• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ರಾಜ್ಯ ಶಿಕ್ಷಣ ನೀತಿ ಆದ್ಯತೆ ಮತ್ತು ಸವಾಲುಗಳು

ನಾ ದಿವಾಕರ by ನಾ ದಿವಾಕರ
October 27, 2023
in Top Story, ಅಂಕಣ, ಅಭಿಮತ, ಕರ್ನಾಟಕ
0
ರಾಜ್ಯ ಶಿಕ್ಷಣ ನೀತಿ ಆದ್ಯತೆ ಮತ್ತು ಸವಾಲುಗಳು
Share on WhatsAppShare on FacebookShare on Telegram

ಕಾರ್ಪೋರೇಟ್ ಬಂಡವಾಳಶಾಹಿ ಮತ್ತು ಸಾಂಸ್ಕೃತಿಕ ರಾಜಕಾರಣದಿಂದ ಮುಕ್ತ ಶಿಕ್ಷಣ ನೀತಿ ಅಗತ್ಯ

ADVERTISEMENT

-ನಾ ದಿವಾಕರ

ಐದು ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಂತೆ, ಕೇಂದ್ರ ಶಿಕ್ಷಣ ನೀತಿ -2020ನ್ನು ರದ್ದುಪಡಿಸಿ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಹೊಸ ಶಿಕ್ಷಣ ನೀತಿ-2020 ಹಲವು ಸಕಾರಾತ್ಮಕ ಅಂಶಗಳನ್ನೊಳಗೊಂಡಂತೆ ಮೇಲ್ನೋಟಕ್ಕೆ ಕಂಡರೂ, ಸೂಕ್ಷ್ಮವಾಗಿ ಗಮನಿಸಿದಾಗ ಭಾರತದ ಒಕ್ಕೂಟ ವ್ಯವಸ್ಥೆಗೆ ಪೂರಕವಲ್ಲದ ಹಲವು ಅಂಶಗಳು ಗೋಚರಿಸುತ್ತವೆ. ಭಾಷಾ ಕಲಿಕೆ, ಪಠ್ಯಕ್ರಮ, ಉನ್ನತ ಶಿಕ್ಷಣದ ಸಾಂಸ್ಥಿಕ ಸಂರಚನೆ ಹಾಗೂ ಮೂಲ ಶಿಕ್ಷಣ ನೀತಿಗಳು ರಾಜ್ಯಗಳ ಪ್ರಾದೇಶಿಕ ಅಸ್ಮಿತೆಗೆ ಭಂಗ ತರುವಂತೆ ತೋರುತ್ತವೆ. ಹಾಗಾಗಿಯೇ ಪಶ್ಚಿಮ ಬಂಗಾಲ, ಕೇರಳ ಸೇರಿದಂತೆ ಹಲವು ರಾಜ್ಯಗಳು ತಮ್ಮದೇ ಆದ ಶಿಕ್ಷಣ ನೀತಿಯನ್ನು ಜಾರಿಗೊಳಿಸಿವೆ.

ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕೇಂದ್ರ ಹೊಸ ಶಿಕ್ಷಣ ನೀತಿ 2020ರಲ್ಲಿ ಮಾತೃಭಾಷಾ ಶಿಕ್ಷಣ, ಕೌಶಲ್ಯಾಧಾರಿತ ಕಲಿಕೆ, ಡಿಜಿಟಲೀಕರಣ ಮುಂತಾದ ಸಕಾರಾತ್ಮಕ ಅಂಶಗಳು ಇದ್ದಾಗ್ಯೂ ಮೂಲತಃ ಅದು ಮಾರುಕಟ್ಟೆ ಆರ್ಥಿಕತೆಗೆ ಪೂರಕವಾಗಿಯೇ ರೂಪುಗೊಂಡಿದ್ದಾಗಿತ್ತು. ಪ್ರಾಥಮಿಕ ಹಂತದಿಂದ ಹಂತಹಂತವಾಗಿ ಅನುಷ್ಠಾನಗೊಳ್ಳಬೇಕಿದ್ದ ಶಿಕ್ಷಣ ನೀತಿಯನ್ನು ಹಿಂದಿನ ಸರ್ಕಾರ ಪದವಿ ತರಗತಿಗಳಿಂದ ಜಾರಿಗೊಳಿಸುವ ಮೂಲಕ ಹಲವು ಗೊಂದಲಗಳನ್ನೂ ಸೃಷ್ಟಿಸಿತ್ತು. ಮಾರುಕಟ್ಟೆಗೆ ಬೌದ್ಧಿಕ ಸರಕುಗಳನ್ನು ಒದಗಿಸುವ ಈ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಕಾಂಗ್ರೆಸ್‌ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ಈ ನಿಟ್ಟಿನಲ್ಲಿ ರಚಿಸಲಾಗಿರುವ ಆಯೋಗವು ಫೆಬ್ರವರಿ 2024ರ ಒಳಗಾಗಿ ತನ್ನ ಅಂತಿಮ ವರದಿಯನ್ನು ಸಲ್ಲಿಸಬೇಕಿದ್ದು ಆಯೋಗದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ, ಅರ್ಥಶಾಸ್ತ್ರಜ್ಞ ಹಾಗೂ ನಿವೃತ್ತ ಯುಜಿಸಿ ಅಧ್ಯಕ್ಷ ಪ್ರೊ. ಸುಖದೇವ್‌ ಥೋರಟ್‌ ಅವರಿಗೆ ವಹಿಸಲಾಗಿದೆ. 15 ಶಿಕ್ಷಣ ತಜ್ಞರು ಹಾಗೂ ವಿಷಯ ತಜ್ಞರನ್ನೊಳಗೊಂಡ ಈ ಆಯೋಗದ ಕಾರ್ಯವ್ಯಾಪ್ತಿ ಮತ್ತು ನೀತಿಸೂಚಿಯನ್ನು ಸ್ಪಷ್ಟವಾಗಿ ನಮೂದಿಸಿಲ್ಲವಾದರೂ, ಕರ್ನಾಟಕದ ಸಾಂಸ್ಕೃತಿಕ-ಸಾಮಾಜಿಕ ಪರಂಪರೆಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಆದೇಶಿಸಲಾಗಿದೆ.

ಶಿಕ್ಷಣ ನೀತಿಯ ಮೂಲ ಧ್ಯೇಯ

ಯಾವುದೇ ರಾಜ್ಯದ ಶಿಕ್ಷಣ ನೀತಿಯು ಮೂಲತಃ ಎರಡು ನೆಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದು ರಾಜ್ಯದ ವಿಶಿಷ್ಟ ಪ್ರಾದೇಶಿಕತೆಯ ಲಕ್ಷಣಗಳು ಮತ್ತು ಇದನ್ನು ಪ್ರಭಾವಿಸುವ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟು. ಎರಡನೆಯದು ವರ್ತಮಾನದ ಸನ್ನಿವೇಶದಲ್ಲಿ ರಾಜ್ಯದ ಯುವ ಸಮೂಹ, ವಿಶೇಷವಾಗಿ ತಮ್ಮ ಜೀವನ ಹಾಗೂ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳಲು ಶಿಕ್ಷಣವನ್ನು ಅವಲಂಬಿಸುವ ಪೀಳಿಗೆಯ ಭವಿಷ್ಯದ ಆಶೋತ್ತರಗಳು. ನವ ಉದಾರವಾದ ಹಾಗೂ ಜಾಗತೀಕರಣದ ಪ್ರಭಾವದಿಂದ ಈಗಾಗಲೇ ವಾಣಿಜ್ಯೀಕರಣಕ್ಕೊಳಗಾಗಿರುವ ಶೈಕ್ಷಣಿಕ ವಲಯದಲ್ಲಿ ತಮ್ಮ ವಿದ್ಯಾರ್ಜನೆಯನ್ನು ಪೂರೈಸಿ ಹೊರಬರುವ ಕೋಟ್ಯಂತರ ಯುವಕ/ಯುವತಿಯರು ತಮ್ಮ ಭವಿಷ್ಯದ ಹಾದಿಯನ್ನು ಕಂಡುಕೊಳ್ಳುವಾಗ ಎದುರಿಸಬಹುದಾದ ಸಾಮಾಜಿಕ-ಸಾಂಸ್ಕೃತಿಕ ಸವಾಲುಗಳಿಗೆ ಶಿಕ್ಷಣ ನೀತಿ ಮಾರ್ಗದರ್ಶಕ ಸೂತ್ರಗಳನ್ನು ಒದಗಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ರಾಜ್ಯ ಶಿಕ್ಷಣ ನೀತಿಗೆ ಹಲವು ಸವಾಲುಗಳು ಮತ್ತು ಆದ್ಯತೆಗಳು ಎದುರಾಗುತ್ತವೆ. ಹಾಗಾಗಿ ಶಿಕ್ಷಣ ನೀತಿಯನ್ನು ರೂಪಿಸುವ ಆಯೋಗವು ಈ ಎರಡೂ ವಿದ್ಯಮಾನಗಳನ್ನು ಗಂಭೀರವಾಗಿ ಪರಾಮರ್ಶೆ ಮಾಡಬೇಕಾಗುತ್ತದೆ. ಕರ್ನಾಟಕದ ಜನತೆ ಇಂದು ಎದುರಿಸುತ್ತಿರುವ ಪ್ರಮುಖ ಸವಾಲುಗಳೆಂದರೆ ಕಾರ್ಪೋರೇಟ್‌ ಬಂಡವಾಳಶಾಹಿ ಆರ್ಥಿಕತೆ, ಅದರಿಂದ ಸೃಷ್ಟಿಯಾಗುತ್ತಿರುವ ಮತ್ತು ಹೆಚ್ಚಾಗುತ್ತಿರುವ ಅಸಮಾನತೆ, ಬಂಡವಾಳದ ಆಧಿಪತ್ಯವನ್ನು ಸಾಂಸ್ಥೀಕರಿಸಲು ನೆರವಾಗುತ್ತಿರುವ ಸಾಂಸ್ಕೃತಿಕ-ಮತೀಯ ರಾಜಕಾರಣ ಹಾಗೂ ಈ ಎಲ್ಲಾ ಸಂದಿಗ್ಧತೆಗಳನ್ನು ಮರೆಮಾಚುವ ಜಾತಿ ರಾಜಕಾರಣ. ಶಿಕ್ಷಣ ಎನ್ನುವುದು ಕೇವಲ ಸಮಾಜ ಸುಧಾರಣೆಯ ಪರಿಕರವಾಗದೆ, ಭವಿಷ್ಯದ ಪೀಳಿಗೆಯನ್ನು ಸಂವೇದನಾಶೀಲಗೊಳಿಸುವ ಒಂದು ಮಾರ್ಗದರ್ಶಕ ಸೂಚಿಯಾಗಿ ಪರಿಣಮಿಸಬೇಕಾದರೆ, ಈ ಎಲ್ಲ ಸವಾಲುಗಳನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಯಾವುದೇ ಶಿಕ್ಷಣ ನೀತಿಯ ಮುಂದಿರಬೇಕಾದ ಪ್ರಮುಖ ಸವಾಲೆಂದರೆ, ಅದರ ಅನ್ವಯಿಕೆಗೆ ಒಳಗಾಗುವ ಸಾಮಾನ್ಯ ಜನತೆಗೆ ಆರೋಗ್ಯಕರ ಸಾಮಾಜಿಕ-ಸಾಂಸ್ಕೃತಿಕ ಪರಿಸರ, ಉಜ್ವಲ ಭವಿಷ್ಯ ಹಾಗೂ ಸುಸ್ಥಿರ ಜೀವನೋಪಾಯದ ಮಾರ್ಗಗಳನ್ನು ರೂಪಿಸುವುದು. ಈ ನಿಟ್ಟಿನಲ್ಲಿ ಜಾಗತೀಕರಣ ಪ್ರಕ್ರಿಯೆ ಮತ್ತು ಈಗಾಗಲೇ ಬೇರುಬಿಟ್ಟಿರುವ ಕಾರ್ಪೋರೇಟ್‌ ಮಾರುಕಟ್ಟೆಯ ಹಿತಾಸಕ್ತಿಗಳು ಬಹುದೊಡ್ಡ ತಡೆಗೋಡೆಯಾಗಿ ಪರಿಣಮಿಸುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ಸವಾಲುಗಳು ಮತ್ತಷ್ಟು ಜಟಿಲವಾಗುವುದು ಭಾಷಾ ಶಿಕ್ಷಣದ ನೆಲೆಯಲ್ಲಿ. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಐದು ದಶಕಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲೂ ಕನ್ನಡ ಮಾಧ್ಯಮದ ಶಿಕ್ಷಣವನ್ನು ಕಡ್ಡಾಯಗೊಳಿಸಲು ಸಾಧ್ಯವಾಗದಿರುವುದು ದೊಡ್ಡ ಸವಾಲಾಗಿಯೇ ಕಾಣುತ್ತದೆ. ಇದರೊಂದಿಗೇ ವಿದ್ಯಾರ್ಜನೆಯ ನಂತರ ಉದ್ಯೋಗ ಮತ್ತು ಮಾರುಕಟ್ಟೆಯಲ್ಲಿ ಅನಿವಾರ್ಯವಾಗಿ ಬೇಕಾಗುವ ಆಂಗ್ಲ ಭಾಷೆಯ ಅರಿವು ಸಹ ಒಂದು ಸವಾಲಾಗಿದೆ.

ಈ ಎರಡೂ ಕೊರತೆಗಳನ್ನು ನೀಗಿಸಲು ರಾಜ್ಯ ಸರ್ಕಾರ ಸಾರ್ವತ್ರಿಕ ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಕನ್ನಡದ ಭಾಷಿಕ ಬೆಳವಣಿಗೆಗೆ ಅಡ್ಡಿಯಾಗಿರುವ ಆಂಗ್ಲ ಮಾಧ್ಯಮದ ಪ್ರಾಥಮಿಕ ಶಿಕ್ಷಣ ರಾಜ್ಯದಲ್ಲಿ ಕಟ್ಟಕಡೆಯ ಹಳ್ಳಿಗೂ ತಲುಪಿದ್ದು, ಗ್ರಾಮೀಣ ಮಕ್ಕಳೂ ಸಹ ಮಾತೃಭಾಷಾ ಶಿಕ್ಷಣದಿಂದ ವಂಚಿತರಾಗುತ್ತಿರುವ ವಿಷಮ ಸನ್ನಿವೇಶವನ್ನು ರಾಜ್ಯ ಎದುರಿಸುತ್ತಿದೆ. ಸರ್ಕಾರಿ ಶಾಲೆಗಳ ಉನ್ನತೀಕರಣ, ಒಂದನೆ ತರಗತಿಯಿಂದಲೇ ಆಂಗ್ಲ ಭಾಷೆಯ ಕಲಿಕೆಯೊಂದಿಗೆ, ಕನ್ನಡ ಮಾಧ್ಯಮವನ್ನು ಪ್ರೋತ್ಸಾಹಿಸಿ, ಪೋಷಿಸುವ ಒಂದು ಸಮಗ್ರ ನೀತಿ ವರ್ತಮಾನದ ಆದ್ಯತೆಯಾಗಿರುವಷ್ಟೇ ಸವಾಲು ಸಹ ಆಗಿದೆ. ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ವಾಣಿಜ್ಯೀಕರಣ ವ್ಯಾಪಕವಾಗಿ ಹರಡುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ರಾಜ್ಯಾದ್ಯಂತ ತಲೆಎತ್ತಿವೆ. ಇದೇ ವೇಳೆ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಹೆಚ್ಚಾಗುತ್ತಿದ್ದರೂ, ಲಭ್ಯತೆಯ ಕೊರತೆಯಿಂದ ಹಾಗೂ ಇಂಗ್ಲಿಷ್‌ ಮಾಧ್ಯಮದ ಮಾರುಕಟ್ಟೆ ಆಕರ್ಷಣೆಯಿಂದ ಗ್ರಾಮೀಣ ಮಕ್ಕಳೂ ಸಹ ಖಾಸಗಿ ವಲಯದತ್ತ ಸಾಗುತ್ತಿರುವುದನ್ನು ಗಮನಿಸಬಹುದು.

ಉನ್ನತ ಶಿಕ್ಷಣದ ಮಾರುಕಟ್ಟೆ

ಕಾಲೇಜು ಹಂತದಿಂದ ತನ್ನ ವ್ಯಾಪ್ತಿ ಮತ್ತು ಆಧಿಪತ್ಯವನ್ನು ಈಗಾಗಲೇ ಬಿಗಿಗೊಳಿಸಿರುವ ಕಾರ್ಪೋರೇಟ್‌ ಮಾರುಕಟ್ಟೆ ಸಾಂಸ್ಥಿಕ ನೆಲೆಯಲ್ಲಿ ಶಿಕ್ಷಣದ ವಾಣಿಜ್ಯೀಕರಣ ಪ್ರಕ್ರಿಯೆಗೆ ರಾಜ್ಯದ ಧಾರ್ಮಿಕ ಸಂಸ್ಥೆಗಳನ್ನು ಹಾಗೂ ಮಠಮಾನ್ಯಗಳನ್ನೇ ಅವಲಂಬಿಸಿರುವುದು ಸ್ಪಷ್ಟವಾಗಿ ಗುರುತಿಸಬಹುದಾದ ವಿದ್ಯಮಾನ. ಆಧುನಿಕ ಡಿಜಿಟಲ್‌ ಬಂಡವಾಳ ಮಾರುಕಟ್ಟೆಗೆ ಅವಶ್ಯವಾದ ಬೌದ್ಧಿಕ ಸರಕುಗಳನ್ನು ಉತ್ಪಾದಿಸುವ ಕಾರ್ಖಾನೆಗಳಂತೆ ಶೈಕ್ಷಣಿಕ ಸಂಸ್ಥೆಗಳು ಕಾರ್ಪೋರೇಟೀಕರಣಕ್ಕೊಳಗಾಗುತ್ತಿವೆ. ತಮ್ಮ ವಿದ್ಯಾರ್ಜನೆಯನ್ನು ಪೂರೈಸಿ ಹೊರಬರುವ ಮಕ್ಕಳು ಮಾರುಕಟ್ಟೆ ಆರ್ಥಿಕತೆಯಲ್ಲಿ ಅಗ್ಗದ ಶ್ರಮಸರಕುಗಳಾಗಿ ಪರಿಣಮಿಸುತ್ತಿರುವುದನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯೂ ಸಹ ಇದನ್ನು ಪುಷ್ಟೀಕರಿಸುವಂತಿದ್ದು, ಕೌಶಲ್ಯಾಧಾರಿತ ಶಿಕ್ಷಣ, ಆರಂಭಿಕ ಡಿಜಿಟಲೀಕರಣದ ಕಲಿಕಾ ವಿಧಾನಗಳ ಮೂಲಕ ಮಾರುಕಟ್ಟೆಗೆ ಬೇಕಾದ ಬೌದ್ಧಿಕ ಸರಕುಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಸಾಗಿದೆ.

ಆದರೆ ಶಿಕ್ಷಣ ಎಂದರೆ ಭೌತಿಕ ಜೀವನಾಧಾರದ ಅಡಿಪಾಯ ಮಾತ್ರವೇ ಅಲ್ಲ. ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಧೋರಣೆಯಲ್ಲಿ ಅನುಸರಿಸಲಾಗುವ ಕಲಿಕಾ ಮಾರ್ಗಗಳು ಹಾಗೂ ಬೋಧನಾ ವಿಧಾನಗಳು ಭವಿಷ್ಯದ ಪೀಳಿಗೆಯನ್ನು ಯಾಂತ್ರಿಕ ಶ್ರಮ ಸರಕುಗಳಾಗಿ ಸಿದ್ಧಪಡಿಸಲು ಸಾಧ್ಯವೇ ಹೊರತು, ಸಂವೇದನಾಶೀಲ ಮಾನವ ಸಮಾಜದ ಬೌದ್ಧಿಕ ಆಸ್ತಿಯಾಗಿ ರೂಪಿಸಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯವು ಅನುಸರಿಸಬೇಕಾದ ಬಹುತ್ವ ಆಧಾರಿತ ಸಾಂಸ್ಕೃತಿಕ ನೀತಿಗೆ ಅನುಗುಣವಾಗಿ ಶೈಕ್ಷಣಿಕ ನೀತಿಯನ್ನೂ ರೂಪಿಸಬೇಕಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಬಹುಸಾಂಸ್ಕೃತಿಕ ನೆಲೆಗಳು ಎದುರಿಸುವ ಮತೀಯವಾದಿ ಸವಾಲುಗಳನ್ನು ಗಮನದಲ್ಲಿಟ್ಟು ನೋಡಿದಾಗ, ಹಲವು ಭಾಷೆ, ಸಂಸ್ಕೃತಿ ಹಾಗೂ ಆಚರಣೆಗಳ ನೆಲೆಯಾಗಿರುವ ಕರ್ನಾಟಕ ಪಂಪ ರನ್ನರ ಕಾಲದಿಂದಲೂ ಕಾಪಾಡಿಕೊಂಡು ಬಂದಿರುವ ನೆಲ ಸಂಸ್ಕೃತಿಯ ವೈವಿಧ್ಯತೆಗಳನ್ನು ವೈಚಾರಿಕತೆಯ ನೆಲೆಯಲ್ಲಿ ಬೋಧಿಸುವ ವೈಜ್ಞಾನಿಕ ಚೌಕಟ್ಟಿನಲ್ಲಿ ಶಿಕ್ಷಣ ನೀತಿಯಲ್ಲಿ ಅಳವಡಿಸುವುದು ಅತ್ಯವಶ್ಯ ಎನಿಸುತ್ತದೆ.

ಸಾಂಸ್ಕೃತಿಕ ಸವಾಲುಗಳು

ಹಿಂದುತ್ವವಾದದ ಸಾಂಸ್ಕೃತಿಕ ರಾಜಕಾರಣದ ಪರಿಣಾಮವಾಗಿ ಕರಾವಳಿ ಕರ್ನಾಟಕವನ್ನೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉಂಟಾಗಿರುವ ಸಾಂಸ್ಕೃತಿಕ ಬಿರುಕುಗಳನ್ನು ಸರಿಪಡಿಸುವ ಜವಾಬ್ದಾರಿ ಶಿಕ್ಷಣ ಕ್ಷೇತ್ರದ ಮೇಲಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಳ್ಳುವ ಬೋಧನಾ ವಿಧಾನಗಳು, ಕಲಿಕಾ ಸಾಧನಗಳು ಹಾಗೂ ಸಾಮಗ್ರಿಗಳು ಮತ್ತು ಶೈಕ್ಷಣಿಕ ಸ್ತರಗಳು ವೈಜ್ಞಾನಿಕ ನೆಲೆಯಲ್ಲಿ ರೂಪುಗೊಳ್ಳುವುದು ಅತ್ಯವಶ್ಯವಾಗಿದೆ. ವಿಜ್ಞಾನ ಮತ್ತು ಗಣಿತ ಎರಡೂ ಶಿಸ್ತುಗಳನ್ನು ಪ್ರಾಥಮಿಕ ಸ್ತರದಿಂದಲೇ ಹಂತಹಂತವಾಗಿ ಬೋಧಿಸುವುದಷ್ಟೇ ಅಲ್ಲದೆ ಮಕ್ಕಳಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸುವಂತಹ ಮಾದರಿಯೊಂದನ್ನು ರಾಜ್ಯ ಶಿಕ್ಷಣ ನೀತಿ ರೂಪಿಸಬೇಕಿದೆ. ಚಂದ್ರಯಾನದ ಯುಗದಲ್ಲಿ ಪ್ರಾಚೀನ ಭಾರತದ ಜ್ಞಾನವಾಹಿನಿಗಳಲ್ಲಿ ಆಧುನಿಕ ವಿಜ್ಞಾನದ ಬೀಜಾಕ್ಷರಗಳನ್ನು ಹುಡುಕುವ ಪ್ರಯತ್ನಗಳ ನಡುವೆಯೇ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳು ಮಾನವ ಜಗತ್ತನ್ನು ಹೇಗೆ ರೂಪಿಸುತ್ತಿವೆ ಎನ್ನುವುದನ್ನು ವಿದ್ಯಾರ್ಥಿ ಸಮೂಹಕ್ಕೆ ತಲುಪಿಸುವ ಸಿದ್ಧ ಕಲಿಕಾಮಾದರಿಗಳನ್ನು ರಚಿಸಬೇಕಿದೆ. ಡಾರ್ವಿನ್‌, ನ್ಯೂಟನ್‌, ಐನ್‌ಸ್ಟೈನ್‌ ಮುಂತಾದ ವಿಜ್ಞಾನಿಗಳ ಸಂಶೋಧನೆಗಳನ್ನೂ ನಗಣ್ಯಗೊಳಿಸುವ ಸಾಂಸ್ಕೃತಿಕ ರಾಜಕಾರಣವು ವೇದ ಕಾಲದಲ್ಲೇ ಎಲ್ಲವೂ ಇತ್ತು ಎನ್ನುವ ವಿತಂಡವಾದದೊಡನೆ ಎಳೆಯ ಮಕ್ಕಳಲ್ಲೂ ವೈಚಾರಿಕತೆಯ ನೆಲೆಗಳನ್ನು ನಾಶಪಡಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ದೃಷ್ಟಿಯಿಂದ ನೋಡಿದಾಗ ರಾಜ್ಯ ಶಿಕ್ಷಣ ನೀತಿಯ ಮೂಲ ಧಾತು ವಿಜ್ಞಾನ, ವೈಚಾರಿಕತೆ, ವೈಜ್ಞಾನಿಕ ಧೋರಣೆ ಮತ್ತು ಲಿಂಗಸೂಕ್ಷ್ಮತೆಯನ್ನೇ ಅವಲಂಬಿಸಬೇಕಾಗುತ್ತದೆ. ಇಂದಿಗೂ ಸಮಾಜದಲ್ಲಿ ತಾಂಡವಾಡುತ್ತಿರುವ ಮೌಢ್ಯಾಚರಣೆ, ಮೂಢ ನಂಬಿಕೆಗಳು, ಪ್ರಾಚೀನ ನಡವಳಿಕೆಗಳು ಮತ್ತು ಅಮಾನುಷ ಆಚರಣೆಗಳ ವಿರುದ್ಧ ವಿದ್ಯಾರ್ಥಿ ಸಮೂಹದಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವುದು ವರ್ತಮಾನದ ಅನಿವಾರ್ಯತೆಯೂ ಆಗಿದೆ. ಭಾರತೀಯ ಸಮಾಜವನ್ನು ಇಂದಿಗೂ ಕಾಡುತ್ತಿರುವ ಪಿತೃಪ್ರಧಾನತೆ ಮತ್ತು ತತ್ಸಂಬಂಧಿ ಲಿಂಗ ತಾರತಮ್ಯ, ಅಸ್ಪೃಶ್ಯತೆಯಂತಹ ಹೀನ ಆಚರಣೆ, ಸಾಮಾಜಿಕ ಬಹಿಷ್ಕಾರದಂತಹ ಜಾತಿ ಶ್ರೇಷ್ಠತೆಯ ಪಿಡುಗು ಹಾಗೂ ತಳಮಟ್ಟದ ಸಮಾಜದಲ್ಲಿ ಢಾಳಾಗಿ ಕಾಣುವ ಸಾಮಾಜಿಕ-ಆರ್ಥಿಕ ಅಸಮಾನತೆಗಳು, ಇವೆಲ್ಲವನ್ನೂ ನಿವಾರಿಸುವ ಚಿಕಿತ್ಸಕ ಗುಣ ಶಿಕ್ಷಣ ವ್ಯವಸ್ಥೆಯಲ್ಲಿ ಇರಬೇಕಾಗುತ್ತದೆ. ಈ ಚಿಕಿತ್ಸಕ ಗುಣವನ್ನು ಪಡೆಯಲು ಇಡೀ ಶೈಕ್ಷಣಿಕ ವ್ಯವಸ್ಥೆ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅವಲಂಬಿಸಬೇಕಾಗುತ್ತದೆ.

ಪ್ರಾಥಮಿಕ ಹಂತದಿಂದ ಉನ್ನತ ಪದವಿಯವರೆಗಿನ ಸ್ತರೀಯ ಸಂರಚನೆಗಳಿಗಿಂತಲೂ ಮುಖ್ಯವಾಗಿ ಕಾಣಬೇಕಾದುದು ಈ ವೈಜ್ಞಾನಿಕ-ವೈಚಾರಿಕ ಧೋರಣೆ. ಕರ್ನಾಟಕದ ಉನ್ನತ ಶಿಕ್ಷಣ ಈಗಾಗಲೇ ಕಾರ್ಪೋರೇಟ್‌ ಮಾರುಕಟ್ಟೆಯ ತೊಟ್ಟಿಲಿನಂತಾಗಿದ್ದು, ವಿಶ್ವವಿದ್ಯಾಲಯಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿವೆ. ಮತ್ತೊಂದೆಡೆ ಡೀಮ್ಡ್‌ ವಿಶ್ವವಿದ್ಯಾಲಯಗಳೂ ಹೆಚ್ಚಾಗುತ್ತಿದ್ದು, ಇಂಜಿನಿಯರಿಂಗ್-ವೈದ್ಯಕೀಯ ಕ್ಷೇತ್ರವನ್ನೂ ಸೇರಿದಂತೆ ಉನ್ನತ ಶಿಕ್ಷಣ ಕಾರ್ಪೋರೇಟೀಕರಣಕ್ಕೊಳಗಾಗಿದೆ. ಮಾರುಕಟ್ಟೆಗೆ ಬೇಕಾದ ಅಗ್ಗದ ಬೌದ್ಧಿಕ ಶ್ರಮ ಸರಕುಗಳನ್ನು ಉತ್ಪಾದಿಸುವ ಈ ಕಾರ್ಖಾನೆಗಳಿಂದ ಭಿನ್ನವಾಗಿ ಶೈಕ್ಷಣಿಕ ವಲಯ ಭವಿಷ್ಯದ ಸಮಾಜಕ್ಕೆ ಅಗತ್ಯವಾದ ಸಂವೇದನಾಶೀಲ, ಲಿಂಗಸೂಕ್ಷ್ಮತೆಯುಳ್ಳ, ಮಾನವೀಯ ಮೌಲ್ಯಗಳ, ಬಹುತ್ವ ಪ್ರೇರಿತ ಜ್ಞಾನ ಭಂಡಾರಗಳನ್ನು ತಯಾರಿಸುವ ಮೂಲಕ ಒಂದು ಸಮನ್ವಯದ ಆರೋಗ್ಯಕರ ಸಮಾಜವನ್ನು ಕಟ್ಟಲು ನೆರವಾಗಬೇಕಿದೆ. ಸಾರ್ವತ್ರಿಕ-ಸಾರ್ವಜನಿಕ ಶಿಕ್ಷಣವನ್ನು ಪ್ರೋತ್ಸಾಹಿಸಬೇಕಾಗಿರುವುದು ಈ ಕಾರಣಕ್ಕಾಗಿಯೇ.

ಆಯೋಗದ ಸ್ವರೂಪ

ಆದರೆ ರಾಜ್ಯ ಸರ್ಕಾರ ಪ್ರೊ. ಸುಖದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯೋಗದಲ್ಲಿ ವಿಜ್ಞಾನ-ಗಣಿತ ಶಿಸ್ತಿನ ತಜ್ಞರ-ಬೋಧಕರೇ ಇಲ್ಲದಿರುವುದು ಕಾಣುವಂತಿದೆ. ಹಾಗೆಯೇ ಮಹಿಳಾ ಪ್ರಾತಿನಿಧ್ಯವೂ ಸಮರ್ಪಕವಾಗಿ ಕಾಣುವುದಿಲ್ಲ. ರಾಜ್ಯದ ಬಹುತ್ವ ಸಂಸ್ಕೃತಿಯನ್ನು ಪೋಷಿಸಲು ಸದಾ ನೆರವಾಗುವ ಲಲಿತಕಲೆ, ರಂಗಭೂಮಿ ಮತ್ತು ತತ್ಸಂಬಂಧಿ ಸಾಂಸ್ಕೃತಿಕ ವಲಯದ ಪ್ರಾತಿನಿಧ್ಯವೂ ಢಾಳಾಗಿ ಕಾಣುತ್ತದೆ. ವೈಜ್ಞಾನಿಕ-ವೈಚಾರಿಕ ನೆಲೆಯ ಶಿಕ್ಷಣ ನೀತಿಯನ್ನು ರೂಪಿಸಬೇಕಾದ ಆಯೋಗವು ವಿಜ್ಞಾನ ತಜ್ಞರ ಕೊರತೆ ಹೊಂದಿರುವುದು ಸರ್ವಥಾ ಸಮರ್ಥನೀಯವಲ್ಲ. ಹಾಗೆಯೇ ಪಿತೃಪ್ರಧಾನ ಧೋರಣೆ ಮತ್ತೊಮ್ಮೆ ಘನೀಕರಣಗೊಳ್ಳುತ್ತಿರುವ ಸಮಾಜದಲ್ಲಿ ಶಿಕ್ಷಣ ವಲಯದ ಜವಾಬ್ದಾರಿಯನ್ನು ಅರಿತು, ಆಯೋಗದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ 2020ರ ಮುಖಾಮುಖಿಯಾಗಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಬೇಕಿಲ್ಲ. ಬದಲಾಗಿ ರಾಜ್ಯದ ಸಾಮಾನ್ಯ ಜನತೆಯ ಉಜ್ವಲ ಭವಿಷ್ಯದ ದೃಷ್ಟಿಯಿಂದ ಹೊಸ ನೀತಿ ರೂಪುಗೊಳ್ಳಬೇಕಿದೆ.

ಇದು ಸಾಕಾರಗೊಳ್ಳಬೇಕಾದರೆ ಪ್ರಪ್ರಥಮವಾಗಿ ಇಡೀ ಶಿಕ್ಷಣ ವಲಯವನ್ನು ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಬಂಡವಾಳದ ಹಿಡಿತದಿಂದ ಮುಕ್ತಗೊಳಿಸಬೇಕಿದೆ. ಸಾರ್ವತ್ರಿಕ-ಸಾರ್ವಜನಿಕ ಶಿಕ್ಷಣದ ಮೂಲಕವೇ ರಾಜ್ಯದ ಬಹುಸಾಂಸ್ಕೃತಿಕ ಸಮಾಜಕ್ಕೆ ಅಗತ್ಯವಾದ ಶೈಕ್ಷಣಿಕ ನೀತಿಯನ್ನು ಜಾರಿಗೊಳಿಸುವುದು ಹಾಲಿ ಸರ್ಕಾರದ ಆದ್ಯತೆಯೂ ಆಗಬೇಕಿದೆ. ಬೋಧನೆ, ಕಲಿಕೆ ಮತ್ತಿತರ ಶೈಕ್ಷಣಿಕ ಮಾರ್ಗಗಳನ್ನು ಬದಿಗಿಟ್ಟು ನೋಡಿದಾಗ, ಸರ್ಕಾರ ರಚಿಸಿರುವ ಶಿಕ್ಷಣ ತಜ್ಞರ ಆಯೋಗದ ಮೂಲ ಧಾತು ಕಾರ್ಪೋರೇಟ್ ಮಾರುಕಟ್ಟೆಯ ಜಗುಲಿಯಲ್ಲಿದೆಯೋ ಅಥವಾ ಶಾಲಾ ಕಾಲೇಜುಗಳ ಆವರಣದಲ್ಲಿದೆಯೋ ಎನ್ನುವುದು ಮುಖ್ಯವಾಗುತ್ತದೆ. ನವ ಉದಾರವಾದಿ ಆರ್ಥಿಕತೆಯ ಚೌಕಟ್ಟಿನಿಂದ ಹೊರಬಂದು ರಾಜ್ಯದ ಯುವ ಪೀಳಿಗೆಗೆ ಸಮಾನತೆ-ಸಮನ್ವಯ-ಭ್ರಾತೃತ್ವ ಮತ್ತು ಲಿಂಗ ಸೂಕ್ಷ್ಮತೆಯನ್ನು ಪೋಷಿಸುವಂತಹ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ಸರ್ಕಾರದ ಮತ್ತು ಆಯೋಗದ ಆದ್ಯತೆಯಾಗಬೇಕಿದೆ.
-೦-೦-೦-

Tags: bjpgovtCorporate capitalismeducationEducation policiesKarnataka
Previous Post

“ಯುವ” ಚಿತ್ರದ ರಿಲೀಸ್ ಡೇಟ್ ಫಿಕ್ಸ್ : ದೊಡ್ಡ ಮನೆ ಅಭಿಮಾನಿಗಳಿಗೆ ಹಬ್ಬ!

Next Post

ಓಂಪ್ರಕಾಶ್ ರಾವ್ ನಿರ್ದೇಶನದ “ಫೀನಿಕ್ಸ್” ಚಿತ್ರ ಆರಂಭ

Related Posts

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
0

ರಾಜ್ಯದಲ್ಲಿ ಸಿಎಂ ಪವರ್ ಶೇರಿಂಗ್ (Cm power sharing) ಹಗ್ಗ ಜಗ್ಗಾಟ ಜೋರಾಗಿದ್ದು, ಕಾಂಗ್ರೆಸ್ (Congress) ಪಾಳಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ಗರಿಗೆದರಿವೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ...

Read moreDetails
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025
Next Post
ಓಂಪ್ರಕಾಶ್ ರಾವ್ ನಿರ್ದೇಶನದ “ಫೀನಿಕ್ಸ್” ಚಿತ್ರ ಆರಂಭ

ಓಂಪ್ರಕಾಶ್ ರಾವ್ ನಿರ್ದೇಶನದ "ಫೀನಿಕ್ಸ್" ಚಿತ್ರ ಆರಂಭ

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada