
ನವದೆಹಲಿ:ಲವ್ ಜಿಹಾದ್’ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಬರೇಲಿ ನ್ಯಾಯಾಲಯ ಮಾಡಿದ್ದ ಕೆಲ ಅವಲೋಕನಗಳನ್ನು ಅಳಿಸಿ ಹಾಕುವಂತೆ ಕೋರಿದ್ದ ಅರ್ಜಿಯನ್ನು ಗುರುವಾರದ ವಿಚಾರಣೆಯಲ್ಲಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಅರ್ಜಿದಾರರನ್ನೂ ತರಾಟೆಗೆ ತೆಗೆದುಕೊಂಡಿತು. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ಪೀಠವು, ‘ಸಾಕ್ಷ್ಯಗಳ ಆಧಾರದ ಮೇಲೆ ಮಾಡಿದ ಅವಲೋಕನಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿತು.

2014 ರ ಅಕ್ಟೋಬರ್ ನಲ್ಲಿ ಲವ್ ಜಿಹಾದ್ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಬರೇಲಿಯ ಕೋರ್ಟ್ ‘ ಧರ್ಮವೊಂದರ ಸಮಾಜ ವಿರೋಧಿಗಳು ತಮ್ಮ ಜನಸಂಖ್ಯೆ ಹೆಚ್ಚಿಸಿಕೊಂಡು ಅಂತರರಾಷ್ಟ್ರೀಯ ಪಿತೂರಿ ಮೂಲಕ ಭಾರತದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದೇ ಲವ್ ಜಿಹಾದ್‌ನ ಗುರಿಯಾಗಿದೆ’ ಎಂದು ಹೇಳಿತ್ತು.
ಸುಳ್ಳು ಹಿಂದೂ ಹೆಸರಿನ ಮೂಲಕ ಹಿಂದೂ ಯುವತಿಗೆ ವಂಚಿಸಿ ಮದುವೆ ಆಗಿದ್ದ ಪ್ರಕರಣದ ಆರೋಪಿ ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ ಈ ಕಾಮೆಂಟ್ ಮಾಡಿತ್ತು. ಆರೋಪಿ ಮೊಹಮ್ಮದ್ ಅಲಿಂ (25) ಎಂಬಾತ ತನ್ನ ಹೆಸರನ್ನು ಆನಂದ್ ಕುಮಾರ್ ಎಂದು ಹೇಳಿಕೊಂಡು ವಿದ್ಯಾರ್ಥಿನಿಯನ್ನು ವಂಚಿಸಿದ್ದ. ಆದರೆ ತಾನು ಮದುವೆ ಆಗಿರುವ ವ್ಯಕ್ತಿ ಆನಂದ್ ಅಲ್ಲ ಎಂಬುದು ಗೊತ್ತಾದ ನಂತರ ಯುವತಿ ಸಂಬಂಧ ಕಡಿದುಕೊಂಡು ಪೋಲೀಸರಲ್ಲಿ ದೂರು ದಾಖಲಿಸಿದ್ದರು. ಕೋಚಿಂಗ್ ಕೇಂದ್ರವೊಂದರಲ್ಲಿ ಅಲಿಂ ಈ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ್ದ ಬಳಿಕ ಆಕೆಯನ್ನು ವಂಚಿಸಿ ಮದುವೆ ಆಗಿದ್ದ.ನಂತರ ಕೋರ್ಟ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿತ್ತು.
ಈ ಕಾಮೆಂಟ್ ನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಅರ್ಜಿ ಸಲ್ಲಿಸಿದ್ದರು. ‘ನೀವು ಯಾರು ಮತ್ತು ಈ ವಿಷಯ ನಿಮಗೆ ಹೇಗೆ ಸಂಬಂಧಿಸುತ್ತದೆ’ ಎಂದು ಪ್ರಶ್ನಿಸಿದ ಪೀಠ, ‘ಇದನ್ನು ನೀವು ಉತ್ಪ್ರೇಕ್ಷಿಸುವುದು ಸರಿಯಲ್ಲ’ ಎಂದು ಖಾರವಾಗಿ ಹೇಳಿತು.ಈ ಅರ್ಜಿಯನ್ನು ಹಿಂಪಡೆಯಲು ಸಿದ್ಧರಿದ್ದೀರಾ ಎಂದು ಅರ್ಜಿದಾರರನ್ನು ಕೇಳಿದ ಪೀಠವು, ಇಲ್ಲದಿದ್ದರೆ ವಜಾಗೊಳಿಸಬೇಕಾಗುತ್ತದೆ ಎಂದಿತು. ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆಯುವುದಾಗಿ ಹೇಳಿದರು. ಅದಕ್ಕೆ ಪೀಠ ಅನುಮತಿ ನೀಡಿತು.