ಅವರು ತಮ್ಮ 75ನೇ ವರ್ಷದ ಹುಟ್ಟುಹಬ್ಬದ ದಿನದಂದು ಮೈಸೂರಿನಲ್ಲಿ ನಡೆದ ತಮ್ಮ ಐವತ್ತು ವರ್ಷದ ರಾಜಕೀಯ ಜೀವನ-ಸಾಧನೆ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ನಿರ್ಧಾರ ಪ್ರಕಟಿಸಿದ್ದು, ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸುವುದಾಗಿಯು ಮತ್ತು ಈ ನಿರ್ಧಾರದಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ಹೇಳಿದ್ದಾರೆ.
ಈ ಪುಸ್ತಕದಲ್ಲಿ ನನ್ನ ರಾಜಕೀಯ ಜೀವನದ ಎಲ್ಲ ಏಳು ಬೀಳುಗಳನ್ನು ದಾಖಲಿಸಿದ್ದೇನೆ. ಅರ್ಧ ಶತಮಾನದ ರಾಜಕಾರಣ ಬಳಿಕ ನಾನು ಆತ್ಮತೃಪ್ತಿಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತನಾಗುತ್ತಿದ್ದೇನೆ. ನಾಲ್ಕು ವರ್ಷದ ಹಿಂದೆಯೇ ನಾನು ರಾಜಕೀಯ ನಿವೃತ್ತಿ ಬಯಸಿದ್ದೆ. ಆದರೆ ಆ ನಂತರದ ರಾಜಕೀಯ ಬೆಳವಣಿಗೆ ಮತ್ತು ಸಂದರ್ಭದ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡಿದ್ದೆ. ಇನ್ನು ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ ಮಾತಿನಿಂದ ಹಿಂದೆ ಸರಿಯುವುದಿಲ್ಲ. ಇದು ಅಂತಿಮ ತೀರ್ಮಾನ ಎಂದು ಹೇಳಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಅವರು ಕಾಂಗ್ರೆಸ್ಸಿನ ಧ್ರವನಾರಾಯಣ್ ವಿರುದ್ಧ ಜಯಗಳಿಸಿ, ಸಂಸದರಾಗಿ ಆಯ್ಕೆಯಾಗಿದ್ದರು. ಶ್ರೀನಿವಾಸ್ ಪ್ರಸಾದ್ ಅವರು ಒಟ್ಟು ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು, ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದರು. ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದರು. ಕೇಂದ್ರ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಅಲ್ಲದೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಸಚಿವ ಸಂಪುಟದ ಭಾಗವಾಗಿ ಸಚಿವರಾಗಿಯೂ ಅವಕಾಶ ಪಡೆದಿದ್ದರು.

ಬಳಿಕ ಸಿದ್ದರಾಮಯ್ಯ ಅವರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆಯೂ ಅವರು ಹಲವು ಬಾರಿ ಕಾಂಗ್ರೆಸ್, ಜೆಡಿಯು, ಬಿಜೆಪಿ, ಸಮತಾ ಪಕ್ಷ ಮತ್ತು ಜೆಡಿಎಸ್ ಪಕ್ಷಗಳನ್ನು ಸಂಸತ್ ಮತ್ತು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು.