ತುರ್ತು ಸಂದರ್ಭದಲ್ಲಿ ಆಕ್ಸಿಜನ್ ಪಡೆಯಲು ನಾವು ದೆಹಲಿ ಮರ್ಜಿಗೆ ಕಾಯಬೇಕೆ?

ಸುಪ್ರೀ ಕೋರ್ಟು ಕರ್ನಾಟಕ ರಾಜ್ಯದ ಆಮ್ಲಜನಕದ ಬೇಡಿಕೆಯ ವಿಚಾರದಲ್ಲಿ ಹೈಕೋರ್ಟಿನ ತೀರ್ಮಾನವನ್ನು ಎತ್ತಿಹಿಡಿದಿದೆ. ಈಗ ಕೊರೋನಾ ವಿಪತ್ತು ಕೈಮೀರಿ ಹೋಗುತ್ತಿರುವ ಸಂದರ್ಭದಲ್ಲಿ ಹೈ ಕೋರ್ಟುಗಳು ಸಕ್ರಿಯವಾಗಿ ನಿರ್ದೇಶನ ನೀಡತೊಡಗಿವೆ. ಇದೀಗ ಸುಪ್ರೀಂ ಕೋರ್ಟ್ ಕೂಡಾ ಆಡಳಿತಾತ್ಮಕ ವಿಚಾರಗಳಲ್ಲಿ ದಿಟ್ಟ ನಿಲುವು ತಾಳುತ್ತಿದೆ.

ಇಲ್ಲೀಗ ಮುಖ್ಯ ಪ್ರಶ್ನೆಯೆಂದರೆ ರಾಜ್ಯಗಳು ದೆಹಲಿ ಸರ್ಕಾರದ ಮುಂದೆ ಬೇಡುವ ಸಂದರ್ಭ ಯಾಕೆ ಬರುತ್ತದೆ? ಇಂದಿನ ಅತಿ ತುರ್ತಿನ ಸಂದರ್ಭದಲ್ಲಿ ಕೂಡಾ ರಾಜ್ಯ ಸರ್ಕಾರಗಳು ತನಗೆ ಬೇಕಾದ ಆಮ್ಲಜನಕವನ್ನು ಪಡೆಯಲು ಕೂಡಾ ದೆಹಲಿಯ ಮರ್ಜಿಗೆ ಕಾಯಬೇಕೇ? ಇದಕ್ಕೂ ನ್ಯಾಯಾಲಯಗಳ ಮದ್ಯ ಪ್ರವೇಶ ಬೇಕೇ? ಇದು ಇದೊಂದೇ ಸಂದರ್ಭದಲ್ಲಿ ಮಾತ್ರ ನಡೆಯುತ್ತಿರುವ ವಿದ್ಯಮಾನವಲ್ಲ.

ಇಲ್ಲೊಂದು ಪ್ರಶ್ನೆ ಮೂಡಬಹುದು ರಾಜ್ಯಗಳು ಬೇರೆ ರಾಜ್ಯಗಳೊಡನೆ ಸಹರಿಸಲು ನಿರಾಕರಿಸಿದರೆ ? ಹೌದು ಅದಕ್ಕೆಂದೇ ರಾಜ್ಯಗಳನಡುವೆ ಸಹಕಾರಕ್ಕಾಗಿಯೇ ಈಗಲೂ ಸಮನ್ವಯ ಸಮಿತಿ ಇದೆ. ಅದೇ ತೀರ್ಮಾನಗಳನ್ನು ಮಾಡಬೇಕು. ಅದು ಈಗ ನಾಮಕಾವಸ್ಥೆಯಾಗಿದೆ. ಅಲ್ಲಿ ಸಾದ್ಯವಾಗದ್ದು ಮಾತ್ರ ಒಕ್ಕೂಟ ಸರ್ಕಾರದ ಮುಂದೆ ಬರಬೇಕು.

ಇದಕ್ಕೆ ಕಾರಣ ಎಲ್ಲ ಅಧಿಕಾರವೂ ದೆಹಲಿಯಲ್ಲಿ ಕೇಂದ್ರಿಕೃತವಾಗಿರುವುದು. ಇದು ಈಗ ಪ್ರಾರಂಭವಾದದಲ್ಲ ನಿಜ ಹಿಂದಿನ ಸರ್ಕಾರಗಳೂ ಸತತವಾಗಿ ಅಧಿಕಾರವನ್ನು ದೆಹಲಿಯಲ್ಲಿ ಕೇಂದ್ರೀಕರಿಸಲು ಉತ್ಸಾಹ ತೋರಿದ್ದವು. ದೆಹಲಿಯಲ್ಲಿ ಏಕ ಪಕ್ಷದ ಅಧಿಕಾರವಿದ್ದಾಗ ಇದು ಅವ್ಯಾಹತವಾಗಿ ನಡೆದಿದೆ. ರಾಜೀವ್ ಗಾಂಧಿ ಒಬ್ಬರು ಮಾತ್ರ ಅತ್ಯಧಿಕ ಬಹುಮತವಿದ್ದಾಗಲೂ ಸ್ವಲ್ಪ ಮಟ್ಟಿಗೆ ವಿಕೇಂದ್ರೀಕರಣದ ಪ್ರಯತ್ನ ಮಾಡಿದ್ದರು. ಆದರೆ ಸಮ್ಮಿಶ್ರ ಸರ್ಕಾರಗಳು ಇದ್ದಾಗಲೆಲ್ಲ ಸಹಜವಾಗಿಯೇ ಇದಕ್ಕೆ ತಡೆಯಾಗುತ್ತದೆ.

ನಮ್ಮಲ್ಲಿರುವುದು ಕೇಂದ್ರ ಸರ್ಕಾರವಲ್ಲ ಅದು ಒಕ್ಕೂಟ ಸರ್ಕಾರ. ನಮ್ಮ ಸಂವಿಧಾನವೇ ಅದನ್ನು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ಎಂಬ ಪದವೇ ಕೇಂದ್ರೀಕರಣದ ಪರವಾಗಿ ಇರುವ ಮನಸ್ಥಿತಿಯನ್ನು ತೋರುತ್ತದೆ. ಹಾಗಾಗಿ ಒಕ್ಕೂಟ ಸರ್ಕಾರ ಎನ್ನುವುದೇ ಸರಿಯಾದದ್ದು. ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿಗಳು ಈ ವಿಚಾರವನ್ನು ಪ್ರಧಾನಿಗಳಿಗೆ ನೆನಪಿಸುವ ಕೆಲಸ ಮಾಡಿದ್ದಾರೆ.

ಈಗ ಈ ಒಕ್ಕೂಟ ಸರ್ಕಾರವನ್ನು ಕೇಂದ್ರ ಸರ್ಕಾರವಾಗಿ ಮಾಡುವ ಪ್ರಯತ್ನ ವೇಗ ಪಡೆದಿದೆ. ರಾಜ್ಯಗಳು ಅಕ್ಷರಶಃ ಗ್ರಾಮ ಪಂಚಾಯತಿ ಮಟ್ಟಕ್ಕೆ ಇಳಿದಿವೆ. ರಾಜ್ಯಗಳ ಬಹುತೇಕ ಆರ್ಥಿಕ ಮೂಲಗಳನ್ನು ದೆಹಲಿ ಕಿತ್ತುಕೊಂಡಿದೆ. ಜಿ.ಎಸ್.ಟಿ ಬಂದ ನಂತರ ಹೆಚ್ಚೂ ಕಡಿಮೆ ರಾಜ್ಯಗಳು ಸಾಲಗಾರ ರಾಜ್ಯಗಳಾಗಿವೆ.

ಸಂವಿಧಾನವೇ ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟಪಡಿಸಿದೆ. ಆದರೆ ಈಗ ದೆಹಲಿ ರಾಜ್ಯಗಳ ಒಂದೊಂದೇ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ ಇಲ್ಲವೇ ಮೊಟಕುಗೊಳಿಸಿದೆ. ಇನ್ನು ಕೆಲವು ವಿಚಾರಗಳಲ್ಲಿ ಸ್ಪಷ್ಟವಾಗಿ ಅತಿಕ್ರಮಿಸಿದೆ.

ಈ ಅತಿಕ್ರಮಣಕ್ಕೆ ಸ್ಪಷ್ಟ ದಾಹರಣೆಯೆಂದರೆ ಇತ್ತೀಚಿನ ಕೃಷಿ ಕಾನೂನುಗಳು. ಕೃಷಿ ಸಂಪೂರ್ಣವಾಗಿ ರಾಜ್ಯಗಳ ಜವಾಬ್ದಾರಿಯ ವಲಯ ಆದರೆ ಈಗ ಆಗಿರುವುದೇನು ಸಂಪೂರ್ಣವಾಗಿ ದೆಹಲಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಗ್ರೀವಾಜ್ಞೆಗಳ ಮೂಲಕ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಂಡಿದೆ. ಅದರ ವಿರೋಧದ ಹೋರಾಟ ನಿರಂತರ ಮುಂದುವರೆದಿದೆ. ಆದರೆ ಅದರ ಬಗ್ಗೆ ಮಾತಾಡಬೇಕಾದ ರಾಜ್ಯಗಳು ಮಾತಾಡುತ್ತಿಲ್ಲ.
ಹೀಗೆ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ, ಆರ್ಥಿಕ ಮೂಲಗಳನ್ನು ಕೂಡಾ ತನ್ನ ತೆಕ್ಕೆಗೆ ತೆಗೆದುಕೊಂಡು ದೈನೇಸಿ ಸ್ಥಿತಿಗೆ ತಂದ ದೆಹಲಿ ಸರ್ಕಾರ ಇಂದಿನ ವಿಪತ್ತಿನ ಸಂದರ್ಭದಲ್ಲಿ ಹಲವು ಜವಾಬ್ದಾರಿಗಳನ್ನು ರಾಜ್ಯಗಳಿಗೆ ಜಾರಿಸಿ ನುಣುಚಿಕೊಳ್ಳುತ್ತಿದೆ. ಇದರಿಂದ ಪ್ರತಿಯೊಂದಕ್ಕೂ ರಾಜ್ಯಗಳು ನ್ಯಾಯಾಲಯದತ್ತ ಮುಖಮಾಡುವ ಪರಿಸ್ಥಿತಿ ಬಂದಿದೆ.

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿ ಸುಸೂತ್ರವಾಗುತ್ತದೆ ಎಂದು ರಾಷ್ಟ್ರೀಯ ಪಕ್ಷಗಳ ನಿರಂತರ ವಾದ. ಸ್ವಲ್ಪ ಮಟ್ಟಿಗೆ ಚುನಾವಣಾ ಭಾಷಣದ ಮಟ್ಟಿಗೆ ಇದನ್ನು ಬಳಸುವುದನ್ನು ಹೆಚ್ಚಿನವರು ಆಕ್ಷೇಪಿಸಲಾರರು. ಆದರೆ ಚುನಾವಣಾ ನಂತರ ದೆಹಲಿ ಸರ್ಕಾರ ಇದು ಭಾರತ ಒಕ್ಕೂಟದ ಸರ್ಕಾರ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ರಾಜ್ಯಸರ್ಕಾರಗಳನ್ನು ತನ್ನ ಕೈಕೆಳಗಿನ ಸಂಸ್ಥೆಗಳು ಎಂದು ತಿಳಿಯಬಾರದು. ಆದರೆ ಈಗ ಆಗುತ್ತಿರುವುದು ಅದೇ. ಇದು ಸರ್ವಾಧಿಕಾರಿ ನಡೆ.

ಇದನ್ನು ವಿರೋಧಿಸುವುದಷ್ಟೇ ಕೇಂದ್ರ ಸರ್ಕಾರ ಎಂದು ಕೊಳ್ಳುತ್ತಿರುವವರಿಗೆ ಒಕ್ಕೂಟ ಎಂದರೇನೆಂದು ಮನವರಿಕೆ ಮಾಡಿಕೊಡಬೇಕು. ಸಂವಿದಾನದಂತೆ ನಡೆದುಕೊಳ್ಳುವುದು ಬೇಡಿಕೆಯಲ್ಲ, ಈ ದೇಶದ ಪ್ರತಿಯೊಬ್ಬರ ಕರ್ತವ್ಯ, ನಡೆದುಕೊಳ್ಳದಿರುವವರನ್ನು ಆ ರೀತಿ ನಡೆದುಕೊಳ್ಳುವಂತೆ ಕೇಳುವುದು ಪ್ರತಿಯೊಬ್ಬರ ಹಕ್ಕು.

ಈಗ ವಿಚಾರದಲ್ಲಿ ಪ್ರಾದೇಶಿಕ ಪಕ್ಷಗಳೂ ಮತ್ತು ಪ್ರಾದೇಶಿಕ ಪಕ್ಷಗಳ ಅಧಿಕಾರವಿರುವ ರಾಜ್ಯಗಳು ಪ್ರಯತ್ನಿಸಬೇಕು. ಈ ವಿಚಾರಗಳಲ್ಲಿ ನ್ಯಾಯಲಯಗಳು ಈಗ ನಮ್ಮ ಪರವಾಗಿರುತ್ತವೆ ಎಂದು ಭಾವಿಸಬಹುದಾಗಿದೆ.

~ ಅಲ್ಮೆಡ ಗ್ಲಾಡ್ಸನ್

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...