ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ಸಚಿವ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಟಿಪ್ಪು ಹೊಡೆದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಹೇಳಿಕೆ ಕುರಿತು ವಿಧಾನಸೌಧದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ನೋವಾಗಿದ್ರೆ ವಿಷಾದ ವ್ಯಕ್ತಪಡಿಸ್ತೇನೆ ಎಂದರು.
ಮಂಡ್ಯದಲ್ಲಿ ಕಸಬಾ ಮಹಾಶಕ್ತಿ ಕೇಂದ್ರದ ಕಾರ್ಯರ್ತರ ಉದ್ದೇಶಿಸಿ ಮಾತನಾಡುವಾಗ ಮಾತನಾಡಿದೆ. ಟಿಪ್ಪು ಹೆಸರು ಉಲ್ಲೇಖ ಮಾಡಿದ್ದೆ. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಮಾಡ್ತಿದೆ. ಅದನ್ನು ಖಂಡಿಸಬೇಕಿದೆ. ಈ ಬಗ್ಗೆ ಜನರಿಗೆ ನಾನು ಸ್ಪಷ್ಟವಾಗಿ ಹೇಳಿದ್ದೆ ಎಂದರು.

ಬರುವ ಚುನಾವಣೆಯಲ್ಲಿ ಜನರ ಬೆಂಬಲ ನಮ್ಮ ಪರವಾಗಿ ಪಡೆದುಕೊಳ್ಳಬೇಕು. ನಾವು ಪ್ರಜಾಪ್ರಭುತ್ವ ದಲ್ಲಿ ಇದ್ದೇವೆ, ಯುದ್ಧದ ಕಾಲದಲ್ಲಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ಗೆಲ್ಲಬೇಕಿದೆ. ಆ ವಿಚಾರವಾಗಿ ಹೇಳಿದ್ದೇನೆ ಹೊರತು ಬೇರೆಯ ರೀತಿ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ಆದರೂ, ತನ್ನ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿಗೆ ವಯಕ್ತಿಕ ವಾಗಿ ನೋವಾಗಿದ್ರೆ ವಿಷಾದ ವ್ಯಕ್ತಪಡಿಸ್ತೇನೆ.. ಇವರ ಹಾಗೆ ವೈಯಕ್ತಿಕವಾಗಿ ವಿರೋಧ ಮಾಡಿಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೇ ವಿನಹ ಮತ್ತೆ ಬೇರೇನೂ ಅಲ್ಲ ಎಂದರು.
ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು, ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ (ಗ್ರಾಮೀಣ!) ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ. ಅಷ್ಟಕ್ಕೂ, ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.












