ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು (ಶುಕ್ರವಾರ) ದಾಖಲೆಯ 17ನೇ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಸುಮಾರು ಮೂರುವರೆ ತಾಸು ಬಜೆಟ್ ಭಾಷಣ ಮಂಡಿಸಿದ ಸಿದ್ದರಾಮಯ್ಯ ವಿವಿಧ ಯೋಜನೆಗಳಿಗೆ ಅನುದಾನ ಘೋಷಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಬಜೆಟ್ ನಿಂದ ಏನೆನು ದೊರೆತಿದೆ ಎಂಬ ಚಿತ್ರಣ ಇಲ್ಲಿದೆ.

ಬಜೆಟ್‌ನಲ್ಲಿ ಕೇವಲ ಸಾಲ ಬಾಕಿ ಉಳಿಸಿಕೊಂಡವರಿಗೆ ಮಾತ್ರವಲ್ಲದೆ, ಶಿಸ್ತಿನಿಂದ ಸಾಲ ಮರುಪಾವತಿ ಮಾಡುವ ರೈತರಿಗೂ ಮನ್ನಣೆ ನೀಡಲಾಗಿದೆ. ಸಾಲ ಪಡೆದು ಅದನ್ನು ನಿಯಮಿತವಾಗಿ ಮರುಪಾವತಿಸುವ ಅರ್ಹ ರೈತರಿಗೆ 50,000 ರೂಪಾಯಿ ವರೆಗೆ ಪ್ರೋತ್ಸಾಹಕ ಧನ (Incentive benefits) ನೀಡುವುದಾಗಿ ಘೋಷಿಸಲಾಗಿದೆ.

ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ, ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಎಂಎಸ್‌ಐಎಲ್ (MSIL) ವತಿಯಿಂದ ಪ್ರಾಯೋಗಿಕವಾಗಿ ರೈತ ಮಾಲ್’ಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ರೈತರ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ₹100 ಕೋಟಿ ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಿಎಂ ತಿಳಿಸಿದರು. ಸಣ್ಣ ಮತ್ತು ಅತೀ ಸಣ್ಣ ರೈತರ ನೆರವಿಗಾಗಿ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಬೆಳೆಗಳನ್ನು ಕಾಡುವ ವಿವಿಧ ಕೀಟಗಳು ಮತ್ತು ರೋಗಗಳಿಂದ ರಕ್ಷಣೆ ನೀಡಲು ವೈಜ್ಞಾನಿಕ ಕ್ರಮಗಳನ್ನು ಒಳಗೊಂಡ ‘ಸಸ್ಯ ಸಂಜೀವಿನಿ’ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನಕ್ಕೆ ತರಲಾಗುವುದು ಎಂದಿದ್ದಾರೆ.






