ಹೆಚ್ಚುತ್ತಿರುವ ನಿರುದ್ಯೋಗವನ್ನು ಕಡಿಮೆಗೊಳಿಸಲು, ಯುವಕರಲ್ಲಿ ಅಪೌಷ್ಟಿಕತೆ, ಮಾನಸಿಕ ಆರೋಗ್ಯ ಮತ್ತು ವ್ಯಸನದ ಸಮಸ್ಯೆಗಳನ್ನು ನಿಭಾಯಿಸಲು ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡಲು ಈ ಯುವ ನೀತಿಯು ಒತ್ತು ನೀಡುತ್ತದೆ
ಬೆಂಗಳೂರು: ‘ಕರ್ನಾಟಕ ಯುವ ನೀತಿ’ಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಹೆಚ್ಚುತ್ತಿರುವ ನಿರುದ್ಯೋಗವನ್ನು ಕಡಿಮೆಗೊಳಿಸಲು, ಯುವಕರಲ್ಲಿ ಅಪೌಷ್ಟಿಕತೆ, ಮಾನಸಿಕ ಆರೋಗ್ಯ ಮತ್ತು ವ್ಯಸನದ ಸಮಸ್ಯೆಗಳನ್ನು ನಿಭಾಯಿಸಲು ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡಲು ಈ ಯುವ ನೀತಿಯು ಒತ್ತು ನೀಡುತ್ತದೆ. ಪ್ರಥಮ ಬಾರಿಗೆ ಇಂತಹ ಸಮಗ್ರ ನೀತಿಯನ್ನು ರೂಪಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
“ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆಯೇ ಈ ನೀತಿ ಕೇಂದ್ರಿಕರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023ರಲ್ಲಿ ಯುವ ಬಜೆಟ್ ಮಂಡಿಸಲಿದ್ದಾರೆ. ತಾಲೂಕು ಮಟ್ಟದಲ್ಲಿ ಕಚೇರಿಗಳನ್ನು ತೆಗೆದು ಯುವಕರಿಗಾಗಿ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸುವಂತೆ ಈ ನೀತಿ ಶಿಫಾರಸು ಮಾಡಿದೆ” ಎಂದು ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಕರ್ನಾಟಕ ಯುವ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರವು ಅಕ್ಟೋಬರ್ 2021 ರಲ್ಲಿ 13 ಸದಸ್ಯರಿರುವ ತಜ್ಞರ ಸಮಿತಿಯನ್ನು ರಚಿಸಿತ್ತು.
ಈ ಸಮಿತಿಯು ಶಿಕ್ಷಣ, ತರಬೇತಿ, ಉದ್ಯೋಗ, ಉದ್ಯಮಶೀಲತೆ, ಆರೋಗ್ಯ ಮತ್ತು ಯೋಗಕ್ಷೇಮ, ಕ್ರೀಡೆ ಮತ್ತು ಫಿಟ್‌ನೆಸ್, ಕಲೆ ಮತ್ತು ಸಂಸ್ಕೃತಿ ಹಾಗೂ ನಾಯಕತ್ವದ ಅಭಿವೃದ್ಧಿ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡು 15 ರಿಂದ 29 ರ ವಯೋಮಾನದ ಯುವಕರಿಗೆ ಒತ್ತು ನೀಡಿತ್ತು.






