ಶಿವಮೊಗ್ಗ: ಏ.೦6: ನೀತಿ ಸಂಹಿತೆ ಅಂಶಗಳನ್ನ ಆಧಾರವಾಗಿಟ್ಟುಕೊಂಡು ಕಿಚ್ಚ ಸುದೀಪ್ ಸಿನಿಮಾ, ಜಾಹೀರಾತು, ರಿಯಾಲಿಟಿ ಶೋ ಪ್ರಸಾರ ನಿಲ್ಲಿಸಲು ಶಿವಮೊಗ್ಗ ಖ್ಯಾತ ವಕೀಲ ಶ್ರೀಪಾಲ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅವರಿಗೆ ಸ್ಪಂದನೆ ಸಿಕ್ಕಿದ್ದು ಮುಖ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲು ಕೋರಲಾಗಿದ್ದು ವಕೀಲರ ದೂರು ಸುದೀಪ್ ಗೆ ಕಂಟಕಪ್ರಾಯವಾಗಲಿದೆ ಎನ್ನಲಾಗಿದೆ.
ವಕೀಲ ಶ್ರೀಪಾಲ್ ಮಾತನಾಡಿ, ಮೇ 10ನೇ ತಾರೀಕು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮೊದಲೇ ಸಾಕಷ್ಟು ಚುನಾವಣೆ ತಯಾರಿಗಳು ನಡೆದಿದೆ. ಬಹಳ ಮುಖ್ಯವಾಗಿ ನಟ ನಟಿಯರನ್ನು ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಯಾವುದೇ ಒಂದು ಪಕ್ಷ ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ಪ್ರಚಾರ ಮಾಡಬೇಕಾದರೆ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಪಾಲಿಸಬೇಕು. ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಖ್ಯಾತ ನಟರಾದಂತಹ ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದಲ್ಲದೆ ಸಿಎಂ ಬಸವರಾಜ್ ಬೊಮ್ಮಾಯಿ ಪರ ಪ್ರಚಾರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಮಾಧ್ಯಮಗಳಲ್ಲೂ ಕೂಡ ಈಗಾಗಲೇ ಪ್ರಸಾರವಾಗಿದೆ. ಜನರನ್ನ ತಲುಪಿದೆ.
ಅವರ ಕೋಟ್ಯಾಂತರ ಅಭಿಮಾನಿಗಳಿರುವುದರಿಂದ ಚುನಾವಣಾ ನೀತಿ ಸಮಿತಿಯು ಜಾರಿಯಲ್ಲಿರುವದರಿಂದ ಇದು ಚುನಾವಣಾ ಆಯೋಗ ನೀಡಿರುವಂತಹ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಅವರ ತೀರ್ಮಾನ ಅವರಿಗೆ ಬಿಟ್ಟಿದ್ದು, ವೈಯಕ್ತಿಕವಾದದ್ದು. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಆದರೆ ಅವರ ಚಲನಚಿತ್ರಗಳನ್ನ ಪ್ರಸಾರ ಮಾಡುವುದು ಚಿತ್ರಮಂದಿರಗಳಲ್ಲಿ ಅವರ ಸಿನಿಮಾ ಪ್ರಸಾರವಾಗುವುದು ಅಥವಾ ಟಿವಿಯಲ್ಲಿ ಅವರ ಹಳೆ ಸಿನಿಮಾಗಳನ್ನು ತೋರಿಸುವುದು ಅವರು ಈಗಾಗಲೇ ಮಾಡಿರುವ ರಿಯಾಲಿಟಿ ಶೋಗಳ ರೀ ಟೆಲಿಕಾಸ್ಟಿಂಗ್ ಮಾಡುವುದನ್ನು ನಿರ್ಬಂಧಿಸಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ. ಈ ದೂರನ್ನ ಪರಿಗಣಿಸಿ ನನಗೆ ಮರು ಇ-ಮೇಲ್ ಸಂದೇಶ ರವಾನೆ ಮಾಡಿದ್ದಾರೆ. ನನ್ನ ದೂರನ್ನು ಮುಖ್ಯ ಚುನಾವಣಾ ಅಧಿಕಾರಿಗೆ ಕಳುಹಿಸಲು ಕೂಡ ಸೂಚಿಸಿದ್ದಾರೆ. ಈಗಾಗಲೇ ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿಗೂ ಕೂಡ ನಾನು ನೀಡಿದ್ದೇನೆ. ಇದನ್ನ ನಾನು ಫಾಲೋ ಮಾಡುತ್ತೇನೆ. ಸಾಮಾನ್ಯ ಜನರಿಗೆ ಚುನಾವಣಾ ಸಮಿತಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗುತ್ತೋ ಅಷ್ಟೇ ಪರಿಣಾಮಕಾರಿಯಾಗಿ ನಟನಿಗೂ ಆಗಬೇಕು.
ಉದಾಹರಣೆ ಶಿವಮೊಗ್ಗದಲ್ಲಿ ಮಾಜಿ ಪಿಎಂಎಸ್ ಬಂಗಾರಪ್ಪ ಅವರ ಪ್ರತಿಮೆಯನ್ನು ಮುಚ್ಚಿದ್ದಾರೆ. ಜನರಿಗೆ ಅವರ ಮುಖ ಕಾಣಬಾರದು ನೀತಿ ಸಂಹಿತೆ ವಿರುದ್ಧವಾಗಿದೆ ಎಂದು ಕ್ರಮ ಕೈಗೊಳ್ಳಲಾಗಿದೆ. ಯಾಕೆಂದರೆ ಬಂಗಾರಪ್ಪನವರಿಗೂ ಕೂಡ ಅಭಿಮಾನಿಗಳಿದ್ದರೂ ಇಷ್ಟೇ ಪ್ರಮಾಣದ ಇದಕ್ಕೂ ಹೆಚ್ಚಿಗೆ ಅಭಿಮಾನಿಗಳನ್ನ ಸಂಪಾದಿಸಬಹುದಾದಂತಹ ಒಬ್ಬ ನಟ ಸುದೀಪ್ ಗೆ ಈ ನಿಯಮಗಳು ಯಾಕೆ ಜಾರಿಯಾಗಬಾರದು..? ಆತ ಈಗ ಒಂದು ಪಕ್ಷದ ಪರ ಪ್ರಚಾರಕ್ಕೆ ನಿಂತಿದ್ದಾರೆ ಹೆಚ್ಚು ಜಾಹಿರಾತುಗಳನ್ನು ಮಾಡಿದ್ದಾರೆ. ಇವುಗಳನ್ನೆಲ್ಲ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಪಾಲ್ ಹೇಳಿದರು. ಹಾಗೆ ತಮಗೆ ಬಂದ ಇ-ಮೇಲ್ ಸಂದೇಶವನ್ನು ತೋರಿಸಿ ತಾವು ತಾರ್ಕಿಕ ಅಂತ್ಯ ಕಾಣುವವರೆಗೆ ಇದನ್ನ ಬಿಡುವುದಿಲ್ಲ ಎಂದು ಭರವಸೆ ನೀಡಿದರು.