಕ ವಿಚಾರಗಳು ತಳಮಟ್ಟದಲ್ಲಿ ನಿಜ ಜೀವನದ ಸುಧಾರಣೆಗೆ ಕಿಂಚಿತ್ತೂ ನೆರವಾಗುವುದಿಲ್ಲ ಎಂಬ ಅರಿವು ಯುವ ಜನಾಂಗದಲ್ಲಿ ಮೂಡತೊಡಗಿದಂತೆ ಅಲ್ಲಿ ಮಡುಗಟ್ಟಿದ ಹತಾಶೆ-ಅಸಮಾಧಾನಗಳು ಸಣ್ಣ ಸಣ್ಣ ಕಿಡಿಗಳ ರೂಪದಲ್ಲಿ ಸ್ಫೋಟಿಸಲಾರಂಭಿಸುತ್ತವೆ. ಇದು ಎಲ್ಲ ದೇಶಗಳಲ್ಲೂ ಒಂದೇ ಸ್ವರೂಪದಲ್ಲಿ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ತಳಮಟ್ಟದ ಸಂಘಟನೆ ಭೌತಿಕವಾಗಿ ಅಸಾಧ್ಯವೆನಿಸಿದಾಗ ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿ, ಫೇಸ್‌ಬುಕ್‌, ಟ್ವಿಟರ್‌ (ಎಕ್ಸ್)‌, ಇನ್ಸ್‌ಟಾಗ್ರಾಮ್‌ ಮೊದಲಾದ ಸಾಧನಗಳ ಮೂಲಕ ಸಮಾಜದ ಎಲ್ಲ ವರ್ಗಗಳನ್ನೂ ಸಂಪರ್ಕಿಸುವ ಒಂದು ಮಾದರಿಯನ್ನು ನಾವು ಕಂಡಿದ್ದೇವೆ. ಇದಕ್ಕೆ ಪೂರಕವಾಗಿ ತಳಸಮಾಜಗಳಲ್ಲಿ ಸಣ್ಣ ಸಣ್ಣ ಗುಂಪುಗಳು ಯಾವುದೇ ತಾತ್ವಿಕ ನಿರ್ಬಂಧಗಳಿಲ್ಲದೆ ಅಥವಾ ಅಸ್ಮಿತೆಗಳ ಸೋಂಕಿಲ್ಲದೆ ಈ ಡಿಜಿಟಲ್‌ ಕ್ರಿಯೆಗೆ ಸ್ಪಂದಿಸಿದಾಗ, ಇಡೀ ಹೋರಾಟ ಸಂಘಟಿತ ರೂಪ ಪಡೆದುಕೊಳ್ಳುತ್ತದೆ. ನೇಪಾಲ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಆದದ್ದು ಇದೇ.

ಈ ಕ್ರಾಂತಿಕಾರಕ ಬೆಳವಣಿಗೆಗಳಿಗೆ ಸಮಾನಾಂತರವಾಗಿ ಭಾರತದಲ್ಲಿ ಇತ್ತೀಚೆಗೆ ಹುಟ್ಟಿಕೊಂಡಿರುವ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಮತ್ತು ಅದರಿಂದ ಹೊರಹೊಮ್ಮುತ್ತಿರುವ ಯುವ ಜನಾಂಗ ಆಕ್ರೋಶಗಳಿಗೆ ʼಜಿರಳೆʼ ಸಾಂಕೇತಿಕವಾಗಿ ಬಳಕೆಯಾಗುತ್ತಿದೆ. ಈ ಡಿಜಿಟಲ್‌ ಆಂದೋಲನಕ್ಕೆ ಕಾರಣ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ನಿರುದ್ಯೋಗಿ ಯುವಜನರನ್ನು ಪರೋಪಜೀವಿಗಳು ಮತ್ತು ಜಿರಳೆಗಳಂತೆ ಮೇಲೆರುಗುವವರು ಎಂದು ಹೇಳಿರುವುದು. ನ್ಯಾಯಮೂರ್ತಿಗಳು ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ್ದರೂ ಸಹ ಸಿಜೆಪಿ ತನ್ನ ವ್ಯಾಪ್ತಿ ಮತ್ತು ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಂದರೆ, ಯುವ ಜನಾಂಗವು ʼಜಿರಳೆ ʼ ಯನ್ನು ಸಂಕೇತದ ರೂಪದಲ್ಲಿಟ್ಟುಕೊಂಡು ವ್ಯಕ್ತಪಡಿಸುತ್ತಿರುವ ಆಕ್ರೋಶಭರಿತ ಪ್ರತಿಕ್ರಿಯೆಯ ಆದಿಮೂಲ ಕಾರಣವನ್ನು ವ್ಯವಸ್ಥೆಯ ಲೋಪಗಳಲ್ಲಿ ಗುರುತಿಸಬಹುದು.

ಡಿಜಿಟಲ್‌ ಜಗತ್ತು ಮತ್ತು ನೆಲದ ವಾಸ್ತವ

ಯಾವುದೇ ಕೋನದಿಂದ ನೋಡಿದರೂ ಸಿಜೆಪಿ ಡಿಜಿಟಲ್‌ ಆಂದೋಲನ ನೇಪಾಲ-ಶ್ರೀಲಂಕಾ-ಬಾಂಗ್ಲಾದೇಶದ ಬೆಳವಣಿಗೆಗೆ ಹೋಲಿಕೆಯಾಗುವುದಿಲ್ಲ. ಆದರೆ ಸಮಾನಾಂತರವಾಗಿ ನೋಡಿದಾಗ ಯುವ ಜನಾಂಗದ ಹತಾಶೆ, ಆಕ್ರೋಶ, ಆತಂಕ ಮತ್ತು ಅಸಮಾಧಾನಗಳಲ್ಲಿ ಸಮಾನ ಎಳೆಯನ್ನು ಗುರುತಿಸಬಹುದು. ರಾಜಕೀಯ ಪಕ್ಷಗಳು ವರುಷಗಳ ಕಾಲ ನಡೆಸುವ ಕಟ್ಟುವ ಪ್ರಕ್ರಿಯೆಯನ್ನೇ ಅಪ್ರಸ್ತುತಗೊಳಿಸುವ ರೀತಿಯಲ್ಲಿ ಸಿಜೆಪಿ ತನ್ನ ಅಸ್ತಿತ್ವವನ್ನು ನಿರೂಪಿಸಿದೆ. ಭಾರತ ಸರ್ಕಾರ ಈ ಡಿಜಿಟಲ್‌ ಪಕ್ಷದ ಎಕ್ಸ್‌‌ (ಟ್ವಿಟರ್) ಖಾತೆ ಮತ್ತು ಇನ್ಸ್‌ಟಾಗ್ರಾಂ ಖಾತೆಗಳನ್ನು ಸ್ಥಗಿತಗೊಳಿಸಿರುವುದೇ ಯುವದನಿಯ ಸಮೂಹ ಶಕ್ತಿಯನ್ನು ಬಿಂಬಿಸುತ್ತದೆ. ಭಾರತದಂತಹ ವಿಘಟಿತ ಸಮಾಜಗಳ ದೇಶದಲ್ಲಿ ಈ ರೀತಿಯ ಐಕ್ಯತೆ ಬಹುಶಃ ಡಿಜಿಟಲ್‌ ರೂಪದಲ್ಲಿ ಮಾತ್ರ ಸಾಧ್ಯ. ಅಸ್ಮಿತೆಗಳ ನೊಗಭಾರವಿಲ್ಲದ ಈ ಸಾಮೂಹಿಕ ಯುವ ದನಿಗೆ ದನಿಗೂಡಿಸುವ ಸಮಾಜ ನೆಲಮಟ್ಟದಲ್ಲಿದೆಯೇ ?

21ನೆಯ ಶತಮಾನದ ಭಾರತದಲ್ಲಿ ಲಿಖಿತ ದರ್ಶನಗಳೇ ಧೂಳು ಹಿಡಿಯುತ್ತಿವೆ ಅಥವಾ ಆಳುವವರ ದಬ್ಬಾಳಿಕೆಯಿಂದ ಅಳಿಸಿಹೋಗುತ್ತಿವೆ. ದೇಶದ ಸಾರ್ವಭೌಮ ಜನತೆ ಅತ್ಯಂತ ಗೌರವದಿಂದ ಆದರಿಸುವ (ಇತ್ತೀಚೆಗೆ ಆರಾಧಿಸುತ್ತಿರುವ) ಸಂವಿಧಾನವೂ ಸಹ ಅಮೂರ್ತ ರೂಪದಲ್ಲಿ ನಮ್ಮ ನಡುವೆ ಇದ್ದರೂ ಆಳ್ವಿಕೆಯ ನೆಲೆಯಲ್ಲಿ, ಪ್ರಜಾಪ್ರಭುತ್ವದ ಸಾಂಸ್ಥಿಕ ನೆಲೆಗಳಲ್ಲಿ ಅದರ ಮೌಲ್ಯಾದರ್ಶನಗಳು ಹಂತಹಂತವಾಗಿ ಮರೆಯಾಗುತ್ತಿವೆ. ಇತ್ತೀಚಿನ ಎಸ್‌ಐಆರ್‌ ಒಂದು ನಿದರ್ಶನ. ಅರ್ಥಾತ್‌ ಸಂವಿಧಾನದ ಮೂಲ ಔದಾತ್ಯಗಳಿಗೆ ಆಳ್ವಿಕೆಯ ಚೌಕಟ್ಟಿನಲ್ಲಿ ಸಾಂಸ್ಥಿಕ ಗೌರವ ಅಥವಾ ಸಂಪೂರ್ಣ ಮಾನ್ಯತೆ ದೊರೆಯುತ್ತಿಲ್ಲ. ಇದು ಭಾರತದ ತಳಸಮಾಜವನ್ನು ಜಾಗೃತಗೊಳಿಸಬೇಕಾದ ಬೆಳವಣಿಗೆ. ವಿಶೇಷವಾಗಿ ಭವಿಷ್ಯ ಭಾರತದ ವಾರಸುದಾರರಾಗುವ ಯುವ ಜನಾಂಗವನ್ನು ಎಚ್ಚರಿಸಬೇಕಾದ ವಿದ್ಯಮಾನ.

ʼ ಜಿರಳೆ ʼ ಮತ್ತು ದುಡಿಯುವ ಜನರ ಬವಣೆ

ಈ ದೃಷ್ಟಿಯಿಂದ ನೋಡಿದಾಗ ಇತ್ತೀಚಿನ ಸಾರ್ವಜನಿಕ ಸಂಕಥನಗಳಲ್ಲಿ ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಡಿಜಿಟಲ್‌ ಉದಯವನ್ನು ಬಗೆಬಗೆಯಾಗಿ ವ್ಯಾಖ್ಯಾನಿಸುತ್ತಿರುವುದನ್ನು ಗಮನಿಸಬೇಕು. ಈ ಪಕ್ಷದ ಅಧಿಕೃತ ನೋಂದಣಿಗೂ ಸಹ ಪ್ರಯತ್ನಗಳು ನಡೆಯುತ್ತಿವೆ. ಯುವ ಜನಾಂಗದ ಆಕ್ರೋಶ, ಆಡಳಿತ ವಿರೋಧಿ ಅಲೆ, ಅಂತರ್ಜಾಲದ ಕ್ರಾಂತಿ, ಭವಿಷ್ಯ ಭಾರತದ ನಿರ್ಣಾಯಕ ಹಾದಿ, ಯುವ ಕ್ರಾಂತಿಯ ಸಂಕೇತ ಇವೇ ಮುಂತಾದ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಈ ಡಿಜಿಟಲ್‌ ಪ್ರಕ್ರಿಯೆಯ ಸುತ್ತಲಿನ ಸಂಕಥನಗಳನ್ನು ಗಮನಿಸಿದಾಗ, ನೆಲಮಟ್ಟದಲ್ಲಿ (Ground level) ಈ ಹತಾಶೆ ಆಕ್ರೋಶಗಳು ಮುಕ್ತವಾಗಿ ವ್ಯಕ್ತವಾಗುತ್ತಲೇ ಇಲ್ಲ ಎಂಬ ತಪ್ಪುಕಲ್ಪನೆಯೂ ಕಾಣುತ್ತದೆ. ಆದರೆ ಇದು ವಾಸ್ತವಕ್ಕೆ ವಿಮುಖವಾದ ಅಭಿಪ್ರಾಯ. ಏಕೆಂದರೆ ಕಳೆದ ಆರು ತಿಂಗಳಲ್ಲಿ ಭಾರತದ ಶ್ರಮಿಕರು , ಸಂಘಟಿತ ಅಲ್ಲದಿದ್ದರೂ , ತಮ್ಮದೇ ಆದ ರೀತಿಯಲ್ಲಿ ಜೀವನೋಪಾಯದ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ.

ನೊಯ್ಡಾದ ಮನೇಸರ ಕಾರ್ಮಿಕರ ಹೋರಾಟ, ಉತ್ತರ ಪ್ರದೇಶದ ಸೊನ್‌ಭದ್ರ ಉಷ್ಣನ ವಿದ್ಯುತ್‌ ಸ್ಥಾವರ, ಪಾನಿಪಟ್‌ನ ಸಂಸ್ಕರಣಾ ಘಟಕಗಳು, ಗುಜರಾತ್‌ ರಾಜಸ್ಥಾನ ಉತ್ತರಖಂಡ್‌ ಬಿಹಾರ್‌ ಮಧ್ಯಪ್ರದೇಶ ಛತ್ತಿಸ್ಘಡ ಮತ್ತು ಜಾರ್ಖಂಡ್‌ ರಾಜ್ಯಗಳ ಕೈಗಾರಿಕೆಗಳಲ್ಲಿ ನಡೆಯುತ್ತಿರುವ ಕಾರ್ಮಿಕ ಮುಷ್ಕರಗಳು, ಪರಿಸರ ರಕ್ಷಣೆಯ ಹೋರಾಟಗಳು ಯುವ ಜನಾಂಗದ-ಅವಕಾಶವಂಚಿತ ಸಮುದಾಯಗಳ ಆಕ್ರೋಶದ ಸಂಕೇತವೇ ಆಗಿದೆ. ಈ ಹೋರಾಟಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಕಾಣುವ ಸಾಂಕೇತಿಕ ಪ್ರತಿಭಟನೆಗಳಲ್ಲ. ಕೈಗೆಟುಕದ ಕೂಲಿ, ಅಸುರಕ್ಷಿತ ಕೆಲಸದ ಸ್ಥಳಗಳು, ಅಧಿಕ ದುಡಿಮೆಯ ಅವಧಿ, ಓವರ್‌ ಟೈಮ್‌ ವೇತನದ ನಿರಾಕರಣೆ, ಹಣದುಬ್ಬರ, ಬೆಲೆ ಏರಿಕೆ, ದುಬಾರಿ ಅಡುಗೆ ಅನಿಲ ಈ ದೈನಂದಿನ ಸಮಸ್ಯೆಗಳ ವಿರುದ್ಧ ಕಾರ್ಮಿಕರು ಬೀದಿಗಿಳಿದಿದ್ದಾರೆ. ಹೊಸ ಕಾರ್ಮಿಕ ಸಂಹಿತೆಗಳು ಗುತ್ತಿಗೆ ಪದ್ದತಿ ಮತ್ತು ಅನೌಪಚಾರಿಕ ಉದ್ಯಮವನ್ನು ಉತ್ತೇಜಿಸುತ್ತಿರುವುದರಿಂದ ಕಾರ್ಮಿಕರು ತಾವು ಕಳೆದುಕೊಳ್ಳುತ್ತಿರುವ ಹಕ್ಕುಗಳನ್ನು ಮರಳಿ ಪಡೆಯಲು ಹೋರಾಡುತ್ತಿದ್ದಾರೆ. ( Before the “Cockroach Janata Party”: The Workers’ Upsurge Already Shaking North India by Countercurrents Collective 25/05/2026)

ಗಮನಾರ್ಹ ಸಂಗತಿ ಎಂದರೆ ಈ ಹೋರಾಟಗಳು ಮುಖ್ಯವಾಹಿನಿ ಮಾಧ್ಯಮಗಳಿಗೆ ಮತ್ತು ನಗರ ಕೇಂದ್ರಗಳ ಪುರೋಗಾಮಿ ಸಂಕಥನಗಳಿಗೆ ಅಗೋಚರವಾಗಿಯೇ ಉಳಿದಿವೆ. ಕಾರ್ಮಿಕರ ಬಂಧನ, ಪೊಲೀಸ್‌ ದಬ್ಬಾಳಿಕೆ ಇವೆಲ್ಲವೂ ರಾಜಕೀಯ ನಿರೂಪಣೆಗಳ ಮೂಲಕ ಬೆಳಕಿಗೆ ಬಂದರೂ, ತಳಮಟ್ಟದ ಶ್ರಮಜೀವಿ ವರ್ಗಗಳ ಆರ್ಥಿಕ ಹತಾಶೆಯ ಸಂಘರ್ಷಗಳು ಐಕಮತ್ಯದ ಕೊರತೆಯೊಂದಿಗೆ ನಡೆಯುತ್ತಲೇ ಇವೆ. ಕಳೆದ ಎರಡು ದಶಕಗಳಲ್ಲಿ ದುಡಿಯುವ ವರ್ಗಗಳ ಸ್ವರೂಪವೇ ಮನ್ವಂತರಕ್ಕೊಳಗಾಗಿದ್ದು, ಶಾಶ್ವತ ನೌಕರಿಯಲ್ಲಿರುವ ಕಾರ್ಮಿಕರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ಕಾರ್ಮಿಕರು, ತರಬೇತಿ ಪಡೆಯುತ್ತಿರುವವರು, ಅಪ್ರೆಂಟಿಸ್‌ಗಳು, ತಾತ್ಕಾಲಿಕ ಕಾರ್ಮಿಕರು, ವಲಸೆ ಕಾರ್ಮಿಕರು ತಮ್ಮ ಭವಿಷ್ಯದ ಬದುಕಿಗಾಗಿ ಹೋರಾಡುತ್ತಿದ್ದಾರೆ. ದೀರ್ಘಕಾಲದ ಮುಷ್ಕರ ಹೂಡಲು ಅಗತ್ಯವಾದ ಸಾಮುದಾಯಿಕ ಬೆಂಬಲ ವ್ಯವಸ್ಥೆ ಇಲ್ಲದಿರುವುದರಿಂದ ಉದ್ಯಮಿಗಳು ಈ ದೌರ್ಬಲ್ಯವನ್ನು ಬಳಸಿಕೊಂಡು, ವೇತನಗಳನ್ನು ಕಡಿಮೆ ಮಾಡುತ್ತಿದ್ದಾರೆ. ( Before the “Cockroach Janata Party”: The Workers’ Upsurge Already Shaking North India by Countercurrents Collective 25/05/2026).

ಎಲ್ಲ ಕಾರ್ಮಿಕ ಹೋರಾಟಗಳಲ್ಲೂ ಗುತ್ತಿಗೆ ಕಾರ್ಮಿಕರ ಮುಂದಾಳತ್ವ ಢಾಳಾಗಿ ಕಾಣಿಸುತ್ತದೆ. ಶಾಶ್ವತ ಕಾರ್ಮಿಕರು ಮತ್ತು ಅವರನ್ನು ಪ್ರತಿನಿಧಿಸುವ ಸ್ಥಾಪಿತ ಕಾರ್ಮಿಕ ಸಂಘಗಳು ಕೇವಲ ಸಾಂಕೇತಿಕ ಮುಷ್ಕರಗಳಲ್ಲಿ ತೊಡಗಿವೆ. ಈ ಸ್ವಪ್ರೇರಿತ ಚಳುವಳಿಗಳ ಮೂಲಕ ವಿಕೇಂದ್ರೀಕರಣಕ್ಕೊಳಗಾದ ಕಾರ್ಮಿಕರು ತಕ್ಷಣದ ದುಡಿಯವ ಸ್ಥಳದ ಬೇಡಿಕೆಗಳಿಗಾಗಿ ಮಾತ್ರವೇ ಅಲ್ಲದೆ, ಕಾರ್ಮಿಕ ವಿರೋಧಿ ಕಾನೂನು ಸಂಹಿತೆಗಳ ವಿರುದ್ಧವೂ ಹೋರಾಡುತ್ತಿದ್ದಾರೆ. ಭಾರತದ ಕೈಗಾರಿಕಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ಆನ್‌ಲೈನ್‌ ಡಿಜಿಟಲ್‌ ಹೋರಾಟದಷ್ಟೇ ಮುಖ್ಯವಾದದ್ದು. ಒಂದು ರೀತಿಯಲ್ಲಿ ಇದು ಅತ್ಯಂತ ನಿರ್ಣಾಯಕ ಹೋರಾಟಗಳು. ಏಕೆಂದರೆ ಈ ಹೋರಾಟಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ವಿಶೇಷವಾಗಿ ಗಾರ್ಮೆಂಟ್‌ ನೌಕರರು ಮತ್ತು ಮನೆಗೆಲಸದ ಕಾರ್ಮಿಕರು ಹೋರಾಟಗಳ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರ ಭಾಗವಹಿಸುವಿಕೆ ಭಾರತದ ಕಾರ್ಮಿಕ ಹೋರಾಟಗಳ ಸಾಮಾಜಿಕ ಸಂಯೋಜನೆಯನ್ನೇ ಬದಲಾಯಿಸಿದೆ. ( Before the “Cockroach Janata Party”: The Workers’ Upsurge Already Shaking North India by Countercurrents Collective 25/05/2026)

ವ್ಯವಸ್ಥೆಯ ಕಂದಕಗಳ ಡಿಜಿಟಲ್‌ ದರ್ಶನ

ಕಾಕ್ರೋಚ್‌ ಡಿಜಿಟಲ್‌ ಆಂದೋಲನವನ್ನು ಈ ವಿಶಾಲ ಹಂದರದಲ್ಲಿಟ್ಟು (Broader Canvas) ನೋಡಿದಾಗ ನಮಗೆ ಕಾಣುವುದು ಆಡಳಿತ ವ್ಯವಸ್ಥೆಯಲ್ಲಿನ ಸಾಂಸ್ಥಿಕ ಅವನತಿ ಮತ್ತು ಸೈದ್ಧಾಂತಿಕ ಬಳಲಿಕೆ. ಅಂದರೆ ಇಷ್ಟು ವರ್ಷ ಜನಾಂದೋಲನಗಳನ್ನು ರೂಪಿಸಿ ನಿರ್ದೇಶಿಸಿದ ತತ್ವ ಸಿದ್ದಾಂತಗಳು ಆಚರಣಾತ್ಮಕ ನೆಲೆಯಲ್ಲಿ ನೆಲದಾಳದ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಸಾಂಕೇತಿಕ ಹೋರಾಟಗಳನ್ನು ಬದಿಗಿಟ್ಟು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಇದರ ಪರಿಣಾಮ ಸಾಮೂಹಿಕ ಸಾಮಾಜಿಕ ಜೀವನ (Collective Social life) ಗತಕಾಲಕ್ಕೆ ಸಂದುಹೋದಂತೆ ಕಾಣುತ್ತಿದೆ. ಮೂಲತಃ ಸಾರ್ವಜನಿಕ ಜೀವನ ಕುಸಿಯುತ್ತಿದ್ದು, ಈ ಹಿಂದೆ ಜನಸಾಮಾನ್ಯರು ತಮ್ಮ ಸಾಮಾಜಿಕ ಅಸ್ತಿತ್ವ ಮತ್ತು ಇರುವಿಕೆಯನ್ನು ಕಂಡುಕೊಳ್ಳುತ್ತಿದ್ದ ಅವಕಾಶಗಳು ಕ್ಷೀಣಿಸುತ್ತಿವೆ. ತತ್ಪರಿಣಾಮವಾಗಿ ಸಮಾಜದ ಆಂತರಿಕ ನೆಲೆಗಳ ಮುಖಾಂತರ ಹೊರಹೊಮ್ಮುತ್ತಿದ್ದ ರಾಜಕೀಯ ಚಿಂತನೆಗಳು ಈಗ ವೈಯುಕ್ತಿಕ ನೆಲೆಗಳಲ್ಲಿ ಕಂಡುಬರುತ್ತಿವೆ.

ಸಮಾಜದ ನಿತ್ಯ ಬದುಕಿನ ಅನುಭವಾತ್ಮಕ ನೆಲೆಗಳಿಂದಲೇ ಉದಯಿಸುತ್ತಿದ್ದ ಪುರೋಗಾಮಿ ಚಿಂತನೆಗಳು ಮತ್ತು ವೈಚಾರಿಕ ಆಲೋಚನೆಗಳು ಕ್ರಮೇಣ ಕ್ಷೀಣಿಸುತ್ತಿದ್ದು ಈ ಹಿನ್ನಡೆಗೆ ಕಾರಣಗಳನ್ನು ಶೋಧಿಸುವಲ್ಲಿ ಸ್ಥಾಪಿತ ಸೈದ್ಧಾಂತಿಕ ಆಲೋಚನಾ ಕ್ರಮಗಳು ಸೋಲುತ್ತಿವೆ. ಆಧುನಿಕತೆ ಮತ್ತು ಹಿತವಲಯದ ಅನುಕೂಲಗಳು ಸೃಷ್ಟಿಸಿರುವ ಮೇಲ್ಪಂಕ್ತಿಯ ಸಮಾಜಗಳು ಮತ್ತು ಅಲ್ಲಿ ಸೃಷ್ಟಿಯಾಗುವಂತಹ ಮನಸ್ಥಿತಿ, ಸಂವಿಧಾನದ ಫಲಾನುಭವಿ ವರ್ಗಗಳನ್ನೂ ಸಹ ತಳಸಮಾಜದಿಂದ ವಿಮುಖಗೊಳಿಸಿರುವುದು ವಾಸ್ತವ ಇತ್ತೀಚಿನ ಒಳಮೀಸಲಾತಿ ಹೋರಾಟದ ದನಿಗಳಿಗೆ ಮರಳಿ ಕಿವಿಗೊಟ್ಟರೆ ಇದು ಸ್ಪಷ್ಟವಾಗುತ್ತದೆ. ಇಲ್ಲಿ ತತ್ವ ಸಿದ್ಧಾಂತಗಳ ಔದಾತ್ಯಗಳು ಬಳಕೆಯ ಸಾಧನಗಳಾಗುತ್ತವೆಯೇ ಹೊರತು ಈ ವರ್ಗಗಳಿಂದಲೇ ಬಿಟ್ಟುಹೋಗಿರುವ ಅವಕಾಶವಂಚಿತರನ್ನು ಜಾಗೃತಗೊಳಿಸುವ ಜಾಗಟೆಗಳಾಗುವುದಿಲ್ಲ.

ಭಿನ್ನ ನೆಲೆಯ ಜನಾಂದೋಲನಗಳು

ಸಿಜೆಪಿಯಂತಹ ಡಿಜಿಟಲ್‌ ಆಂದೋಲನಗಳು ಏಕಕಾಲದಲ್ಲಿ ಸಂವಹನಕ್ಕೆ ನಿಲುಕುವ ಎಲ್ಲರನ್ನೂ ಒಂದುಗೂಡಿಸುವ ಸಮನ್ವಯದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಈಡೇರಿಸುತ್ತವೆ. ಇದು ಮಾನಸಿಕವಾಗಿ ಶಕ್ತಿಯುತವಾದ ಸಂಘಟನೆಯ ರೂಪದಲ್ಲಿ ಕಾಣುತ್ತದೆ. ತನ್ಮೂಲಕ ಹತಾಶ ಯುವ ಜನಾಂಗದಲ್ಲಿ ಮೂಡಿರಬಹುದಾದ ಏಕಾಂತದ ಖಿನ್ನತೆ ತಾತ್ಕಾಲಿಕವಾಗಿ ಶಮನವಾಗುತ್ತದೆ. ಆದರೆ ಈ ಮಾನಸಿಕ ಸಮನ್ವಯ ಸೃಷ್ಟಿಸುವ ಭಾವನಾತ್ಮಕ ಆಕ್ರೋಶ ಆಡಳಿತ ವಿರೋಧಿ ಭಾವನೆಗಳನ್ನು ಕೆಲ ಕಾಲ ಜೀವಂತವಾಗಿರಿಸುತ್ತದೆ. ಇದು ನೆಲಮಟ್ಟದಲ್ಲಿ ಸಾಮೂಹಿಕ ಜೀವನದ ನಡುವೆ ಇರಬೇಕಾದ ಐಕಮತ್ಯದ ಭಾವನೆಗಳನ್ನಾಗಲಿ ಸಂಯೋಜನೆಯ ಕ್ರಿಯಾಶೀಲತೆಯನ್ನಾಗಲೀ ಸೃಷ್ಟಿಸುವುದಿಲ್ಲ. ಡಿಜಿಟಲ್‌ ರೂಪದಲ್ಲಿ ನಮಗೆ ಕಾಣುವ ಭಾವತೀವ್ರತೆಯನ್ನು ನಿರಂತರವಾಗಿ ಕಾಪಾಡಿಕೊಂಡು, ಸಮಾಜದ ನೆನಪಿನಾಳದಲ್ಲಿ ಹುದುಗಿಸಿ, ದೀರ್ಘಕಾಲ ಉಳಿಯುವಂತೆ ಮಾಡಬೇಕಾದರೆ, ತಳಮಟ್ಟದ ಸಾಮಾಜಿಕ ಚಟುವಟಿಕೆ ಅತ್ಯವಶ್ಯ.

ಈ ದೃಷ್ಟಿಯಿಂದ ನೋಡಿದಾಗ ಸಿಜೆಪಿ ಅಥವಾ ಡಿಜಿಟಲ್‌ ಆಂದೋಲನವನ್ನು ನೇಪಾಲ, ಬಾಂಗ್ಲಾದೇಶದಲ್ಲಿ ನಡೆದ ಜನಾಂದೋಲನಗಳೊಂದಿಗೆ ಹೋಲಿಕೆ ಮಾಡುವಾಗ ಎಚ್ಚರದಿಂದಿರಬೇಕು ವಾಸ್ತವ ಸ್ಥಿತಿಗತಿಗಳಲ್ಲಿ ವ್ಯತ್ಯಾಸವೇನೂ ಕಾಣುವುದಿಲ್ಲ. ತಳಮಟ್ಟದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಅನಿಶ್ಚಿತತೆ ಇತ್ಯಾದಿಗಳು ಭಿನ್ನ ಆಯಾಮಗಳಲ್ಲಿದ್ದರೂ ಏಕರೂಪಿಯಾಗಿರುತ್ತವೆ. ಈ ದೇಶಗಳಲ್ಲಿ ಉಗಮಿಸಿದ ಆರಂಭಿಕ ಪ್ರತಿಕ್ರಿಯಾತ್ಮಕ ಚಟುವಟಿಕೆಗಳು ಕ್ರಮೇಣ ಸಂಘಟಿತ ಸ್ವರೂಪ ಪಡೆದುಕೊಂಡವು ಅಂತಿಮವಾಗಿ ರಾಜಕೀಯ ಗುಂಪುಗಳಲ್ಲಿ ಗುರುತಿಸಿಕೊಂಡವು. ವಿಕೆಂದ್ರೀರಣಕ್ಕೊಳಗಾಗಿದ್ದ ಜನಸಾಮಾನ್ಯರ ಆಂತರ್ಯದ ಹತಾಶೆ ಮತ್ತು ಆಕ್ರೋಶಗಳು ಕ್ರಮೇಣ ಕೇಂದ್ರೀಕೃತ ಸ್ವರೂಪ ಪಡೆದುಕೊಂಡವು. ಈ ದೃಷ್ಟಿಯಿಂದ ನೋಡಿದಾಗ ಛಿದ್ರವಾಗುತ್ತಿರುವ ಸಾರ್ವಜನಿಕ ಜೀವನ, ದುರ್ಬಲವಾಗುತ್ತಿರುವ ಸಾಂವಿಧಾನಿಕ-ಸಾಮೂಹಿಕ ಸಂಸ್ಥೆಗಳು ಮತ್ತು ವ್ಯಕ್ತಿ ಕೇಂದ್ರಿತ ಆಲೋಚನಾ ಕ್ರಮಗಳು ಈ ಎರಡು ದೇಶಗಳಲ್ಲಿದ್ದಂತೆಯೇ ಭಾರತದಲ್ಲೂ ಇರುವುದು ಸ್ಪಷ್ಟವಾಗುತ್ತದೆ.

ನಾಳೆಗಳ ಮುನ್ನೋಟದ ಕೊರತೆ

ಅನಿಶ್ಚಿತ ಬದುಕನ್ನು ಎದುರಿಸುತ್ತಿರುವ ನಿರುದ್ಯೋಗಿ, ಅಸಹಾಯಕ ಯುವ ಜನಾಂಗವನ್ನು ʼ ಪರೋಪಜೀವಿ ʼ (parasite) ಎಂದು ಭಾವಿಸುವ ಸಮಾಜದಲ್ಲಿ ಹೋರಾಡುವ ಜೀವಿಗಳು ಜಿರಳೆಗಳಂತೆಯೋ, ಜಿಗಣೆಗಳಂತೆಯೋ ಕಾಣಿಸುವುದು ಸಹಜ. ಈ ಅಭಿವ್ಯಕ್ತಿಯ ಉದ್ದೇಶಗಳೇನೇ ಇರಲಿ, ನೆಲದ ವಾಸ್ತವಗಳ ಕಡೆಗೆ ಕಣ್ಣು ಹಾಯಿಸಿದಾಗ ನಮಗೆ ಕಾಣಬೇಕಿರುವುದು ತಳಮಟ್ಟದ ಸಮಾಜದಲ್ಲಿ ಅಂತರ್ಗತವಾಗಿರುವ ನೋವು, ಅಸಹಾಯತೆ, ಭಯ ಮತ್ತು ನಾಳಿನ ಆತಂಕಗಳು. ಈ ನೋವು-ಆತಂಕಗಳನ್ನು ಕ್ರೋಢೀಕರಿಸುವುದು ನಮ್ಮ ಆದ್ಯತೆಯಾಗಬೇಕು. ಭಾರತದ ವಿಘಟಿತ ಸಮಾಜಗಳಲ್ಲಿ ಈ ಕ್ರೋಢೀಕರಣವೇ ಬಹುದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಜಾತಿ, ಮತ, ಧರ್ಮ ಮತ್ತು ಸೈದ್ಧಾಂತಿಕ ಅಸ್ಮಿತೆಗಳೂ ಸಹ ಈ ವಿಘಟನೆಗೆ ಕಾರಣವಾದಾಗ, ತಳಮಟ್ಟದ ಸಮನ್ವಯತೆ ಕೇವಲ ಸಾಂಕೇತಿಕ ಅಥವಾ ಸಾಂದರ್ಭಿಕ ಅಭಿವ್ಯಕ್ತಿಯಾಗಿ ಮಾತ್ರ ಕಾಣುತ್ತದೆ.

ಕಾಕ್ರೋಚ್‌ ಜನತಾ ಪಕ್ಷ , ಜಿರಳೆಯ ಹಾಗೆಯೇ ಅಲ್ಪಾಯುಷಿ. ಈ ಡಿಜಿಟಲ್‌ ಕೀಟವನ್ನು ಹೊಡೆದುಹಾಕಲು ವ್ಯವಸ್ಥೆ ಕಬ್ಬಿಣದ ಕಂಬಿಗಳಿರುವ ಪೊರಕೆಗಳನ್ನು ಬಳಸುತ್ತದೆ. ಸಲಾಕೆ ಮತ್ತು ಸಂಕೋಲೆಗಳೇ ಸಮಾಜದ ಭವಿಷ್ಯದ ದಿನಗಳನ್ನು ಬಿಂಬಿಸುವ ಸಂಕೇತಗಳಾಗುತ್ತಿರುವ ಹೊತ್ತಿನಲ್ಲಿ, ಯುವ ಜನಾಂಗದ ನೈಜ ಸಮಸ್ಯೆಗಳನ್ನು ಆಳವಾಗಿ ಗ್ರಹಿಸುವ ಅವಶ್ಯಕತೆ ಎದುರಾಗಿದೆ. SIR ಪ್ರಕ್ರಿಯೆಯ ಸಾಂವಿಧಾನಿಕತೆ (Constitutionality) ಕುರಿತ ಸುಪ್ರೀಂಕೋರ್ಟ್‌ನ ತೀರ್ಪು ನಮ್ಮೆದುರಿನ ಸಿಕ್ಕುಗಳನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ನಿರ್ಣಾಯಕ ಘಟ್ಟದಲ್ಲೂ ಸಹ ನಮ್ಮ ನಡುವೆ ದಲಿತ ಐಕ್ಯತೆ, ಎಡಪಕ್ಷಗಳ ಐಕ್ಯತೆ, ಕಾರ್ಮಿಕ ಸಂಘಗಳ ಐಕ್ಯತೆ ಧ್ವನಿಸದೆ ಇರುವುದು ಅಚ್ಚರಿದಾಯಕವೂ ಹೌದು, ನಿರಾಶಾದಾಯಕವೂ ಹೌದು.

ದಾರಿ ಯಾವುದಯ್ಯಾ ಮುಂದಕೆ ?

75 ವರ್ಷಗಳ ಕಾಲ ʼ ಜಿಂದಾಬಾದ್‌ ʼ ಘೋಷಣೆಗಳನ್ನು ಮೊಳಗಿಸುತ್ತಾ ಈಗ ಭಾರತದ ಯುವ ಜನಾಂಗದ ಭವಿಷ್ಯ ಮರಣಶಯ್ಯೆಯಲ್ಲಿರುವುದನ್ನು ಕಾಣುತ್ತಿದ್ದೇವೆ. ʼಇನ್‌ಕ್ವಿಲಾಬ್‌ʼ (ಕ್ರಾಂತಿ) ಎಂಬ ಅಮೂರ್ತ ಕಲ್ಪನೆಯು ಈ ಮೌಖಿಕ ʼಜಿಂದಾಬಾದ್‌ʼ ಚೌಕಟ್ಟಿನಿಂದ ಹೊರಬರಲು ಸಾಧ್ಯವೇ ಆಗಿಲ್ಲ. ಈಗ ಆಗಬೇಕಿರುವುದು ಕ್ರಾಂತಿ ಅಲ್ಲವೂ ಅಲ್ಲ. ಚಿರಾಯುವಾಗಬೇಕಿರುವುದು ಕೇವಲ ಪಕ್ಷ, ಸಂಘಟನೆ, ಬಾವುಟ, ಚಿಹ್ನೆ ಅಥವಾ ಸಿದ್ಧಾಂತಗಳಲ್ಲ. ನಾವು ಜಿಂದಾಬಾದ್‌ ಕೂಗುವುದೇ ಆದರೆ, ನವ ಭಾರತದ ಭವಿಷ್ಯದ ಪೀಳಿಗೆಗಾಗಿ ನಾವು ಕಟ್ಟಬಯಸುವ ಸಮನ್ವಯದ ಭೂಮಿ, ಸೌಹಾರ್ದತೆಯ ತೋಟ ಮತ್ತು ಬಂಧುತ್ವದ ಬಯಲುಗಳಿಗಾಗಿ ಕೂಗಬೇಕಿದೆ. ಈ ಕಲ್ಪನೆಗಳನ್ನು ಸಾಕಾರಗೊಳಿಸುವ ಕನಸು ಶಾಶ್ವತವಾಗಿರಲಿ, ಆದರೆ ನನಸಾಗಿಸುವ ಪ್ರಯತ್ನಗಳು ವಿಭಜನೆಯ ಬೇಲಿಗಳಿಲ್ಲದ ಸಂಘಟಿತ ಆವರಣದೊಳಗೆ ರೂಪುಗೊಳ್ಳಬೇಕು.

ಇದಕ್ಕೆ ಬೇಕಿರುವುದು ನೆಲದಾಳಕ್ಕೆ ಇಳಿದು ಸಮಾಜದ ಒಳಬೇಗುದಿಯನ್ನು ಅರ್ಥಮಾಡಿಕೊಳ್ಳುವ ಸಂವೇದನೆ ಮತ್ತು ಕ್ಷಮತೆ. ನೈಸರ್ಗಿಕವಾಗಿ ʼಜಿರಳೆʼಗಳಿಗೆ ಇದು ಅರ್ಥವಾಗುವುದಿಲ್ಲ. ಆದರೆ ʼಮಾನವ ಜಿರಳೆಗಳಿಗೆ ʼ (Human Cockroaches) ಅರ್ಥವಾಗಲೇಬೇಕು. ಹೌದು ಎಂದಾದರೆ ನಾವು ಸಾಂಕೇತಿಕ ಹೋರಾಟಗಳಿಂದ ಹೊರಬರಬೇಕಿದೆ. ಆ ಪರ್ವ ಮುಗಿದಿದೆ. ಹೊಸ ಯುಗದತ್ತ ಮುಂಗಾಣ್ಕೆಯೊಂದಿಗೆ ಚಲಿಸಬೇಕಿದೆ. ಒಳಗೊಳ್ಳುವಿಕೆ (Inclusiveness) ಮತ್ತು ಪ್ರಾತಿನಿಧಿಕತೆ (Representiveness) ಯ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯುವ ಯುವ ಶಕ್ತಿಯನ್ನು ಕಟ್ಟುವುದು ನಮ್ಮ ಗುರಿಯಾಗಬೇಕಿದೆ. ಸಮ ಸಮಾಜದ ಗುರಿ ತಲುಪಲು ಇರುವುದೊಂದೇ ದಾರಿ.

(Interpreting the rise of Cockroach Janta Party –ಸೌಮ್ಯಜಿತ್‌ ಭರ್‌ -ದ ಹಿಂದೂ 23-05-2026 ಈ ಲೇಖನದ ಭಾವಾನುವಾದದೊಂದಿಗೆ )
-೦-೦-೦-೦-೦-೦-

Tags: #AntiAuthoritarianism#CockroachJanataParty#ConstitutionOfIndia#DigitalProtest#DigitalRevolution#HindutvaPolitics#indianews#LabourStruggle#NaDivakar#PoliticalArticle#SecularPolitics#YouthMovement#YouthVoiceCJPDemocracyFreedomOfSpeechindianpoliticsKannadaArticlePoliticalAnalysispratidavaniRSSSocialJusticeWorkersRights
Previous Post

ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ; ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧವೇ?

Next Post

ಬೆಂಗಳೂರಿನ ಮೊಳೆ ಮಾಫಿಯಾ ಮಟ್ಟ ಹಾಕಿ : ನಗರ ಪೊಲೀಸ್ ಆಯಕ್ತರಿಗೆ ಮೋಹನ್‌ ಕುಮಾರ್‌‌ ದಾನಪ್ಪ ಪತ್ರ..!

Related Posts

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ
ಅಂಕಣ

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ

by ಪ್ರತಿಧ್ವನಿ
May 27, 2026
0

ನಾ ದಿವಾಕರ ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಎಂದು ಪರಿಗಣಿಸಲು ಕಾರಣ ಎಂದರೆ ಈ ಶಾಸನಾತ್ಮಕ ಗ್ರಂಥದಲ್ಲಿ ಅಳವಡಿಸಲಾಗಿರುವ ಮಾನವೀಯ ಮೌಲ್ಯಗಳು. ನಮ್ಮ ಸಂವಿಧಾನ ಮೂಲತಃ ವ್ಯಕ್ತಿ...

Read moreDetails
ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

May 26, 2026
ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

May 23, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
Next Post
ಬೆಂಗಳೂರಿನ ಮೊಳೆ ಮಾಫಿಯಾ ಮಟ್ಟ ಹಾಕಿ : ನಗರ ಪೊಲೀಸ್ ಆಯಕ್ತರಿಗೆ ಮೋಹನ್‌ ಕುಮಾರ್‌‌ ದಾನಪ್ಪ ಪತ್ರ..!

ಬೆಂಗಳೂರಿನ ಮೊಳೆ ಮಾಫಿಯಾ ಮಟ್ಟ ಹಾಕಿ : ನಗರ ಪೊಲೀಸ್ ಆಯಕ್ತರಿಗೆ ಮೋಹನ್‌ ಕುಮಾರ್‌‌ ದಾನಪ್ಪ ಪತ್ರ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada