ಕರೋನಾ ಮಹಾಮಾರಿ ಬಲಿತೆಗೆದುಕೊಂಡ ಲಕ್ಷಾಂತರ ಜನರ ಸಂಖ್ಯೆ ಎಷ್ಟು ?
ಹೀಗೆಂದು ಲೆಕ್ಕ ಕೇಳಿದರೆ ತಕ್ಷಣವೇ ನೀವು ಗೂಗಲ್ ಮಾಡಿ, ಕೋವಿಡ್ 19 ನಿಂದ ಈವರೆಗೆ ಸತ್ತವರು ಇಷ್ಟು ಲಕ್ಷ ಮಂದಿ, ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದವರು ಇಷ್ಟು ಕೋಟಿ ಎಂದು ಫಕ್ಕನೆ ಹೇಳಿಬಿಡುತ್ತೀರಿ.ಕೋವಿಡ್ 19 ಎಂಬ ಕಣ್ಣಿಗೆ ಕಾಣದ ಸೂಕ್ಷ್ಮ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರ ಸಂಖ್ಯೆ ಎಷ್ಟು? ಎಂದು ಯಾರಾದರೂ ಕೇಳಿದರೆ, ನೀವು ಎಷ್ಟು ಗೂಗಲ್ ಮಾಡಿದರೂ ಉತ್ತರ ಸಿಗುವುದಿಲ್ಲ. ಏಕೆಂದರೆ ತ್ಯಾಗದ ಕತೆಗಳ ಅಂಕಿ ಸಂಖ್ಯೆಗಳನ್ನು ಯಾರೂ ಇಟ್ಟುಕೊಳ್ಳುವುದಿಲ್ಲ.
ಯಾವುದೇ ಪತ್ರಿಕೆ, ಟಿವಿಗಳಿರಲಿ, ಇತಿಹಾಸದ ಪುಟಗಳಲ್ಲೂ ತ್ಯಾಗದ ಕತೆಗಳು ದಾಖಲಾಗುವುದು ಬಹಳ ಕಡಿಮೆ.ಕರೋನಾ ಮೊದಲ ಅಲೆಯನ್ನು ನಾವು ಯಶಸ್ವಿಯಾಗಿ ಗೆದ್ದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೆಮ್ಮೆಯಿಂದ ಘೋಷಿಸಿದ್ದರು. ಆದರೆ ಅದರ ಹಿಂದೆ ಕೋಟ್ಯಂತರ ಮಂದಿ ಫ್ರಂಟ್ ಲೈನ್ ವರ್ಕರ್ ಗಳೆಂಬ ಕೋವಿಡ್ ಯೋಧರ ತ್ಯಾಗಗಳ ಕತೆಯಿದೆ. ಕೋಟ್ಯಂತರ ಮಂದಿ ಕೋವಿಡ್ ಸೋಂಕಿತರಾಗಿ ಆತಂಕದಿಂದ ಆಸ್ಪತ್ರೆಗೆ ಹೋದವರು ನಗುಮೊಗದಿಂದ ಮರಳುವ ಹಿಂದೆ, ಆಯಾ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ವೈದ್ಯರು, ನರ್ಸ್‍ಗಳು, ವೈದ್ಯ ಸಿಬ್ಬಂದಿಗಳ ನೋವಿನ, ತ್ಯಾಗದ ಕತೆಗಳಿವೆ. ಕರೋನಾ ಲಾಕ್ಡೌನ್ ಯಶಸ್ವಿಗೊಳಿಸಲು ತಮ್ಮ ಜೀವವನ್ನೇ ಪಣವಾಗಿಟ್ಟ ಪೊಲೀಸ್ಸಿಬ್ಬಂದಿಗಳ, ಪತ್ರಕರ್ತರ ಪಾತ್ರವೂ ಇದೆ.
ಒಂದೂವರೆ ವರ್ಷದ ತಪಸ್ಸು
2020ರ ಹೊಸ ವರ್ಷದ ಮೊದಲ ದಿನದಂದೇ ಭಾರತದಲ್ಲಿ ಕೊರೋನಾ ಪಿಡುಗಿನ ಆರಂಭದ ಹೆಜ್ಜೆಗಳು ಕಾಣಿಸಿಕೊಂಡವು. ಅದಕ್ಕಿಂತ ಒಂದೆರೆಡು ತಿಂಗಳ ಮೊದಲೇ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕರೋನಾ ಕಾಣಿಸಿಕೊಂಡಾಗ ವಿಚಿತ್ರ ವೈರಸ್ನಿಂದ ಜನ ಸಾಯುತ್ತಿರುವುದನ್ನು ಮೊದಲ ಬಾರಿಗೆ ಪತ್ತೆಹಚ್ಚಿದ್ದ ವೈದ್ಯನೂ ಕೆಲವೇ ದಿನಗಳಲ್ಲಿ ರೋಗಿಗಳ ಜತೆಗೆ ಮೃತಪಟ್ಟಾಗಲೇ ವೈದ್ಯ ಸಿಬ್ಬಂದಿಯ ಪ್ರಾಣ ತ್ಯಾಗದ ಕತೆ ಶುರುವಾಗಿತ್ತು.
ಅಲ್ಲಿಂದಾಚೆಗೆ ಜಗತ್ತಿನಲ್ಲಿ ಸಾವಿರಾರು ವೈದ್ಯರು, ನರ್ಸ್ ಗಳು, ಆಸ್ಪತ್ರೆ ಸಹಾಯಕ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು ರೋಗಿಗಳ ಸೇವೆ ಮಾಡುತ್ತಲೇ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ಸುಮ್ಮನೆ ಯೋಚಿಸಿ, ಕಳೆದ ವರ್ಷ ಮಾರ್ಚ್ ನಲ್ಲಿ ಜನತಾ ಕರ್ಫ್ಯೂ ಶುರುವಾದ ನಂತರ ಕೊರೋನಾ ಎಂಬುದು ಯಾವ ಪರಿ ಬೆದರಿಸಿತ್ತೆಂದರೆ, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಪಿಪಿಇ ಕಿಟ್ ಎಂಬ ಪ್ಲಾಸ್ಟಿಕ್ ನಂಥ ಪೋಷಾಕಿನಡಿ ದಿನಗಳೆಯಲು (ಈಗ ವರ್ಷಗಳೇ ಆಗಿವೆ) ಆರಂಭಿಸಿದರು. ಆಗೆಲ್ಲ ಕೋವಿಡ್ 19 ಹೇಗೆ ಹರಡುತ್ತದೆ? ಏನು ಮುಂಜಾಗ್ರತೆ ವಹಿಸಬೇಕು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಎಲ್ಲವೂ “ಟ್ರಯಲ್ ಅಂಡ್ ಎರರ್” ಅಂದರೆ “ತಪ್ಪು ಮಾಡಿ ಸರಿಪಡಿಸಿಕೊಳ್ಳುವ” ಸನ್ನಿವೇಶವಿತ್ತು. ಮತ್ತು ತಪ್ಪಿನ ಬೆಲೆ ಪ್ರಾಣ ಮಾತ್ರ ಎಂಬಂಥ ಸ್ಥಿತಿ ಇತ್ತು. ಆಗೆಲ್ಲ ಕರೋನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ನರ್ಸ್ ಗಳು, ಆಸ್ಪತ್ರೆ ಸಿಬ್ಬಂದಿ ಇರಲಿ, ಆಂಬ್ಯುಲೆನ್ಸ್ ಚಾಲಕ ಕೂಡ ಕೇವಲ ಒಂದೆರಡು ಕಿಲೋಮೀಟರ್ ದೂರದಲ್ಲಿ ಮನೆ ಇದ್ದರೂ ತಿಂಗಳುಗಟ್ಟಲೆ ಹೋಗುವ ಸ್ಥಿತಿ ಇರಲಿಲ್ಲ. ಯೋಚಿಸಿ ಅವರೆಂಥಾ ತ್ಯಾಗ ಮಾಡಿದ್ದರು..!
ಆಗೆಲ್ಲ ಕರೋನಾದಿಂದ ಮೃತಪಟ್ಟವರ ಮುಖ ಕೂಡ ನೋಡುವಂತಿರಲಿಲ್ಲ. (ಅವರ ಮನೆಮಂದಿಯ ತ್ಯಾಗ ನೆನಪಿಸಿ) ನೇರವಾಗಿ ಆಸ್ಪತ್ರೆಯಿಂದ ಸ್ಮಶಾನಕ್ಕೆ ಹೆಣ ಸಾಗಿಸಲಾಗುತ್ತಿತ್ತು. ಆಸ್ಪತ್ರೆಗೆ ಹೋಗುವಾಗ ಕೋವಿಡ್ ಸೋಂಕಿತನನ್ನು ನೋಡಿದ್ದೇ ಕೊನೆಯ ದೃಶ್ಯವಾದೀತು ಎಂಬ ಆತಂಕ ಪ್ರತಿ ಕರೋನಾ ಪೀಡಿತರ ಮನೆಮಂದಿಯಲ್ಲಿತ್ತು. ಅಂಥ ಸನ್ನಿವೇಶದಲ್ಲೂ ಜೀವದ ಹಂಗು ತೊರೆದು ಉಳಿದವರ ಪ್ರಾಣ ಕಾಪಾಡಿದವರು ವೈದ್ಯರು, ನರ್ಸ್ ಗಳು ಮತ್ತು ವೈದ್ಯ ಸಿಬ್ಬಂದಿ.
ಮನೆಯಲ್ಲಿ ಆಗ ತಾನೇ ಮದುವೆಯಾದ ಪತಿ/ ಪತ್ನಿ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸಂಗಾತಿ ಮತ್ತು ಸಣ್ಣ ಸಣ್ಣ ಮುದ್ದು ಮಕ್ಕಳು, ಮನೆಯಲ್ಲಿ ಕಾಯುತ್ತಿರುವ ವಯಸ್ಸಾದ ಅಪ್ಪ, ಅಮ್ಮ ಎಲ್ಲರನ್ನೂ ದೂರವಿಟ್ಟು, ಪ್ರಾಣವನ್ನೇ ರಿಸ್ಕ್ ನಲ್ಲಿಟ್ಟು ದುಡಿದ ಅವರೆಲ್ಲರ ತ್ಯಾಗ ಹೇಗೆ ತಾನೇ ಮರೆಯಲು ಸಾಧ್ಯ. ಹಾಗಂತ ಅವರ ಕೆಲಸ ಈಗಲೂ ಮುಗಿದಿಲ್ಲ. ನಿರಂತರವಾಗಿ ಒಂದೂವರೆ ವರ್ಷದಿಂದ ಅವರ ತ್ಯಾಗಗಳ ಕತೆ ಮುಂದುವರಿದೇ ಇದೆ. ಕರೋನಾ ಸಂಪೂರ್ಣವಾಗಿ ನಿರ್ನಾಮವಾಗುವವರೆಗೂ ಅವರ ಹೋರಾಟ, ತ್ಯಾಗಗಳ ಕತೆ ಮುಂದುವರಿಯಲಿದೆ.
ಕರೋನಾ ಎಂಬ ಮಹಾ ಪರೀಕ್ಷೆ
ಅದೇ ಕಾರಣಕ್ಕೆ ಹೇಳುವುದು. ಕೊರೋನಾ ಒಂದು ರೋಗ ಮಾತ್ರ ಅಲ್ಲ. ಅದೊಂದು ಮಹಾ ಪರೀಕ್ಷೆ. ಹೀಗಂದರೆ ನಿಮಗೆ ಆಶ್ಚರ್ಯವಾಗಬಹುದು. ದುರಂತಗಳು ಮನುಷ್ಯರನ್ನು ಪರೀಕ್ಷೆಗಳಿಗೆ ಒಳಪಡಿಸುತ್ತದೆ. ಮನುಷ್ಯತ್ವವನ್ನು ಒರೆಗೆ ಹಚ್ಚುತ್ತದೆ. ಕೋವಿಡ್ 19 ನ ಎರಡನೇ ಅಲೆಯು ಮೊದಲಿನದ್ದಕ್ಕಿಂತ ಘಾತಕವಾಗಿದ್ದು, ಯುವಕರು, ಮಧ್ಯವಯಸ್ಕರನ್ನೇ ಟಾರ್ಗೆಟ್ ಮಾಡುತ್ತಿದೆ.
ಸಹಜವಾಗಿಯೇ ಇದರಿಂದ ಆಸ್ಪತ್ರೆಗಳಲ್ಲಿ ಮೊದಲನೆಯ ಅಲೆಗಿಂತಲೂ ಹೆಚ್ಚಿನ ಜನದಟ್ಟಣೆ
ಕಾಣಿಸಲಾರಂಭಿಸಿದೆ. ವೆಂಟಿಲೇಟರ್ ಗಳು, ಐಸಿಯುಗಳು ಹಾಗಿರಲಿ ಆಸ್ಪತ್ರೆಗಳಲ್ಲಿರುವ ಜನರಲ್ ಬೆಡ್ ಗಳೂ ಸಾಕಾಗುತ್ತಿಲ್ಲ. ಇನ್ನು ರೆಮಿಡಿಸಿವರ್ ನಂಥ ಔಷಧಗಳು, ಆಮ್ಲಜನಕ ಸಿಲಿಂಡರ್ಗಳ ಕೊರತೆ ಪ್ರಾಣವನ್ನೇ ಪಣಕ್ಕಿಡುವಂತೆ ಮಾಡುತ್ತಿದೆ.
ಇದೆಲ್ಲದರ ನಡುವೆ “ಬೆಡ್ ಹಗರಣ”ಗಳ ಮೂಲಕ ಪಿಡುಗಿನ ಸಂದರ್ಭದಲ್ಲೂ ದುಡ್ಡು ಪೀಕುವ ದುಷ್ಟ ಮನಸ್ಸುಗಳು ವ್ಯವಸ್ಥೆಯನ್ನು ಇನ್ನಷ್ಟು ಅದ್ವಾನ ಮಾಡುತ್ತಿವೆ. ಅಸಲಿಗೆ, ಮಾನವೀಯತೆಯ ನಿಜವಾದ ಪರೀಕ್ಷೆ ನಡೆಯುವುದು ಇಂಥ ಸಂದರ್ಭದಲ್ಲೇ. ಮಾಧ್ಯಮಗಳಲ್ಲಿ ಬರುತ್ತಿರುವ ಇಂಥ ಅಸಹ್ಯಕರ ಕತೆಗಳನ್ನು ಕಂಡಾಗ ಅದರಲ್ಲಿ ಭಾಗಿಯಾದವರನ್ನು ಕಂಡಾಗ ಜನರಿಗೆ ಅಸಹ್ಯವಾಗುತ್ತಿದೆ.
ಕಿರಿಯ ವಯಸ್ಸಿನ ರೋಗಿಗಾಗಿ ಪ್ರಾಣ ತ್ಯಾಗ
ಕೋವಿಡ್ ಸೋಂಕಿಗೆ ಒಳಗಾದ 40 ವರ್ಷದ ತನ್ನ ಪತಿಗಾಗಿ ಬೆಡ್ ಸಿಗದೆ ಪತ್ನಿಯು ಕೈಮುಗಿದು ಅಂಗಾಲಾಚುತ್ತಿರುವ ದೃಶ್ಯದಿಂದ ಮನಸ್ಸು ಕಲ್ಲವಿಲ್ಲಗೊಂಡಾಗ ನಾರಾಯಣ್ ದಾಭಾಲ್ಕರ್ ಎಂಬ 85 ವರ್ಷದ ವೃದ್ಧ ತಾವು ಸ್ವತಃ ಕರೋನಾದಿಂದ ನರಳುತ್ತಿದ್ದರೂ ತಮ್ಮ ಬೆಡ್ ಅನ್ನೇ ಆತನಿಗೆ ಬಿಟ್ಟುಕೊಡಲು ನಿರ್ಧರಿಸಿದರು. “ಬೇಡ, ಬೇಡ ನೀವು ವಯಸ್ಸದವರು. ನಿಮ್ಮ ಪ್ರಾಣವನ್ನೇ ರಿಸ್ಕ್ ಗೆ ಹಾಕುತ್ತೀದ್ದೀರಿ” ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದಾಗ,“ಅಯ್ಯೋ ಬಿಡ್ರೀ, ನನಗೆ ಈಗ 85 ವರ್ಷ. ಜೀವನವನ್ನು ಸಾಕಷ್ಟು ನೋಡಿದ್ದೀನಿ, ಅನುಭವಿಸಿದ್ದೀನಿ. ಆ ಯುವಕನನ್ನು ನೋಡಿ. ಆತ ಬಾಳಬೇಕಾದವನು. ಆತನಿಗೇನಾದರೂ ಆದರೆ ಪತ್ನಿ, ಮಕ್ಕಳು ಅನಾಥರಾಗುತ್ತಾರೆ. ನನಗೇನಿದೆ? ಆತನ ಪ್ರಾಣ ಕಾಪಾಡುವುದು ನನ್ನ ಕರ್ತವ್ಯ” ಎಂದು ಉತ್ತರಿಸಿದರು ನಾರಾಯಣ್ ದಾಭಾಲ್ಕರ್. ಕೂಡಲೇ ಸ್ವಯಂಪ್ರೇರಿತವಾಗಿ ತನ್ನ ಬೆಡ್ ಅನ್ನು ಆತನಿಗೆ ನೀಡಿ, ವೈದ್ಯರ ಒತ್ತಾಯಕ್ಕೂ ಮಣಿಯದೆ ಆಸ್ಪತ್ರೆಯ ಬಿಲ್ ಕಟ್ಟಿಮನೆಗೆ ಹಿಂತಿರುಗಿದರು. ಮತ್ತು ಮೂರು ದಿನಗಳ ನಂತರ ಕೊರೋನಾ ಉಲ್ಬಣಗೊಂಡು ಮನೆಯಲ್ಲೆ ಮೃತಪಟ್ಟರು.
ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ , ನಾರಾಯಣ್ ದಾಭಾಲ್ಕರ್ ಅವರ ತ್ಯಾಗದ ಕತೆಯನ್ನು ಟ್ವೀಟ್ ಮಾಡಿ, ಅವರೊಬ್ಬ ಆರೆಸ್ಸೆಸ್ ಕಾರ್ಯಕರ್ತರು ಎಂದು ಮೈಲೇಜ್ ತೆಗೆದುಕೊಂಡಿದ್ದು ಬೇರೆ ಮಾತು.
ಅಗತ್ಯವಿರುವವರಿಗೆ ಬೆಡ್ ನೀಡಿ ಎಂದ ರಾಜೀವ್ ಧವನ್
ಕೋವಿಡ್ ಪಾಸಿಟಿವ್ ದೃಢಪಟ್ಟು ಆಸ್ಪತ್ರೆಗೆ ದಾಖಲಾದ ಮೇಲೆ ಚಿಕಿತ್ಸೆ ಪಡೆಯುತ್ತಿತ್ತು ಆ ಹಿರಿ ಜೀವ. ತನಗಿಂತಲೂ ಅಗತ್ಯವಿರುವವರಿಗೆ ಬೆಡ್ ಸಿಗುತ್ತಿಲ್ಲ ಎಂಬುದನ್ನು ಕಂಡುಕೊಂಡ ಭಾರತದ ಖ್ಯಾತ, ಹಿರಿಯ ವಕೀಲರಾಗಿರುವ ರಾಜೀವ್ ಧವನ್ ಅವರಿಗೆ ತಡೆಯಲಾಗಲಿಲ್ಲ. ತನಗಿಂತಲೂ ಅಗತ್ಯವಿರುವವರಿಗೆ ಸಿಗಬೇಕಾದ ಆಸ್ಪತ್ರೆಯ ಈ ಬೆಡ್ ನಲ್ಲಿ ತಾನು ಇರುವುದು ಸರಿಯಲ್ಲ ಎಂಬ ಅವರ ಆತ್ಮಸಾಕ್ಷಿಯ ಮಾತು ಕೇಳಿ ನಾಲ್ಕು ದಿನಗಳಿಂದ ಇದ್ದ ಆಸ್ಪತ್ರೆಯಿಂದ ಸ್ವಯಂ ಡಿಸ್ ಚಾರ್ಜ್ ಮಾಡಿಸಿಕೊಂಡು ಮನೆಗೆ ಹಿಂತಿರುಗಿದ್ದಾರೆ ರಾಜೀವ್ ಧವನ್. ಎಲ್ಲಕ್ಕಿಂತ ಹೆಚ್ಚಾಗಿ ರಾಜೀವ್ ಧವನ್ ಅವರು ಡಯಾಬಿಟಿಕ್ ಆಗಿದ್ದರೂ ಈ ತ್ಯಾಗಮಾಡಿದ್ದಾರೆ.
“ನನಗಿಂತಲೂ ಕೊರೋನಾ ಪೀಡಿತ ಯುವಕರಿಗೆ ಆಸ್ಪತ್ರೆ ಬೆಡ್ನ ಅವಶ್ಯಕತೆ ತುಂಬ ಇದೆ” ಎಂಬುದು ಅವರ ಮಾತು.
ಲಕ್ಷಾಂತರ ಜನರ ತ್ಯಾಗದ ಪರಿಣಾಮ
ಕರೋನಾ ವಿರುದ್ಧದ ಹೋರಾಟ ದೇಶದ ಲಕ್ಷಾಂತರ ಜನರ ತ್ಯಾಗದ ಕತೆಯಾಗಿದೆ. ಕೆಲಸವಿಲ್ಲದೆ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯಲ್ಲೂ ಕಾನೂನಿಗೆ ಭಂಗ ತರದೆ ಬದುಕುತ್ತಿರುವ ಕೋಟ್ಯಂತರ ಮಂದಿಯ ತ್ಯಾಗವೇನೂ ಸಣ್ಣದಲ್ಲ. ಬಡವರ ಮನೆಮನೆಯಲ್ಲೂ ಉಳಿದವರಿಗೆ ಒಂದು ಹೊತ್ತಿನ, ಎರಡು ಹೊತ್ತಿನ ಊಟವನ್ನೇ ತ್ಯಾಗಮಾಡುತ್ತಿರುವ ಕತೆಗಳು ಯಾರಿಗೂ ಕಾಣಿಸುವುದಿಲ್ಲ. ಯಾರೂ ಕೋವಿಡ್ ಪೀಡಿತರ ಶವವನ್ನು ಮುಟ್ಟಲಾಗದ ಪರಿಸ್ಥಿತಿ ಇದ್ದಾಗಿನಿಂದ ಹಿಡಿದು ಈವರೆಗೂ ನಿರಂತರವಾಗಿ ಶವಗಳನ್ನು ಕರೋನಾ ಪೀಡಿತರನ್ನು ಆಸ್ಪತ್ರೆಗೆ ಒಯ್ಯುವ, ಅವರಲ್ಲಿ ಅನೇಕರ ಮೃತರಾದಾಗ ಅವರ ಶವವನ್ನು ಒಯ್ಯುವ ಆಂಬ್ಯುಲೆನ್ಸ್ ಚಾಲಕರ ತ್ಯಾಗಗಳ ಕತೆಗಳನ್ನು ಯಾರು ಹೇಳುತ್ತಾರೆ? ಅಷ್ಟೇಕೆ ಕರೋನಾದ ಅಸ್ಪೃಶ್ಯತೆಯ ಕಾಲದಿಂದ ಈವರೆಗೂ ಶವಸಂಸ್ಕಾರ ಪ್ರಕ್ರಿಯೆಗಳಲ್ಲಿ ಭಾಗಿಯಾಗುತ್ತಿರುವವರ ತ್ಯಾಗಗಳ ಕತೆಗಳು ಎಲ್ಲೂ ದಾಖಲಾಗುವುದಿಲ್ಲ.
ನಾರಾಯಣ್ ದಾಭಾಲ್ಕರ್, ರಾಜೀವ್ ಧವನ್ ಅವರಂತೆ ಉಳಿದವರಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿರುವ ಅದೆಷ್ಟೋ ಪ್ರಕರಣಗಳು ಮಾಧ್ಯಮದ ಮುಂದೆ ಬೆಳಕಿಗೆ ಬರದೆ ಕತ್ತಲಲ್ಲಿ ಕರಗುತ್ತಿವೆಯೋ ಯಾರು ಬಲ್ಲರು? ಬಹುಶಃ ಅವೆಲ್ಲವೂ ಯಾವತ್ತೂ ಬೆಳಕಿಗೆ ಬರುವುದಿಲ್ಲ..!