ಚಿಕ್ಕಬಳ್ಳಾಪುರ : ಮಾ.27: ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಬಂಜಾರ ಸಮುದಾಯದವರು ಪ್ರತಿಭಟಿಸುತ್ತಿದ್ದ ವೇಳೆ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಬಂಜಾರ ಸಮುದಾಯದ ಮುಖಂಡರಲ್ಲಿ ನಾನು ವಿನಂತಿ ಮಾಡುತ್ತೇನೆ. ಮೊದಲನೆಯದಾಗಿ ಸದಾಶಿವ ಆಯೋಗದ ಶಿಫಾರಸು ವರದಿಯನ್ನು ನಾವು ಜಾರಿ ಮಾಡಿಲ್ಲ. ಎಸ್ಸಿ ಲಿಸ್ಟ್ ಇಂದು ತೆಗೆಯುತ್ತಾರೆ ಎಂಬ ಆತಂಕ ಇದೆ. ನಾನೇ ಸ್ವಂತ ಆದೇಶ ಮಾಡಿ ಬೋವಿ, ಲಂಬಾಣಿ, ಕೊರಮ, ಕೊರಚ, ಎಲ್ಲ ಕೂಡ ಎಸ್ಸಿ ಲಿಸ್ಟ್ನಲ್ಲಿ ಇರುತ್ತವೆ. ಯಾವುದೇ ಕಾರಣಕ್ಕೂ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಆದೇಶ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಮೂರು ಪರ್ಸೆಂಟ್ ಬದಲು ನಾಲ್ಕೂವರೆ ಪರ್ಸೆಂಟ್ ಕೊಟ್ಟಿದ್ದೇವೆ. ಮತ್ತು ಮುಂದೆ ಸದಾಶಿವ ಆಯೋಗದ ಕೆಲಸ ಇಲ್ಲ ಅಂತ ನಾವು ತೀರ್ಮಾನ ಸಹ ಮಾಡಿದ್ದೇವೆ ಎಂದರು.

ಅವರ ಬೇಡಿಕೆ ಪ್ರಕಾರ ಮಾಡಿದ್ದೇವೆ. ಯಾವುದೇ ಗೊಂದಲ ಇಲ್ಲ, ಸಮುದಾಯದ ಹಿತರಕ್ಷಣೆ ಮಾಡಿದ್ದೇವೆ. 2 ಲಕ್ಷದ ಹಕ್ಕು ಪತ್ರಗಳನ್ನ ಲಂಬಾಣಿ ತಾಂಡಾದ ಜನರಿಗೆ ಕೊಟ್ಟಾಗಿದೆ. ನಿಮ್ಮ ಪರವಾಗಿ ಬಿಜೆಪಿ ಸರ್ಕಾರ ಇದೆ. ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದವರು ಯಡಿಯೂರಪ್ಪನವರು. ಆ ಭಾಗದ ಎಲ್ಲಾ ತಾಂಡಾಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಟ್ಟವರು ಬಿಎಸ್ವೈ. ಹಿಂಸೆಗೆ ಅವಕಾಶ ಇಲ್ಲ. ಏನೇ ವಿಷಯ ಇದ್ರೂ ಕುಳಿತು ಬಗೆಹರಿಸೋಣ ಎಂದು ಸಿಎಂ ಹೇಳಿದರು.

ಕಾಂಗ್ರೆಸ್ನವರ ಕೃತ್ಯವನ್ನು ನಾನು ಖಂಡಿಸುತ್ತೇನೆ : ಸಿಎಂ ಬೊಮ್ಮಾಯಿ: ಎರಡನೇದಾಗಿ ಇದರಲ್ಲಿ ಕಾಂಗ್ರೆಸ್ ಪ್ರಚೋದನೆ ಇದೆ ಎಂದು ಆರೋಪಿಸಿದ ಸಿಎಂ, ಸಾಮಾಜಿಕ ನ್ಯಾಯ ನೀಡಿದ ಮೇಲೆ ತಡೆದುಕೊಳ್ಳಲು ಆಗದೆ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಈ ಪ್ರಚೋದನೆಗೆ ಬಂಜಾರ ಸಮುದಾಯ ಒಳಗಾಗಬಾರದು. ಬಂಜಾರ ಸಮುದಾಯದ ರಕ್ಷಣೆ ಮೊದಲಿಂದಲೂ ಬಿಜೆಪಿ ಮಾಡಿದೆ. ಮುಂದೆಯೂ ಮಾಡುತ್ತದೆ. ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳಿಗೆ ಅವಕಾಶ ಮಾಡಿಕೊಡಬಾರದು. ಇಂತಹ ಕಾಂಗ್ರೆಸ್ನವರ ಕೃತ್ಯವನ್ನು ನಾನು ಖಂಡಿಸುತ್ತೇನೆ. ಸಮಾಜದಲ್ಲಿ ರಾಜಕೀಯ ಲಾಭಕ್ಕಾಗಿ ಹಿಂಸೆಗೆ ಇಳಿಸುವುದು ಶೋಭೆ ತರುವುದಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಅವರು ಕ್ಷಮೆಗೆ ಅರ್ಹರಲ್ಲ. ರಾಷ್ಟ್ರೀಯ ಪಕ್ಷ ಮಾಡುತ್ತಿರುವುದು ಅತ್ಯಂತ ಸಣ್ಣ ಕೆಲಸ. ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಬೇಕು. ಜನರ ಮಧ್ಯೆ ಜಗಳ ಹಚ್ಚೋ ಶಕುನಿ ಯಾರು ಅಂತ. ಯಾರಾದ್ರೂ ಇದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ : ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಇಂದು ಬಂಜಾರ ಸಮುದಾಯದವರು ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದೆ. ಈ ವೇಳೆ ಕೆಲ ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ






