ನಾನು ನಿಂತರೆ ಮಂಡ್ಯದಿಂದಲೇ. ಇಲ್ಲ ಅಂದರೆ ನನಗೆ ರಾಜಕೀಯವೇ ಬೇಡ ಎಂದು ಸಂಸದೆ ಸುಮಲತಾ (Sumalatha) ಮುಂಬರುವ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಜೆಡಿಎಸ್ಗೆ (JDS) ಮಂಡ್ಯ ಟಿಕೆಟ್ ಹೋದರೆ ಮುಂದಿನ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿ ಆದಾಗ ಮುಂದೆ ನೋಡೋಣ. ಆಗ ನನ್ನ ನಿಲುವು ಹೇಳ್ತೀನಿ. ಆದರೆ ಈಗಲೂ ನನಗೆ ವಿಶ್ವಾಸ ಇದೆ. ಬಿಜೆಪಿ (BJP) ಮಂಡ್ಯ ಉಳಿಸಿಕೊಳ್ಳುತ್ತೆ. ನನಗೆ ಟಿಕೆಟ್ ಸಿಗುತ್ತೆ ಎಂದು ತಿಳಿಸಿದ್ದಾರೆ.
ಇವತ್ತು ಬಿಜೆಪಿ ಮುಖಂಡರು, ವಿಧಾನಸಭೆಯಲ್ಲಿ ಸೋತ ಅಭ್ಯರ್ಥಿಗಳು ಬಂದಿದ್ದರು. ಲೋಕಸಭೆ ಚುನಾವಣೆ ಬರ್ತಿದೆ. ಯಾವ ನಿರ್ಧಾರ ಮಾಡಬೇಕು ಅಂತಾ ಚರ್ಚೆ ಮಾಡಿದ್ವಿ. ಯಾವ ರೀತಿ ಕೆಲಸ ಮಾಡಬೇಕು ಎಂತಲೂ ಚರ್ಚೆ ಮಾಡಿದ್ವಿ. ಸಿಟ್ಟಿಂಗ್ ಎಂಪಿ ಎನ್ನುವ ಸ್ಥಾನ ಇದ್ದೇ ಇರುತ್ತೆ. ಸಿಟ್ಟಿಂಗ್ ಎಂಪಿಗೆ ಮೊದಲ ಪ್ರಾಶಸ್ತ್ಯ ಅಂತಾ ಎಲ್ಲಾ ಪಕ್ಷದಲ್ಲಿ ಇದೆ. ನಮ್ಮ ಕಾರ್ಯಕರ್ತರು ಅದನ್ನ ಬಯಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಉತ್ತಮ ಮತ ಬಂದಿದೆ. ಈ ವಾತಾವರಣದಲ್ಲಿ ಎಲ್ಲರ ಆಸೆ ಬಿಜೆಪಿಯನ್ನ ಮಂಡ್ಯದಲ್ಲಿ ಉಳಿಸಬೇಕು. ಎಂಪಿ ಸೀಟು ಉಳಿಸಿಕೊಳ್ಳಬೇಕು ಅಂತಾ ಎಲ್ಲರು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಧಿಕೃತವಾಗಿ ಬಿಜೆಪಿಯಿಂದ ನಮಗೆ ಸೂಚನೆ ಬಂದಿಲ್ಲ. ಹೈಕಮಾಂಡ್ ಎಲ್ಲೂ ಕೂಡಾ ಟಿಕೆಟ್ ಅವರಿಗೆ ಅಂತಾ ಹೇಳಿಲ್ಲ. ಜೆಡಿಎಸ್ಗೂ ಹೇಳಿಲ್ಲ, ನಮಗೂ ಹೇಳಿಲ್ಲ. ಮೈತ್ರಿ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅದರ ಬಗ್ಗೆ ನಾನು ಮಾತಾಡೊಲ್ಲ. ನನ್ನ ಗಮನವೇನಿದ್ರು ನನ್ನ ಕ್ಷೇತ್ರ, ನನ್ನ ಜಿಲ್ಲೆ. ನನ್ನ ಕೆಲಸದ ರಿಪೋರ್ಟ್ ನಿಮ್ಮ ಮುಂದೆ ಇದೆ. ಎಲ್ಲಾ ಎಂಪಿಗಳ ರೀತಿ ಕೆಲಸ ಮಾಡಿ ನಾನು ಪ್ರೂವ್ ಮಾಡಿದ್ದೇನೆ. ನನ್ನ ಬಗ್ಗೆ ಎಲ್ಲೂ ಕಪ್ಪು ಚುಕ್ಕಿ ಇಲ್ಲ. ಒಂದೇ ಒಂದು ಕಳಂಕ ನನ್ನ ಮೇಲೆ ಇದೆ. ಇದು ಬಿಜೆಪಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿನೇ ಮಂಡ್ಯ ಸೀಟು ಉಳಿಸುಕೊಳ್ಳುತ್ತೆ ಅನ್ನೋ ನಂಬಿಕೆ ನನಗೆ ಇದೆ. ಬಿಜೆಪಿ ಹೈಕಮಾಂಡ್ ನನ್ನ ಬಳಿ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ. ನಾನು ಭರವಸೆಯಿಂದ ಹೇಳ್ತೀನಿ. ಬಿಜೆಪಿ ಮಂಡ್ಯ ಸೀಟು ಉಳಿಸಿಕೊಳ್ಳುತ್ತೆ. ಕುಮಾರಸ್ವಾಮಿ ಭೇಟಿ ಮಾಡಿದ್ರೆ ನನಗೇನೂ ಅಭ್ಯಂತರ ಇಲ್ಲ. ಕರ್ಟಸಿ ಕಾಲ್ ಆಗಿ ಬಂದು ಭೇಟಿ ಆದ್ರೆ ನನ್ನದೇನು ಅಭ್ಯಂತರ ಇಲ್ಲ. ನಾನು ರಾಜಕೀಯಕ್ಕೆ ಬಂದಿದ್ದೇ ಮಂಡ್ಯದಿಂದ. ಅಂಬರೀಶ್ 4 ಬಾರಿ ಗೆದ್ದಿದ್ದರು. ನನಗೂ ಜನ ಹೆಚ್ಚು ಮತ ಕೊಟ್ರು. ಅಂತಹ ಅಭಿಮಾನ ಬಿಟ್ಟು ಹೋಗೊಲ್ಲ ಎಂದು ತಿಳಿಸಿದ್ದಾರೆ.
ನಾನು ನಿಂತರೆ ಮಂಡ್ಯದಿಂದಲೇ. ಇಲ್ಲ ಅಂದರೆ ನನಗೆ ರಾಜಕೀಯವೇ ಬೇಡ. ಅಂಬರೀಶ್ ಅವರು ನನಗೆ ಜವಾಬ್ದಾರಿ ಬಿಟ್ಟು ಹೋಗಿದ್ದಾರೆ. ಅಂಬರೀಶ್ ಕನಸು ನಾನು ಪೂರೈಕೆ ಮಾಡಬೇಕು. ರಾಜಕೀಯವಾಗಿ ಏನೇನೋ ಆಗೋ ಆಸೆ ನನಗೆ ಇಲ್ಲ. ನಾನು ಮಂಡ್ಯದಿಂದ ಮಾತ್ರ ನಿಲ್ಲೋದು. ಬೇರೆ ಕ್ಷೇತ್ರ ನಿಲ್ಲೋದಿಲ್ಲ. ಬಿಜೆಪಿಯವರು ನನಗೆ ಟಿಕೆಟ್ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಮಂಡ್ಯದ ಬಗ್ಗೆ ಹೈಕಮಾಂಡ್ ನನ್ನ ಜೊತೆ ಮಾತಾಡಿಲ್ಲ. ಸೀಟು ಹಂಚಿಕೆ ಮಾತುಕತೆ ಇನ್ನೂ ಆಗಿಲ್ಲ ಎಂದಿದ್ದಾರೆ.
ನಾನು ಹಿಂದೆ ಕಾಂಗ್ರೆಸ್ನಿಂದಲೂ ಟಿಕೆಟ್ ಕೇಳಿರಲಿಲ್ಲ. ಕಾಂಗ್ರೆಸ್ನಲ್ಲಿ ನನ್ನ ಅಭಿಮಾನಿಗಳು ಇದ್ದಾರೆ. ಅವರು ಹೇಳಿದ್ದಾರೆ ಕಾಂಗ್ರೆಸ್ಗೆ ಬನ್ನಿ ಅಂತಾ. ನಾನೇ ದೊಡ್ಡ ಲೀಡರ್ ಅಂತ ನಾನು ನಡೆದಿಕೊಂಡಿಲ್ಲ. ನನ್ನ ಕೆಲಸ ನಿಮ್ಮ ಮುಂದೆ ಇದೆ. ಅದನ್ನ ಇಟ್ಟು ನಾನು ಕೇಳ್ತೀನಿ. ಮಂಡ್ಯ ಜನ ನನ್ನ ಜೊತೆ ಇದ್ದಾರೆ. ಕಾಂಗ್ರೆಸ್ನಿಂದ ನನಗೂ ಆಫರ್ ಬಂದಿದ್ದು ನಿಜ. ಟಿಕೆಟ್ ಕೊಡಿಸ್ತೀವಿ ಅಂತಾ ಹೇಳಿದ್ದಾರೆ. ಆದರೆ ನಾನು ಬಿಜೆಪಿ ಜೊತೆ ಇದ್ದೇನೆ ಅಂತಾ ಅವರಿಗೆ ಗೊತ್ತಿದೆ. ನನ್ನ ಕ್ಷೇತ್ರ ಮಂಡ್ಯ. ಅದನ್ನ ಬಿಟ್ಟು ಎಲ್ಲೂ ಹೋಗೊಲ್ಲ. ರಾಜ್ಯಸಭೆಗೆ ಹೋಗ್ತಾರೆ ಅನ್ನೋದು ರೂಮರ್ಸ್. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗೊಲ್ಲ. ಸ್ಪರ್ಧೆ ಮಾಡೋದಾದ್ರೆ ಮಂಡ್ಯದಿಂದ ಮಾತ್ರ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ