ಬೆಂಗಳೂರು : ನಿರ್ದೇಶಕ ಎಸ್.ಎಸ್. ರಾಜಮೌಳಿ ಸದ್ಯ ಯುರೋಪ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರ ಹಿಟ್ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಅದೊಂದು ರೀತಿ ರಾಜಮೌಳಿ ಚಿತ್ರೋತ್ಸವವಿದ್ದಂತೆ! ಪ್ಯಾರಿಸ್ನಲ್ಲಿ ರಾಜಮೌಳಿ ನಿರ್ದೇಶನದ, ಸುದೀಪ್ ನಟನೆಯ ‘ಈಗ’ ಚಿತ್ರ ಪ್ರದರ್ಶನಗೊಂಡಿದೆ.
ಕ್ಲೈಮ್ಯಾಕ್ಸ್ ದೃಶ್ಯವೊಂದಕ್ಕೆ ಅಲ್ಲಿನ ಫ್ರೆಂಚ್ ಪ್ರೇಕ್ಷಕರು ಹುಚ್ಚೆದ್ದು ಸಂಭ್ರಮಿಸಿದ್ದಾರೆ. ಸದ್ಯ ಥಿಯೇಟರ್ನಲ್ಲಿ ಸಂಭ್ರಮಿಸಿರುವ ಆ ವಿಡಿಯೋ ವೈರಲ್ ಆಗಿದೆ. ಇದೇ ವೇಳೆ ‘ಸಿನೆಮಾಥೆಕ್ ಫ್ರಾಂಕೈಸ್’ ಸಂಸ್ಥೆಯಿಂದ ರಾಜಮೌಳಿಗೆ ಜಾಗತಿಕ ಗೌರವ ಲಭಿಸಿದೆ. ನಾನಿ, ಸಮಂತಾ, ಸುದೀಪ್ ನಟಿಸಿದ್ದ ‘ಈಗ’ ಚಿತ್ರದ ವಿಭಿನ್ನ ಕಥೆಗೆ ಮತ್ತು ಸುದೀಪ್ ನಟನೆಗೆ ವಿಶ್ವಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಯುರೋಪ್ ಪ್ರವಾಸದಲ್ಲಿರುವ ರಾಜಮೌಳಿ ಅವರ ನಿರ್ದೇಶನದ ‘ಆರ್ಆರ್ಆರ್’, ‘ಬಾಹುಬಲಿ’ ಮತ್ತು ‘ಈಗ’ ಸಿನಿಮಾಗಳನ್ನು ಅಲ್ಲಿನ ಪ್ರೇಕ್ಷಕರಿಗೆ ಪ್ರದರ್ಶಿಸಲಾಗುತ್ತಿದೆ. ಸಮಂತಾ, ನಾನಿ, ಸುದೀಪ್ ಮೊದಲಾದವರು ನಟಿಸಿರೋ ‘ಈಗ’ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಪ್ರಮುಖ ದೃಶ್ಯವೊಂದಕ್ಕೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ರಾಜಮೌಳಿ ಅವರ ತಂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಿನಿಮಾದ ಕೊನೆಯಲ್ಲಿ ನಾಯಕ ಕಿಚ್ಚ ಸುದೀಪ್ ಅವರಿಗೆ ನೊಣ ಚಾಲೆಂಜ್ ಹಾಕುವ ದೃಶ್ಯವದು. ನೊಣವು ಗೋಡೆಯ ಮೇಲೆ ‘ಐ ವಿಲ್ ಬಿ ಬ್ಯಾಕ್’ (ನಾನು ಮತ್ತೆ ಬರುತ್ತೇನೆ) ಎಂದು ಬರೆಯುತ್ತದೆ. ಈ ದೃಶ್ಯಕ್ಕೆ ಫ್ರಾನ್ಸ್ ದೇಶದ ಪ್ರೇಕ್ಷಕರು ಥಿಯೇಟರ್ನಲ್ಲಿ ಸಖತ್ ಕಿರುಚಾಡಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ಬೇರೆ ರಾಜ್ಯದ ಮತದಾರರಿಗೆ ನಾವ್ಯಾಕೆ ಗ್ಯಾರಂಟಿ ನೀಡಬೇಕು? : ಸಿಎಂ ಡಿ.ಕೆ ಶಿವಕುಮಾರ್
ಈಗ’ ಸಿನಿಮಾ 2012ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ನಾನಿ, ಸಮಂತಾ ಮತ್ತು ಕಿಚ್ಚ ಸುದೀಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಖಳನಾಯಕನಿಂದ ಕೊಲೆಯಾಗುವ ನಾಯಕ ನೊಣವಾಗಿ ಮರುಜನ್ಮ ಪಡೆಯುತ್ತಾನೆ. ನಂತರ ತನ್ನ ಸಾವಿಗೆ ಸೇಡು ತೀರಿಸಿಕೊಳ್ಳುವ ವಿಭಿನ್ನ ಕಥೆ ಇದಾಗಿತ್ತು. ಸುದೀಪ್ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು.
ಪ್ಯಾರಿಸ್ ಪ್ರವಾಸದ ವೇಳೆ ರಾಜಮೌಳಿ ಅವರಿಗೆ ವಿಶ್ವದ ಪ್ರತಿಷ್ಠಿತ ‘ಸಿನೆಮಾಥೆಕ್ ಫ್ರಾಂಕೈಸ್’ ಸಂಸ್ಥೆಯಿಂದ ಗೌರವ ಲಭಿಸಿದೆ. ಈ ಸಂಸ್ಥೆಯ ಹಾಲ್ನಲ್ಲಿ ರಾಜಮೌಳಿ ಅವರಿಗೆ ಖಾಯಂ ಸ್ಥಾನ ನೀಡಲಾಗಿದೆ. ಈ ಬಗ್ಗೆ ರಾಜಮೌಳಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. ‘ಪ್ಯಾರಿಸ್ನಲ್ಲಿ ನನ್ನ ಚಿತ್ರಗಳ ಪ್ರದರ್ಶನ ಆಗುತ್ತಿರುವುದೇ ನನಗೆ ದೊಡ್ಡ ಗೌರವ. ಆದರೆ ಈ ವಿಶೇಷ ಸರ್ಪ್ರೈಸ್ ಅನ್ನು ನಾನು ನಿರೀಕ್ಷಿಸಿರಲಿಲ್ಲ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ಫ್ರೆಂಚ್ ಸಂಸ್ಥೆಗೆ ಅವರು ಧನ್ಯವಾದ ತಿಳಿಸಿದ್ದಾರೆ.






