ಕರ್ನಾಟಕದಲ್ಲಿ ನಾಯಕರ ನಡುವೆ ಆರೋಪ – ಪ್ರತ್ಯಾರೋಪ ವಾಕ್ಸಮರ ಜರುಗಿದಾಗ ಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತವೆ. ಧರ್ಮಸ್ಥಳ ಎಂದರೆ ಧರ್ಮ ಸ್ಥಾನ ಎನ್ನುವುದು ಲೋಕರೂಢಿ. ಆದರೆ ಅದೇ ಧರ್ಮಸ್ಥಳದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಬಾಲಕಿಗೆ ನ್ಯಾಯ ಸಿಗಲಿಲ್ವಾ ಅನ್ನೋ ಅನುಮಾನ ಕಾಡುತ್ತಿದೆ. ಜೊತೆಗೆ ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಯಾರು ಅನ್ನೋ ರಹಸ್ಯ ರಹಸ್ಯವಾಗಿಯೇ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

11 ವರ್ಷಗಳ ಬಳಿಕ ಕೊಲೆ ಕೇಸ್‌ನಲ್ಲಿ ಕೋರ್ಟ್ ತೀರ್ಪು..
ಧರ್ಮಸ್ಥಳದಲ್ಲಿ 2012 ರ ಅಕ್ಟೋಬರ್ 9 ರಂದು 17 ವರ್ಷದ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು. ಉಜಿರೆಯ SDMC ಕಾಲೇಜಿನಲ್ಲಿ ಓದುತ್ತಿದ್ದ ಸೌಜನ್ಯಳನ್ನು ಅಪಹರಣ ಮಾಡಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಆ ಬಳಿಕ ಮೃತದೇಹ ಪತ್ತೆಯಾಗಿತ್ತು. ಮೃತ ದೇಹ ಸಿಕ್ಕ ಸ್ಥಳದಿಂದ 50 ಮೀಟರ್ ಅಂತರದಲ್ಲಿ ಟೆಂಟ್‌ನಲ್ಲಿ ವಾಸವಿದ್ದ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆ ಬಳಿಕ ತನಿಖೆ ಬಗ್ಗೆ ಅಪಸ್ವರ ಕೇಳಿ ಬಂದಿದ್ದರಿಂದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಇದೀಗ ಬೆಂಗಳೂರು ವಿಶೇಷ ಕೋರ್ಟ್ ತೀರ್ಪು ನೀಡಿದೆ.
ರೇಪ್ ಅಂಡ್ ಮರ್ಡರ್ ಸಾಕ್ಷ್ಯಗಳು ಇಲ್ಲದಕ್ಕೆ ಖುಲಾಸೆ..!
ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿ ಸಂತೋಷ್ ರಾವ್ ದೋಷಮುಕ್ತ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿದೆ. ಸಾಕ್ಷ್ಯಾಧಾರ ಕೊರತೆ ಹಿನ್ನಲೆ ಆರೋಪಿ ಸಂತೋಷ್ ರಾವ್ ಬಿಡುಗಡೆ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಂತೋಷ ಸಿ.ಬಿ ಆದೇಶ ಮಾಡಿದ್ದಾರೆ. ಆರೋಪಿ ಸಂತೋಷ್ ರಾವ್ ಪರ ವಕೀಲ ಮೋಹಿತ್ ಕುಮಾರ್ ವಾದ ಮಾಡಿಸಿದ್ದರು. ಅತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ರೇಪ್ ಮಾಡಿರುವ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ. 2 ದಿನಗಳ ಬಳಿಕ ಆರೋಪಿ ಬಂಧನ ಮಾಡಲಾಗಿತ್ತು. ಸೌಜನ್ಯ ಮೃತಪಟ್ಟ ಸಮಯದಲ್ಲಿ ಜೋರು ಮಳೆ ಇತ್ತು. ಅದೇ ದಿನ 500 ಜನರು ಹುಡುಕಾಟ ನಡೆಸಿದ್ರು. ಆದರೆ ಯಾರೂ ಕೂಡ ಪತ್ತೆಯಾಗಿರಲಿಲ್ಲ. 50 ಮೀಟರ್ ಅಂತರದಲ್ಲಿ ಟೆಂಟ್‌ನಲ್ಲಿ ವಾಸವಿದ್ದ ಎನ್ನುವ ಕಾರಣಕ್ಕೆ ಪೊಲೀಸರು ಅನುಮಾನ ವ್ಯಕ್ತಪಡಿಸಿ ಬಂಧನ ಮಾಡಿದ್ರು. ಪ್ರಕೃತಿ ಚಿಕಿತ್ಸಾಲಯ ಸಿಸಿಟಿವಿ ಸಂಗ್ರಹಿಸಿಲ್ಲ. ಪೋಸ್ಟ್ ಮಾರ್ಟಂ ರಾತ್ರೋರಾತ್ರಿ ಬ್ಯಾಡ್ ಲೈಟ್‌ನಲ್ಲಿ ಮಾಡಿದ್ದಾರೆ ಎಂದು ಕೋರ್ಟ್‌ನಲ್ಲಿ ವಾದ ಮಂಡಿಸಿದ್ರು.
ಕೋರ್ಟ್‌ಗೆ ಸಾಕ್ಷ್ಯಗಳಿಲ್ಲ.. ಅತ್ಯಾಚಾರಿ, ಕೊಲೆಪಾತಕ ಅಲ್ಲ.. ಇನ್ಯಾರು..?
ರೇಪ್ ನಡೆದ ಸ್ಥಳದಲ್ಲಿ ಆರೋಪಿ ಇದ್ದ ಅನ್ನೋದಕ್ಕೆ ಸಾಕ್ಷಿಗಳು ಇರದ ಕಾರಣಕ್ಕೆ ದೋಷಮುಕ್ತ ಅಂತ ಕೋರ್ಟ್ ತೀರ್ಪು ನೀಡಿದೆ. ನಿರಪರಾಧಿಗೆ ಶಿಕ್ಷೆ ಆಗಬಾರದು ಅನ್ನೋದು ಸತ್ಯ. ಆದರೆ ಆರೋಪಿ ಅನ್ನೋದಕ್ಕೆ ಸಾಕ್ಷ್ಯಗಳಿಲ್ಲ ಎನ್ನುವುದು ಕೋರ್ಟ್ ತೀರ್ಪಿನ ಸಾರಾಂಶ. ಆದರೆ ಪೊಲೀಸರು, ಸಿಬಿಐ ತನಿಖಾ ತಂಡ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಇದರ ಜೊತೆಗೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಕೇಸ್‌ನಲ್ಲಿ ಬಂಧನ ಆಗಿದ್ದು ಧರ್ಮಸ್ಥಳದಲ್ಲಿ ಕೆಲಸ ಮಾಡುವ ಓರ್ವ ಸಿಬ್ಬಂದಿ ಅನ್ನೋದು ವಿಶೇಷ. ಇನ್ನು ಈ ಕೇಸ್‌ನಲ್ಲಿ ವಕೀಲರು ಉಚಿತ ವಾದ ಮಂಡನೆ ಮಾಡಿದ್ದೇನೆ ಎಂದಿದ್ದಾರೆ. ಕಾರಣ ಏನು ಅನ್ನೋದು ಮಾತ್ರ ಗೊತ್ತಿಲ್ಲ.
ಕೃಷ್ಣಮಣಿ






