ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿಮಲ್ 2 ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದರು. ಅಷ್ಟಕ್ಕೂ ಈ ಟರ್ಮಿನಲ್ 2 ವಿಶೇಷತೆ ಏನು.!?
ಕಲರ್ ಪುಲ್ ಆಗಿ ಝಗಮಗಿಸುತ್ತಿರೋ ಭವ್ಯವಾದ ಓಳಾಂಗಣ. ಹಚ್ಚು ಹಸಿರ ಸಿರಿಯಿಂದ ಕಂಗೊಳಿಸುತ್ತಿರೋ ಗೋಡೆಗಳು ಎಲ್ಲೆಲ್ಲೂ ಹಚ್ಚು ಹಸಿರು. ಇದು ಯಾವುದೋ ಉದ್ಯಾನವನವಲ್ಲ. ಉದ್ಯಾನವನದೊಳಗೆ ಟರ್ಮಿನಲ್ ಎಂಬ ಥೀಮ್ ನಡಿ ನಿರ್ಮಾಣವಾಗಿರುವ ನಮ್ಮ ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2.
ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ತಲೆ ಎತ್ತಿರೋ ಈ ಟರ್ಮಿನಲ್ 2ನಲ್ಲಿ ಬರೋಬ್ಬರಿ ಆರೂವರೆ ಲಕ್ಷ ಸಸ್ಯಗಳು ಅರಳಿ ನಿಂತಿವೆ. ಕಾಡು ಮೇಡು ಅಲೆದು ತಂದು ಒಂದಲ್ಲ ಎರಡಲ್ಲ ನೂರಾರು ಅಳವಿನಂಚಿನಲ್ಲಿರೋ ಮರಗಳನ್ನ ಸಹ ಇಲ್ಲಿ ಬೆಳೆಸಲಾಗಿದೆ. ಸರಿಸುಮಾರು 800 ವರ್ಷಗಳ ಹಳೆಯದಾದ ಪುರಾತನ ಮರವೊಂದು ಸಹ ಬೆಳೆದು ನಿಲ್ಲುತ್ತಿದೆ. ಒಳಾಂಗಣದ ಮೇಲ್ಛಾವಣಿಯಿಂದ ಇಳಿದು ಬಂದಿರೋ ತೂಗು ಗಂಟೆಗಳಿಗೆ ಸುತ್ತುವರೆದಿರೊ ಹಚ್ಚ ಹಸಿರು. ಹೆಜ್ಜೆ ಹೆಜ್ಜೆಗೂ ಕಣ್ಣು ಖುಷಿ ಪಡಿಸೋ ಹಸಿರ ಸಿರಿಯ ಗೋಡೆಗಳು ಎಲ್ಲೆಲ್ಲೂ ಹಸಿರುಮಯವಾಗಿರೋ ಟರ್ಮಿನಲ್ 2 ಹೊಸ ಲೋಕಕ್ಕೆ ಹೋದಂತೆ ಭಾಸವಾಗುತ್ತಿದೆ.
ಅಂದಹಾಗೆ ಇನ್ ಯ ಗಾರ್ಡನ್ ಅನ್ನೋ ಥೀಮ್ ನಡಿ ತಲೆ ಎತ್ತಿರೋ ಈ ಟರ್ಮಿನಲ್ 2ನಲ್ಲಿ ಸೌರ ವಿದ್ಯುತ್ ಉತ್ಪಾದನೆ, ಮಳೆ ನೀರು ಕೊಯ್ಲು, ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಪರಿಸರ ಸ್ನೇಹಿ ಬಿದಿರು ಬಳಕೆಯ ಮೂಲಕ ಎಲ್ಲರ ಕಣ್ಮನ ಸೆಳೆಯುತ್ತಿದೆ. ಕಲೆ ಹಾಗೂ ಸಂಸ್ಕೃತಿಗೆ ಪ್ರಾಶಸ್ತ್ಯ ನೀಡಲಾಗಿದೆ. ಎಲ್ಲೆಲ್ಲೂ ಕಣ್ಣು ಕುಕ್ಕೋ ಸುಂದರ ಕಲಾಕೃತಿಗಳು, ನಮ್ಮ ನಾಡು ನಮ್ಮ ಭಾಷೆ ಕನ್ನಡಕ್ಕೂ ಆದ್ಯತೆ ನೀಡಲಾಗಿದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಟರ್ಮಿನಲ್ 2ನ ಘನತೆಯನ್ನ ಎತ್ತಿ ಹಿಡಿಯುತ್ತಿವೆ. ಅಲ್ಲದೆ ಮೊದಲನೇ ಟರ್ಮಿನಲ್ನಲ್ಲಿ ಸೆಕ್ಯೂರಿಟಿ ಚೆಕ್ಕಿಂಗ್ ಇದ್ದರೆ, ಈ ಟರ್ಮಿನಲ್ ನಲ್ಲಿ ತಡೆರಹಿತ ಸೆಕ್ಯೂರಿಟಿ ಚೆಕಿಂಗ್ ತಂತ್ರಜ್ನಾನ ಬಳಸಲಾಗಿದೆ. ಅಲ್ಲದೆ ಟರ್ಮಿನಲ್ ಲಾಂಜ್ ತೆರಳುವ ವೇಳೆ ಜಲಪಾತ ಸೃಷ್ಟಿಸಿದ್ದು, ಎಲ್ಲರ ಗಮನ ಸೆಳೆಯುತ್ತದೆ. ಒಟ್ಟು ಎರಡುವರೆ ಲಕ್ಷ ಚದರ ಮೀಟರ್ ವಿಸ್ತೀರ್ಣ ಸಾಮರ್ಥ್ಯವನ್ನ ಹೊಂದಿದ್ದು, ವರ್ಷಕ್ಕೆ ಎರಡುವರೆ ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಗುರಿ ಹೊಂದಿದೆ.
ಒಟ್ಟಾರೆ ನಿರ್ಮಾಣ ಹಂತದಲ್ಲೇ ಈ ಟರ್ಮಿನಲ್ 2ಗೆ ಜಾಗತಿಕ ಮಟ್ಟದಲ್ಲಿ ಪ್ಲಾಟಿನಂ ಅವಾರ್ಡ್ ಸಹ ದಕ್ಕಿದೆ. ಸದಾ ಪ್ರಯಾಣಿಕ ಸ್ನೇಹಿ ಅನ್ನೋ ಹೆಗ್ಗಳಿಕೆಯೊಂದಿಗೆ ಸಾಧನೆ ಗಳೊಂದಿಗೆ ಸದಾ ಮುನ್ನುಗ್ಗುತ್ತಿರೋ ಕೆಂಪೇಗೌಡ ವಿಮಾನ ನಿಲ್ದಾಣದ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಇಂದು ಭವ್ಯ ಭಾರತ ಅಷ್ಟೇ ಅಲ್ಲದೇ ಇಡೀ ವಿಶ್ವವೇ ಕೆಐಎಎಬಿನತ್ತ ತಿರುಗಿ ನೋಡುವಂತೆ ಮಾಡುತ್ತಿದೆ.