ಪಡಿತರವನ್ನು ಉಚಿತವಾಗಿ ನೀಡಿದರೆ ಕೆಲಸಕ್ಕೆ ಜನರು ಬರುವುದಿಲ್ಲ ಎಂದು ಅಸೂಕ್ಷ್ಮ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಉದ್ಯಮಿ ವಿಜಯ ಸಂಕೇಶ್ವರ ಅವರನ್ನು ನಟ, ಸಾಮಾಜಿಕ ಹೋರಾಟಗಾರ ಚೇತನ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಉಚಿತ ಪಡಿತರವನ್ನು ವಿತರಿಸಿದರೆ ಜನರು ಕೆಲಸ ಮಾಡುವುದಿಲ್ಲ ಎಂದು ವಿಆರ್‌ಎಲ್ ಅಧ್ಯಕ್ಷ ವಿಜಯ್ ಸಂಕೇಶ್ವರ ಹೇಳುತ್ತಾರೆ. ಇಂತಹ ಮಾತುಗಳು ಚಿಂತನೆ ಮತ್ತು ಕಾರ್ಯದಲ್ಲಿ ಸಂಕೇಶ್ವರ ಲಿಂಗಾಯತ ವಿರೋಧಿ ಎಂದು ಸಾಬೀತುಪಡಿಸುತ್ತದೆ ಎಂದು ಚೇತನ್ ಹೇಳಿದ್ದಾರೆ.

ತಲೆಮಾರುಗಳಿಂದ ಬಸವ / ಶರಣದ ತತ್ತ್ವಗಳನ್ನು ಜೀವಿಸಿರುವ ನೂರಾರು ಲಿಂಗಾಯತ ಮಠಗಳಿಂದ ಸಂಕೇಶ್ವರ ಅವರು ‘ದಾಸೋಹ’ ಸಂಸ್ಕೃತಿಯನ್ನು ಕಲಿಯಬೇಕು ಎಂದು ಚೇತನ್ ಸಲಹೆ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಕೇಶ್ವರ, ಮೊದಲ ಲಾಕ್‌ಡೌನ್ ವೇಳೆಯೂ ಕೇಂದ್ರ ಸರ್ಕಾರ ಮೂರು ತಿಂಗಳು ಉಚಿತ ಪಡಿತರ ನೀಡಿತ್ತು. ಈ ಬಾರಿಯೂ 80 ಕೋಟಿ ಜನರಿಗೆ ಉಚಿತ ಪಡಿತರ ಘೋಷಿಸಿದೆ. ಇದರಿಂದ ಉದ್ಯೋಗವಿದ್ದರೂ ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ ಎಂದಿದ್ದರು.
ಸಂಕಷ್ಟದ ವೇಳೆ ಸರ್ಕಾರ ನೆರವು ಬೇಕು. ಆದರೆ, ಈ ವೇಳೆ ಕಾರ್ಮಿಕರಿಗೆ ಸಾಕಷ್ಟು ಕೆಲಸ ಇದೆ. ಇಂತಹ ಸಂದರ್ಭದಲ್ಲಿ ಪುಕ್ಕಟೆಯಾಗಿ ಸೌಲಭ್ಯಗಳನ್ನು ನೀಡುವುದು ಸರಿಯಲ್ಲ. ಇದರಿಂದ ಉತ್ಪಾದನಾ ವಲಯ ಕುಸಿಯುತ್ತದೆ. ಸರಕು-ಸಾಗಣೆ ಕ್ಷೇತ್ರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸ್ವತಃ ಸಾರಿಗೆ ವಲಯದ ಉದ್ಯಮಿಯೂ ಆಗಿರುವ ಸಂಕೇಶ್ವರ ಹೇಳಿದ್ದರು.