ನಾ ದಿವಾಕರ
ಬೆಂಗಳೂರು:ಏ.೦5: ಭಾರತೀಯ ಸಮಾಜ ತನ್ನ ಶತಮಾನಗಳ ಸುದೀರ್ಘ ನಡಿಗೆಯಲ್ಲಿ ಅಸಂಖ್ಯಾತ ವಿಪ್ಲವಕಾರಿ ಪಲ್ಲಟಗಳನ್ನು ಎದುರಿಸುತ್ತಲೇ ಬಂದಿದೆ. 21ನೆಯ ಶತಮಾನದ ಭಾರತ ಪರಿಭಾವಿಸಿರುವ ಆಧುನಿಕತೆ ಮತ್ತು ನಾಗರಿಕತೆಯನ್ನು ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ತಲ್ಲಣಗಳ ನಡುವೆ ಇಟ್ಟು ನೋಡಿದಾಗ ಈ ನೂರಾರು ಪಲ್ಲಟಗಳಿಂದ ನಮ್ಮ ಸಮಾಜ ಏನಾದರೂ ಪಾಠ ಕಲಿತಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ. ಇವತ್ತಿನ ಸಾಮಾಜಿಕ ಸ್ಥಿತ್ಯಂತರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ನಮಗೆ ಢಾಳಾಗಿ ಕಾಣುವುದು ಶತಮಾನಗಳ ಹಿಂದಿನ ಅಸಮಾನತೆಗಳು, ತಾರತಮ್ಯಗಳು, ದೌರ್ಜನ್ಯಗಳು ಮತ್ತು ವ್ಯಕ್ತಿಗತ-ಸಾಂಘಿಕ ಹಿಂಸೆಯ ನೆಲೆಗಳು. ಹಾಗಾಗಿಯೇ ಸಾರ್ವಜನಿಕ ಜೀವನದ ಯಾವುದೇ ಸಂಕಥನದಲ್ಲಿ “ ನಮ್ಮ ಸಮಾಜ ಎತ್ತ ಸಾಗುತ್ತಿದೆ ? ನಾವು ಎತ್ತ ಸಾಗುತ್ತಿದ್ದೇವೆ ? ದೇಶ ಎತ್ತ ಸಾಗುತ್ತಿದೆ ” ಎಂಬ ಪ್ರಶ್ನೆಗಳು ಪ್ರಧಾನವಾಗಿ ಕಾಣುತ್ತವೆ.
ಈ ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆಯ ಹಿಂದೆ ಇರುವ ಆಶಯಗಳು ಮತ್ತು ಆತಂಕಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾವು ಏನನ್ನು ಸಾಧಿಸಲು ಯೋಚಿಸುತ್ತಿದ್ದೇವೆ ಎಂಬ ಜಟಿಲ ಪ್ರಶ್ನೆಯೂ ನಮ್ಮೊಳಗೇ ಸಹಜವಾಗಿ ಮೂಡುತ್ತದೆ. ಒಂದು ಭೌಗೋಳಿಕ ರಾಷ್ಟ್ರವಾಗಿ ನಮ್ಮ ಹೆಮ್ಮೆಯ ಭಾರತ ಎಂದು ಹೇಳಿಕೊಳ್ಳುವ ಜನಕೋಟಿಯ ಮುಂದೆ ಈ ಪ್ರಶ್ನೆಯನ್ನು ಇಟ್ಟಾಗ ಸ್ವಾಭಾವಿಕವಾಗಿ ಭಾರತ ವಿಶ್ವಗುರು ಆಗಬೇಕು ಎಂಬ ಹಂಬಲ ಕೇಳಿಬರುತ್ತದೆ. ಈ ಪದದ ಗೂಡಾರ್ಥ ವಾಚ್ಯಾರ್ಥಗಳನ್ನು ಕೆದಕಲು ಹೋಗದೆ, ಒಂದು ಸಮಾಜವಾಗಿ ನಾವು ಯಾವ ನೆಲೆಯಲ್ಲಿ ವಿಶ್ವಗುರು ಆಗಬೇಕು ಎಂಬ ಮತ್ತೊಂದು ಪ್ರಶ್ನೆ ಈ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯನ್ನೂ ಕಾಡಲೇಬೇಕಿದೆ. ಈ ಜಟಿಲ ಪ್ರಶ್ನೆಗೆ ಉತ್ತರಗಳನ್ನು ರಾಜಕೀಯ ನೆಲೆಯಲ್ಲಿ, ಸಾಂಸ್ಕೃತಿಕ ನೆಲೆಯಲ್ಲಿ ಮತ್ತು ವಿಶಾಲ ಸಾಮಾಜಿಕ ನೆಲೆಯಲ್ಲಿ ಶೋಧಿಸಿದಾಗ, ನಮ್ಮ ಗ್ರಹಿಕೆಯೊಳಗಿನ ಸಿಕ್ಕುಗಳು ನಮಗೇ ಗೋಚರಿಸುತ್ತದೆ.
ಅಸಮಾನತೆಯ ಜೀವಂತ ನೆಲೆಗಳು

ಶತಮಾನಗಳ ಅಸಮಾನತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳ ನಡುವೆಯೇ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಸಾಂವಿಧಾನಿಕವಾಗಿ ಅಪ್ಪಿಕೊಂಡಿರುವ ಭಾರತ ತನ್ನ 75 ವರ್ಷಗಳ ಸ್ವತಂತ್ರ ನಡಿಗೆಯಲ್ಲಿ ಸಾಮಾಜಿಕವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆಯೇ ಎಂಬ ಅನುಮಾನದೊಂದಿಗೇ ವರ್ತಮಾನದ ಸಮಾಜವನ್ನು ಒಳಹೊಕ್ಕು ನೋಡಬೇಕಿದೆ. ರಾಜಕೀಯವಾಗಿ ನೋಡಿದಾಗ ಭಾರತ ಒಂದು ಪ್ರಬುದ್ಧ ಪ್ರಜಾಪ್ರಭುತ್ವವಾಗಿ ಬೆಳೆದುಬಂದಿದೆ. ಆಡಳಿತಾರೂಢ ಪಕ್ಷಗಳ ಸರ್ವಾಧಿಕಾರಿ ಧೋರಣೆಗಳು ಆಗಾಗ್ಗೆ ಈ ಪ್ರಜಾತಂತ್ರದ ಬೇರುಗಳನ್ನು ಶಿಥಿಲಗೊಳಿಸಲು ಪ್ರಯತ್ನಿಸುತ್ತಲೇ ಇದ್ದರೂ, ದೇಶದ ಬಹುಸಂಖ್ಯೆಯ ಜನತೆ ಚುನಾವಣೆಗಳ ಮೂಲಕ, ಸಾಂವಿಧಾನಿಕ ಹಕ್ಕೊತ್ತಾಯಗಳ ಮೂಲಕ ಸರ್ಕಾರಗಳನ್ನು ಎಚ್ಚರಿಸುತ್ತಲೂ ಬಂದಿದ್ದಾರೆ.
ವರ್ತಮಾನದ ರಾಜಕಾರಣದಲ್ಲಿ ಪ್ರಜಾಸತ್ತೆಯ ಸಾಂವಿಧಾನಿಕ ಸಂಸ್ಥೆಗಳೆಲ್ಲವೂ ದುರ್ಬಲವಾಗುತ್ತಿರುವುದು, ನಿರಂಕುಶಾಧಿಕಾರದ ಲಕ್ಷಣಗಳು ವ್ಯಾಪಿಸುತ್ತಿರುವುದು ವಾಸ್ತವವೇ ಆದರೂ ಈ ಪ್ರಯತ್ನಗಳನ್ನು ವಿಫಲಗೊಳಿಸುವ ಸುಪ್ತ ಪ್ರಜ್ಞೆ ಭಾರತೀಯರಲ್ಲಿ ಅಡಗಿದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅಧಿಕಾರ ರಾಜಕಾರಣದ ಸ್ವಾರ್ಥಪರತೆ ಮತ್ತು ಪೀಠ ವ್ಯಾಮೋಹ ಸೃಷ್ಟಿಸಿರುವ ಆಧಿಪತ್ಯದ ಕೇಂದ್ರಗಳು ಜಾತಿ, ಧರ್ಮ ಮತ್ತು ಸಂಸ್ಕೃತಿಯ ವಿಶಾಲ ನೆಲೆಗಳನ್ನು ಕುಬ್ಜಗೊಳಿಸಿ, ಜನಸಾಮಾನ್ಯರನ್ನು ಅಸ್ಮಿತೆಗಳ ಆಧಾರದಲ್ಲಿ ವಿಭಜಿಸಿ, ಇಡೀ ರಾಜಕಾರಣವನ್ನು ಅಸ್ಮಿತೆ ಕೇಂದ್ರಿತವಾಗಿ ಮಾಡಿರುವುದನ್ನು ಈ ಸಂದರ್ಭದಲ್ಲಿ ತುಸು ಗಂಭೀರವಾಗಿಯೇ ಪರಿಶೀಲಿಸಬೇಕಿದೆ. ಭಾರತ ಹೀಗಿರಲಿಲ್ಲ ಹೀಗೇಕಾಗುತ್ತಿದೆ ಎಂದು ಹಲುಬುವ ಬದಲು, ಭಾರತ ಶತಮಾನಗಳಿಂದಲೂ ಇರುವುದೇ ಹೀಗೆ ಎಂಬ ಅರಿವಿನೊಂದಿಗೆ ಮುನ್ನಡೆದಾಗ, ಈ ಸವಾಲನ್ನೂ ಸುಲಭವಾಗಿ ಎದುರಿಸಲು ಸಾಧ್ಯ.
ಹೀಗೆ ನೋಡಿದಾಗ ನಾವು ಒಪ್ಪಿಕೊಂಡಿರುವ ಸಂವಿಧಾನ ಮತ್ತು ಪ್ರಜಾತಂತ್ರ , ಅಸಮಾನತೆ ಮತ್ತು ತಾರತಮ್ಯಗಳನ್ನೇ ಆಧರಿಸಿದ ಸಮಾಜದ ಬುನಾದಿಯ ಮೇಲೆ ನಿಂತಿದೆ ಎಂಬ ವಾಸ್ತವವನ್ನೂ ಗ್ರಹಿಸಲು ಸಾಧ್ಯ. ಈ ಮುನ್ನಚ್ಚರಿಕೆಯ ಮಾತುಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಸಾರಿ ಸಾರಿ ಹೇಳಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಪಿತೃಪ್ರಧಾನತೆ, ಪುರುಷಾಧಿಪತ್ಯ, ಊಳಿಗಮಾನ್ಯತೆ ಮತ್ತು ಜಾತಿ ಶ್ರೇಷ್ಠತೆಯ ಹಮ್ಮುಬಿಮ್ಮುಗಳಿಂದ ಇಂದಿಗೂ ಮುಕ್ತವಾಗದ ಒಂದು ಬಹುಸಾಂಸ್ಕೃತಿಕ ಸಮಾಜವು ಸಮಾನತೆ ಮತ್ತು ಸಮನ್ವಯದ ಹಾದಿಯನ್ನು ಕ್ರಮಿಸುತ್ತಿದೆ. ಈ ಸಮಾಜದಲ್ಲಿ ಶತಮಾನಗಳಷ್ಟು ಹಳತಾದ ಒಳಬಿರುಕುಗಳಿವೆ. ಈ ಒಳಬಿರುಕುಗಳನ್ನು ಗುರುತಿಸಿ, ಸಮಾಜವು ಮತ್ತಷ್ಟು ಹೀನಾವಸ್ಥೆಗೆ ತಲುಪುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತದ ಪ್ರಜಾತಂತ್ರ ಕಾರ್ಯಶೀಲತೆಯನ್ನು ತೋರಬೇಕಿತ್ತು.
ದುರಾದೃಷ್ಟವಶಾತ್ ಇದು ಸಾಧ್ಯವಾಗಿಲ್ಲ. ಏಕೆಂದರೆ ವಿಶಾಲ ಸಮಾಜದ ದೈನಂದಿನ ಬದುಕು ಹಾಗೂ ಸಾಮಾನ್ಯ ಜನತೆಯ ಜೀವನ-ಜೀವನೋಪಾಯಗಳಿಗೆ ರಸ್ತೆ ನಿರ್ಮಿಸುವ ಅಧಿಕಾರ ರಾಜಕಾರಣದ ನೆಲೆಗಳು ಈ ಬಿರುಕುಗಳು ಇರುವುದನ್ನೇ ಗುರುತಿಸಿಲ್ಲ. ಅಥವಾ ಗುರುತಿಸಲಾದ ಬಿರುಕುಗಳನ್ನು ಮುಚ್ಚುವ ಪ್ರಯತ್ನಗಳನ್ನು ಮಾಡಿಲ್ಲ. ಸಂಪ್ರದಾಯ ಮತ್ತು ಪರಂಪರೆಯಲ್ಲಿ ಭವ್ಯತೆಯನ್ನು ಕಾಣುವ ಆತ್ಮರತಿಯ ಪರಾಕಾಷ್ಠೆಯನ್ನು ಇಂದಿಗೂ ಸಹ ರಾಜಕಾರಣದ ಬೌದ್ಧಿಕ ವಲಯದಲ್ಲಿ ಕಾಣುತ್ತಿದ್ದೇವೆ. ಆದರೆ ಮತ್ತೊಂದು ಬದಿಯಲ್ಲಿ ಇದೇ ಪರಂಪರೆಯಲ್ಲಿ ಅಡಗಿದ್ದ ಅಸಮಾನತೆಯನ್ನು ಸೃಷ್ಟಿಸುವ, ತಾರತಮ್ಯ ದೌರ್ಜನ್ಯ ಹಿಂಸೆ ಮತ್ತು ಮೇಲರಿಮೆಯನ್ನು ಸೃಷ್ಟಿಸುವಂತಹ ಸಾಂಸ್ಕೃತಿಕ ಮೂಲ ಧಾತುಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಸಾಂಸ್ಕೃತಿಕ ನೆಲೆಯಲ್ಲಿ ಶ್ರೇಷ್ಠತೆ ಮತ್ತು ಮೇಲರಿಮೆಯನ್ನು ಹೋಗಲಾಡಿಸದೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮಾತುಗಳನ್ನಾಡುವುದು ಆತ್ಮವಂಚನೆಯಾಗುತ್ತದೆ. ಈ ಆತ್ಮವಂಚನೆಯೊಂದಿಗೇ ಭಾರತದ ಅಧಿಕಾರ ರಾಜಕಾರಣ ಸಂವಿಧಾನವನ್ನು ಅಪ್ಪಿಕೊಂಡು ಮುನ್ನಡೆಯುತ್ತಿರುವುದು ವಾಸ್ತವ.

ಆಧುನಿಕತೆ ಮತ್ತು ನಾಗರಿಕತೆಯ ಸಂಘರ್ಷ
ಹಾಗಾಗಿಯೇ 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ನಿತ್ಯ ಸಂಭವಿಸುತ್ತಿರುವ ಅತ್ಯಾಚಾರ, ಜಾತಿ ದೌರ್ಜನ್ಯ, ಅಸ್ಪೃಶ್ಯತೆ, ಲೈಂಗಿಕ ದೌರ್ಜನ್ಯ, ಊಳಿಗಮಾನ್ಯ ದಬ್ಬಾಳಿಕೆ, ಶೋಷಣೆ ಮತ್ತು ಮತಧಾರ್ಮಿಕ ನಿರ್ಬಂಧಗಳು ನಮ್ಮ ಪ್ರಜಾಸತ್ತಾತ್ಮಕ ರಾಜಕೀಯ ಅಧಿಕಾರ ಕೇಂದ್ರಗಳನ್ನು ವಿಚಲಿತಗೊಳಿಸುತ್ತಿಲ್ಲ. ಅನ್ಯಾಯಗಳನ್ನು ನಿಯಂತ್ರಿಸುವ ಮತ್ತು ನಿಗ್ರಹಿಸುವ ಕಾಯ್ದೆ ಕಾನೂನುಗಳು ಧಾರಾಳವಾಗಿ ಜಾರಿಯಲ್ಲಿದ್ದರೂ ದಿನನಿತ್ಯ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ, ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ, ಶೋಷಿತ ತಳಸಮುದಾಯಗಳು ಅಸ್ಪೃಶ್ಯತೆಯ ತಾರತಮ್ಯಗಳನ್ನು-ಅಪಮಾನಗಳನ್ನು ಎದುರಿಸುತ್ತಲೇ ಇವೆ. ಬುಡಕಟ್ಟು ಸಮುದಾಯಗಳನ್ನು ನಿರಂತರವಾಗಿ ಒಕ್ಕಲೆಬ್ಬಿಸಲಾಗುತ್ತಿದೆ. ಆದಿವಾಸಿ ಸಮುದಾಯಗಳ ಪಾರಂಪರಿಕ ಹಕ್ಕುಗಳೂ ಸಹ ಉಲ್ಲಂಘನೆಯಾಗುತ್ತಿದೆ. ಈ ಯಾವುದೇ ವ್ಯತ್ಯಯಗಳು ರಾಜಕೀಯ ಸಂಕಥನದ ಒಂದು ಭಾಗವಾಗಿ ಸಾರ್ವಜನಿಕರ ನಡುವೆ ಚರ್ಚೆಗೊಳಗಾಗುತ್ತಿಲ್ಲ.
ಕೋಮುವಾದ-ಮತಾಂಧತೆ-ಜಾತೀಯತೆ ಮತ್ತು ಮಾರುಕಟ್ಟೆ ಆರ್ಥಿಕತೆಯ ಸುತ್ತ ನಡೆಯುವ ಸಂವಾದಗಳಲ್ಲಿ, ತಳಮಟ್ಟದ ಸಮಾಜದಲ್ಲಿ ಎದುರಾಗುತ್ತಿರುವ ಜಟಿಲ ಸಿಕ್ಕುಗಳಾಗಲೀ, ಸಂಕೀರ್ಣ ಸಮಸ್ಯೆಗಳಾಗಲೀ, ಜಟಿಲ ಸವಾಲುಗಳಾಗಲೀ ಪ್ರಸ್ತಾಪವಾಗುತ್ತಲೂ ಇಲ್ಲ. ಚುನಾವಣಾ ರಾಜಕಾರಣದ ಸಂದರ್ಭದಲ್ಲಿ ಪ್ರಸ್ತಾಪವಾಗುವ ಈ ವಿಚಾರಗಳು ಅಧಿಕಾರ ಕೇಂದ್ರಗಳ ವೈಫಲ್ಯ ಮತ್ತು ರಾಜಕೀಯ ಪಕ್ಷಗಳ ಸೈದ್ಧಾಂತಿಕ ನೆಲೆಗಳಲ್ಲಿ ಚರ್ಚೆಯಾಗುತ್ತಿದೆಯೇ ಹೊರತು, ವಾಸ್ತವ ಸಮಾಜದಲ್ಲಿ ಏಕೆ ಈ ತೀವ್ರತೆರನಾದ ವ್ಯತ್ಯಯಗಳು ಸಂಭವಿಸುತ್ತಿವೆ ಎಂಬ ಸೂಕ್ಷ್ಮ ಅವಲೋಕನ ಸಾಧ್ಯವಾಗುತ್ತಿಲ್ಲ. 1970ರ ದಶಕದ ಮಥುರಾ 2012ರಲ್ಲೂ ನಿರ್ಭಯಳ ರೂಪದಲ್ಲಿ 2023ರಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲೇ ನಡೆದ ಮತ್ತೊಂದು ಪ್ರಕರಣದಲ್ಲಿ ಪ್ರತಿಫಲಿಸುವುದನ್ನು ಹೇಗೆ ಪರಿಭಾವಿಸುವುದು ? ಕಾನೂನು ಮತ್ತು ನ್ಯಾಯ ವ್ಯವಸ್ಥೆ ವಿಫಲವಾಗಿದೆ ಎಂದೇ ಅಥವಾ ಪ್ರಾಚೀನ ಸಮಾಜದ ನಡವಳಿಕೆಗಳಿಂದ ಸಮಾಜವನ್ನು ಬಿಡುಗಡೆ ಮಾಡಲು ನಮ್ಮ ಪ್ರಜಾತಂತ್ರ ವ್ಯವಸ್ಥೆ ವಿಫಲವಾಗಿದೆ ಎಂದೇ ?

ಪ್ರಜಾತಂತ್ರದ ಶಿಥಿಲಾವಸ್ಥೆ, ಸಂವಿಧಾನದ ಉಲ್ಲಂಘನೆ, ಸಾಂವಿಧಾನಿಕ ಮೌಲ್ಯಗಳ ಅವಗಣನೆಯ ನಡುವೆಯೇ ಈಗ ನಾವು ಕಾಣುತ್ತಿರುವ ಪ್ರಮುಖ ವಿದ್ಯಮಾನವೆಂದರೆ ಸಾಮಾಜಿಕ ಅವನತಿ. ಅತ್ಯಾಚಾರ-ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವ ಹಾಗೆಯೇ ಜಾತಿ ದೌರ್ಜನ್ಯದ ಪ್ರಕರಣಗಳೂ ಹೆಚ್ಚಾಗುತ್ತಿವೆ. ಮತದ್ವೇಷ ಮತ್ತು ಮತಾಂಧತೆಯ ಪರಿಣಾಮ ಅಮಾಯಕ ಜೀವಗಳು ನಿತ್ಯ ಬಲಿಯಾಗುತ್ತಿವೆ. ಇದರೊಟ್ಟಿಗೇ ಹಂತಕರನ್ನು, ಅತ್ಯಾಚಾರಿಗಳನ್ನು, ಭ್ರಷ್ಟರನ್ನು ಗೌರವಿಸಿ, ಸನ್ಮಾನಿಸುವುದನ್ನೂ ಕಾಣುತ್ತಿದ್ದೇವೆ. ಮತ್ತೊಂದೆಡೆ ಅತ್ಯಾಚಾರ, ಹತ್ಯೆ ಮತ್ತು ಹಲ್ಲೆಗಳು ಸಂಭವಿಸಿದಾಗ, ಘಟನೆಗಳ ಹಿಂದಿನ ಅಮಾನುಷತೆಗಿಂತಲೂ ಹೆಚ್ಚಾಗಿ ದಾಳಿ ನಡೆಸಿದ ಮತ್ತು ದಾಳಿಗೊಳಗಾದ ವ್ಯಕ್ತಿಯ ಜಾತಿ, ಧರ್ಮ ಅಥವಾ ಇತರ ಅಸ್ಮಿತೆಗಳೇ ಮುನ್ನೆಲೆಗೆ ಬರುತ್ತಿವೆ. ಹೀಗಾಗಿ ಸಮಾಜದಲ್ಲಿ ಘಟಿಸುತ್ತಿರುವ ನಾಗರಿಕತೆಯನ್ನೇ ನಾಚಿಸುವಂತಹ ಅಮಾನುಷ ಘಟನೆಗಳೂ ಸಹ ಅಸ್ಮಿತೆಗಳ ಚೌಕಟ್ಟಿನೊಳಗೆ ಸಿಲುಕಿ, ರಾಜಕೀಯ ಸಂಕಥನಗಳಲ್ಲಿ ಲೀನವಾಗಿಹೋಗುತ್ತಿವೆ.
ತತ್ಪರಿಣಾಮ ವಿಶಾಲ ಸಮಾಜದ ಬೌದ್ಧಿಕ ವಲಯವು ಢಾಳಾಗಿ ಕಾಣುತ್ತಿರುವ ಸಾಮಾಜಿಕ ಅವನತಿಯತ್ತ ಗಮನಹರಿಸಲು ಸಾಧ್ಯವೇ ಆಗುತ್ತಿಲ್ಲ. ಈ ಸಾಮಾಜಿಕ ಅವನತಿ, ನೈತಿಕ ಅಧಃಪತನ ಮತ್ತು ಸಮಾಜದ ಪಾತಕೀಕರಣ ಏಕೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಪುನಃ ನಾವು ಅಧಿಕಾರ ರಾಜಕಾರಣದ ಚೌಕಟ್ಟಿನೊಳಗೇ ಉತ್ತರ ಶೋಧಿಸುತ್ತಿದ್ದೇವೆ. ನೆಲ್ಲಿ ಹತ್ಯಾಕಾಂಡ, ಸಿಖ್ ನರಮೇಧ , ಗುಜರಾತ್ ನರಮೇಧ ಈ ಮೂರೂ ಘಟನೆಗಳಲ್ಲಿರುವ ಸಮಾನ ಎಳೆ ಎಂದರೆ ಮತದ್ವೇಷ ಮತ್ತು ಮತಾಂಧತೆ. ಹಾಗೆಯೇ ಮಥುರಾ-ಬಾವರಿದೇವಿ-ಅರುಣಾ-ನಿರ್ಭಯ-ಮುರುಘಾ ಮಠದ ಪ್ರಕರಣಗಳಲ್ಲಿನ ಸಮಾನ ಎಳೆ ಪುರುಷಾಧಿಪತ್ಯದ ಮೇಲರಿಮೆ ಮತ್ತು ಪ್ರಾಬಲ್ಯ. ಕೀಲ್ವೇನ್ಮಣಿಯಿಂದ ಖೈರ್ಲಾಂಜಿ-ಕಂಬಾಲಪಲ್ಲಿ-ಹಾಥ್ರಸ್‌ವರೆಗೆ ಹಬ್ಬಿರುವ ಸಮಾನ ಎಳೆ ಜಾತಿ ಶ್ರೇಷ್ಠತೆಯ ಅಹಮಿಕೆ ಮತ್ತು ಪಿತೃಪ್ರಧಾನ ಊಳಿಗಮಾನ್ಯ ಧೋರಣೆ.

ಈ ಸಮಾನ ಎಳೆಗಳನ್ನು ಒಂದು ಚೌಕಟ್ಟಿನೊಳಗಿಟ್ಟು ನೋಡಿದಾಗ ನಮಗೆ ಕಾಣುವುದು ಭಾರತೀಯ ಸಮಾಜದಲ್ಲಿ ಇಂದಿಗೂ ಶೋಧಿಸಬಹುದಾದ ಒಳಬಿರುಕುಗಳು. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಚೌಕಟ್ಟುಗಳಿಂದಾಚೆ ನಿಂತು ಈ ವಿದ್ಯಮಾನಗಳ ಅವಲೋಕನ ಮಾಡಿದಾಗ ನಮಗೆ, ಈ ದೇಶದ ಆಳುವ ವರ್ಗಗಳ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವೂ ಕಾಣಲು ಸಾಧ್ಯ. ಈ ಒಳಬಿರುಕುಗಳನ್ನು ಭೇದಿಸಿಯೇ ಹೊರಮೂಡುವ ಒಂದು ಯುವಶಕ್ತಿ ಇಂದು ಮತಾಂಧತೆ, ಜಾತೀಯತೆ, ಕೋಮುವಾದ ಮತ್ತು ದ್ವೇಷ ರಾಜಕಾರಣದ ಕಾಲಾಳು ಪಡೆಗಳಾಗುತ್ತಿದೆ. ನಾಗರಿಕತೆಯ ಉಚ್ಛ್ರಾಯ ಹಂತದಲ್ಲಿರುವ ನಾವು ಇಂದೂ ಸಹ ಅನೇಕ ರೀತಿಯ ಅನಾಗರಿಕ ಪದ್ಧತಿಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಈ ವಾತಾವರಣದಲ್ಲೇ ಅತ್ಯಾಚಾರಗಳನ್ನು ಸಂಭ್ರಮಿಸುವ, ಹತ್ಯೆಗಳನ್ನು ಸಮರ್ಥಿಸುವ ಮತ್ತು ಪಾತಕ ಕೃತ್ಯಗಳನ್ನು ವೈಭವೀಕರಿಸುವ ಮನಸ್ಥಿತಿಯನ್ನೂ ಯುವ ಸಂಕುಲದ ನಡುವೆ ಸೃಷ್ಟಿಸಲಾಗುತ್ತಿದೆ.
ನಮ್ಮ ನಡುವೆ ಇದ್ದೂ ಇಲ್ಲದಂತಿರುವ ಆದಿವಾಸಿ/ಬುಡಕಟ್ಟು ಸಮುದಾಯಗಳತ್ತ ಒಮ್ಮೆ ಗಮನಹರಿಸೋಣ. ಆಧುನಿಕ ಸಮಾಜ ಈ ಸಮುದಾಯಗಳನ್ನು ಇಂದಿಗೂ ಸಹ ಪತ್ಯೇಕಿಸಿಯೇ ನೋಡುತ್ತಿದೆ. ನಿಸರ್ಗವನ್ನೇ ನಂಬಿ ಬದುಕುವ ಕೋಟ್ಯಂತರ ಸಂಖ್ಯೆಯ ಈ ಸಮುದಾಯಗಳನ್ನು ನಾಗರಿಕತೆಯ ಚೌಕಟ್ಟಿನಿಂದ ಆಚೆಗೆ ಇರಿಸಿಯೇ ನೋಡುತ್ತಿದೆ. ಇವರ ಬೇಕು ಬೇಡಗಳನ್ನು ನಿರ್ಧರಿಸುವಾಗ, ಬಾಹ್ಯ ವಿಶಾಲ ಸಮಾಜದ ಅಗತ್ಯತೆಗಳಿಗೆ ಅನುಸಾರವಾಗಿ ಪರಾಮರ್ಶೆ ಮಾಡಲಾಗುತ್ತದೆ. ನಮ್ಮ ಸಮಾಜದ ಅಭಿವೃದ್ಧಿಗೆ, ಮುನ್ನಡೆಗೆ ಇದೇ ಆದಿವಾಸಿ ಸಮುದಾಯಗಳ ಬದುಕನ್ನು ಪಲ್ಲಟಗೊಳಿಸಲೂ ನಾವು ಹಿಂಜರಿಯುತ್ತಿಲ್ಲ. ಆದರೆ ಅಕ್ಷರ ಜ್ಞಾನ ಇಲ್ಲದ, ಆಧುನಿಕತೆಯ ಸೋಂಕು ಇಲ್ಲದ, ತಂತ್ರಜ್ಞಾನದ ಪರಿವೆ ಮತ್ತು ಅವಲಂಬನೆ ಇಲ್ಲದ ಬುಡಕಟ್ಟು ಸಮುದಾಯಗಳಲ್ಲಿ, ಆದಿವಾಸಿ ಸಮಾಜಗಳಲ್ಲಿ ಅತ್ಯಾಚಾರ, ವರದಕ್ಷಿಣೆ ಸಾವು, ಲೈಂಗಿಕ ದೌರ್ಜನ್ಯ, ಅಸ್ಪೃಶ್ಯತೆ, ಹತ್ಯೆ ಮುಂತಾದ ಅಮಾನುಷ ಘಟನೆಗಳು ಎಲ್ಲಿಯಾದರೂ ಕೇಳಿಬರುತ್ತಿವೆಯೇ ? ಆದರೆ ನಾಗರಿಕತೆಯುಳ್ಳ ಸಮಾಜ ಎಂದು ಕರೆದುಕೊಳ್ಳುವ ನಮ್ಮ ಸಮಾಜದ ನಾಲ್ಕು ಗೋಡೆಗಳ ನಡುವೆಯೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಮಾಯಕರ ಹತ್ಯೆ, ಜಾತಿ-ಮತದ್ವೇಷ ಮತ್ತು ಅಮಾನುಷ ನಡವಳಿಕೆಗಳು ತಾಂಢವಾಡುತ್ತಿವೆ.
ಎತ್ತ ಸಾಗುವುದು ? ಮತ್ತದೇ ಪ್ರಶ್ನೆ
ಈ ವಿದ್ಯಮಾನಗಳನ್ನು ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ನಿಂತು ಶೋಧಿಸಿದರೆ ನಮಗೆ ಭಾರತೀಯ ಸಮಾಜದ ಒಳಬಿರುಕುಗಳು ಮತ್ತು ಪಾತಾಳಕ್ಕೆ ಕುಸಿದಿರುವ ಮೌಲ್ಯಗಳ ತುಣುಕುಗಳು ದೊರೆಯಲು ಸಾಧ್ಯ. ಪ್ರಜಾಪ್ರಭುತ್ವ-ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ರಾಜಕಾರಣದ ಚೌಕಟ್ಟುಗಳಿಂದಾಚೆಗೆ ಈ ಸಾಮಾಜಿಕ ವಿದ್ಯಮಾನಗಳನ್ನು ಗುರುತಿಸುವ ಕೆಲಸ ಈಗ ಆಗಬೇಕಿದೆ. ಅಧಿಕಾರ ರಾಜಕಾರಣದ ವ್ಯಾಪ್ತಿಯನ್ನೂ ಮೀರಿ ಈ ಸಾಮಾಜಿಕ ಬೆಳವಣಿಗೆಗಳು ಜನಸಾಮಾನ್ಯರ ನಿತ್ಯ ಬದುಕಿನ ಒಂದು ಭಾಗವಾಗಿ ಕಂಡುಬರುತ್ತಿವೆ. ಅಂದರೆ ಒಂದು ನಾಗರಿಕತೆಯ ಸಮಾಜದಲ್ಲಿ ಸುಳಿಯಬಾರದಂತಹ ಧೋರಣೆ, ಚಿಂತನಾ ಕ್ರಮಗಳು ನಮ್ಮ ಸಾರ್ವಜನಿಕ ಜೀವನದ ಒಂದು ಭಾಗವಾಗುತ್ತಿದೆ. ಭಾರತೀಯ ಸಮಾಜದ ಆಧುನಿಕತೆಯಿಂದ ಪ್ರಾಚೀನತೆಗೆ ಜಾರುತ್ತಿದೆಯೇ ? ಅಥವಾ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದ ನಾಗರಿಕತೆಯ ಸಮಾಜ ಅವನತಿಯತ್ತ ಸಾಗುತ್ತಿದೆಯೇ ? ಈ ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಿದೆ.

ಈ ಶೋಧನೆಯ ಜವಾಬ್ದಾರಿ ಎಡಪಕ್ಷಗಳು, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು ಮತ್ತು ಜನಪರ ಸಂಘಟನೆಗಳ ಮೇಲಿದೆ. ನಾವು ಎತ್ತ ಸಾಗುತ್ತಿದ್ದೇವೆ ಅಥವಾ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳು ನಮ್ಮನ್ನು ಕೆಣಕಿದಾಗ ನಾವು ಚುನಾವಣೆ ಮತ್ತು ಅಧಿಕಾರ ರಾಜಕಾರಣದ ಚೌಕಟ್ಟುಗಳಿಂದಾಚೆಗೆ ನಿಂತು ಸಮಾಜದ ಅಂತರಾಳವನ್ನು ಶೋಧಿಸಬೇಕಾಗುತ್ತದೆ. ಈ ದೇಶದ ದುಡಿಯುವ ಜನತೆಯ, ಶೋಷಿತ ಸಮುದಾಯಗಳ ಮತ್ತು ದಮನಿತ ಜನಸಮುದಾಯಗಳ ಭವಿಷ್ಯ ಅಡಗಿರುವುದು ಶತಮಾನಗಳ ಬಹುಸಾಂಸ್ಕೃತಿಕ ಇತಿಹಾಸ ಇರುವ ಭಾರತದ ಸಾಮಾಜಿಕ ಚೌಕಟ್ಟಿನಲ್ಲಿ. ಈ ಚೌಕಟ್ಟನ್ನು ಸುಸ್ಥಿತಿಯಲ್ಲಿ, ಆರೋಗ್ಯಪೂರ್ಣವಾಗಿ ಕಾಪಾಡಬೇಕಾದರೆ, ನಾಗರಿಕತೆಯುಳ್ಳ ಒಂದು ಸಮಾಜವಾಗಿ ನಾವು ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಪ್ರಜಾಸತ್ತಾತ್ಮಕ ಗುಣಗಳನ್ನು ಪೋಷಿಸುವಂತಹ ಒಂದು ಬೌದ್ಧಿಕ ಭೂಮಿಕೆಯನ್ನು ನಿರ್ಮಿಸಬೇಕಿದೆ. ಆಗ ಮಾತ್ರ ನಮಗೆ ಎದುರಾಗುತ್ತಿರುವ ಸಾಮಾಜಿಕ ಅವನತಿಯನ್ನು ತಡೆಗಟ್ಟಲು ಸಾಧ್ಯ.