ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಸೋಲಿನ ಆಘಾತದ ನಡುವೆಯೇ ಟಿಎಂಸಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ.ಯುವ ನಾಯಕ ಹಾಗೂ ಮಾಜಿ ಸಚಿವ ಮನೋಜ್ ತಿವಾರಿ ಪಕ್ಷಕ್ಕೆ ವಿದಾಯ ಘೋಷಿಸಿದ್ದು, ದೀದಿ ವಿರುದ್ಧ ಗಂಭೀರ ಆರೋಪಗಳನ್ನು ಹೊರಹಾಕಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ದಿನದ ಬಳಿಕವೇ ತಮ್ಮ ನಿರ್ಧಾರ ಪ್ರಕಟಿಸಿದ ಅವರು, ಪಕ್ಷದೊಳಗಿನ ಭ್ರಷ್ಟಾಚಾರವೇ ಸೋಲಿಗೆ ಕಾರಣ ಎಂದು ಕಿಡಿಕಾರಿದ್ದಾರೆ.“ಈ ಫಲಿತಾಂಶ ನನಗೆ ಆಶ್ಚರ್ಯವಾಗಿಲ್ಲ. ಪಕ್ಷ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆಯಲು ಅಭ್ಯರ್ಥಿಗಳು 5 ಕೋಟಿ ರೂಪಾಯಿ ನೀಡಬೇಕಾಗಿತ್ತು. ನನಗೂ ಹಣ ಕೇಳಲಾಯಿತು, ಆದರೆ ನಾನು ನಿರಾಕರಿಸಿದೆ” ಎಂದು ಅವರು ಆರೋಪಿಸಿದರು.ಅವರ ಹೇಳಿಕೆಯಂತೆ, ಈ ಬಾರಿ 70ಕ್ಕೂ ಹೆಚ್ಚು ಅಭ್ಯರ್ಥಿಗಳು ಕೋಟ್ಯಂತರ ಹಣ ನೀಡಿ ಟಿಕೆಟ್ ಪಡೆದಿದ್ದಾರೆ. “ಅದರಲ್ಲೇ ಎಷ್ಟು ಮಂದಿ ಗೆದ್ದಿದ್ದಾರೆ ನೋಡಿದರೆ ಸತ್ಯ ಗೊತ್ತಾಗುತ್ತದೆ. ಹೀಗಾಗಿ ನನ್ನ ಜೀವನದ ತೃಣಮೂಲ ಅಧ್ಯಾಯ ಇಲ್ಲಿಗೆ ಮುಗಿದಿದೆ” ಎಂದು ಹೇಳಿದರು.

ಇನ್ನೂ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಅವರು, “ನನಗೆ ರಾಜಕೀಯಕ್ಕೆ ಬರಲು ಆಸಕ್ತಿ ಇರಲಿಲ್ಲ. 2019ರಲ್ಲಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ಕೇಳಿದರು, ಆದರೆ ನಾನು ನಿರಾಕರಿಸಿದೆ. ಬಳಿಕ 2021ರಲ್ಲಿ ಮತ್ತೆ ಒತ್ತಾಯ ಮಾಡಿದಾಗ ಬದಲಾವಣೆಯ ನಿರೀಕ್ಷೆಯಲ್ಲಿ ಸ್ಪರ್ಧೆ ಮಾಡಿದೆ. ಆದರೆ ಗೆದ್ದ ನಂತರ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ಕೊಡಲಿಲ್ಲ. ಮಾತಾಡಲು ಸಮಯವೂ ಕೊಡುತ್ತಿರಲಿಲ್ಲ” ಎಂದು ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಬೆಳವಣಿಗೆಗಳು ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಟಿಎಂಸಿಗೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.






