ಮಂಡ್ಯ : ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಂಡ್ಯ ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ನನ್ನ ಬೆಂಬಲ ಬಿಜೆಪಿಗೆ ಎಂದು ಬಹಿರಂಗವಾಗಿ ಮೊನ್ನೆ ಮೊನ್ನೆಯಷ್ಟೇ ಘೋಷಣೆ ಮಾಡಿದ್ದಾರೆ. ಈ ನಡುವೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಗೌಡ ಕೂಡ ಈ ವಾರದಲ್ಲೇ ಬಿಜೆಪಿ ಸೇರ್ಪಡೆಯಾಗೋದಾಗಿ ಹೇಳಿಕೊಂಡಿದ್ದು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಬಿಜೆಪಿ ಈ ಬಾರಿ ತಕ್ಕ ಪಾಠ ಕಲಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಂಡ್ಯ ಎಂದರೆ ಸಾಕು ಅದು ದಳಪತಿಗಳ ನಾಡು ಎಂಬ ಮಾತಿದೆ. ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಲೆಯೇ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮಂಡ್ಯ ಕ್ಷೇತ್ರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ವರಿಷ್ಠರು ಮಂಡ್ಯಕ್ಕೆ ಭೇಟಿ ನೀಡಿ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಶಿವರಾಮೇಗೌಡ ಹಾಗೂ ಸುಮಲತಾ ಬೆಂಬಲ ಕೂಡ ಬಿಜೆಪಿಗೆ ಸಿಕ್ಕಿದ್ದು ಈ ಬಾರಿ ಮಂಡ್ಯ ಚುನಾವಣಾ ಫಲಿತಾಂಶ ಜೆಡಿಎಸ್ಗೆ ಉಲ್ಟಾ ಹೊಡೆಯಬಹುದೇ ಎಂಬ ಅನುಮಾನ ಮೂಡಿದೆ.
ಆಪರೇಷನ್ ಕಮಲದ ಬಳಿಕ ಬಿಜೆಪಿ ಸೇರಿದ್ದ ನಾರಾಯಣ ಗೌಡ, ಮೊದಲ ಬಾರಿಗೆ ಮಂಡ್ಯದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಬಿಜೆಪಿ ಮಂಡ್ಯದಲ್ಲಿ ನಿಧಾನವನ್ನು ಶಕ್ತಿಯನ್ನು ಹೆಚ್ಚಿಸಿಕೊಳ್ತಿದ್ದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಲೆಕ್ಕಾಚಾರ ವರ್ಕೌಟ್ ಆಗುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.