ಮೋದಿ ಸರ್ ನೇಮ್ ಪ್ರಕರಣದಲ್ಲಿ ವಿಧಿಸಲಾಗಿರುವ ಎರಡು ವರ್ಷಗಳ ಶಿಕ್ಷೆಗೆ ತಡೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮನವಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿದೆ.
2019 ರಲ್ಲಿ ಕೋಲಾರದಲ್ಲಿ ಮಾಡಿದ ಭಾಷಣದಲ್ಲಿ, “ನನಗೆ ಒಂದು ಪ್ರಶ್ನೆ ಇದೆ. ನೀರವ್ ಮೋದಿಯಾಗಲಿ, ಲಲಿತ್ ಮೋದಿಯಾಗಲಿ ಅಥವಾ ನರೇಂದ್ರ ಮೋದಿಯಾಗಲಿ ಈ ಎಲ್ಲಾ ಕಳ್ಳರ ಹೆಸರಲ್ಲಿ ಮೋದಿ ಏಕೆ ಇದೆ? ಇಂತಹ ಇನ್ನೂ ಎಷ್ಟು ಮೋದಿಗಳು ಹೊರಬರುತ್ತಾರೆ ಎಂಬುದು ನಮಗೆ ತಿಳಿದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಈ ಭಾಷಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಸುಶೀಲ್ ಮೋದಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ತಪ್ಪಿತಸ್ಥ ಎಂದು ಘೋಷಿಸಿ ಎರಡು ವರ್ಷಗಳ ಸಜೆಯನ್ನು ವಿಧಿಸಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ಸೂರತ್ ನ್ಯಾಯಾಲಯವು ಇಂದು ಗಾಂಧಿಯವರ ಅರ್ಜಿಯನ್ನು ಅಂಗೀಕರಿಸಿದ್ದರೆ, ಲೋಕಸಭೆಯ ಸಚಿವಾಲಯವು ಅವರ ಸದನದ ಸದಸ್ಯತ್ವವನ್ನು ಮರುಸ್ಥಾಪಿಸಬೇಕಾಗಿತ್ತು.
ಈಗ ಲಭ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನು ಪಕ್ಷವು ಬಳಸಿಕೊಳ್ಳುತ್ತದೆ ಮತ್ತು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. .
ಗಾಂಧಿಯವರ ಮೇಲ್ಮನವಿ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ರಾಬಿನ್ ಮೊಗೇರ ಅವರ ಮುಂದೆ ವಿಚಾರಣೆಗೆ ಬಂದಿತ್ತು.