ನ್ಯಾಯಾಲಯದ ನಿರ್ದೇಶನದಂತೆ ಶೃಂಗೇರಿ ಕ್ಷೇತ್ರದ ಪೋಸ್ಟಲ್ ವೋಟ್ಸ್ ಮರು ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿಜಯಶಾಲಿಯಾಗಿದ್ದಾರೆ. ಈ ಮರು ಎಣಿಕೆಯ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂತಹ ಘಟನೆ ದೇಶದಲ್ಲೇ ಅಪರೂಪವಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಜೀವರಾಜ್, 2023ರ ಚುನಾವಣಾ ಎಣಿಕೆಯ ವೇಳೆ ನಡೆದ ಅಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಆ ಸಂದರ್ಭದಲ್ಲಿ 1,811 ಪೋಸ್ಟಲ್ ವೋಟ್ಸ್ ಎಣಿಕೆಯಲ್ಲಿ ಗೊಂದಲ ಉಂಟಾಗಿದ್ದು, ಆರಂಭದಲ್ಲಿ ತಮಗೆ ಹೆಚ್ಚಿನ ಮತಗಳು ಬಂದಿದ್ದರೂ ನಂತರ ಅಸಿಂಧು ಮತಗಳನ್ನು ಎದುರಾಳಿ ಪರ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.ಮರು ಎಣಿಕೆಯ ಬಳಿಕ ಜೀವರಾಜ್ ಅವರನ್ನು ಶಾಸಕರಾಗಿ ಘೋಷಿಸಲಾಗಿದ್ದು, ಕ್ಷೇತ್ರದಲ್ಲಿ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾನೂನು ಮತ್ತು ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.






