ಇಡೀ ಪ್ರಪಂಚವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ “ಕೆ ಜಿ ಎಫ್”, “ಕಾಂತಾರ” ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಯುವ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು ದೊಡ್ ಮನೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.
ಜನಪ್ರಿಯ ಚಿತ್ರಗಳ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಚೊಚ್ಚಲ ಚಿತ್ರ “ಯುವ” ಯಾವಾಗ ಬಿಡುಗಡೆಯಾಗಬಹುದು? ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ.
ಬಹು ನಿರೀಕ್ಷಿತ ಈ “ಯುವ” ಚಿತ್ರ 2024 ರ ಮಾರ್ಚ್ 28 ರಂದು ಬಿಡುಗಡೆಯಾಗುತ್ತಿದೆ. ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹೊಂಬಾಳೆ ಫಿಲಂಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.