ಬೆಂಗಳೂರು: ಕೇಂದ್ರ ಸರ್ಕಾರದ ಗಮನ ಸೆಳೆಯಲು ಕೇವಲ ಬೆಂಗಳೂರು ಬಂದ್ ನಡೆಸಿದರೆ ಸಾಲದು. ಅಖಂಡ ಕರ್ನಾಟಕ ಸಂಪೂರ್ಣ ಸ್ತಬ್ಧವಾದರೆ ಮಾತ್ರ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದು. ಹೀಗಾಗಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ, ಸೆಪ್ಟೆಂಬರ್ 26 ರಂದು ಮಂಗಳವಾರ ಬಂದ್ ಮಾಡುವ ಬದಲು ದಿನಾಂಕ ಮುಂದೂಡುವ ಬಗ್ಗೆ ಚರ್ಚೆಯಾಗುತ್ತಿದೆ.
ಬೆಳಗ್ಗೆ 10 ಕ್ಕೆ ವಾಟಾಳ್ ನಾಗರಾಜ್ ಸಭೆ
ಬಂದ್ ಕುರಿತಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ಅವರ ಜೊತೆಗೆ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಶಿಕ್ಷಣ, ಹೋಟೆಲ್ ಉದ್ಯಮ, ಸಾರಿಗೆ, ಅಂಗಡಿ ಮುಂಗಟ್ಟುಗಳ ಸಂಘಟನೆಗಳ ವಿಶ್ವಾಸವನ್ನೂ ಪಡೆದುಕೊಳ್ಳಬೇಕಾಗುತ್ತದೆ. ಜೊತೆಗೆ ತಕ್ಷಣವೇ ಬಂದ್ ಮಾಡುವ ಬದಲು ಸೆಪ್ಟೆಂಬರ್ 27 ರಿಂದ 30 ರೊಳಗೆ ಒಂದು ದಿನವನ್ನು ನಿಗದಿಪಡಿಸುವ ಬಗ್ಗೆ ಚರ್ಚೆಯಾಗುತ್ತಿದೆ.