ಕೊಲಂಬೋ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡು ತೀವ್ರಗೊಂಡಿರುವ ದಿತ್ವಾ ಸೈಕ್ಲೋನ್ ನಿಂದ ಶ್ರೀಲಂಕಾದಲ್ಲಿ 123 ಮಂದಿ ಸಾವನ್ನಪ್ಪಿದ್ದು, 130 ಮಂದಿ ನಾಪತ್ತೆಯಾಗಿದ್ದಾರೆ.
ದಿತ್ವಾ ಚಂಡಮಾರುತ ಶ್ರೀಲಂಕಾದಾದ್ಯಂತ ಭಾರಿ ಹಾನಿಯನ್ನುಂಟು ಮಾಡಿದ್ದು, ದೇಶ ಅಕ್ಷರಶಃ ನಲುಗಿ ಹೋಗಿದೆ.43,995 ಜನರು ಸರ್ಕಾರಿ ಸ್ವಾಮ್ಯದ ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಚಂಡಮಾರುತವು ಮುಖ್ಯವಾಗಿ ಪೂರ್ವ ಕರಾವಳಿಯ ಟ್ರಿಂಕೋಮಲೀ ಸಮೀಪ ಕೇಂದ್ರಬಿಂದುವನ್ನು ಹೊಂದಿದೆ. ಪರಿಣಾಮ ಗಾಲೆ, ಬಡುಲ್ಲಾ, ಮಟಾರಾ ಸೇರಿದಂತೆ ಹಲವು ಜಿಲ್ಲೆಗಳು ಭಾರೀ ಹಾನಿಗೊಳಗಾಗಿವೆ. 12,313 ಕುಟುಂಬಗಳು ನೇರವಾಗಿ ಬಾಧಿತವಾಗಿದ್ದು, 43,991 ಮಂದಿ ತಮ್ಮ ನಿವಾಸಗಳನ್ನು ತೊರೆಯುವಂತಾಗಿದೆ.

ಭಾರೀ ಮಳೆಯಿಂದ ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿ ಜಲಾವೃತಗೊಂಡಿದ್ದು, ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಸಂಪೂರ್ಣ ರೈಲು ಸಂಚಾರ ನಿಲ್ಲಿಸಲಾಗಿದೆ. ಅನೇಕ ರೈಲು ನಿಲ್ದಾಣಗಳು ನೀರಿನಲ್ಲಿ ಮುಳುಗಿ ಹೋಗಿರುವುದರಿಂದ ಟ್ರ್ಯಾಕ್ಗಳ ಮೇಲಿನ ಸಂಚಾರಕ್ಕೆ ಅಪಾಯ ಉಂಟಾಗಿದೆ.
ಕೊಲಂಬೋಗೆ ಆಗಮಿಸಬೇಕಿದ್ದ ಅಂತರಾಷ್ಟ್ರೀಯ ವಿಮಾನಗಳನ್ನು ತಿರುವನಂತಪುರ, ಕೊಚ್ಚಿನ್ ಮತ್ತು ಮಟ್ಟಾಲಾ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ. ಗೋಚರತೆ ತೀವ್ರವಾಗಿ ಕುಸಿದಿರುವುದರಿಂದ ಶ್ರೀಲಂಕನ್ ಏರ್ಲೈನ್ಸ್ ಸೇರಿದಂತೆ ಅನೇಕ ವಿಮಾನ ಸೇವೆಗಳು ವಿಳಂಬವಾಗಿವೆ. ನಿರಂತರ ಮಳೆ, ಭೂಕುಸಿತ ಮತ್ತು ಪ್ರವಾಹದಿಂದ ಹಾನಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನಿಸಿದ್ದಾರೆ.

ಇನ್ನು ತುರ್ತು ನೆರವಿಗಾಗಿ 1.2 ಶತಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 2025ರ ಬಜೆಟ್ನಡಿ ತುರ್ತು ನಿರ್ವಹಣೆಗೆ 30 ಶತಕೋಟಿ ರೂಪಾಯಿ ಮೀಸಲಿಟ್ಟು, ಆಡಳಿತಾತ್ಮಕ ವಿಳಂಬ ತಪ್ಪಿಸಲು ಹೊಸ ಸುತ್ತೋಲೆ ಹೊರಡಿಸಿ, ರಾಷ್ಟ್ರ ಮಟ್ಟದಲ್ಲಿ ಸಂಕಷ್ಟ ನಿರ್ವಹಣಾ ಸಮನ್ವಯ ಘಟಕ ಹಾಗೂ 10 ತುರ್ತು ಹಾಟ್ಲೈನ್ಗಳ ಸಕ್ರಿಯಗೊಳಿಸಲು ತಿಳಿಸಿದ್ದಾರೆ. ಕೊಲಂಬೋದ ಪ್ರಮುಖ ರಸ್ತೆಗಳಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ಸಾರಿಗೆ ಕಷ್ಟವಾಗಿದ್ದು, ದಕ್ಷಿಣ ಎಕ್ಸ್ಪ್ರೆಸ್ವೇಯ ಕೆಲವು ಭಾಗಗಳಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ನದಿ-ಜಲಾಶಯಗಳ ನೀರಿನ ಮಟ್ಟ ಅಪಾಯದ ಮಟ್ಟ ತಲುಪಿದ್ದು, ಜನರಿಗೆ ಸ್ಥಳಾಂತರ ಸೂಚನೆಗಳನ್ನು ನೀಡಲಾಗಿದೆ.

ಇನ್ನು ಶ್ರೀಲಂಕಾದಲ್ಲಿ ಸಂಭವಿಸಿದ ಜೀವಹಾನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಭಾರತದಿಂದ ಹೆಚ್ಚಿನ ಸಹಾಯವನ್ನು ಕಳುಹಿಸುವ ಬಗ್ಗೆ ಭರವಸೆ ನೀಡಿದ್ದಾರೆ.













