ರಾಜ್ಯದಲ್ಲಿ ವಕ್ಫ್ ವಿರುದ್ಧ ಬಿಜೆಪಿ ನಾಯಕರ ಹೋರಾಟ ಮುಂದುವರಿದಿದೆ. ಇಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲೂ ನಮ್ಮ ಭೂಮಿ, ನಮ್ಮ ಹಕ್ಕು ಎಂಬ ಶೀರ್ಷಿಕೆಯಡಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ನಾಯಕ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಮುನಿರತ್ನ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ರಾಜ್ಯದಲ್ಲಿ ಭುಗಿಲೆದ್ದಿರುವ ವಕ್ಫ್ ಆಸ್ತಿ ವಿಚಾರವಾಗಿ ಇಂದು ಸಚಿವ ಜಮೀರ್ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ ನಡೆಸಿದೆ. ಅಲ್ಲದೆ ಚಾಮರಾಜಪೇಟೆಯಲ್ಲಿರುವ ಜಮೀರ್ ಕಚೇರಿಗೆ ಮುತ್ತಿಗೆಗೆ ಹಾಕಲು ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಯತ್ನಿಸಲಾಗಿದೆ. ಈ ವೇಳೆ ಪೊಲೀಸರು ತಡೆ ಹಿಡಿದಿದ್ದು, ಪೊಲೀಸರ ಜೊತೆಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ದಾರೆ. ಬಳಿಕ ಪ್ರಮೋದ್ ಮುತಾಲಿಕ್ ಹಾಗೂ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್, ಜಮೀರ್ ಅಹ್ಮದ್ ಇಡೀ ರಾಜ್ಯದ ಕ್ಷಮೆ ಕೇಳ್ಬೇಕು ಎಂದು ಆಗ್ರಹಿಸಿದ್ದಾರೆ.
ವಕ್ಫ್ ಕಾಯ್ದೆ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದು ಏನು? 1974ರಿಂದ ಇಲ್ಲಿಯವರೆಗೆ ಯಾಕೆ ಹೋರಾಟ ಮಾಡಿಲ್ಲ..? ಬಿಜೆಪಿ ಅಧಿಕಾರವಧಿಯಲ್ಲೂ ವಕ್ಫ್ ಪರ ನೋಟಿಸ್ ನೀಡಲಾಗಿದೆ.ಪಹಣಿಯಲ್ಲಿ ವಕ್ಫ್ ಎಂದ ನಮೂದು ಮಾಡಲಾಗಿದೆ.ಅವರ ಕಾಲದಲ್ಲಿ ಗೆಜೆಟ್ ಬಗ್ಗೆ ಹೋರಾಟ ಮಾಡಿಲ್ಲ.ಆದ್ರೆ ಈಗ ಹೋರಾಟ ಮಾಡ್ತಿದ್ದಾರೆ. ವಕ್ಫ್ ಹೋರಾಟದ ಕ್ರೆಡಿಟ್ಗಾಗಿ ಹೋರಾಟ ನಡೆಯುತ್ತಿದೆ ಎಂದು ಬಿಜೆಪಿ ಹೋರಾಟಕ್ಕೆ ಟಾಂಗ್ ಕೊಟ್ಟಿದ್ದಾರೆ.
ಆದರೆ ವಕ್ಫ್ ವಿಚಾರವಾಗಿ ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮದರಸಾನಲ್ಲಿ ಹಿಂದೂಗಳ ವಿರುದ್ಧ ಭೋಧನೆ ಮಾಡ್ತಾರೆ. ಅಲ್ಲಿ ಮಾರಕಾಸ್ತ್ರ ಸಂಗ್ರಹಿಸಲು ಬೆಟ್ಟದ ಮೇಲೆ ಮದರಸಾ ಮಾಡ್ತಾರೆ. ಈ ಸರ್ಕಾರ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ರಕ್ಷಣೆ ಇಲ್ಲ. ಮತಾಂಧ ಜಮೀರ್ ಹಿಂದೂಗಳ ಮಠದ ಆಸ್ತಿ, ರೈತರ ಆಸ್ತಿ ನುಂಗಲು ಮುಂದಾಗಿದ್ದಾನೆ. ವಕ್ಫ್ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಜನ ಸುವರ್ಣಸೌಧಕ್ಕೆ ಮುತ್ತಿಗೆ ಹಾಕ್ತೇವೆ ಎಂದು ಎಚ್ಚರಿಸಿದ್ದಾರೆ.