2013-14ರಿಂದ 2017-18ರ ಅವಧಿಯ ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ಮಾಣ/ನಿರ್ವಹಣೆಯ ವೆಚ್ಚದ ಕುರಿತು ಲೆಕ್ಕಪರಿಶೋಧನೆ ನಡೆಸಲಾಗಿದೆ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಲಯಗಳ ನಿರ್ವಹಣೆಗೆಂದು ಸಮಾಜ ಕಲ್ಯಾಣ ಇಲಾಖೆಗೆ ಹಣವನ್ನು ಒದಗಿಸಿದ್ದರೂ, ಸಮಾಜ ಕಲ್ಯಾಣ ಇಲಾಖೆ ಬಳಸಿಕೊಳ್ಳುವುದರಲ್ಲಿ ವಿಫಲವಾಗಿದೆ ಎಂದು ಲೆಕ್ಕಪರಿಶೋಧನೆ ವರದಿಯಲ್ಲಿ ಹೇಳಲಾಗಿದೆ.
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು, ವಿದ್ಯಾಭ್ಯಾಸ ಅರ್ಧದದಲ್ಲಿ ಬಿಡುವವರನ್ನು ಉತ್ಸಾಹಗೊಳಿಸಿ ಹಾಗೂ ಬಾಲಕರು ಮತ್ತು ಬಾಲಕಿಯರಿಗೆ ಶಿಕ್ಷಣ ನೀಡಿ ಸಬಲರನ್ನಾಗಿ ಮಾಡುವ ಉದ್ದೇಶದೊಂದಿಗೆ ಸಮಾಜ ಕಲ್ಯಾಣ ಇಲಾಖೆ ರಾಜ್ಯದಲ್ಲಿ ಒಟ್ಟು 1.56 ಲಕ್ಷ (1,56,130) ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಿರುವ 1,231 ಮೆಟ್ರಿಕ್ ಪೂರ್ವ ಮತ್ತು 636 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿದೆ. 2018-19ರ ವರ್ಷದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ 1,59,054 ಆಗಿತ್ತು. ವಿದ್ಯಾರ್ಥಿನಿಲಯಗಳ ನಿರ್ಮಾಣ/ದುರಸ್ತಿಗಳನ್ನು ನಿರ್ಮಿತಿ ಕೇಂದ್ರಗಳು (ಎನ್‍ಕೆ), ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‍ಐಡಿಎಲ್) ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕೆಆರ್‍ಇಐಎಸ್), ಇವುಗಳಿಗೆ ನಿರ್ಮಾಣದ ಕಾಮಗಾರಿಯನ್ನು ವಹಿಸಿದೆ.
ಸಮಾಜಕಲ್ಯಾಣ ಇಲಾಖೆಯ ಆಡಳಿತ ವ್ಯವಸ್ಥೆಯು ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಎಂಬ ಮೂರು ಮಟ್ಟಗಳನ್ನು ಒಳಗೊಂಡಿದೆ. ರಾಜ್ಯ ಮಟ್ಟದಲ್ಲಿ ಎಲ್ಲ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ಸಮಾಜ ಕಲ್ಯಾಣ ಆಯುಕ್ತರು ನೋಡಿಕೊಳ್ಳುತ್ತಾರೆ. ಜಿಲ್ಲಾ ಮಟ್ಟದಲ್ಲಿ ಒಟ್ಟಾರೆ ಮೇಲ್ವಿಚಾರಣೆಯ ಹೊಣೆಗಾರಿಕೆ ಜಂಟಿ ನಿರ್ದೇಶಕರು / ಉಪ ನಿರ್ದೇಶಕರು ನೋಡಿಕೊಳ್ಳುತ್ತಾರೆ. ತಾಲ್ಲೂಕು ಮಟ್ಟದಲ್ಲಿ ಒಟ್ಟಾರೆ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ಸಹಾಯಕ ನಿರ್ದೇಶಕರು ನೋಡಿಕೊಳ್ಳುತ್ತಾರೆ.
ಸಿಎಜಿ ಲೆಕ್ಕಪರಿಶೋಧನೆಗೆ ಆಯ್ಕೆ ಮಾಡಿದ ಎಂಟು ಜಿಲ್ಲೆಗಳ 42 ತಾಲ್ಲೂಕುಗಳಲ್ಲಿ 673 ವಿದ್ಯಾರ್ಥಿನಿಲಯಗಳಿವೆ. ಪರೀಕ್ಷಾ-ತನಿಖೆಗೆ ಆಯ್ಕೆ ಮಾಡಿದ 16 ತಾಲ್ಲೂಕುಗಳಲ್ಲಿರುವ 190 ವಿದ್ಯಾರ್ಥಿನಿಲಯಗಳಿಗೆ ಸಂಬಂಧಿಸಿದ ದಾಖಲೆಗಳ ಲೆಕ್ಕಪರಿಶೋಧನೆ ನಡೆಸಲಾಗಿದೆ. ಈ 190ರ ಪೈಕಿ 72 ವಿದ್ಯಾರ್ಥಿನಿಲಯಗಳಲ್ಲಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸ್ಥಳ ತನಿಖೆಯನ್ನೂ ನಡೆಸಲಾಗಿದೆ.
ವಿದ್ಯಾರ್ಥಿನಿಲಯಗಳಲ್ಲಿ ಅಧಿಕ ಮತ್ತು ಕಡಿಮೆ ಬಳಕೆ
ಲೆಕ್ಕಪರಿಶೋಧಕರು 16 ತಾಲ್ಲೂಕುಗಳಲ್ಲಿ ಸ್ಥಳ ತನಿಖೆ ನಡೆಸಿದಾಗ 190 ವಿದ್ಯಾರ್ಥಿನಿಲಯಗಳ ಪೈಕಿ 84 ವಿದ್ಯಾರ್ಥಿ ನಿಲಯಗಳಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ನೀಡಿರುವುದು ಗಮನಕ್ಕೆ ಬಂದಿದೆ. ಇನ್ನು 85 ವಿದ್ಯಾರ್ಥಿನಿಲಯಗಳಲ್ಲಿ ಶೇಕಡ 45ಕ್ಕಿಂತ ಕಡಿಮೆ ಸ್ಥಳಾವಕಾಶ ಬಳಕೆ ಮಾಡಲಾಗಿದೆ.
ಮಧುಗಿರಿಯ ಮೆಟ್ರಿಕ್-ನಂತರದ ಬಾಲಕಿಯರ 87 ಸಂಖ್ಯಾಬಲದ ವಿದ್ಯಾರ್ಥಿನಿಲಯದಲ್ಲಿ 135ರಿಂದ 215 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ನೀಡಲಾಗಿದೆ. ಆದರೆ ಅದೇ ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣವಾದ ಮೆಟ್ರಿಕ್-ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಮಂಜೂರಾದ 100 ಸಂಖ್ಯಾಬಲಕ್ಕೆ ಪ್ರತಿಯಾಗಿ ಕೇವಲ 27 ವಿದ್ಯಾರ್ಥಿಗಳು ಇದ್ದಾರೆ. ಅಂತೆಯೇ ಹೊಳಲ್ಕೆರೆ ಪಟ್ಟಣದ ಮೆಟ್ರಿಕ್-ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮಂಜೂರಾದ 100
ಸಂಖ್ಯಾಬಲಕ್ಕೆ ಪ್ರತಿಯಾಗಿ 123ರಿಂದ 225 ವಿದ್ಯಾರ್ಥಿಗಳಿದ್ದಾರೆ. ಅದೇ ಪಟ್ಟಣದ ವಿದ್ಯಾರ್ಥಿನಿಲಯದಲ್ಲಿ ಮಂಜೂರಾದ 90 ಸಂಖ್ಯಾಬಲಕ್ಕೆ ಪ್ರತಿಯಾಗಿ ಕೇವಲ 56 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ.
ಸಕಲೇಶಪುರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 16.12.2017ರಲ್ಲಿ ರೂ. 27.80 ಕೋಟಿ ಅಂದಾಜು ವೆಚ್ಚದಲ್ಲಿ ಛಾವಣಿಯನ್ನು ಜಲನಿರೋಧಕವನ್ನಾಗಿ ಮಾಡುವುದು, ವಾರ್ಡ್ ರೋಬ್ ಗಳು, ಪ್ಲಂಬಿಂಗ್ ಕಾಮಗಾರಿಗಳು ಮತ್ತು ಇನ್ನಿತರ ಕಾಮಗಾರಿಗಳಾಗಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಆದರೆ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ದೊಂಬರಮತ್ತೂರಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ರೂ.14.75 ಕೋಟಿ ಮತ್ತು ಸವಣೂರು ಪಟ್ಟಣದಲ್ಲಿ ರೂ.17.50 ಕೋಟಿ ಹಾಗೂ ಹುರಳಿಕುಪ್ಪಿ ವಿದ್ಯಾರ್ಥಿನಿಲಯದಲ್ಲಿ ರೂ. 16.50 ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳಬೇಕಿದ್ದ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಮತ್ತು ಸ್ನಾನಗೃಹ ಮತ್ತು ಶೌಚಾಲಯಗಳಿಗೆ ನೀರಿನ ಸಂಪರ್ಕವನ್ನು ಸಹ ಒದಗಿಸಬೇಕಾಗಿರುವ ಕೆಲಸ ಕೈಗೆತ್ತಿಕೊಂಡಿಲ್ಲ.
ಕೆಟಿಪಿಪಿ ಅಧಿನಿಯಮದ ಕಾಯ್ದೆ ಉಲ್ಲಂಘನೆ
ಎನ್‍ಕೆ ಮತ್ತು ಕೆಆರ್‍ಐಡಿಎಲ್‍ಗಳಿಗೆ ವಹಿಸಿದ್ದ ಕಾಮಗಾರಿಗಳು ಕೆಟಿಪಿಪಿ ಅಧಿನಿಯಮದ ಕಲಂ 4(ಜಿ) ಅಡಿಯಲ್ಲಿ ವಹಿಸಬಹುದಿದ್ದ ಕಾಮಗಾರಿಗಳ ವೆಚ್ಚವು ರೂ.2 ಕೋಟಿಯನ್ನು ಮೀರುವಂತಿಲ್ಲ. ಆದರೆ ಈ ಅಧಿಸೂಚನೆಯನ್ನು ಉಲ್ಲಂಘಿಸಿ ಸಮಾಜಕಲ್ಯಾಣ ಇಲಾಖೆಯ ಆಯುಕ್ತರು 2014-15ರಲ್ಲಿ ಮೂರು ಕಾಮಗಾರಿಗಳನ್ನು ಎನ್ ಕೆಗೆ ವಹಿಸಿದ್ದರು, ಅವುಗಳ ಅಂದಾಜು ವೆಚ್ಚವು 2 ಕೋಟಿಗಳಿಗಿಂತ ಅಧಿಕವಾಗಿತ್ತು.
2013-14ರಿಂದ 2017-18ರ ಅವಧಿಯಲ್ಲಿ ಕೈಗೆತ್ತಿಕೊಂಡ ಏಜೆನ್ಸಿವಾರು ನಿರ್ಮಾಣದ ಸ್ಥಿತಿ
ಭೂಮಿಯ ಅಲಭ್ಯತೆಯಿಂದ ಕಾಮಗಾರಿ ವಿಳಂಬ
ಲೋಕೋಪಯೋಗಿ ಇಲಾಖಾ ಸಂಹಿತೆಯ ಉಪಬಂಧಗಳ ಪ್ರಕಾರ, ಕಾಮಗಾರಿಗಾಗಿ ಅಗತ್ಯವಿರುವ ಪೂರ್ಣ ಭೂಮಿಯು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳದೇ ಕಾರ್ಯಗತಗೊಳಿಸಲು ಯಾವುದೇ ಕಾಮಗಾರಿಯನ್ನು ವಹಿಸಬಾರದು. ನಿವೇಶನದ ಲಭ್ಯತೆಯನ್ನು ಖಚಿತಪಡಿಸಕೊಂಡ ನಂತರವೇ ಕಾಮಗಾರಿಗಳ ಅನುಷ್ಠಾನಕ್ಕೆ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂಬ ನಿಯಮವೂ ಇದೆ. ಆದರೆ 2013-14ರಿಂದ 2017-18ರ ಅವಧಿಯಲ್ಲಿ ಒಂದು ವಿದ್ಯಾರ್ಥಿನಿಲಯವನ್ನು ಒಳಗೊಂಡು ರೂ. 45.63 ಕೋಟಿ ಅಂದಾಜು ವೆಚ್ಚದ 12 ವಿದ್ಯಾರ್ಥಿನಿಲಯಗಳ ನಿರ್ಮಾಣದ ಕಾಮಗಾರಿಯನ್ನು ಎನ್ ಕೆ ಮತ್ತು ಕೆ ಆರ್ ಇ ಐ ಎಸ್ ಗಳಿಗೆ ಭೂಮಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳದೇ ವಹಿಸಲಾಗಿದೆ.
2013-14ರಿಂದ 2017-18ರ ಅವಧಿಯಲ್ಲಿ ರಾಜ್ಯ ಸರ್ಕಾರವು ರೂ. 575.42 ಕೋಟಿ ಅಂದಾಜು ವೆಚ್ಚದ 1,990 ದುರಸ್ತಿ / ನವೀಕರಣ ಕಾಮಗಾರಿಗಳ ಸ್ಥಿತಿ ಕೆಳಕಂಡಂತಿದೆ
ಶಾಸನಬದ್ಧ ಕಡಿತಗಳು ಮತ್ತು ಹೆಚ್ಚಿನ ಭದ್ರತಾ ಠೇವಣಿಯನ್ನು ವಸೂಲು ಮಾಡದೇ ನಿರ್ಲಕ್ಷ್ಯ
ನಿರ್ಮಾಣದ ಪ್ರಗತಿಯನ್ನು ಆಧರಿಸಿ ನಿರ್ಮಾಣ ಏಜೆನ್ಸಿಗಳಿಗೆ ಹಂತಹಂತವಾಗಿ ಹಾಗೂ ಶೇಕಡಾ 5ರ ಹೆಚ್ಚಿನ ಭದ್ರತಾ ಠೇವಣಿಯನ್ನು ಒಳಗೊಂಡು ಶಾಸನಬದ್ಧ ಕಡಿತಗಳನ್ನು ವಸೂಲು ಮಾಡಿದ ನಂತರ ಹಣವನ್ನು ಬಿಡುಗಡೆ ಮಾಡಬೇಕೆಂದು ನಿಯಮವಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು 2013-14ರಿಂದ 2017-18ರ ಅವಧಿಯಲ್ಲಿ ನಿರ್ಮಾಣ ಏಜೆನ್ಸಿಗಳಿಗೆ ರೂ.743.21 ಕೋಟಿಗಳನ್ನು ಬಿಡುಗಡೆ ಮಾಡಿದ್ದರು. ಎಲ್ಲ ಕಾಮಗಾರಿಗಳಿಗೆ ಶಾಸನಬದ್ದ ಕಡಿತಗಳು ಹಾಗೂ ಹೆಚ್ಚಿನ ಭದ್ರತಾ ಠೇವಣಿಯ ಯಾವುದೇ ವಸೂಲಾತಿಯನ್ನು ಮಾಡದೇ ಇಲಾಖೆ ಹಣವನ್ನು ಒಂದೇ ಬಾರಿಗೆ ಬಿಡುಗಡೆ ಮಾಡಿದೆ.
ಏಜೆನ್ಸಿಗಳಲ್ಲೇ ಹಣವನ್ನು ಉಳಿಸಿಕೊಂಡಿರುವುದು
ಭೂವಿವಾದಗಳಿಂದ ನಿವೇಶನಗಳ ಲಭ್ಯತೆಯಿಂದ ಹಾಗೂ ಇತರೆ ಕಾರಣದಿಂದ ಕೆಲವು ವಿದ್ಯಾರ್ಥಿನಿಲಯಗಳ ನಿರ್ಮಾಣ / ದುರಸ್ಥಿಗಳ 12 ನಿರ್ಮಾಣ ಕಾಮಗಾರಿಗಳ ಸಂಬಂಧವಾಗಿ ರೂ. 45.63 ಕೋಟಿ ಮತ್ತು 7 ದುರಸ್ತಿ / ನವೀಕರಣ ಕಾಮಗಾರಿಗಳಿಗೆ ಸಂಬಂಧಿಸಿದ ರೂ.2.07 ಕೋಟಿ ಕೆ ಆರ್ ಇ ಐ ಎಸ್ ಮತ್ತು ಕೆ ಆರ್ ಐ ಡಿ ಎಲ್ ಏಜೆನ್ಸೆಯಲ್ಲೇ ಉಳಿಸಿಕೊಂಡಿದೆ.