
ವಿಧಾನಸಭೆಯಲ್ಲಿ ಆ ಘಟನೆ ನಡೆದಾಗ ನಾವು ಕೊಟ್ಟ ತೀರ್ಮಾನ ಅದಾಗಿದೆ. ರಾಜ್ಯದಲ್ಲಿ ಸದನಕ್ಕಿಂತ ದೊಡ್ಡದು ಯಾವುದು ಇಲ್ಲ. ಯಾವುದೇ ಒತ್ತಡ ಕೂಡ ಸರ್ಕಾರದಿಂದ ಇರಲಿಲ್ಲ. ಜನರಿಂದ ಆಯ್ಕೆಯಾದವರು ಜನಪ್ರತಿನಿಧಿಗಳು. ಅಧಿಕಾರ ಸಿಗೋಕು ಮುನ್ನ ಪ್ರತಿಜ್ಞೆ ಮಾಡ್ತಾರೆ. ಅದಕ್ಕೆ ತಕ್ಕಂತೆ ಅವರು ನಡೆಯಬೇಕು ಅಲ್ಲವಾ..? ನಾವು ತಪ್ಪು ಮಾಡಿದ್ದೇವೆಂಬ ಭಾವನೆ ಅವರಿಗೆ ಬರಬೇಕಿತ್ತು ಅಲ್ಲವಾ..? ಸೌಜನ್ಯಕ್ಕಾದ್ರು ಅವರು ಬಂದು ಮಾತಾಡಲಿಲ್ಲ.

ನಿನ್ನೆಯ ದಿನ ಸದನದಲ್ಲಿ ಹನಿಟ್ರಾಪ್ ಬಗ್ಗೆ ಸಾಕಷ್ಟು ಚರ್ಚೆ ಆಯ್ತು. ಆ ರೀತಿ ಆಗಲೇಬಾರದು ಎಂದು ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೇಳಿಕೊಂಡಿದ್ದಾರೆ. ಆ ನಂತರ ಸರ್ಕಾರದ ಪರವಾಗಿ ಗೃಹ ಸಚಿವರು ಉನ್ನತ ಮಟ್ಟದ ತನಿಖೆಯ ಬಗ್ಗೆ ಹೇಳಿದ್ರು. ರಾಜಣ್ಣ ದೂರಿನ ಪ್ರಕಾರ ತನಿಖೆ ಮಾಡಿಸುತ್ತೇವೆ ಅಂತಾ ಹೇಳಿದ್ರು. ಮರು ದಿನ ಸಿಎಂ ಉತ್ತರ ಕೊಡೋಕೆ ಬಂದು ಕೂತಿದ್ರು. ಇಡೀ ಸದಸ್ಯರ ಘನತೆ ಗೌರವದ ಜವಾಬ್ದಾರಿ. ಸಿಎಂ ಸಿದ್ದರಾಮಯ್ಯ, ಹೋಮ್ ಮಿನಿಸ್ಟರ್ ಉತ್ತರ ಕೊಟ್ಟರು.

ಕೆ.ಎನ್ ರಾಜಣ್ಣ ದೂರಿನಂತೆ ಉನ್ನತ ಮಟ್ಟದ ತನಿಖೆ ಮಾಡಿಸೋದಾಗಿ ಹೇಳಿದ್ರು. ಪ್ರತಿಪಕ್ಷ ಸದಸ್ಯರು ಕೊಟ್ಟ ಸಲಹೆಯನ್ನು ಸ್ವೀಕರಿಸುವ ಮಾತನ್ನು ಸಿಎಂ ಸಿದ್ದರಾಮಯ್ಯ ಕೊಟ್ಟಿದ್ರು. ಆದಾದ ನಂತರವೂ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡ್ತಾರೆ ಅಂದರೆ ಅವರ ಉದ್ದೇಶ ಏನೆಂದು ಅರ್ಥ ಮಾಡಿಕೊಳ್ಳಬೇಕು. ಗವರ್ನರ್ ಭಾಷಣ, ಬಜೆಟ್ ಮೇಲಿನ ಉತ್ತರಕ್ಕೂ ಅಡ್ಡಿ ಪಡಿಸುವುದು ಆಗಿತ್ತು. ಫೈನಾನ್ಸ್ ಬಿಲ್ ಪಾಸ್ ಆಗಲೇಬಾರದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಅನ್ನೋದು ಇವರ ಉದ್ದೇಶ.
ಧನ ವಿನಿಯೋಗ ಪಾಸ್ ಆಗಿಲ್ಲ ಅಂದರೆ ನಾಳೆ ಯಾರಿಗೆ ಸಮಸ್ಯೆ..? ಎಷ್ಟೇ ತೊಂದರೆ ಆದರೂ ಧನ ವಿನಿಯೋಗ ಬಿಲ್ ಪಾಸ್ ಮಾಡಲೇಬೇಕು. ಪುಸ್ತಕಗಳನ್ನು ನನ್ನ ಮುಖಕ್ಕೆ ಎಸೆಯೋದು, ಹರಿದು ಬಿಸಾಡೋದು. ನಾವು ಯಾವ ಹಂತಕ್ಕೆ ಹೋದ್ರು ನಡೆಯುತ್ತದೆ ಅಂತಾ ಈ ರೀತಿ ನಡೆದುಕೊಂಡರೇ ಸರೀನಾ.? ಮುಂದಿನ ಶಾಸಕರಿಗೂ ಇದು ದಿಕ್ಸೂಚಿ ಕ್ರಮ ಆಗಿದೆ. ಅವರು ತಿದ್ದುಕೊಂಡು ನಡೆಯಲಿ ಎಂದು ಈ ಕ್ರಮದ ತೀರ್ಮಾನ ಮಾಡಲಾಗಿದೆ ಎಂದು ಪ್ರತಿಪಕ್ಷ ಸದಸ್ಯರ ವಿರುದ್ಧ ಸ್ಪೀಕರ್ ಯು. ಟಿ ಖಾದರ್ ಸಮರ್ಥನೆ ಮಾಡಿಕೊಂಡಿದ್ದಾರೆ.