ಅನಕ್ಷರಸ್ಥರಿಗೆ ಅ, ಆ, ಇ, ಈ .. ಕನ್ನಡ ವರ್ಣ ಮಾಲೆಗಳನ್ನು ಕಲಿಸುವ ಮೂಲಕ ಅಕ್ಷರ ಕ್ರಾಂತಿಗೆ ಮುಂದಾಗಿದ್ದಾರೆ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು.
ಕಾಲೇಜಿನ ಪಾಠದ ಅವಧಿಯಲ್ಲಿ ಸಮಾಜ ಸೇವೆ ಎಂದರೆ ನಾವು ಇದ್ದ ಸ್ಥಳದಲ್ಲೇ ಮಾಡಲು ಲೆಕ್ಕವಿಲ್ಲದಷ್ಟು ಅವಕಾಶಗಳಿವೆ ಅವುಗಳನ್ನು ಗುರುತಿಸಿ ಮಾಡಬೇಕು ಎಂದು ಪ್ರಾದ್ಯಾಪಕರು ನೀಡಿದ್ದ ಸ್ಪೂರ್ತಿಯಿಂದ ಹಳ್ಳಿಗಳಲ್ಲಿ ಅಕ್ಷರ ಕಲಿಸಲು ರೆಂಜರ್ಸ್, ರೋವರ್ಸ್ ಘಟಕದ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಗ್ರಾಮದ ದೇವಸ್ಥಾನದ ಆವರಣದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಮನೆಯ ಅಂಗಳದ ಮುಂದೆ ಕುಳಿತಿರುವ ಅನಕ್ಷರಸ್ಥ ಗೃಹಣಿಯರಿಗೆ, ಹಿರಿಯರಿಗೆ, ರೈತರಿಗೆ, ಕೃಷಿ ಕಾರ್ಮಿಕರಿಗೆ ಹಾಗೂ ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗೆ ಅಕ್ಷರ ಜ್ಞಾನವನ್ನು ನೀಡುತ್ತಿದ್ದಾರೆ. ಆರಂಭದಲ್ಲಿ ಒಂದು ಕಡೆ ಸೇರಿಸಿ ತಿಳುವಳಿಕೆ ನೀಡುತ್ತಾರೆ ನಂತರ ಮೂಲಾಕ್ಷರ ಕಲಿಸುತ್ತಾರೆ. ಮುಂದುವರೆದು ಅವರಿಗೆ ಹೆಸರು, ಪೂರ್ಣ ಹೆಸರು, ಗ್ರಾಮದ ಹೆಸರು ಬರೆಯುವುದನ್ನು ರೂಢಿ ಮಾಡಿಸುತ್ತಾರೆ. ಅದೇ ರೀತಿ ಸಹಿ ಮಾಡುವುದನ್ನು ಸಹ ಕಲಿಸುತ್ತಿದ್ದಾರೆ. ಪದವಿ ಶಿಕ್ಷಣದ ಕಲಿಕೆಯ ಜೊತೆ ಸಾಮಾಜಿಕ ಕಾರ್ಯದಲ್ಲಿ ತೋಡಿಗಿರುವ ವಿದ್ಯಾರ್ಥಿಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೋಚಲಾಪುರ ಗ್ರಾಮದ ವಿದ್ಯಾರ್ಥಿಗಳಾದ ಹಸೀನಾ ಬೇಗಂ, ಅಲ್ತಾಫ್ ಬಂಕಾಪುರ, ಬಾನು ನದಾಫ್ ಇವರು ಇವರು ಕಾಲೇಜು ಬಿಟ್ಟ ನಂತರ ಹಾಗೂ ರಜಾ ದಿನಗಳಲ್ಲಿ ಪಾಠಿ, ಬಳಪ ಹಿಡಿದು ನಾಗರಿಕರ ಬಳಿಗೆ ಹೋಗುತ್ತಾರೆ. ಬೇಸಿಗೆ ಎಂದು ಮಧ್ಯಾಹ್ನದ ವೇಳೆ ದೇವಸ್ಥಾನದ ಆವರಣದಲ್ಲಿ ಹಾಗೂ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅನಕ್ಷರಸ್ಥರನ್ನು ಎಬ್ಬಿಸಿ ಅವರ ಬೆರಳು ಹಿಡಿದು ಅಕ್ಷರ ತಿದ್ದಿಸುತ್ತಿದ್ದಾರೆ.
ನಮಗೆ ಗ್ರಾಮದ ಜನರು ಸಹಕಾರ ನೀಡುತ್ತಿದ್ದು ನಮ್ಮ ಆಸಕ್ತಿಗೆ ಬೆನ್ನು ತಟ್ಟುತ್ತಿದ್ದಾರೆ. ಅಷ್ಟೇ ಅಲ್ಲದೆ ಶಿಕ್ಷಕರಿಗೆ ನೀಡುವ ಹಾಗೆ ನಮಗೂ ಗೌರವ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್, ಎಟಿಎಂ ಸೇರಿದಂತೆ ಖಾಸಗಿ ಹಾಗೂ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅಕ್ಷರ ಜ್ಞಾನ ಅವಶ್ಯಕವಾಗಿದೆ. ಹೆಬ್ಬಟ್ಟು ಸಹಿ ಬಾಳಿಗೆ ಕಹಿ ಎಂದು ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಉಳಿದ ವಿದ್ಯಾರ್ಥಿಗಳನ್ನು ಪ್ರೇರೆಪಿಸಿ ಈ ಅಕ್ಷರ ಕಾರ್ಯಕ್ರಮವನ್ನು ಎಲ್ಲಾ ಗ್ರಾಮಗಳಿಗೆ ವಿಸ್ತರಿಸಲಿದ್ದೇವೆ ಎಂದು ರೆಂಜರ್ಸ್ ಮತ್ತು ರೋವರ್ಸ್ ಮಾರ್ಗದರ್ಶಕರಾದ ಅನಿಲಕುಮಾರ ಹಾಗೂ ಡಾ. ನಸರಿನ್ಬಾನು ತಿಳಿಸಿದರು.
ಸಮಾಜಕ್ಕಾಗಿ ಮೀಸಲಾಗಿರಲಿ ಎಂದು ಮಕ್ಕಳಿಗೆ ಹೇಳಿದ ಪಾಠ ಅಕ್ಷರ ಕ್ರಾಂತಿಗೆ ಸಾಕ್ಷಿಯಾಗಿದೆ- ಡಾ. ಜಗದೀಶ ಹುಲ್ಲೂರ, ಪ್ರಾಂಶುಪಾಲ