ರೋಚಕತೆಯ ಕಥಾಹಂದರ ಹೊಂದಿರುವ , ಯುವ ಪ್ರತಿಭೆ ವಿನೋದ್ ಶೇಷಾದ್ರಿ ನಟಿಸಿ, ನಿರ್ಮಿಸಿರುವ ಪರಿಮಳ ಡಿಸೋಜಾ ಕನ್ನಡ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್, ನಿರ್ಮಾಪಕ ಎಂ.ಎನ್ ಸುರೇಶ್ ಹಾಗೂ ನಟಿ ಭವ್ಯ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರದ ನಿರ್ಮಾಪಕ, ನಟ ವಿನೋದ್ ಶೇಷಾದ್ರಿ, “ಈ ಚಿತ್ರ ನಿರ್ಮಾಣ ಮಾಡುವ ಜತೆಗೆ ಪೊಲೀಸ್ ಪಾತ್ರ ಕೂಡ ಮಾಡಿದ್ದೇನೆ. ಚಿತ್ರದ ಒಂದು ಗೀತೆಗೆ ಸಾಹಿತ್ಯ ಕೂಡ ಬರೆದಿದ್ದೇನೆ. ಇದೊಂದು ಕೌತುಕ ಹಾಗೂ ರೋಚಕತೆಯ ಕಥಾ ಹಂದರ ಒಳಗೊಂಡ ಆ್ಯಕ್ಷನ್, ಸೆಂಟಿಮೆಂಟ್, ಫ್ಯಾಮಿಲಿ ಮನರಂಜನೆ ಇರುವ ಕೌಟುಂಬಿಕ ಚಿತ್ರ. ಚಿತ್ರದಲ್ಲಿ ಒಟ್ಟು 107 ಕಲಾವಿದರು ನಟಿಸಿದ್ದಾರೆ” ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ಡಾ.ಗಿರಿಧರ್ ಎಚ್ ಟಿ. ಮಾತನಾಡಿ, “ಇದೊಂದು ಸಾಂಸಾರಿಕ ಕಥೆ ಒಳಗೊಂಡ ಸಿನಿಮಾ. ಹಿಂದೂ ಕುಟುಂಬದ ಮನೆಗೆ ಕ್ರಿಶ್ಚಿಯನ್ ಹುಡುಗಿ ಸೊಸೆಯಾಗಿ ಬರುತ್ತಾಳೆ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಒಂದು ಘಟನೆ ನಡೆಯುತ್ತದೆ ಆ ಘಟನೆ ಏನು? ಅದರಿಂದ ಏನೆಲ್ಲಾ ಆಗುತ್ತದೆ ಎಂಬುದೇ ಈ ಚಿತ್ರದ ಕಥಾವಸ್ತು. ಇದರಲ್ಲಿ ನಾಯಕ ಯಾರೂ ಇಲ್ಲ, ಕಥೆಯೇ ನಾಯಕ” ಎಂದು ಹೇಳಿದರು.
“ಪರಿಮಳ ಡಿಸೋಜಾ ಒಂದು ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ. ಸೆಪ್ಟೆಂಬರ್ 15ರಂದು ಸಿನಿಮಾ ಬಿಡುಗಡೆ ಆಗಲಿದೆ. ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ” ಎಂದು ನಟಿ ಭವ್ಯ ಸಂತಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಇಂದು ಮಧ್ಯರಾತ್ರಿ ಸ್ಪಂದನಾ ವಿಜಯ್ ರಾಘವೇಂದ್ರ ಮೃತದೇಹ ಬೆಂಗಳೂರಿಗೆ | ನಾಳೆ ಅಂತ್ಯಕ್ರಿಯೆ
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಕೋಮಲ ಬನವಾಸೆ, ಸುನೀಲ್ ಮೋಹಿತ್, ರೋಹಿಣಿ ಜಗನ್ನಾಥ, ಚಂದನಾ ಶ್ರೀನಿವಾಸ, ಶಿವಕುಮಾರ ಆರಾಧ್ಯ ಹಾಗೂ ಸಂಕಲನಕಾರ ಸಂಜೀವ ರೆಡ್ಡಿ, ಗಾಯಕಿ ಶೃತಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ವಿನೋದ್ ಶೇಷಾದ್ರಿ ‘ವಿಲೇಜ್ ರೋಡ್ ಫಿಲಂಸ್’ ಬ್ಯಾನರ್‌ನಲ್ಲಿ ಪರಿಮಳ ಡಿಸೋಜಾ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.












