ಮೈಸೂರು : ಪ್ರಾರಂಭಿಕ ಹಂತದಲ್ಲಿಯೇ ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಕ್ಷಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಜಿಲ್ಲೆಯನ್ನು ಕುಷ್ಟ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ (DC) ಡಾ.ಕೆ ವಿ ರಾಜೇಂದ್ರ (KVRAJENDRA) ಅವರು ತಿಳಿಸಿದರು
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ -2024 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಹದ ಯಾವುದೇ ಭಾಗದಲ್ಲಿ ತಾಮ್ರ ಬಣ್ಣದ ಸ್ಪರ್ಶ ಜ್ಞಾನವಿಲ್ಲದ ಬಿಳಿ ಮಚ್ಚೆಗಳು, ತ್ವಚೆಯ ಮೇಲೆ ಕೆಂಪಾದ ಬಾವು, ಕಣ್ಣು ಮುಚ್ಚುವಲ್ಲಿ ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ತಮ್ಮ ಹತ್ತಿರದ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಕುಷ್ಟ ರೋಗ ಗುಣಪಡಿಸುವ ಕಾಯಿಲೆಯಾಗಿದೆ. ಕುಷ್ಟ ರೋಗಿಗಳನ್ನು ಪ್ರತೀಕವಾಗಿ ಕಾಣದೆ ಅವರನ್ನು ಸಾಮಾನ್ಯರಂತೆ ಕಾಣಬೇಕು. ಇದು ಚರ್ಮದಿಂದ ಚರ್ಮಕ್ಕೆ ಹರಡುವುದಿಲ್ಲ ಎಂದು ತಿಳಿಸಿದರು.
ಕುಷ್ಟ ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಮುಂದೆ ಆಗಬಹುದಾದ ವಿಕಲಾಂಗತೆಯನ್ನು ತಡೆಗಟ್ಟಬಹುದು. ಈ ದೆಸೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಗಾಂಧೀಜಿಯವರ ಕನಸಾದ ಕುಷ್ಟ ರೋಗ ಮುಕ್ತ ಭಾರತವನ್ನು ಭವಿಷ್ಯದಲ್ಲಿ ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.
ಕುಷ್ಟ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಯಾವುದೇ ರೀತಿಯ ತಾರತಮ್ಯ ಆಗದಂತೆ ಎಚ್ಚರ ವಹಿಸಬೇಕು. ಕುಷ್ಟ ರೋಗಿಗಳನ್ನು ಗುಣಪಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಕೆ ಕುಮಾರಸ್ವಾಮಿ, ಜಿಲ್ಲಾ ಕುಷ್ಟ ರೋಗ ನಿವಾರಣಾ ಅಧಿಕಾರಿಗಳಾದ ಡಾ. ಬೃಂದಾ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.