ಮಾನವ ಶ್ರಮ ಮತ್ತು ವಿಜ್ಞಾನದ ಸಮ್ಮಿಲನವನ್ನು ಇಸ್ರೋ ಯಶಸ್ಸಿನಲ್ಲಿ ಕಾಣಬಹುದು
ಭಾಗ 10
ಚಂದ್ರಯಾನ-3ರ ಯಶಸ್ಸು ಭಾರತವನ್ನು ವಿಶ್ವ ಭೂಪಟದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ಪಯಣದಲ್ಲಿ ಜಾಗತಿಕ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಅರ್ಹತೆಯನ್ನು ಭಾರತ ಗಳಿಸಿರುವುದೇ ಆದರೆ ಅದರ ಶ್ರೇಯ ಸಲ್ಲಬೇಕಿರುವುದು ಭಾರತದ ಬಾಹ್ಯಾಕಾಶ ವಿಜ್ಞಾನವನ್ನು ಚಂದ್ರನೆತ್ತರಕ್ಕೆ ಕೊಂಡೊಯ್ದ ಇಸ್ರೋ ಮತ್ತು ಇತರ ಸಂಸ್ಥೆಗಳಿಗೆ. ಈ ಸಂಸ್ಥೆಗಳ ಐದಾರು ದಶಕಗಳ ಸುದೀರ್ಘ ಪಯಣ, ದೇಶದ ಸಾವಿರಾರು ಎಂಜಿನಿಯರುಗಳು, ತಂತ್ರಜ್ಞರು ಹಾಗೂ ನೂರಾರು ವಿಜ್ಞಾನಿಗಳ ಪರಿಶ್ರಮ, ಕಾರ್ಯಕ್ಷಮತೆ ಹಾಗೂ ಪ್ರಾಮಾಣಿಕ ದುಡಿಮೆ ಮತ್ತು ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ (Public Sector) ಇಸ್ರೋ ಹಾಗೂ ಅದರ ಸಹವರ್ತಿ ಉದ್ದಿಮೆಗಳು ನಿರ್ವಹಿಸಿದ ಜವಾಬ್ದಾರಿ ಇವೆಲ್ಲವೂ ಸಹ ಚಂದ್ರಯಾನದ ಯಶಸ್ಸಿಗೆ ಕಾರಣವಾಗಿದೆ.
ತಮ್ಮ ವೈಯುಕ್ತಿಕ ಶ್ರದ್ಧೆ ನಂಬಿಕೆಗಳಿಗನುಸಾರವಾಗಿ ಇಸ್ರೋ ಸಂಸ್ಥೆಯ ಹಾಲಿ ಅಧ್ಯಕ್ಷರಾದ ಡಾ. ಸೋಮನಾಥ್ ಚಂದ್ರಯಾನದ ಯಶಸ್ಸನ್ನು, ವಿಜ್ಞಾನಿಗಳಿಗಷ್ಟೇ ಅಲ್ಲದೆ ಅತೀತ ಶಕ್ತಿಗಳಿಗೂ ಅರ್ಪಿಸಿದರೂ, ಅಂತಿಮವಾಗಿ ಚಂದಿರನ ಅಂಗಳದಲ್ಲಿ ಈವರೆಗೆ ಯಾವ ದೇಶವೂ ತಲುಪದ ದಕ್ಷಿಣ ಧೃವವನ್ನು ಚುಂಬಿಸಿದ ವಿಕ್ರಂ ಲ್ಯಾಂಡರ್ ಎಂಬ ವೈಜ್ಞಾನಿಕ ಸಾಧನದ ಹಿಂದೆ ಇರುವುದು ಭಾರತದ ವಿಜ್ಞಾನಿಗಳ ಮಾನವ ಶ್ರಮ ಮತ್ತು ಮಾನವ ಬುದ್ಧಿಮತ್ತೆ ಮಾತ್ರ . ಚಂದ್ರನನ್ನು ನವಗ್ರಹಗಳಲ್ಲಿ ಒಂದು ಗ್ರಹ ಇಂದೇ ಪರಿಗಣಿಸುವ ಭಾರತದ ಸಾಂಪ್ರದಾಯಿಕ ಸಮಾಜದ ಪ್ರವರ್ತಕರಿಗೆ ಚಂದ್ರಯಾನದ ಹಿಂದಿನ ವೈಜ್ಞಾನಿಕ ಪರಿಶ್ರಮಕ್ಕಿಂತಲೂ, ದೈವೀಕ-ಅತೀತ ಶಕ್ತಿಗಳ ಪ್ರಭಾವವೇ ಮುಖ್ಯವಾಗಿ ಕಾಣಿಸುವುದು ಅಚ್ಚರಿಯೇನಲ್ಲ. ಆದರೆ ಮಾನವ ತನ್ನ ಬುದ್ಧಿಶಕ್ತಿಯಿಂದ, ಆಧುನಿಕ ವಿಜ್ಞಾನದ ಅವಿಷ್ಕಾರಗಳನ್ನು ಬಳಸಿಕೊಂಡು, ಸಮಾಜ ನಂಬಿಕೊಂಡು ಬಂದಿರುವ ದೈವಾಂಶಭೂತ ಅತೀತತೆಯನ್ನು ಭೇದಿಸಲು ಸಾಧ್ಯ ಎನ್ನುವುದನ್ನು ಚಂದ್ರಯಾನ ಸ್ಪಷ್ಟವಾಗಿ ನಿರೂಪಿಸಿದೆ.
ಕಾರ್ಯಕ್ಷಮತೆಯ ಕೆಂದ್ರ ಇಸ್ರೋ
ಒಂದು ಸರ್ಕಾರಿ ಸಂಸ್ಥೆಯಾಗಿ, ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಒಂದು ವಿಭಾಗವಾಗಿ ಐದು ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಇಸ್ರೋ ಮತ್ತು ಸಹಯೋಗಿ ಸಂಸ್ಥೆಗಳಲ್ಲಿ ಹಗಲಿರುಳೆನ್ನದೆ ದುಡಿಯುವ ಅಸಂಖ್ಯಾತ ವಿಜ್ಞಾನಿಗಳು ಕಾರ್ಪೋರೇಟ್ ಮಾರುಕಟ್ಟೆಯ ಆಮಿಷಗಳಿಗೆ ಬಲಿಯಾಗದೆ, ಹಣಗಳಿಕೆಯ ಮಾಯಾಜಿಂಕೆಯ ಬೆನ್ನಟ್ಟದೆ, ತಮ್ಮ ವ್ಯಕ್ತಿಗತ ಬದುಕಿನ ಅವಶ್ಯಕತೆಗಳನ್ನು ಪೂರೈಸುವ ಸರ್ಕಾರಿ ವೇತನದೊಂದಿಗೇ ಚಂದ್ರಯಾನದ ಯಶಸ್ಸಿಗೆ ಕಾರಣರಾಗಿರುವುದು ಭಾರತದ ಕಾರ್ಮಿಕ ವರ್ಗದ ದೃಷ್ಟಿಯಿಂದ ಹೆಮ್ಮೆಯ ವಿಚಾರ. ತನ್ನ ಚಂದ್ರಯಾನ-3ರ ಪಯಣದಲ್ಲಿ ಭಾರತ ಅತಿ ಕನಿಷ್ಠ ಮೊತ್ತವನ್ನು ಖರ್ಚು ಮಾಡಿರುವುದೂ ಸಹ ಜಗತ್ತಿನ ವಿಜ್ಞಾನಿಗಳ ಹುಬ್ಬೇರಿಸುವಂತೆ ಮಾಡಿದೆ. ಕೇವಲ 625 ಕೋಟಿ ರೂಗಳಷ್ಟು ವೆಚ್ಚದಲ್ಲಿ ಇಸ್ರೋ ಚಂದ್ರಯಾನ-3 ಪೂರೈಸಿದೆ. ಇದಕ್ಕೂ ಮುನ್ನ ಚಂದ್ರಯಾನದ ಎರಡು ಪಯಣಗಳಿಗೆ 1210 ಕೋಟಿ ರೂಗಳಷ್ಟು ಖರ್ಚಾಗಿತ್ತು.
ಚಂದ್ರಯಾನ ಯಶಸ್ಸಿನ ರೂವಾರಿಗಳೆಂದೇ ಗುರುತಿಸಲ್ಪಟ್ಟಿರುವ ಎಸ್. ಸೋಮನಾಥ್, ಪಿ. ವೀರಮುತ್ತುವೇಲ್, ಎಸ್. ಮೋಹನ್‌ಕುಮಾರ್, ಎಸ್. ಉನ್ನಿಕೃಷ್ಣನ್, ಎಂ. ಶಂಕರನ್, ಎ. ರಾಜರಾಜನ್, ನಿಲೇಶ್ ಎಂ ದೇಸಾಯಿ, ಕೆ. ಕಲ್ಪನಾ ಮತ್ತಿತರ ಅನೇಕ ವಿಜ್ಞಾನಿಗಳು ದಶಕಗಳ ಕಾಲ ತಮ್ಮ ಸಮಯ, ಬುದ್ಧಿಶಕ್ತಿ, ಶ್ರದ್ಧೆ ಹಾಗೂ ಪ್ರಾಮಾಣಿಕ ಸೇವೆಯ ಮೂಲಕ ಭಾರತವನ್ನು ವಿಶ್ವಭೂಪಟದಲ್ಲಿ ಕಂಗೊಳಿಸುವಂತೆ ಮಾಡಿದ್ದಾರೆ. ಸಾಧಾರಣ ಕುಟುಂಬದ ಹಿನ್ನೆಲೆ ಹೊಂದಿರುವ ಈ ವಿಜ್ಞಾನಿಗಳ ಪೈಕಿ ಬಹುತೇಕರು ಭಾರತದ ವಿವಿಧ ಭಾಗಗಳ ಸಾಧಾರಣ ಎನ್ನಬಹುದಾದ ಕಾಲೇಜುಗಳಿಂದಲೇ ಹೊರಹೊಮ್ಮಿದವರೂ ಆಗಿದ್ದಾರೆ. ಉದಾಹರಣೆಗೆ ವೀರಮುತ್ತುವೇಲ್ ತಮಿಳುನಾಡಿನ ವಿಲ್ಲುಪುರಂನಲ್ಲಿ ಡಿಪ್ಲೊಮೋ ಕೋರ್ಸ್ ಪೂರೈಸಿ ನಂತರ ಎಂಜಿನಿಯರಿಂಗ್ ಪದವಿಯನ್ನು ಚೆನ್ನೈನಲ್ಲಿರುವ ಸಾಯಿರಾಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಡೆದವರು. ನಂತರ ಐಐಟಿ ಮದ್ರಾಸ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ಇಸ್ರೋ ಅಧ್ಯಕ್ಷ ಸೋಮನಾಥ್ ಅವರೂ ಸಹ ಕೇರಳದ ಕೊಲ್ಲಂನಲ್ಲಿರುವ ಟಿ.ಕೆ.ಎಮ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.
21ನೆಯ ಶತಮಾನದ ಭಾರತದಲ್ಲಿ ಐಐಟಿ, ಐಐಎಂ ಮುಂತಾದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳು ಜನಸಾಮಾನ್ಯರ ನಡುವೆ ಒಂದು ಪ್ರಭಾವಳಿಯನ್ನು ಸೃಷ್ಟಿಸಿದ್ದು ಈ ಸಂಸ್ಥೆಗಳಿಂದ ಹೊರಬಂದವರನ್ನು ಜ್ಞಾನಶಾಖೆಗಳ ಅತ್ಯುನ್ನತ ಬೌದ್ಧಿಕ ಆಸ್ತಿ ಎಂದು ಪರಿಗಣಿಸುವ ಮನಸ್ಥಿತಿಯೂ ಇದೆ. ಈ ಸಂಸ್ಥೆಗಳಿಂದ ಉನ್ನತ ಪದವಿ, ಪಿಎಚ್‌ಡಿ ಪಡೆದು ಬರುವವರೇ ಭಾರತದ ವೈಜ್ಞಾನಿಕ ಸಾಧನೆಗಳ ರೂವಾರಿಗಳಾಗಿರಬಹುದು ಎಂಬ ಭ್ರಮೆಯೂ ಜನಸಾಮಾನ್ಯರ ನಡುವೆ ಇರಲು ಸಾಧ್ಯ. ಆದರೆ ಚಂದ್ರಯಾನ-3ರ ಯಶಸ್ಸಿನ ಹಿಂದಿರುವ ಎಂಜಿನಿಯರುಗಳ ಪೈಕಿ 7 ಜನರು ಈ ಸಂಸ್ಥೆಗಳಿಂದಾಚೆಗೆ ಸಾಧಾರಣ ಎಂಜಿನಿಯರಿಂಗ್ ಕಾಲೇಜುಗಳಿಂದ, ಸಿಇಟಿ ಪ್ರವೇಶ ಪರೀಕ್ಷೆ ಮೂಲಕ ಸಾಧನೆ ಮಾಡಿದವರಾಗಿದ್ದಾರೆ. ನಿವೃತ್ತ ಇಸ್ರೋ ಅಧ್ಯಕ್ಷ ಮಾಧವ ಮೆನನ್ “ ಅತ್ಯಂತ ಕಡಿಮೆ ವೇತನನ ಪಡೆಯುವ ಇಸ್ರೋ ವಿಜ್ಞಾನಿಗಳು, ಕಡಿಮೆ ವೆಚ್ಚದಲ್ಲೇ ಬಾಹ್ಯಾಕಾಶ ಸಂಶೋಧನೆಯ ಮಾರ್ಗಗಳನ್ನೂ ಅನುಸರಿಸುತ್ತಾರೆ, ಇಸ್ರೋ ವಿಜ್ಞಾನಿಗಳಲ್ಲಿ ಕೋಟ್ಯಧಿಪತಿಗಳನ್ನು ಕಾಣಲಾಗುವುದಿಲ್ಲ, ಎಲ್ಲರೂ ಸಾಧಾರಣ ಮಧ್ಯಮ ವರ್ಗದ ಜೀವನವನ್ನೇ ನಡೆಸುತ್ತಾರೆ ” ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಮತ್ತೊಂದು ಮಾಹಿತಿಯ ಅನುಸಾರ ಇಸ್ರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಶೇ 98ರಷ್ಟು ವಿಜ್ಞಾನಿಗಳು, ಎಂಜಿನಿಯರುಗಳು, ತಂತ್ರಜ್ಞರು ಸಾಧಾರಣ ಶಿಕ್ಷಣ ಸಂಸ್ಥೆಗಳ ಉತ್ಪನ್ನಗಳೇ ಆಗಿದ್ದು, ಶೇ 2ರಷ್ಟು ಸಿಬ್ಬಂದಿ ಮಾತ್ರ ಎನ್‌ಐಟಿ/ಐಐಟಿ ಮುಂತಾದ ಮುಂಚೂಣಿ ಸಂಸ್ಥೆಗಳಿಂದ ಬಂದವರಾಗಿದ್ದಾರೆ. ಉಪಗ್ರಹ ಉಡಾವಣೆ ಮತ್ತು ಅಂತರ್‌ಗ್ರಹ ಶೋಧನೆಯ ಪ್ರಕ್ರಿಯೆಯು ಪ್ರಸ್ತುತ ಸಂದರ್ಭದಲ್ಲಿ ವೈಜ್ಞಾನಿಕ ಪ್ರಕ್ರಿಯೆ ಮಾತ್ರವೇ ಅಲ್ಲದೆ ವಾಣಿಜ್ಯ ಕೇಂದ್ರಿತವೂ ಆಗಿದ್ದು, ಐಐಟಿ, ಎನ್‌ಐಟಿ, ಐಐಎಮ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿಂದ ಹೊರಬಂದ ಪ್ರತಿಭೆಗಳು ಇಸ್ರೋ ಸಂಸ್ಥೆಗೆ ಅತ್ಯವಶ್ಯ ಎನ್ನುತ್ತಾರೆ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಹಿರಿಯ ಸಲಹೆಗಾರ ವಿ. ಆದಿಮೂರ್ತಿ. ಆದರೆ ನಿರೀಕ್ಷಿತ ಮಟ್ಟದಲ್ಲಿ ಐಐಟಿ/ಎನ್‌ಐಟಿ ಪದವೀಧರರು ಇಸ್ರೋ ಕಡೆಗೆ ನಡೆಯುತ್ತಿಲ್ಲ.
ಇದಕ್ಕೆ ಹಲವು ಕಾರಣಗಳಿದ್ದು ಈ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುವವರು ತಮ್ಮ ಬದುಕು ನಿರ್ವಹಣೆಗಾಗಿ ಹೆಚ್ಚಿನ ವೇತನ, ವಿದೇಶಿ ಉದ್ಯೋಗ ಮತ್ತು ಉನ್ನತ ಸ್ಥಾನಮಾನಗಳ ನಿರೀಕ್ಷೆಯಲ್ಲಿರುತ್ತಾರೆ. ಆರಂಕಿಯನ್ನು ದಾಟಿದ ವೇತನ, ಐಷಾರಾಮಿ ಜೀವನ ಮತ್ತು ಗಗನ ಸಂಚಾರದ ಭ್ರಮಾಧೀನರಾಗಿರುತ್ತಾರೆ. ಆದರೆ ಇಸ್ರೋ ಸಂಸ್ಥೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯ ಮೂಲ ವಿಜ್ಞಾನದ ಜ್ಞಾನ ಮತ್ತು ಬುದ್ಧಿಮತ್ತೆಯನ್ನೇ ಪ್ರಧಾನವಾಗಿ ಪರಿಗಣಿಸಲಾಗುವುದೇ ಹೊರತು, ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆಯನ್ನಲ್ಲ. ಮೇಲಾಗಿ ಕಾರ್ಪೋರೇಟ್ ಮಾರುಕಟ್ಟೆ ನಿರ್ವಹಿಸುವ ವೈಜ್ಞಾನಿಕ ಸಂಸ್ಥೆಗಳಲ್ಲಿ ನೀಡುವ ಪ್ರಮಾಣದಲ್ಲಿ ವೇತನವನ್ನೂ ಇಸ್ರೋ ಸಂಸ್ಥೆಯಿಂದ ನಿರೀಕ್ಷಿಸಲಾಗುವುದಿಲ್ಲ. ಆದರೂ ಮುಂದಿನ ದಿನಗಳಲ್ಲಿ ಇಸ್ರೋ ಈ ಪ್ರತಿಷ್ಠಿತ ಮುಂಚೂಣಿ ಸಂಸ್ಥೆಗಳೊಡನೆ ಒಡಂಬಡಿಕೆ ಮಾಡಿಕೊಳ್ಳುವುದರ ಮೂಲಕ ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸುವುದು ಅತ್ಯವಶ್ಯ ಎಂದು ಹಿರಿಯ ವಿಜ್ಞಾನಿಗಳು ಅಬಿಪ್ರಾಯಪಡುತ್ತಾರೆ.
ಲಭ್ಯ ದತ್ತಾಂಶಗಳ ಅನುಸಾರ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ 4486 ತಾಂತ್ರಿಕ ಸಿಬ್ಬಂದಿಗಳ ಪೈಕಿ 43 ಐಐಟಿ/ಎನ್‌ಐಟಿ ಪದವೀಧರರಿದ್ದಾರೆ. ಅಹಮದಾಬಾದ್‌ನಲ್ಲಿರುವ ಬಾಹ್ಯಾಕಾಶ ಅನ್ವಯಿಕೆ ಕೇಂದ್ರ (Space Applications Centre) ನಲ್ಲಿ 1183 ಸಿಬ್ಬಂದಿಗಳ ಪೈಕಿ 144 ಎನ್‌ಐಟಿ/ಐಯಟಿ ಪದವೀಧರರಿದ್ದಾರೆ. ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ( National Remote Sensing Centre) ನಲ್ಲಿ 864 ತಾಂತ್ರಿಕ ಸಿಬ್ಬಂದಿಗಳ ಪೈಕಿ ಇಬ್ಬರು ಐಐಟಿ/ಎನ್‌ಐಟಿ ಪದವೀಧರರಿದ್ದಾರೆ. (ಟೈಮ್ಸ್ ಆಫ್ ಇಂಡಿಯಾ – 26 ಸೆಪ್ಟಂಬರ್ 2014). ಇದು ಹಳೆಯ ಸುದ್ದಿಯೇ ಆಗಿರಬಹುದಾದರೂ ಮೇಲೆ ಉಲ್ಲೇಖಿಸಲಾಗಿರುವ ಮಾಧವ ಮೆನನ್ ಅವರ ಮಾತುಗಳಲ್ಲಿಯೂ ಇದು ಧ್ವನಿಸುತ್ತದೆ.
ಐಐಟಿ/ಎನ್‌ಐಟಿ ಪದವೀಧರರು ಸಾಫ್ಟ್ ವೇರ್ ಉದ್ದಿಮೆಗಳಲ್ಲಿ, ತಂತ್ರಜ್ಞಾನದ ವಿದೇಶಿ ಕಾರ್ಪೋರೇಟ್ ಕಂಪನಿಗಳಲ್ಲಿ ಉನ್ನತ ಶ್ರೇಣಿ ಹಾಗೂ ಅತ್ಯುತ್ತಮ ವೇತನ ಶ್ರೇಣಿಯ ಹುದ್ದೆಗಳನ್ನು ಸಹಜವಾಗಿಯೇ ಆಶಿಸುತ್ತಾರೆ. ಏಕೆಂದರೆ ವಾಣಿಜ್ಯೀಕರಣಕ್ಕೊಳಗಾಗಿರುವ, ಕಾರ್ಪೋರೇಟ್ ಹಿಡಿತದಲ್ಲಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಈ ಸಂಸ್ಥೆಗಳಿಗೆ ಪ್ರವೇಶ ಪಡೆಯಲೆಂದೇ ಲಕ್ಷಾಂತರ ರೂಗಳಷ್ಟು ಖರ್ಚು ಮಾಡಿರುತ್ತಾರೆ. ತಮ್ಮ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಈ ಯುವ ವಿಜ್ಞಾನಿಗಳು ಭೌತಿಕವಾಗಿ ಐಷಾರಾಮಿ ಜೀವನವನ್ನೂ, ಮಾನಸಿಕವಾಗಿ ಚಂದ್ರಲೋಕವನ್ನೂ ಬಯಸುವುದು ಸಹಜವೇ ಆಗಿರುತ್ತದೆ. ಆದರೆ ಕೆಳಸ್ತರದ ಸಮಾಜದಿಂದ ಬರುವ, ಸಾಧಾರಣ ಕುಟುಂಬಗಳ ಹಿನ್ನೆಲೆಯ, ಗ್ರಾಮೀಣ ಭಾರತದಿಂದ ಬರುವ ಲಕ್ಷಾಂತರ ವಿಜ್ಞಾನ ಪದವೀಧರರಿಗೆ ಭೂಮಿಯ ಮೇಲೆ ತಮ್ಮ ಸರಳ ಬದುಕು ಕಟ್ಟಿಕೊಳ್ಳುವುದಷ್ಟೇ ಗುರಿಯಾಗಿರುತ್ತದೆ. ಇಂತಹ ವಿಜ್ಞಾನ ಪದವೀಧರರಲ್ಲಿ ಬಾಹ್ಯಾಕಾಶ ಸಂಶೋಧನೆ ಮತ್ತು ವಿಜ್ಞಾನದ ಬಗ್ಗೆ ಇರುವ ಉತ್ಸಾಹವೇ ಅವರನ್ನು ಇಸ್ರೋ ಮುಂತಾದ ಸಂಸ್ಥೆಗಳೆಡೆಗೆ ಸೆಳೆಯುತ್ತದೆ.
ವಿಜ್ಞಾನ ಮತ್ತು ನಂಬಿಕೆಗಳ ಮುಖಾಮುಖಿ
ಲ್ಯಾಂಡರ್ ವಿಕ್ರಂ ಚಂದ್ರನ ಮೇಲೆ ಇಳಿದ ಆ ಸಂಭ್ರಮದ ಕ್ಷಣದಲ್ಲಿ ಭಾವುಕತೆಯಿಂದ ಗಳಗಳನೆ ಅತ್ತು ಕಣ್ಣೀರುಗರೆದ ಇಸ್ರೋದ ನಿವೃತ್ತ ಅಧ್ಯಕ್ಷ ಕೆ ಶಿವನ್, ಚಂದ್ರಯಾನ-2ರ ಸಂದರ್ಭದಲ್ಲಿ ನಡೆದ ತಪ್ಪುಗಳ ಪುನರಾವರ್ತನೆಗೆ ಅವಕಾಶ ಕೊಡದೆ ಈ ಬಾರಿ ಯಶಸ್ಸು ಸಾಧಿಸುವ ಛಲದೊಂದಿಗೆ ಮುನ್ನಡೆದ ಇಸ್ರೋ ತಂಡವನ್ನು ಅಭಿನಂದಿಸಿದ್ದರು. ವಿಜ್ಞಾನಿಗಳಲ್ಲಿ ಈ ಆತ್ಮವಿಶ್ವಾಸ ಮೂಡುವುದು ತಮ್ಮ ವೈಜ್ಞಾನಿಕ ಅಧ್ಯಯನ, ಸಂಶೋಧನೆ, ಅನುಸರಿಸಿದ ವಿಧಾನಗಳು ಹಾಗೂ ಸಮಸ್ತ ಸಿಬ್ಬಂದಿಯ ಬುದ್ಧಿಶಕ್ತಿ, ಕ್ಷಮತೆ, ಕಾರ್ಯದಕ್ಷತೆ, ಪ್ರಾಮಾಣಿಕ ದುಡಿಮೆ ಹಾಗೂ ತಮ್ಮ ವೈಜ್ಞಾನಿಕ ನಡಿಗೆಯಲ್ಲಿರುವ ಗಟ್ಟಿಯಾದ ನಂಬಿಕೆ-ವಿಶ್ವಾಸದ ಮೂಲಕ. ಈ ಆತ್ಮವಿಶ್ವಾಸದ ಫಲವೇ ಚಂದ್ರಯಾನದ ಯಶಸ್ಸಿಗೆ ಮೂಲ ಕಾರಣ. ಸಾಂಪ್ರದಾಯಿಕ ಸಮಾಜದ ಒಳಗಿನಿಂದಲೇ ಹೊರಹೊಮ್ಮುವ ಈ ವಿಜ್ಞಾನದ ಪ್ರತಿಭೆಗಳಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಮೇಲುಗೈ ಸಾಧಿಸಬೇಕು ಎಂದು ಆಶಿಸುವುದು ಅಪರಾದವೇನಲ್ಲ.
ಈ ಹಿನ್ನೆಲೆಯಲ್ಲಿ ನೋಡಿದಾಗ ಭಾರತದ ಸಂದರ್ಭದಲ್ಲಿ ಕಾಣಬಹುದಾದ ಮತ್ತೊಂದು ವೈಶಿಷ್ಟ್ಯ ಅಥವಾ ವೈಚಾರಿಕತೆಯ ವಿಪರ್ಯಾಸ ಎಂದರೆ ಚಂದ್ರಯಾನ ಯಶಸ್ಸಿಗೆ ದೇಶಾದ್ಯಂತ ನಡೆದ ಪ್ರಾರ್ಥನೆಗಳು, ಪೂಜೆಗಳು, ಯಜ್ಞಯಾಗಗಳು ಇತ್ಯಾದಿ. ಸ್ವತಃ ಇಸ್ರೋ ಅಧ್ಯಕ್ಷ ಸೋಮನಾಥ್ ಅವರೇ ಉಡಾವಣೆಗೆ ಮುನ್ನ ತಿರುಪತಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಯಶಸ್ಸಿನ ನಂತರ ಮತ್ತೊಂದು ದೇವಾಲಯಕ್ಕೆ ತೆರಳಿ ಚಂದ್ರಯಾನದ ಯಶಸ್ಸನ್ನು ದೈವಶಕ್ತಿಗೆ ಅರ್ಪಿಸಿದ್ದರು. ವ್ಯಕ್ತಿಗತವಾಗಿ, ವೈಯ್ಯುಕ್ತಿಕ ನೆಲೆಯಲ್ಲಿ ಯಾವುದೇ ವ್ಯಕ್ತಿಗೆ ಈ ರೀತಿಯ ಶ್ರದ್ಧೆ ನಂಬಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇರುವುದಾದರೂ, ವಿಜ್ಞಾನಿಗಳು ತಮ್ಮ ವೈಜ್ಞಾನಿಕ ಬುದ್ಧಿಮತ್ತೆಯ ಕ್ರೋಢೀಕೃತ ಮಾನವ ಶ್ರಮದ ಮೂಲಕ ಮಾಡಿದ ಸಾಧನೆಯನ್ನು ಅತೀತ ಶಕ್ತಿಗಳಿಗೆ ಅರ್ಪಿಸುವುದು ಚರ್ಚಾರ್ಹವೇ ಆಗುತ್ತದೆ. ಆದರೆ ಭಾರತದ ಸಂದರ್ಭದಲ್ಲಿ ಇದು ಸಾಮಾನ್ಯವಾಗಿ ಸ್ವೀಕೃತ ವಿದ್ಯಮಾನವಾಗಿಬಿಟ್ಟಿದೆ.
ದೆಹಲಿಯ ಅಲ್ ಜಮಿಯಾತ್ ಉಲ್ ಇಸ್ಲಮಿಯಾ ಇಸ್ಲಾಹುಲ್ ಬಾನತ್ ಮದರಸಾದಲ್ಲಿ 150 ವಿದ್ಯಾರ್ಥಿನಿಯರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ದೆಹಲಿಯ ಸಂತನಗರದಲ್ಲಿ ವಿಶ್ವಹಿಂದೂ ಪರಿಷತ್ ಯಜ್ಞ ಆಯೋಜಿಸಿತ್ತು. ದೆಹಲಿಯ ಬಾಂಗ್ಲಾ ಸಾಹಿಬ್ ಗುರುದ್ವಾರದಲ್ಲಿ ವಿಶೇಷ ಪೂಜೆ ನಡೆದಿದೆ ವಾರಣಾಸಿಯ ನದಿತೀರದಲ್ಲಿ ನವಗ್ರಹ ಪೂಜೆ ನಡೆಸಲಾಗಿದೆ. ಅಲ್ಲಿ ಚಂದ್ರನಿಗೂ ಗ್ರಹದ ರೂಪದಲ್ಲಿ ಪೂಜೆ ಸಲ್ಲಿಕೆಯಾಗಿದೆ. ಅಲಿಘಡ್ ಮುಸ್ಲಿಂ ವಿದ್ಯಾರ್ಥಿಗಳು ಸರ್ ಸೈಯದ್ ಹೌಸ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಲಖನೌದಲ್ಲಿರುವ ದಾರುಲ್ ಉಲೂಮ್ ಫರಂಗಿ ಮಹಲ್ ಈದ್ಗಾದಲ್ಲಿ, ಪ್ರಯಾಗ್‌ರಾಜ್‌ನ ಮಠಗಳಲ್ಲಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅಮೆರಿಕದಲ್ಲಿರುವ ಭಾರತೀಯರೂ ಅಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಒಂದು ಗ್ರಹದ ರೂಪದಲ್ಲಿ ಇಂದಿಗೂ ತಾವು ಪೂಜಿಸುತ್ತಿರುವ ಚಂದ್ರನನ್ನು ಭಾರತ ವೈಜ್ಞಾನಿಕ ಸಂಶೋಧನೆ-ಅಧ್ಯಯನ ಹಾಗೂ ಶ್ರಮಶಕ್ತಿಯ ಮೂಲಕ ಆಕ್ರಮಿಸಿದ್ದು, ಅಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿ ಶಿವಶಕ್ತಿ ಎಂದು ನಾಮಕರಣವನ್ನೂ ಮಾಡಿದೆ. ಈ ವೈಜ್ಞಾನಿಕ ಸಾಧನೆಯ ಹಿಂದಿರುವ ಬೌದ್ಧಿಕ ಪರಿಶ್ರಮ ಮತ್ತು ಶ್ರಮಶಕ್ತಿಗೆ ಆಧುನಿಕ ವಿಜ್ಞಾನದ ಸಂಶೋಧನೆಗಳು, ಅಧ್ಯಯನಗಳು ಸೇತುವೆಯಂತೆ ನೆರವಾಗಿವೆ ಎಂಬ ವಾಸ್ತವವನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ವ್ಯಕ್ತಿಗತ ನಂಬಿಕೆ, ವೈಯುಕ್ತಿಕ ಧಾರ್ಮಿಕ ಶ್ರದ್ಧಾ ಭಕ್ತಿಗಳಿಗನುಸಾರವಾಗಿ ಚಂದ್ರಯಾನದ ಯಶಸ್ಸನ್ನು ಯಾವುದೇ ಅತೀತ ಶಕ್ತಿಗೆ ಅರ್ಪಿಸಿದರೂ ಅಂತಿಮವಾಗಿ ನಮ್ಮ ಗಮನ ನೆಡುವುದು ಇಸ್ರೋ ಎಂಬ ಬಾಹ್ಯಾಕಾಶ ಸಂಸ್ಥೆಯ ಅಂಗಳದಲ್ಲಿ, ಈ ಅಂಗಳದಲ್ಲಿ ಅರಳಿದ ಸಾಧಾರಣ ಪ್ರತಿಭೆಗಳ ಅಸಾಧಾರಣ ಹೂಗಳ ನಡುವೆ ಮತ್ತು ಈ ಅರಳಿದ ಕುಸುಮಗಳಲ್ಲಿರಬಹುದಾದ ವೈಜ್ಞಾನಿಕ ಶ್ರಮಶಕ್ತಿಯಲ್ಲಿ.
ಭಾರತದ ಬಾಹ್ಯಾಕಾಶ ಪಯಣಕ್ಕೆ ಚಂದ್ರಯಾನದ ಯಶಸ್ಸು ಚಾಲನೆ ನೀಡಿದೆ. ಈ ಚಾಲನೆಯ ಹಿಂದಿನ ಚಲನಶೀಲತೆಯನ್ನೂ, ಸಂಚಲನ ಶಕ್ತಿಯನ್ನೂ ಗುರುತಿಸುತ್ತಾ ಹಿಂತಿರುಗಿ ನೋಡಿದಾಗ ನಮಗೆ ಹೋಮಿ ಜೆ ಭಾಭಾ, ವಿಕ್ರಂ ಸಾರಾಭಾಯ್, ಜವಹರಲಾಲ್ ನೆಹರೂ, ಮಹಲನೋಬಿಸ್, ಅಬ್ದುಲ್ ಕಲಾಂ, ಸತೀಶ್ ಧವನ್, ಯು.ಆರ್. ರಾವ್ ಮುಂತಾದ ದಾರ್ಶನಿಕರು ಕಾಣುತ್ತಾರೆ. ದೂರಗಾಮಿ ದೃಷ್ಟಿಕೋನ ಹಾಗು ವಿಜ್ಞಾನ-ವೈಚಾರಿಕತೆಯ ಹಾದಿಯನ್ನು ಸಮ್ಮಿಳಿತಗೊಳಿಸುತ್ತಾ ಈ ಮಹನೀಯರು ನಿರ್ಮಿಸಿದ ವಿಜ್ಞಾನ ಪಥದಲ್ಲಿ ನಡೆದು ಭಾರತ ಇಂದು ಚಂದ್ರನ ಮೇಲೆ ಕಾಲಿರಿಸಿದೆ. ಲ್ಯಾಂಡರ್ ವಿಕ್ರಂ ಚುಂಬಿಸಿದ ಚಂದ್ರನ ಮೇಲ್ಮೈಯಲ್ಲಿರುವ ಸ್ಥಳವನ್ನು ಶಿವಶಕ್ತಿ ಎಂದು ಗುರುತಿಸಲಾಗಿದ್ದರೂ, ಈ ಪಯಣದ ಹಿಂದಿರುವುದು ಮಾನವನ ಶ್ರಮಶಕ್ತಿ ಮತ್ತು ಮನುಕುಲದ ವೈಜ್ಞಾನಿಕ ಶಕ್ತಿ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಭವಿಷ್ಯದ ಪೀಳಿಗೆಗೆ ಚಂದ್ರಯಾನದ ಯಶಸ್ಸನ್ನು ಬೋಧಿಸುವಾಗ ಈ ಒಂದು ಅಂಶವನ್ನು ನೆನಪಿನಲ್ಲಿಟ್ಟರೆ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿ ಉಸಿರಾಡುತ್ತಿರುವ ಸಾಂಪ್ರದಾಯಿಕತೆ, ಕರ್ಮಠತೆ ಹಾಗೂ ಮೌಢ್ಯಗಳನ್ನು ಹೋಗಲಾಡಿಸಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಹಾಗೂ ವಿಚಾರಶೀಲತೆಯನ್ನು ಮೂಡಿಸಲು ಸಾಧ್ಯವಾಗಬಹುದು. ತನ್ಮೂಲಕ ಆಧುನಿಕ ನಾಗರಿಕತೆಯಲ್ಲಿ ಅಲ್ಲಲ್ಲಿ ಕಾಣಲಾಗುತ್ತಿರುವ ಪ್ರಾಚೀನ ಮನಸ್ಥಿತಿಗಳನ್ನು, ಆಚರಣೆಗಳನ್ನು, ಅಭ್ಯಾಸಗಳನ್ನು ಹೋಗಲಾಡಿಸಿ ಮನುಜ ಸೂಕ್ಷ್ಮತೆ ಇರುವ, ಮಾನವ ಸಂವೇದನೆಯನ್ನು ಮೈಗೂಡಿಸಿಕೊಂಡ ಒಂದು ಸುಂದರ ಸಮಾಜವನ್ನು ನಿರ್ಮಿಸಲು ಸಾಧ್ಯ. ವೈಚಾರಿಕತೆ ಮತ್ತು ವಿಜ್ಞಾನದಲ್ಲಿ ವಿಶ್ವಾಸ ಇರುವ ಪ್ರತಿಯೊಬ್ಬ ವ್ಯಕ್ತಿಯ ಆದ್ಯತೆ ಇದೇ ಆಗಿರುವುದು ಅತ್ಯವಶ್ಯ.
(ಶ್ರಮಿಕರ ಬವಣೆ-ಸಮಸ್ಯೆಗಳ ನಡುವೆ ಕೈಗೂಡಿದ ಚಂದ್ರಯಾನ 3 ಮುಂದಿನ ಭಾಗದಲ್ಲಿ)
-ನಾ ದಿವಾಕರ