SSLC ಪರೀಕ್ಷೆ ದಿನಾಂಕ ಘೋಷಣೆ ಆಗಿದೆ. ಜೂನ್ 25 ರಿಂದ ಜುಲೈ 4ರ ತನಕ ಪರೀಕ್ಷೆಗಳು ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಿದ ಬಳಿಕ ಮಂಗಳವಾರ ಪ್ರೌಢಶಿಕ್ಷಣ ಮಂಡಳಿಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಪರೀಕ್ಷೆ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ವಿದ್ಯಾರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಈಗಾಗಲೇ ಕರೋನಾ ಸೋಂಕಿನ ಆತಂಕದಲ್ಲಿ ಮುಳುಗಿರುವ ಮಕ್ಕಳು, ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಆದರೆ ಸಿದ್ಧತೆಯಲ್ಲಿ ಎಡವಿ ಬೀಳುತ್ತೇವೆ. ನಾವು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಿಲ್ಲ ಎಂದುಕೊಂಡು ತನ್ನ ಮನಸ್ಸಿನ ಮೇಲಿನ ಹಿಡಿತ ಕೈ ತಪ್ಪುವ ಮೂಲಕ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಕರೋನಾ ಸೋಂಕಿನಿಂದ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ SSLCಪರೀಕ್ಷೆ ಬರೆಯುವ ಮಕ್ಕಳ ಪೋಷಕರು ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಳ್ಳುವಂತೆ ಮಾಡಿದೆ.
ಶಾಲಾ ದಿನಗಳು ನಿರಂತರವಾಗಿ ನಡೆದುಕೊಂಡು ಬಂದ ಬಳಿಕ ಅಂತಿಮವಾಗಿ ಪರೀಕ್ಷೆ ಬರೆದು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡ ಬಳಿಕ ತೇರ್ಗಡೆಯೋ ಅನುತ್ತೀರ್ಣವೋ ಹೇಳಿಬಿಡುತ್ತಿದ್ದರು. ಪರೀಕ್ಷೆ ಬರೆದ ಬಳಿಕ ಫಲಿತಾಂಶ ಹೊರ ಬೀಳುವ ಮುನ್ನ ವಿದ್ಯಾರ್ಥಿಗಳು ನಪಾಸು ಆಗುವ ಭಯದಿಂದ ಕೆಲವು ಮಕ್ಕಳು ಆತ್ಮಹತ್ಯೆಯ ಕೂಪಕ್ಕೆ ಬೀಳುತ್ತಿದ್ದರು. ಆದರೆ ಈ ಬಾರೀ ಪರೀಕ್ಷೆ ಎನ್ನುತ್ತಿದ್ದಂತೆ ಸಾವಿನ ಸರಣಿ ಶುರುವಾಗಿರುವ ಲಕ್ಷಗಳು ಕಾಣಿಸುತ್ತಿವೆ. ಇನ್ನೂ ಪರೀಕ್ಷೆಗೆ ಒಂದು ತಿಂಗಳು ಕಾಲಾವಾಕಾಶ ಇದ್ದರೂ ಮಕ್ಕಳು ದಿಗಿಲುಗೊಳ್ಳುವಂತೆ ಮಾಡಿದೆ SSLC ಪರೀಕ್ಷೆ. ಪ್ರೌಢ ಶಿಕ್ಷಣ ಮಂಡಳಿ ಅಧಿಸೂಚನೆ ಹೊರಡಿಸಿದ ದಿನವೇ ರಾಜ್ಯದ ಎರಡು ಕಡೆ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಚಾಮರಾಜನಗರದಲ್ಲಿ ವಿದ್ಯಾರ್ಥಿನಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊಬೈಲ್ ನೋಡುತ್ತಿದ್ದ ಮಗಳಿಗೆ ಪೋಷಕರು ಬುದ್ಧಿವಾದ ಹೇಳಿದ್ದರು. ಪರೀಕ್ಷೆ ಘೋಷಣೆಯಾಗಿದೆ, ಮೊಬೈಲ್ ಬಿಟ್ಟು ಓದಿಕೊಳ್ಳುವಂತೆ ಗದರಿದ್ದರು ಎನ್ನಲಾಗಿದೆ. ಚಾಮರಾಜನಗರದ ಕೊಳ್ಳೆಗಾಲದ ದೇವಾಂಗ ಪೇಟೆಯಲ್ಲಿ ಘಟನೆ ಜರುಗಿದೆ. 17 ವರ್ಷದ ದರ್ಶಿನಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ವಿದ್ಯಾರ್ಥಿನಿ ಆಗಿದ್ದಾಳೆ. ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ SSLC ಪರೀಕ್ಷೆಗೆ ಹೆದರಿಕೊಂಡು ಕೊಡಗಿನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಡಗಿನ ಕಾಜೂರು ಗ್ರಾಮ 15 ವರ್ಷದ ಬಾಲಕ ರಿಷಿ ಆತ್ಮಹತ್ಯೆಗೆ ಶರಣಾದ ಬಾಲಕನಾಗಿದ್ದಾನೆ. ಸೋಮವಾರ ಪೇಟೆಯ ಕಾಜೂರಿನ ಭಾರತ ವಿದ್ಯಾಸಂಸ್ಥೆಯಲ್ಲಿ ಓದುತ್ತಿದ್ದ ಎನ್ನಲಾಗಿದೆ. ಪರೀಕ್ಷೆ ಘೋಷಣೆಯಾಗಿದೆ, ಮುಂದಿನ ತಿಂಗಳು ಪರೀಕ್ಷೆ ಎನ್ನುವುದು ಗೊತ್ತಾದ ಮೇಲೆ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರ, ಶಿಕ್ಷಕರು, ಪೋಷಕರದ್ದು ಹೆಚ್ಚಿನ ಜವಾಬ್ದಾರಿ..!
ಪ್ರತಿವರ್ಷ ಓದಲು ಬಾರದ, ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳು ಮನೆಯವರನ್ನು ಎದುರಿಸಲಾಗದೆ ಸಾವಿನ ಚಿಂತೆ ಮಾಡುತ್ತಿದ್ದರು. ಆದರೆ ಈ ಬಾರಿ ಚೆನ್ನಾಗಿ ಓದುತ್ತಿದ್ದ ಮಕ್ಕಳೇ ಆತ್ಮಹತ್ಯೆ ಮಾಡಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಕಾರಣ ಕರೋನಾ ಎಂಬ ಮಹಾಮಾರಿ. ಕಳೆದ 2 ತಿಂಗಳು ಕಾಲ ಮಕ್ಕಳು ಮನೆಯಲ್ಲಿ ಓದುವುದನ್ನು ಬಿಟ್ಟು ಮನೆಯವರ ಜೊತೆ ಕಾಲ ಕಳೆದಿದ್ದಾರೆ. ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎನ್ನುವ ಅನಿಶ್ಚಿತತೆ ಮಕ್ಕಳನ್ನು ಶಿಕ್ಷಣದಿಂದ ದೂರು ಮಾಡಿತ್ತು. ಇದೀಗ ಏಕಾಏಕಿ ಪರೀಕ್ಷೆ ಘೋಷಣೆಯಾಗಿದೆ. ನಾವು ಓದಿದೆಲ್ಲಾ ಮರೆತು ಹೋಗಿದೆ ಎನ್ನುವ ಭಾವದಲ್ಲಿ ಮಕ್ಕಳಿದ್ದಾರೆ. ಪರೀಕ್ಷೆ ಎನ್ನುತ್ತಿದ್ದಂತೆ ಪೋಷಕರು ಯುದ್ಧಾ..! ಎನ್ನುವಂತೆ ಭಾವನೆ ವ್ಯಕ್ತಪಡಿಸ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಆಗದ ಸೂಕ್ಷ್ಮ ಮನಸ್ಸಿನ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಪರೀಕ್ಷೆ ಬಂದಿದೆ, ಆದರೆ ಇದು ಅಂತಿಮವಲ್ಲ. ಅದೂ ಅಲ್ಲದೆ ಈ ಬಾರಿಯ ಪರೀಕ್ಷೆ ಕಳೆದ ಬೇರೆಲ್ಲಾ ಪರೀಕ್ಷೆಗಳಿಗಿಂತಲೂ ತುಸು ಅರ್ಥವಾಗುವ ಭಾಷೆಯಲ್ಲಿ ಸರಳವಾಗಿರಲಿದೆ ಎನ್ನುವ ಮಾಹಿತಿ ಇದೆ. ಕರೋನಾ ಸಂಕಷ್ಟ ಕಾಲದಲ್ಲಿರುವ ಮಕ್ಕಳು ಹೆಚ್ಚುಕಡಿಮೆ ಪಾಠಗಳನ್ನೇ ಮರೆತಿರುತ್ತಾರೆ ಎನ್ನುವುದು ಪರೀಕ್ಷಾ ಮಂಡಳಿಯ ಗಮನದಲ್ಲೂ ಇರಲಿದೆ ಎನ್ನುವುದು ಶಿಕ್ಷಕರ ಅಭಿಪ್ರಾಯ. ಹಾಗಾಗಿ ಮಕ್ಕಳು ಹೆದರಬೇಕಾದ ಅವಶ್ಯಕತೆಯಿಲ್ಲ. ಪೋಷಕರು ಮಕ್ಕಳನ್ನು ಯುದ್ಧಕ್ಕೆ ಸೈನಿಕ ಸಜ್ಜಾದಂತೆ ಮಾಡುವುದು ಅನಿವಾರ್ಯವಲ್ಲ. ಮುಂದಿನ ದಿನಗಳಲ್ಲಿ ಕರೋನಾ ಸೋಂಕು ಕಡಿಮೆಯಾದ ಬಳಿಕ ನಿಮ್ಮ ಮಕ್ಕಳನ್ನು ಓದಿಸಬಹುದು. ಮಕ್ಕಳನ್ನು ಕಳೆದುಕೊಳ್ಳುವ ದುಸ್ಸಾಹಸ ಮಾಡಬೇಡಿ.
ಸರ್ಕಾರ ಸೂಕ್ಷ್ಮ ಮನಸ್ಸಿನ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಕಾಲ್ ಸೆಂಟರ್ ತೆರೆದರೆ ಸಾವಿರಾರು ಮಕ್ಕಳಿಗೆ ಅನುಕೂಲ ಆಗಲಿದೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಸೂಕ್ತ ಮನೋ ವಿಜ್ಞಾನ ಅಧ್ಯಯನ ಮಾಡಿರುವ ತಂಡವನ್ನು ನಿಯೋಜನೆ ಮಾಡಿದರೆ ಕರೋನಾ ಕಾಲದಲ್ಲಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿ ಸಾವಿನ ಸಂಖ್ಯೆಯನ್ನು ಇಳಿಸಲು ಅನುಕೂಲ ಆಗಲಿದೆ. ಇನ್ನೂ ಶಾಲೆಗಳ ಶಿಕ್ಷಕರು ಈಗಾಗಲೇ ಪರೀಕ್ಷೆ ಸಿದ್ಧಪಾಠಗಳನ್ನು ಕಳುಹಿಸುವ ಉದ್ದೇಶದಿಂದ ವಾಟ್ಸಪ್ ಗ್ರೂಪ್‌ಗಳನ್ನು ಮಾಡಿಕೊಂಡಿದ್ದು, ʼಪರೀಕ್ಷೆ ಹತ್ತಿರ ಬಂತು ಎಚ್ಚರ, ಓದಿಕೊಳ್ಳಿʼ ಎಂದು ಬೆದರಿಸುವ ಬದಲು ʼನಾವಿದ್ದೇವೆʼ, ʼಈ ಬಾರಿ ಪರೀಕ್ಷಾ ಭಯಬೇಡʼ. ʼನಿಮಗೆ ಎಷ್ಟು ಗೊತ್ತು ಅಷ್ಟನ್ನು ಬರೆದು ಪಾಸ್ ಆಗಲು ಯತ್ನ ಮಾಡಿʼ ಎಂದು ಪ್ರೋತ್ಸಾಹದ ಮಾತುಗಳನ್ನು ಹೇಳಬೇಕಿದೆ. ಶಾಲಾ ಆಡಳಿತ ಮಂಡಳಿಗಳ ಪಾತ್ರವೂ ತುಂಬಾ ದೊಡ್ಡದಿದ್ದು, ಹೆಚ್ಚಿನ ಫಲಿತಾಂಶ ನಮಗೆ ಬರಲೇಬೇಕು ಎನ್ನುವ ಧಾವಂತವನ್ನು ಬಿಡಬೇಕಿದೆ. ಕರೋನಾ ಸಂಕಷ್ಟದ ಕಾಲದಲ್ಲಿ ಮಕ್ಕಳನ್ನು ವಿಶ್ವಾಸದಿಂದ ಪರೀಕ್ಷೆ ಸಜ್ಜು ಮಾಡುವ ನಿಪುಣತೆ ಶಿಕ್ಷಕರು ಹಾಗೂ ಪೋಷಕರನ್ನು ಕಂಡು ಬಂದರೆ ಮಕ್ಕಳ ಸಾವಿಗೆ ಕಡಿವಾಣ ಹಾಕಬಹುದು. ಇಲ್ಲದಿದ್ದರೆ, ಚೆನ್ನಾಗಿಯೇ ಓದುತ್ತಿದ್ದ ಮಕ್ಕಳನ್ನು ಕಳೆದುಕೊಳ್ಳಬೇಕಾಗುತ್ತದೆ. ಯಾವುದಕ್ಕೂ ಒಮ್ಮೆ ಯೋಚಿಸಿ.