ಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಹಣದುಬ್ಬರ ತೀವ್ರವಾಗಿದ್ದು ಆಹಾರಕ್ಕೂ ಪರದಾಡುವಂತಾಗಿದೆ ಎಂದು ವರದಿಗಳಾಗುತ್ತಿವೆ. ಈ ನಡುವೆ ಕಾಗದಗಳ ಬೆಲೆ ಏರಿಕೆಯಾಗಿದ್ದು, ಮುದ್ರಣ ವೆಚ್ಚವನ್ನು ಭರಿಸಲಾಗದ್ದರಿಂದ ದೇಶದ ಎರಡು ಪ್ರಮುಖ ಪತ್ರಿಕೆಗಳು ತಮ್ಮ ಪ್ರಕಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ವಿದೇಶಿ ವಿನಿಮಯ ಸಂಗ್ರಹ ಕನಿಷ್ಟ ಮಟ್ಟಕ್ಕೆ ಕುಸಿದಿರುವ ದ್ವೀಪರಾಷ್ಟ್ರದಲ್ಲಿ ಇಂಧನ, ವಿದ್ಯುತ್, ಔಷಧ, ಆಹಾರ ಸೇರಿದಂತೆ ಅಗತ್ಯದ ದಿನಬಳಕೆ ವಸ್ತುಗಳ ತೀವ್ರ ಕೊರತೆಯಿದೆ. 22 ಮಿಲಿಯನ್ ಜನಸಂಖ್ಯೆ ಇರುವ ಈ ದೇಶದಲ್ಲಿ ಇದೀಗ ಮುದ್ರಣಕ್ಕೆ ಬೇಕಾದ ವಸ್ತುಗಳ ಅಭಾವ ಇರುವುದರಿಂದ ತನ್ನ ಆಂಗ್ಲಮಾಧ್ಯಮ ದಿನಪತ್ರಿಕೆ ‘ದಿ ಐಲ್ಯಾಂಡ್’ ಮತ್ತು ಸಿಂಹಳೀಯ ಭಾಷೆಯ ದಿನಪತ್ರಿಕೆ ‘ಡಿವೈನಾ’ಗಳು ಆನ್ಲೈನ್ ಮಾಧ್ಯಮದಲ್ಲಿ ಮಾತ್ರ ಲಭ್ಯವಿರುತ್ತವೆ ಎಂದು ಖಾಸಗಿ ಸ್ವಾಮ್ಯದ ‘ಉಪಾಲಿ’ ದಿನಪತ್ರಿಕೆ ಪ್ರಕಟಿಸಿದೆ.
ಇವಲ್ಲದೆ, ಇತರ ಹಲವು ಪ್ರಮುಖ ದಿನಪತ್ರಿಕೆಗಳು ಕೂಡಾ ಪತ್ರಿಕೆಯ ಪುಟಗಳನ್ನು ಕಡಿಮೆಗೊಳಿಸಿ ವೆಚ್ಚವನ್ನು ಕಡಿತಗೊಳಿಸುತ್ತಿದೆ.

ವಿದೇಶದಿಂದ ಕಾಗದ ಮತ್ತು ಶಾಹಿಗಳನ್ನಿ ಆಮದು ಮಾಡಿಕೊಳ್ಳಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕಳೆದ 5 ತಿಂಗಳಲ್ಲಿ ದಿನ ಪತ್ರಿಕೆ ಹಾಗೂ ಇತರೆ ಪತ್ರಿಕೆಗಳ ದರ ಸುಮಾರು ಮೂರು ಪಟ್ಟು ಹೆಚ್ಚಿದೆ.
ಇದೇ ಕಾರಣಕ್ಕೆ, ಶ್ರೀಲಂಕಾದಲ್ಲಿ ಶಾಲೆಗಳಿಗೆ ಅಗತ್ಯವಿರುವ 45 ಲಕ್ಷ ಪಠ್ಯಪುಸ್ತಕಗಳಲ್ಲಿ ಸುಮಾರು 30 ಲಕ್ಷ ಪಠ್ಯಪುಸ್ತಕಗಳ ಮುದ್ರಣವನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.
ಸತತ 5 ತಿಂಗಳು ಹಣದುಬ್ಬರ ಗರಿಷ್ಟ ಪ್ರಮಾಣಕ್ಕೆ ತಲುಪಿದ್ದು ಕಳೆದ ಫೆಬ್ರವರಿಯಲ್ಲಿ 17.5% ದಾಖಲೆ ಮಟ್ಟದಲ್ಲಿತ್ತು. ದೇಶದಲ್ಲಿ ತೈಲ ಮತ್ತು ಇಂಧನದ ಕೊರತೆಯೂ ಹೆಚ್ಚಿದೆ.



