ಭಾರತದ ನೂತನ ಐಟಿ ಕಾಯ್ದೆಗಳನ್ನು ಅನುಸರಿಸುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಗೂಗಲ್‌ನ ಸ್ಥಳೀಯ ತಂಡಗಳು ಈ ಕುರಿತು ಸರ್ಕಾರದೊಂದಿಗೆ ನಿರಂತರ ಮಾತುಕತೆಯಲ್ಲಿದೆ. ಏನೇ ಆದರೂ, ಸ್ಥಳೀಯ ಕಾನೂನುಗಳೊಂದಿಗೆ ಗೂಗಲ್ ಅನುಸರಿಸಿಕೊಂಡು ಹೋಗಲಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರದಿಂದ ಕಾನೂನಾತ್ಮಕವಾಗಿ ಕೋರುವ ಡೇಟಾಗಳ ಹಂಚಿಕೆಯಲ್ಲಿ ಗೂಗಲ್ ಪಾರದರ್ಶಕತೆಯನ್ನು ಪಾಲಿಸಲಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಫೆಬ್ರವರಿ 25 ರಂದು ನೂತನ ಐಟಿ ಕಾಯ್ದೆಯನ್ನು ಪರಿಚಯಿಸಿರುವ ಭಾರತ ಸರ್ಕಾರ, ಅನುಸರಣೆ ಹುದ್ದೆಯಲ್ಲಿ ಭಾರತೀಯರನ್ನು ನೇಮಿಸುವಂತೆ, ದೂರುಗಳು ಬಂದಲ್ಲಿ ಪೋಸ್ಟ್, ಟ್ವೀಟ್, ಕಮೆಂಟ್‌ಗಳ ಮೂಲವನ್ನು 36 ಗಂಟೆಯಲ್ಲಿ ಸರ್ಕಾರದ ಸಂಸ್ಥೆಗಳಿಗೆ ಒದಗಿಸುವುದು ಮೊದಲಾದ ನಿಯಮಗಳನ್ನು ಪಾಲಿಸುವಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಮೇ 26 ಕ್ಕೆ ಸರ್ಕಾರ ನೀಡಿದ ಕಾಲವಕಾಶ ಮುಕ್ತಾಯವಾಗಿದ್ದು, ಕೇಂದ್ರ ಸರ್ಕಾರದ ನೂತನ ಕಾಯ್ದೆ ವಿರುದ್ಧ ಅಪಸ್ವರಗಳು ಎದ್ದಿರುವ ಹಿನ್ನೆಲೆಯಲ್ಲಿ ಗೂಗಲ್ ಸಿಇಒ ಹೇಳಿಕೆ ಐಟಿ ಲೋಕದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣ ದೈತ್ಯ ಕಂಪೆನಿಗಳಾದ ಗೂಗಲ್ ಹಾಗೂ ಫೇಸ್‌ಬುಕ್ ಈಗಾಗಲೇ ಕಾನೂನು ಜೊತೆಗೆ ಅನುಸರಿಸಿಕೊಂಡು ಹೋಗುವುದಾಗಿ ತಿಳಿಸಿದ್ದರೂ, ಮೆಸೇಜಿಂಗ್ ದೈತ್ಯ ವಾಟ್ಸಾಪ್ ಕೇಂದ್ರ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದೆ. ನೂತನ ಕಾನೂನುಗಳನ್ನು ಜಾರಿಗೆ ತರಬಾರದೆಂದು ವಾಟ್ಸಾಪ್ ಕೋರ್ಟ್ ಮೊರೆ ಹೋಗಿದೆ.
ನೂತನ ಕಾನೂನು ಗೌಪ್ಯತೆ ಕುರಿತಂತೆ ಸುಪ್ರೀಂ ಕೋರ್ಟ್ 2017 ರಲ್ಲಿ ನೀಡಿದ ತೀರ್ಪಿಗೆ ವಿರುದ್ಧವಾಗಿದೆಯೆಂದು ವಾಟ್ಸಾಪ್ ವಾದ ಹೂಡಿದೆ. 4